More

    ಎಲ್ಲ ರೈತರ ಹತ್ತಿ ಖರೀದಿಸಿ

    ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸಿಸಿಐನ ಬೆಂಬಲ ಬೆಲೆ ಹತ್ತಿ ಖರೀದಿ ಕೇಂದ್ರಕ್ಕೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

    ರೈತರು ಟ್ರ್ಯಾಕ್ಟರ್​ಗಳಲ್ಲಿ ತುಂಬಿಕೊಂಡು ಬಂದಿದ್ದ ಹತ್ತಿ ಪರಿಶೀಲಿಸಿದ ಅವರು, ಭಾರತೀಯ ಹತ್ತಿ ನಿಗಮ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸುತ್ತಿರುವ ಪ್ರಕ್ರಿಯೆ ಕುರಿತು ಸಿಸಿಐ ಅಧಿಕಾರಿ ರವಿಕುಮಾರ ಅವರಿಂದ ಸಂಪೂರ್ಣ ಮಾಹಿತಿ ಪಡೆದರು. ಯಾವುದೇ ರೈತರಿಗೆ ಎರಡು ದಿನಗಟ್ಟಲೇ ಕಾಯಿಸಬೇಡಿ. ಬೇಗನೆ ಹತ್ತಿ ಖರೀದಿಸಿ. ನೋಂದಾಯಿತ ರೈತರೆಷ್ಟು? ಸದ್ಯ ಎಷ್ಟು ರೈತರ ಹತ್ತಿ ಖರೀದಿಯಾಗಿದೆ? ಬಾಕಿ ಉಳಿದ ರೈತರೆಷ್ಟು? ಇನ್ನೆಷ್ಟು ದಿನ ಹತ್ತಿ ಖರೀದಿ ನಡೆಯುತ್ತದೆ? ಈಗ ಮಳೆಗಾಲ ಪ್ರಾರಂಭವಾಗಿದೆ. ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಬೇಗನೆ ಎಲ್ಲ ರೈತರ ಹತ್ತಿ ಖರೀದಿಸಿ ಈ ಪ್ರಕ್ರಿಯೆ ಮುಕ್ತಾಯ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಯಾವುದೇ ಬಿತ್ತನೆ ಬೀಜಗಳು ಕೊರತೆಯಾಗಬಾರದು, ರೈತರಿಂದ ದೂರುಗಳು ಬಾರದಂತೆ ವಿತರಿಸಬೇಕು ಎಂದು ಶಾಸಕರು ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.

    ನಂತರ ಬಸ್ ನಿಲ್ದಾಣಕ್ಕೆ ಆಗಮಿಸಿದ ಅವರು, ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾರಿಗೆ ನಿಯಂತ್ರಕ ಎಸ್.ವಿ. ಗಿರಡ್ಡಿ ಅವರಿಂದ ಮಾಹಿತಿ ಪಡೆದರು. ‘ನಮಗೆ ಎಲ್ಲ ಕಡೆಗೂ ಸೌಲಭ್ಯವಿದೆ. ಆದರೆ, ಹುಬ್ಬಳ್ಳಿ ಕಡೆಗೆ ಹೋಗುವುದಕ್ಕೆ ಒಂದೇ ಒಂದು ಬಸ್ ಇಲ್ಲ’ ಎಂದು ಸಾರ್ವಜನಿಕರು ದೂರಿದರು. ಅದಕ್ಕೆ ಸಾರಿಗೆ ನಿಯಂತ್ರಕರು, ಸದ್ಯ ಯಾವುದೇ ಬಸ್ ಇಲ್ಲ ಎಂದು ತಿಳಿಸಿದರು. ಆಗ ಶಾಸಕರು ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.

    ಎಪಿಎಂಸಿ ಅಧ್ಯಕ್ಷ ಗುರುನಾಥ ಉಳ್ಳೇಗಡ್ಡಿ, ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ, ಸಿ.ಜಿ. ನಾವಳ್ಳಿ, ಈರಣ್ಣ ಬ್ಯಾಹಟ್ಟಿ, ಜಗದೀಶ ಹಾವಿನ, ತವನೇಶ ನಾವಳ್ಳಿ, ವೀರೇಶ ಹಿರೇಮಠ, ಶಿವಣ್ಣ ಬಾಳೋಜಿ, ಶಿವಾನಂದ ಹೊಸಳ್ಳಿ, ಬಸಪ್ಪ ಕರ್ಲವಾಡ, ವಿಜಯ ಕಂಬಿಮಠ, ಎಲ್.ಕೆ. ಜೂಲಕಟ್ಟಿ, ಕೆ.ವಿ. ಸಿದ್ದನಗೌಡ್ರ, ರಾಘವೇಂದ್ರ ರಾಮಗಿರಿ, ಯಲ್ಲಪ್ಪ ಸುಂಕದ, ಶಿವು ಬಳಿಗೇರ, ಭರತೇಶ ಜೈನ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts