More

    ಸುಲ್ತಾನ್​ಪುರದಲ್ಲಿ ಒಂಟಿಯಾದರೇ ಮೇನಕಾ?

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ರಾಯ್ಬರೇಲಿ, ಅಮೇಠಿಯಲ್ಲಿ ಮತದಾನ ಪೂರ್ಣಗೊಂಡಿದ್ದು, ಮೇ 25ರ 6ನೇ ಹಂತದಲ್ಲಿ ಮತದಾನ ನಡೆಯಲಿರುವ ಪೂರ್ವ ಉತ್ತರ ಪ್ರದೇಶದ ಸುಲ್ತಾನ್​ಪುರ ಲೋಕಸಭೆ ಕ್ಷೇತ್ರದಲ್ಲಿ ಗಾಂಧಿ ಕುಟುಂಬದ ಕಿರಿಯ ಸೊಸೆ ಮೇನಕಾ ಗಾಂಧಿ ಸೋಲು/ಗೆಲುವಿನ ಬಗ್ಗೆ ಚರ್ಚೆಗಳು ಜೋರಾಗಿವೆ.

    ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಗೆ ಇದು 9ನೇ ಲೋಕಸಭೆ ಚುನಾವಣೆಯಾಗಿದ್ದು, ಸುಲ್ತಾನ್​ಪುರದಿಂದ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಹುಪಾಲು ಇದು ಅವರ ಕೊನೆಯ ಲೋಕಸಭೆ ಚುನಾವಣೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಸಂಸದ, ಪುತ್ರ ವರುಣ್ ಗಾಂಧಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡದಿರುವುದು ವೈಯಕ್ತಿಕವಾಗಿ ಮೇನಕಾ ಗಾಂಧಿಗೆ ಬೇಸರ ತಂದಿದೆ. ಆದರೆ, ಸುಲ್ತಾನ್​ಪುರ ಟಿಕೆಟ್​ನ್ನು ತಮಗೆ ಮತ್ತೊಮ್ಮೆ ನೀಡಿದ್ದರಿಂದ ಮೇನಕಾ ಗಾಂಧಿ ವರಿಷ್ಠರ ವಿರುದ್ಧ ಯಾವುದೇ ಹೇಳಿಕೆ ನೀಡಲು ಮುಂದಾಗಿಲ್ಲ. ಆದರೆ, ಪುತ್ರನಿಗೆ ಟಿಕೆಟ್ ಸಿಗದ್ದರ ಬಗ್ಗೆ ಬೇಸರವಿದೆ ಎನ್ನುವುದನ್ನು ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 2014ರಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ವರುಣ್ ಗಾಂಧಿ, 2019ರಲ್ಲಿ ಪಿಲಿಭಿತ್ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದರು.

    ಕೇಂದ್ರ ಸರ್ಕಾರದ ನೀತಿ-ನಿಲುವುಗಳ ಬಗ್ಗೆ ವರುಣ್ ಗಾಂಧಿ ಪತ್ರಿಕೆಗಳ ಅಂಕಣಗಳಲ್ಲಿ ಕಟುಟೀಕೆ ಮಾಡುತ್ತಿದ್ದುದರಿಂದ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಚರ್ಚೆ ಚಾಲ್ತಿಯಲ್ಲಿದೆ. ಹಾಗೆ ನೋಡಿದರೆ, ಆರಂಭದಿಂದಲೂ ಮೋದಿ-ಅಮಿತ್ ಷಾ ಜತೆ ವರುಣ್ ಗಾಂಧಿ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಗುಟ್ಟಿನ ವಿಷಯವೇನಲ್ಲ. ಇದೇ ಕಾರಣಕ್ಕಾಗಿ ವರುಣ್ ಗಾಂಧಿ ಯಾವುದೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಮೇ 23ರಂದು ಸುಲ್ತಾನ್​ಪುರ ಲೋಕಸಭೆ ಪ್ರಚಾರ ಅಂತ್ಯಗೊಳ್ಳಲಿದ್ದು, ಕೊನೆಯ ದಿನವಾದರೂ ತಾಯಿ ಮೇನಕಾ ಪರ ಪ್ರಚಾರ ಮಾಡುತ್ತಾರಾ ಎಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ.

    ಸುಲ್ತಾನ್​ಪುರ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಸಮಾಜವಾದಿ ಪಾರ್ಟಿಯ ರಾಮ್ ಭುವಾಲ್ ನಿಷಾದ್ ಮತ್ತು ಬಿಎಸ್​ಪಿಯ ಉದ್ರಾಜ್ ವರ್ಮ ಕಣದಲ್ಲಿದ್ದಾರೆ. 2019ರಲ್ಲಿ ಎಸ್ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿಯಾಗಿ ಚಂದ್ರಭದ್ರ ಸಿಂಗ್ ‘ಸೋನು’ ಸ್ಪರ್ಧಿಸಿ, ಮೇನಕಾ ಗಾಂಧಿ ಬೆವರಿಳಿಸಿದ್ದರು. ಮೇನಕಾಗೆ 4,59,196 ಮತ್ತು ಚಂದ್ರಭದ್ರಗೆ 4,44,670 ಮತಗಳು ಬಿದ್ದಿದ್ದವು. ಮೇನಕಾ ಗೆಲುವಿನ ಅಂತರ ಕೇವಲ 14 ಸಾವಿರ. ಈ ಬಾರಿ ಇಂಡಿ ಮೈತ್ರಿಕೂಟ ಇರುವುದರಿಂದ ಎಸ್​ಪಿ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ.

    ಬಿಎಸ್​ಪಿ ನಾಯಕಿ ಮಾಯಾವತಿ ಹಿಂದುಳಿದ ಕುರ್ವಿು ಸಮುದಾಯದ ಉದ್ರಾಜ್ ವರ್ಮಗೆ ಟಿಕೆಟ್ ನೀಡಿರುವುದರಿಂದ ಹಿಂದುಳಿದ ಮತಗಳು ವಿಭಜನೆಗೊಳ್ಳುವ ಭೀತಿ ಮೇನಕಾಗೆ ಕಾಡಿದೆ. ಏತನ್ಮಧ್ಯೆ, ಕಳೆದ ಬಾರಿ ಮೇನಕಾಗೆ ಪ್ರಬಲ ಪೈಪೋಟಿ ನೀಡಿದ್ದ ಚಂದ್ರಭದ್ರ ಸಿಂಗ್ ಕೊನೆಯ ಕ್ಷಣದಲ್ಲಿ ಸಮಾಜವಾದಿ ಪಾರ್ಟಿ ಸೇರಿಕೊಂಡಿರುವುದು ಕೂಡ ಬಿಜೆಪಿಗೆ ಹೊಸ ಸವಾಲನ್ನು ತಂದೊಡ್ಡಿದೆ.

    ಮೋದಿ, ಮಂದಿರದ ಪ್ರಸ್ತಾಪವಿಲ್ಲ: ಪ್ರಚಾರ ಕಣದಲ್ಲೂ ಬಹುತೇಕ ಒಂಟಿಯಾಗಿರುವ ಮೇನಕಾ ಗಾಂಧಿ, ಈ ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸಗಳ ಬಗ್ಗೆ ಪ್ರಸ್ತಾಪಿಸುತ್ತ, ಮತ ಯಾಚಿಸುತ್ತಿದ್ದಾರೆ. ವಿಶೇಷ ಎಂದರೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆಯೂ ಹೆಚ್ಚು ಚರ್ಚೆ ಮಾಡಿಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದನ್ನು ಬಿಜೆಪಿಯ ಬಹುತೇಕ ಎಲ್ಲ ಅಭ್ಯರ್ಥಿಗಳು ಚುನಾವಣೆ ವಿಷಯವಾಗಿ ಬಳಸಿಕೊಂಡಿದ್ದರೂ, ಮೇನಕಾ ಗಾಂಧಿ ಮಾತ್ರ ಮಂದಿರ ನಿರ್ಮಾಣ ಬಗ್ಗೆ ಯಾವುದೇ ಸಭೆಯಲ್ಲೂ ಪ್ರಸ್ತಾಪಿಸಿಲ್ಲ. ‘ನಾನು ಮಂದಿರ ನಿರ್ವಣದ ಬಗ್ಗೆ ಹೇಳುತ್ತಿಲ್ಲ, ನನ್ನ ಕೆಲಸಗಳ ಬಗ್ಗೆ ಹೇಳುತ್ತ ಜನರಲ್ಲಿ ಮತ ಕೇಳುತ್ತಿದ್ದೇನೆ’ ಎಂದು ಮೇನಕಾ ಹೇಳಿಕೊಂಡಿದ್ದಾರೆ. ಸುಲ್ತಾನ್​ಪುರದಿಂದ ರಾಮಜನ್ಮಭೂಮಿ ಅಯೋಧ್ಯೆಗೆ ಕೇವಲ 1 ಗಂಟೆಯ ಪ್ರಯಾಣವಿದೆ. ಹಿಂದು-ಮುಸ್ಲಿಮ್ ಧ್ರುವೀಕರಣಕ್ಕೂ ಈ ಬಾರಿ ಇಲ್ಲಿ ಸ್ಥಾನ ಸಿಕ್ಕಿಲ್ಲ. ಮುಸ್ಲಿಮ್ ಧರ್ವಿುಯರನ್ನೂ ಭೇಟಿಯಾಗಿರುವ ಮೇನಕಾ, ‘ಹಿಂದಿನ ವೈಷಮ್ಯಗಳನ್ನು ಮರೆತು ಒಗ್ಗಟ್ಟಾಗಿ ಕೆಲಸ ಮಾಡೋಣ’ ಎಂದು ಮನವಿ ಮಾಡಿದ್ದಾರೆ. ಸುಮಾರು 17%ನಷ್ಟು ಮುಸ್ಲಿಮ್ ಮತಗಳಿದ್ದು, ವೋಟಿಂಗ್​ನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಸುಲ್ತಾನ್​ಪುರ ವ್ಯಾಪ್ತಿಯಲ್ಲಿ 5 ವಿಧಾನಸಭೆಗಳಿದ್ದು, 2022ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಸೌಲಿ ಕ್ಷೇತ್ರ ಹೊರತುಪಡಿಸಿ, ಉಳಿದ 4 ಸೀಟುಗಳನ್ನು ಗೆದ್ದುಕೊಂಡಿತ್ತು.

    ಕೇಂದ್ರ ನಾಯಕರು ಬಂದಿಲ್ಲ: ಮೇನಕಾ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಯಾವೊಬ್ಬ ಸ್ಟಾರ್ ಪ್ರಚಾರಕರೂ ಸುಲ್ತಾನ್​ಪುರಕ್ಕೆ ಬಂದಿಲ್ಲ. ಮೇನಕಾ ಗಾಂಧಿ ಕೂಡ ಸ್ಟಾರ್ ಪ್ರಚಾರಕರಿಂದ ಪ್ರಚಾರ ನಡೆಸಿ ಎಂದು ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿಕೊಂಡಿಲ್ಲ. ರಾಜ್ಯ ಬಿಜೆಪಿ ಸರ್ಕಾರದ ಕೆಲ ಸಚಿವರು ಪ್ರಚಾರ ನಡೆಸಿದ್ದರೆ, ಇಂಡಿ ಮೈತ್ರಿಕೂಟದ ಅಭ್ಯರ್ಥಿ ರಾಮ್ ಭುವಾಲ್ ನಿಷಾದ್ ಪ್ರಭಾವ ತಗ್ಗಿಸಲು ಯೋಗಿ ಸರ್ಕಾರದ ಸಚಿವ, ನಿಷಾದ್ ಪಾರ್ಟಿ ಮುಖ್ಯಸ್ಥ ಸಂಜಯ್ ನಿಷಾದ್​ರನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ರಾಮ್ ಭುವಾಲ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೋರಖ್​ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರವಿ ಕಿಶನ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ರಾಮ್ ಭುವಾಲ್ ಈ ಹಿಂದೆ ಬಿಜೆಪಿ, ಬಿಎಸ್​ಪಿಯಲ್ಲಿದ್ದರು. ರಾಜ್ಯದಲ್ಲಿ ಮಾಯಾವತಿ ಸರ್ಕಾರವಿದ್ದಾಗ ಸಚಿವರೂ ಆಗಿದ್ದರು. ಆದರೆ, ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಗಳು ಮೇನಕಾ ಗಾಂಧಿ ಮುಂದೆ ಕಠಿಣ ಹಾದಿ ನಿರ್ಮಾಣ ಮಾಡಿವೆ.

    ಶಾಸಕನ ವಿರುದ್ಧ ಕಠಿಣ ಕ್ರಮಕ್ಕೆ ಇಸಿ ಸೂಚನೆ

    ಸುಲ್ತಾನ್​ಪುರದಲ್ಲಿ ಒಂಟಿಯಾದರೇ ಮೇನಕಾ? ಹೈದರಾಬಾದ್: ಆಡಳಿತಾರೂಢ ವೈಎಸ್​ಆರ್​ಸಿಪಿ ಶಾಸಕ ಪಿ.ರಾಮಕೃಷ್ಣ ರೆಡ್ಡಿ ಅವರು ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿರುವ ಪ್ರಕರಣವನ್ನು ಚುನಾವಣಾ ಆಯೋಗ ಗಂಭಿರವಾಗಿ ಪರಿಗಣಿಸಿದ್ದು, ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

    ಪಲ್ನಾಡು ಜಿಲ್ಲೆಯ ಮಚರ್ಲಾ ವಿಧಾನಸಭೆ ಕ್ಷೇತ್ರವ್ಯಾಪ್ತಿಗೆ ಬರುವ ಮತಗಟ್ಟೆ ಸಂಖ್ಯೆ 202 ಸೇರಿದಂತೆ 7 ಮತಗಟ್ಟೆಗಳಲ್ಲಿ ಇವಿಎಂಗಳನ್ನು ಧ್ವಂಸಗೊಳಿಸಿರುವ ದೃಶ್ಯಗಳು ವೆಬ್ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿಸಿರುವ ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ, ಘಟನೆ ಕುರಿತಾದ ವಿಡಿಯೋಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಯ 4ನೇ ಹಂತದಲ್ಲಿ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ ಸಂಭವಿಸಿತ್ತು.

     ಮಿಥುನ್ ರೋಡ್ ಶೋದಲ್ಲಿ ಕಲ್ಲುತೂರಾಟ : ಕೋಲ್ಕತ: ಬಿಜೆಪಿ ನಾಯಕ ಹಾಗೂ ಹಿರಿಯ ನಟ ಮಿಥುನ್ ಚಕ್ರವರ್ತಿಯವರ ರೋಡ್ ಶೋ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದು, ಗಾಜಿನ ಬಾಟಲ್​ಗಳನ್ನು ಎಸೆದಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ಬೆಂಬಲಾರ್ಥ ಮಿಥುನ್ ರೋಡ್ ಶೋ ನಡೆಸುತ್ತಿದ್ದರು. ಮೆರವಣಿಗೆಗೆ ಪ್ರವೇಶಿಸಿದ ಒಂದು ಗುಂಪು ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು, ಗಾಜಿನ ಬಾಟಲ್​ಗಳನ್ನು ತೂರಿತು. ನಂತರ ಬಿಜೆಪಿ ಕಾರ್ಯಕರ್ತರೊಂದಿಗೆ ಘರ್ಷಣೆ ನಡೆಯಿತು. ‘ಕಲ್ಲು ತೂರಿದವರು ಟಿಎಂಸಿ ಕಾರ್ಯಕರ್ತರು’ ಎಂದು ಆರೋಪಿಸಿರುವ ಅಗ್ನಿಮಿತ್ರ ಪಾಲ್, ‘ಬಿಜೆಪಿಗೆ ರಾಜ್ಯದಲ್ಲಿ ಸಿಗುತ್ತಿರುವ ಬೆಂಬಲವನ್ನು ಕಂಡು ಟಿಎಂಸಿ ಹೆದರಿದೆ. ಇದಕ್ಕಾಗಿ ಹಿಂಸಾಚಾರದ ದಾರಿಗೆ ಇಳಿದಿದೆ. ಆದರೆ, ಈ ಘಟನೆ ಮೂಲಕ ಟಿಎಂಸಿ ಮಹಾನ್ ನಟ ಮಿಥುನ್ ಚಕ್ರವರ್ತಿಯವರನ್ನು ಅವಮಾನಿಸಿದೆ’ ಎಂದರು. ಪಶ್ಚಿಮ ಬಂಗಾಳದಲ್ಲಿ ಏಳೂ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಈವರೆಗಿನ ಐದು ಹಂತಗಳಲ್ಲಿ ಕೂಡ ಹಿಂಸಾಚಾರದ ಘಟನೆಗಳು ಸಂಭವಿಸಿವೆ. ಅಲ್ಲದೆ, ನೀತಿಸಂಹಿತೆ ಉಲ್ಲಂಘನೆ ಆರೋಪದಲ್ಲಿ ಟಿಎಂಸಿ ಮತ್ತು ಬಿಜೆಪಿಯಿಂದ ನೂರಾರು ದೂರುಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿವೆ.

    ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts