More

    ಸಂಪಾದಕೀಯ: ಅನ್ನದಾತ ಅಲೆಯುವ ಸ್ಥಿತಿ

    ಬರಪರಿಹಾರದ ಹಣ ಪಡೆಯುವ ವಿಷಯದಲ್ಲಿ ರಾಜ್ಯದ ರೈತರ ಸ್ಥಿತಿ ಈಗ ‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎನ್ನುವಂತಾಗಿದೆ. ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಕಳೆದ ತಿಂಗಳ 27ರಂದೇ 3454 ಕೋಟಿ ರೂ. ಬರ ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಈ ಹಣವನ್ನು 3 ಲಕ್ಷಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್​ಗಳ ಮೂಲಕ ವಿತರಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರವೇನೋ ಹಣ ವಿತರಿಸಲು ಅಗತ್ಯ ಕ್ರಮ ಕೈಗೊಂಡಿದೆ. ಆದರೆ ಆ ಹಣ ರೈತರ ಖಾತೆಯನ್ನು ತಲುಪುವಲ್ಲಿ ಹತ್ತು ಹಲವು ಅಡ್ಡಿ ಆತಂಕಗಳು ಎದುರಾಗುತ್ತಿವೆ.

    ಮೊದಲನೆಯದಾಗಿ, ಬ್ಯಾಂಕ್​ಗಳಲ್ಲಿ ಕೆಲವು ರೈತರು ಈಗಾಗಲೇ ಪಡೆದಿರುವ ಸಾಲಕ್ಕೆ ಅಧಿಕಾರಿಗಳು ಬರಪರಿಹಾರದ ಹಣವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಸ್ಥಿತಿ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ. ಇದನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಬ್ಯಾಂಕ್​ಗಳಿಗೆ ನಿರ್ದೇಶನ ಕೊಡಿಸಿದೆಯಾದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಇದೀಗ ಬರಪರಿಹಾರದ ಅರ್ಹ ಫಲಾನುಭವಿಗಳಿಗೆ ದಾಖಲೆಗಳ ಸಮಸ್ಯೆ ಎದುರಾಗಿದೆ. ಬರಗಾಲದ ಸಮೀಕ್ಷೆ ನಡೆಸಿದ್ದ ಸಿಬ್ಬಂದಿ ಮಾಡಿರುವ ಎಡವಟ್ಟಿನಿಂದಾಗಿ ರೈತರು ಸರ್ಕಾರಿ ಕಚೇರಿಗಳಿಗೆ, ಬ್ಯಾಂಕ್​ಗಳಿಗೆ ಅಲೆದಾಡುವಂತಾಗಿದೆ. ಕೆಲವು ಸಿಬ್ಬಂದಿ, ಫಲವತ್ತಾದ ಕೃಷಿಭೂಮಿಯನ್ನು ಕೂಡ ಪಾಳು ಭೂಮಿ, ಕೃಷಿಯೇತರ ಭೂಮಿ ಎಂದು ತಪು್ಪ ವರದಿ ನೀಡಿದ್ದಾರೆ. ಇದಲ್ಲದೆ, ಕೆಲವೆಡೆ ಜಮೀನುಗಳಲ್ಲಿ ಕಾಲುವೆ ಹಾದುಹೋಗಿದ್ದು, ಅಂತಹ ಜಮೀನುಗಳ ಮಾಲೀಕರು ಬರಪರಿಹಾರಕ್ಕೆ ಅರ್ಹರಲ್ಲ ಎಂದು ಕೂಡ ಅಧಿಕಾರಿಗಳು ಹೇಳುತ್ತಿದ್ದಾರೆ. ಇಂತಹ ಪ್ರಕರಣಗಳು ಒಂದೆರಡಲ್ಲ. ಎರಡು ಲಕ್ಷಕ್ಕೂ ಹೆಚ್ಚು. ತಮ್ಮ ಭೂಮಿಯ ವಿಷಯದಲ್ಲಿ ಸಮೀಕ್ಷಾ ಸಿಬ್ಬಂದಿ ನೀಡಿರುವ ವರದಿ ಸರಿಯಿಲ್ಲ ಎಂಬುದು ರೈತರ ಗಮನಕ್ಕೆ ಈಗೀಗ ಬರುತ್ತಿದೆ. ಬರ ಪರಿಹಾರದ ಹಣ ಇನ್ನೇನು ಬಂದೇ ಬಿಡುತ್ತದೆ ಎಂದು ಕಾದು ಕುಳಿತಿದ್ದ ರೈತರಿಗೆ ಇದರಿಂದ ನಿರಾಸೆಯಾಗಿದೆ. ಈ ಸಂಬಂಧದ ದಾಖಲೆಗಳನ್ನು ತಿದ್ದುಪಡಿ ಮಾಡಿಸಲು ರೈತರು ಕೃಷಿ ಅಧಿಕಾರಿಗಳ ಬಳಿಗೆ ಮತ್ತು ತಹಸೀಲ್ದಾರ್ ಕಚೇರಿಗಳಿಗೆ ಎಡತಾಕುತ್ತಿದ್ದಾರೆ.

    ಕಳೆದ ವರ್ಷ ಮಳೆ ಬೀಳದೇ ಇದ್ದುದರಿಂದ ಕೆಲವು ರೈತರು ಭೂಮಿಯಲ್ಲಿ ಬಿತ್ತನೆಯನ್ನೇ ಮಾಡಿರಲಿಲ್ಲ. ಅಲ್ಪಸ್ವಲ್ಪ ನೀರು ಇದ್ದ ಹಲವು ಪ್ರದೇಶಗಳಲ್ಲಿ ಬೆಳೆ ಒಣಗಿಹೋದ ಕಾರಣಕ್ಕೆ ರೈತರು ಹತಾಶೆಯಿಂದ ಬೆಳೆಯನ್ನೇ ತೆಗೆದು ಎಸೆದಿದ್ದರು. ಬರಪೀಡಿತ ತಾಲೂಕು ಎಂಬ ಘೊಷಣೆಯಾದ ನಂತರ ಸಮೀಕ್ಷೆ ಸಿಬ್ಬಂದಿ ಜಮೀನುಗಳಿಗೆ ಭೇಟಿ ನೀಡಿದ್ದಾರೆ. ಆಗ ಅಲ್ಲಿ ಒಣಗಿದ ಬೆಳೆಯೂ ಇಲ್ಲದ್ದನ್ನು ಕಂಡು ‘ಬಿತ್ತನೆ ಮಾಡಿದ ಕುರುಹು ಇಲ್ಲ’ ಎಂದು ವರದಿ ನೀಡಿದ್ದಾರೆ. ಬಿತ್ತನೆ ಆಗದ ಜಮೀನುಗಳಿಗೆ ‘ಪಾಳು ಭೂಮಿ’ ಎಂಬ ಪಟ್ಟ ಕಟ್ಟಿದ್ದಾರೆ. ಈಗ ಮುಂಗಾರುಪೂರ್ವ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಇದು ರೈತರು ಬಿತ್ತನೆಗೆ ಸಜ್ಜಾಗುವ ಕಾಲ. ಕೃಷಿ ಪರಿಕರ, ಬೀಜ, ರಸಗೊಬ್ಬರ ಮುಂತಾದವುಗಳ ಖರೀದಿಗಾಗಿ ರೈತರಿಗೆ ಹಣದ ಅವಶ್ಯಕತೆ ಇರುತ್ತದೆ. ಇಂತಹ ಸಮಯದಲ್ಲಿ ಕಳೆದ ವರ್ಷದ ಬರಪರಿಹಾರದ ಹಣಕ್ಕೆ ಹೀಗೆ ಅಲೆದಾಡಿಸುವುದು ಸರ್ವಥಾ ತಪ್ಪು. ಸರ್ಕಾರ ಸಮೀಕ್ಷಾ ಸಿಬ್ಬಂದಿ ಮಾಡಿರುವ ಈ ಎಡವಟ್ಟುಗಳನ್ನೆಲ್ಲ ಕೂಡಲೇ ಸರಿಪಡಿಸಿ, ರೈತರಿಗೆ ಬರಪರಿಹಾರದ ಹಣ ತಲುಪುವಂತೆ ಮಾಡಬೇಕು.

    ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts