More

    ಹೊಸ ಸಂವತ್ಸರ ಸ್ವಾಗತಕ್ಕೆ ಸಿದ್ಧತೆ ಜೋರು

    ಶಿವಮೊಗ್ಗ: ಯುಗಾದಿ ಆಚರಣೆಗೆ ಜನರು ಸೋಮವಾರ ಭರ್ಜರಿ ಸಿದ್ಧತೆ ಮಾಡಿಕೊಂಡರು. ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನಸಾಗರವೇ ಕಂಡುಬಂದಿತು. ಮಾರುಕಟ್ಟೆಯಲ್ಲಿ ಜನರ ಖರೀದಿ ಸಡಗರ ಹೆಚ್ಚಿತ್ತು. ಯುಗಾದಿ ಹಬ್ಬದ ಖರೀದಿ ಕಳೆದೊಂದು ವಾರದಿಂದಲೂ ಭರ್ಜರಿಯಾಗಿಯೇ ಇದೆ. ಆದರೆ ಕೊನೆ ಹಂತದ ಖರೀದಿಗೆಂದು ಜನ ಮಾರುಕಟ್ಟೆಗೆ ಆಗಮಿಸಿದ್ದರು.

    ಗಾಂಧಿ ಬಜಾರ್, ಬಿಎಚ್ ರಸ್ತೆ, ನೆಹರು ರಸ್ತೆ, ಸವಳಂಗ ರಸ್ತೆ, ದುರ್ಗಿಗುಡಿ ಮುಂತಾದ ಕಡೆಗಳಲ್ಲಿ ಯುಗಾದಿ ಹಬ್ಬಕ್ಕೆಂದು ಬಟ್ಟೆ, ಮಾವು, ಬೇವು, ಹೂವು, ಹಣ್ಣು ಖರೀದಿಗೆ ಜನರು ಮುಗಿಬಿದ್ದರು. ಸುಡು ಬಿಸಿಲಿಗೂ ಜಗ್ಗದ ಜನರು ಖರೀದಿಯಲ್ಲಿ ತಲ್ಲೀನರಾಗಿದ್ದರು.
    ನಗರದ ಬಹುತೇಕ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಇದರ ನಡುವೆ ಬೀದಿ ಬದಿಯ ವ್ಯಾಪಾರಿಗಳು ಕಡಿಮೆ ಬೆಲೆಗೆ ಬಟ್ಟೆಗಳನ್ನು ಕೊಳ್ಳುವಂತೆ ರಸ್ತೆಯಲ್ಲಿ ಕೂಗುತ್ತಿದ್ದ ದೃಶ್ಯ ಕಂಡುಬಂದಿತು. ರಂಗೋಲಿ, ಬಣ್ಣದ ಪುಡಿ ಮಾರಾಟ ಜೋರಾಗಿಯೇ ನಡೆಯಿತು.
    ಯುಗಾದಿ ಹಬ್ಬದ ಕಾರಣಕ್ಕೆ ಹೂವು, ಹಣ್ಣು ಬೆಲೆ ಗಗನಕ್ಕೇರಿತ್ತು. ಸೇವಂತಿಗೆ, ಕನಕಾಂಬರ, ಕಾಕಡ, ದುಂಡು ಮಲ್ಲಿಗೆ ಹೂವುಗಳ ಬೆಲೆ ಮಾರಿಗೆ 150-200 ರೂ. ಗಡಿ ದಾಟಿತ್ತು. ಮೂಸಂಬಿ 60ರೂ., ದ್ರಾಕ್ಷಿ 100, ಸೇಬು 260, ಬಾಳೆಹಣ್ಣು 60, ಕಿತ್ತಳೆ 80 ರೂ ತಲುಪಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts