More

    ಶಿಕ್ಷಣ ಇಲಾಖೆಯಿಂದ ಅಧಿಕೃತ ತೇಪೆ ಕಾರ್ಯ

    | ರಮೇಶ್ ಮೈಸೂರು, ಬೆಂಗಳೂರು

    ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಧಿಕೃತ/ಅನಧಿಕೃತ ಶಾಲೆಗಳು ಯಾವು? ಯಾವ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬಹುದು, ಮಾಡಬಾರದು? ಕಾನೂನುಬಾಹಿರ ಶಿಕ್ಷಣ ಸಂಸ್ಥೆಗಳು ಯಾವು ಎಂಬ ಮಾಹಿತಿ ನೀಡಿ ಪಾಲಕರ ಕಣ್ತೆರೆಸುವ ಕಾರ್ಯ ಮಾಡಬೇಕಾದ ಶಿಕ್ಷಣ ಇಲಾಖೆಯೇ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದೆ! ಈ ವೇಳೆಗಾಗಲೇ ರಾಜ್ಯದ ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕಿದ್ದ ಇಲಾಖೆ ಈಗ ವೆಬ್​ಸೈಟ್​ನಲ್ಲಿ ಕೆಲ ಜಿಲ್ಲೆಗಳ ಪಟ್ಟಿಯನ್ನು ಪ್ರಕಟಿಸಿದ್ದು, ಹಲವು ಗೊಂದಲಗಳನ್ನು ಹುಟ್ಟು ಹಾಕಿದೆ.

    ಬಹುತೇಕ ಜಿಲ್ಲೆಗಳು ಅಧಿಕೃತ ಖಾಸಗಿ, ಅನುದಾನರಹಿತ ಶಾಲೆಗಳ ಪಟ್ಟಿಗೆ ಸಂಬಂಧಿಸಿದಂತೆ ಎಂಬ ಒಕ್ಕಣೆಯೊಂದಿಗೆ ಪಟ್ಟಿ ಪ್ರಕಟಿಸಿವೆ. ಆದರೆ, ಅನಧಿಕೃತ ಶಾಲೆಗಳು ಯಾವುವು ಎಂಬುದಕ್ಕೆ ಉತ್ತರವಿಲ್ಲ. ಕೆಲ ಜಿಲ್ಲೆಯವರು ಶಾಲೆಗಳ ಹೆಸರನ್ನಷ್ಟೇ ನೀಡಿ, ಇವು ಅಧಿಕೃತ ಶಾಲೆಗಳು ಎಂದು ಘೋಷಿಸಿದ್ದಾರೆ. ಮಾನ್ಯತೆ ಅವಧಿ, ಮಾಧ್ಯಮ, ಪಠ್ಯಕ್ರಮ ಮೊದಲಾದ ವಿವರಗಳನ್ನು ನೀಡಿಲ್ಲ. ಅದು ಕನ್ನಡ ಮಾಧ್ಯಮವೋ, ಇಂಗ್ಲಿಷ್ ಮಾಧ್ಯಮವೋ, ರಾಜ್ಯ ಪಠ್ಯಕ್ರಮವೋ, ಸಿಇಎಸ್​ಇ ಅಥವಾ ಐಸಿಎಸ್​ಇ ಅಧೀನವೋ ಎಂಬುದೇ ತಿಳಿಯುವುದಿಲ್ಲ. ಅಷ್ಟಕ್ಕೂ 37 ಶೈಕ್ಷಣಿಕ ಜಿಲ್ಲೆಗಳ ಪೈಕಿ 14 ಜಿಲ್ಲೆಗಳ ಪಟ್ಟಿಯಷ್ಟೇ ಪ್ರಕಟಗೊಂಡಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ವಿವರವೇ ಇಲ್ಲ.

    ಮಾನ್ಯತೆ ಅವಧಿ ಗೊಂದಲ: ಹಲವು ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊರಡಿಸಿರುವ ಅಧಿಕೃತ ಶಾಲೆಗಳ ಪಟ್ಟಿಯಲ್ಲಿ ಶಾಲೆಗಳ ನವೀಕರಣ ಅವಧಿಯನ್ನು 2023-24 ಎಂದು ನಮೂದಿಸಿದ್ದಾರೆ. ಅಂದರೆ ಆ ಶಾಲೆಗಳಿಗೆ 2024-25ರ ಅವಧಿಗೆ ಇನ್ನೂ ಮಾನ್ಯತೆ ನವೀಕರಣಗೊಂಡಿಲ್ಲ. ಅಲ್ಲಿಗೆ ಆ ಶಾಲೆಗಳು 2024-25ರ ಅವಧೀಗೆ ಕಾರ್ಯಾಚರಿಸಬಹುದೇ? ನವೀಕರಣಗೊಳ್ಳದ ಹೊರತಾಗಿಯೂ ಪ್ರವೇಶಾತಿ ಸೇರಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬಹುದೇ? ಎಂಬುದಕ್ಕೆ ಉತ್ತರವಿಲ್ಲ. ಕೆಲವೆಡೆ, ರಾಜ್ಯ ಪಠ್ಯಕ್ರಮದ ಹೊರತಾದ ಶಾಲೆಗಳ ನವೀಕರಣ ಆವಧಿಯ ಮಾಹಿತಿಯನ್ನೇ ನೀಡಲಾಗಿಲ್ಲ.

    ನಾವು ಜವಾಬ್ದಾರರಲ್ಲ…!: ಯಾವ ಮಾಧ್ಯಮ, ಯಾವ ಪಠ್ಯಕ್ರಮ ಎಂಬುದನ್ನು ತಿಳಿಯದೇ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಿದರೆ ಇಲಾಖೆಯು ಜವಾಬ್ದಾರಿಯಲ್ಲ ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ಶಿಕ್ಷಣಾಧಿಕಾರಿಗಳು ಫರ್ವನು ಹೊರಡಿಸಿದ್ದಾರೆ. ಆದರೆ, ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಯಾವುದು ಅನಧಿಕೃತ, ಯಾವುದಕ್ಕೆ ಮಾನ್ಯತೆಯಿಲ್ಲ, ನವೀಕರಣ ಅವಧಿ ಮುಗಿದಿರುವ ಶಾಲೆಗೆ ಮಕ್ಕಳನ್ನು ದಾಖಲಿಸಬಹುದೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

    ಎಲ್ಲವೂ ಅಧಿಕೃತ: ಶಿರಸಿ ಶೈಕ್ಷಣಿಕ ಜಿಲ್ಲೆಯ ಮುಂಡಗೋಡ, ಶಿರಸಿ, ಜೋಯಿಡಾ, ಸಿದ್ದಾಪುರದಲ್ಲಿ ಯಾವುದೇ ಅನಧಿಕೃತ ಶಾಲೆಗಳಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ದೃಢೀಕರಿಸಿದ್ದಾರೆ. ಇಂಥ ಧೈರ್ಯವನ್ನು ಬೇರಾವ ಬಿಇಒಗಳು ತೋರಿಲ್ಲ. ಯಲ್ಲಾಪುರದಲ್ಲಿ ಶಾಲೆಗಳ ಪಟ್ಟಿಯನ್ನಷ್ಟೇ ಬಿಡುಗಡೆ ಮಾಡಲಾಗಿದೆ.

    ಇದೊಂದೇ ಅನಧಿಕೃತ..!: ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸಿರುವ ಪಟ್ಟಿಯಲ್ಲಿ ಬಳ್ಳಾರಿಯ ಪಟೇಲ್​ನಗರದ ಟಾಗೋರ್ ಎಜುಕೇಷನಲ್ ಟ್ರಸ್ಟ್ ನಡೆಸುವ ಶಾಲೆ ಅನಧಿಕೃತ ಎಂದು ಹೆಸರಿಸಿದೆ.

    ನವೀಕರಣ ಅವಧಿಯೇ ಇಲ್ಲ: ಉಡುಪಿ ಜಿಲ್ಲೆ ಬೈಂದೂರು ವಲಯದ ಶಿರೂರಿನ ದೀನಾ ವಿಶೇಷ ಶಾಲೆ, ತಲ್ಲೂರಿನ ನಾರಾಯಣ ವಿಶೇಷ ಶಾಲೆಯ ನವೀಕರಣ ಅವಧಿಯನ್ನೇ ನಮೂದಿಸಿಲ್ಲ.

     ದಾಖಲೆಗಳೇ ಇಲ್ಲವಂತೆ..! : ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಜೈಹಿಂದ್ ಎಜುಕೇಷನ್ ಸೊಸೈಟಿ ನಡೆಸುವ ಜೈಹಿಂದ್ ಪ್ರೌಢಶಾಲೆಯ 6-10ನೇ ತರಗತಿಯ ನೋಂದಣಿ ಆದೇಶ ಪ್ರತಿ ಇಲ್ಲ. ಆವರ್ಸಾದ ಕಾತ್ಯಾಯಿಣಿ ಹೈಸ್ಕೂಲ್ ಕನ್ನಡ ಮಾಧ್ಯಮ ಬದಲಾವಣೆಯ ಆದೇಶ ಪ್ರತಿ ಸಿಕ್ಕಿಲ್ಲ. ಅಂತೆಯೇ ಪೀಪಲ್ಸ್ ಮಲ್ಟಿ ಪರ್ಪಸ್ ಹೈಸ್ಕೂಲ್ ನೋಂದಣಿ ಆದೇಶ ಪ್ರತಿ ಲಭ್ಯವಿಲ್ಲ. ಜನಜೀವನ ಎಜುಕೇಷನ್ ಸೊಸೈಟಿಯ ಶಾಲೆಯು 2-5ನೇ ತರಗತಿ ಪ್ರಾರಂಭಕ್ಕೆ ನೋಂದಣಿ ಆದೇಶ ಪ್ರತಿ ಇಲ್ಲ ಎಂದು ಷರಾ ಬರೆಯಲಾಗಿದೆ.

     ಸಚಿವರ ಜಿಲ್ಲೆಯಲ್ಲೇ ಉದಾಸೀನ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಯಾಗಿಲ್ಲ. ಇದು ಅಲ್ಲಿನ ಶಿಕ್ಷಣಾಧಿಕಾರಿಗಳ ಉದಾಸೀನವನ್ನು ಬೊಟ್ಟು ಮಾಡಿ ತೋರಿಸುತ್ತದೆ ಎಂಬ ಟೀಕೆ ಕೇಳಿ ಬಂದಿದೆ.

    ಮಾಹಿತಿ ನೀಡಿರುವ ಶೈಕ್ಷಣಿಕ ಜಿಲ್ಲೆಗಳು : ಬಳ್ಳಾರಿ, ದಕ್ಷಿಣ ಕನ್ನಡ, ದಾವಣಗೆರೆ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಗದಗ, ಹಾಸನ, ಮಧುಗಿರಿ, ರಾಮನಗರ, ಶಿರಸಿ, ತುಮಕೂರು, ಉಡುಪಿ, ಉತ್ತರಕನ್ನಡ.


    ಸಾಮಾನ್ಯವಾಗಿ ಶಾಲೆಗಳ ಮಾನ್ಯತಾ ಅವಧಿ ನವೀಕರಣಕ್ಕೆ ಮಾರ್ಚ್​ನಲ್ಲೇ ಆನ್​ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ಆದರೆ, ಈ ಬಾರಿ ವಿಳಂಬವಾಗಿದೆ. ಇನ್ನಷ್ಟೇ ಶಾಲೆಗಳಿಗೆ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಣಕ್ಕೆ ಅವಕಾಶ ನೀಡಬೇಕಿದೆ.

    | ಎಸ್.ಎಸ್. ಕೆಳದಿಮಠ ಧಾರವಾಡ ಡಿಡಿಪಿಐ

    ಪಾಲಕರ ಪ್ರಶ್ನೆಗಳೇನು?

    1. ಬಹುತೇಕ ಶಾಲೆಗಳ ನವೀಕರಣ ಅವಧಿಯನ್ನು 2023-24 ಎಂದು ತಿಳಿಸಲಾಗಿದೆ. ಹೀಗಿರುವಾಗ ಮುಂದಿನ ಶೈಕ್ಷಣಿಕ ವರ್ಷ ಆ ಶಾಲೆಗಳಿಗೆ ದಾಖಲಿಸಬೇಕೆ ಬೇಡವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

    2. ಕೆಲ ಶಾಲೆಗಳ ಮಾನ್ಯತಾ ನವೀಕರಣ ಅವಧಿಯನ್ನು ಒಂದೇ ವರ್ಷಕ್ಕೆ ಸೀಮತಗೊಳಿಸಿ ನೀಡಲಾಗಿದೆ. ಇದಕ್ಕೇನು ಕಾರಣ? ನವೀಕರಣಗೊಳ್ಳದಿದ್ದಲ್ಲಿ ಮಕ್ಕಳ ಗತಿಯೇನು?

    3. ಒಂದೊಂದು ಕ್ಷೇತ್ರದ ಶಾಲೆಗಳ ಬಗ್ಗೆ ಒಂದೊಂದು ರೀತಿಯ ಮಾಹಿತಿ ನೀಡಲಾಗಿದೆ. ಏಕರೂಪದಲ್ಲಿಲ್ಲದಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

    ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts