More

    ಉಪಕರಣ ಖರೀದಿಗೆ ಅನುಮತಿ

    ಹಾವೇರಿ: ಕರೊನಾ ನಿಯಂತ್ರಣಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲ ವೈದ್ಯಕೀಯ ಉಪಕರಣಗಳನ್ನು ವಿಪತ್ತು ನಿರ್ವಹಣಾ ಅನುದಾನದಲ್ಲಿ ಖರೀದಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಸೂಚಿಸಿದರು.

    ಕರೊನಾ ನಿಯಂತ್ರಣ ಕುರಿತು ಜಿಲ್ಲಾಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ ಎರಡು ವಾರ ಅತ್ಯಂತ ಗಂಭೀರವಾದ ಸಮಯ. ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

    ಕರೊನಾ ಸೋಂಕು ಪತ್ತೆಯಾದ ತಕ್ಷಣ ಅವರನ್ನು ಸಾಗಿಸಲು ಪ್ರತ್ಯೇಕವಾದ ಆಂಬುಲೆನ್ಸ್​ಗಳನ್ನು ಕಾಯ್ದಿರಿಸಿಕೊಳ್ಳಬೇಕು. ಜಿಲ್ಲೆಯ ಯಾವುದೇ ಮೂಲೆಯಿಂದ ಕರೆ ಬಂದರೂ ಅರ್ಧ ತಾಸಿನೊಳಗೆ ಆ ಸ್ಥಳದಲ್ಲಿ ಆಂಬ್ಯುಲೆನ್ಸ್​ಗಳು ಹೋಗಬೇಕು. ಜನರಿಗೆ ಯಾವುದೇ ತರದ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಈಗಾಗಲೇ ಸರ್ಕಾರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿಗಾಗಿ ಅನುಮತಿ ನೀಡಿದೆ. ತುರ್ತಾಗಿ ಕೊರತೆಯಿರುವ ವೈದ್ಯರನ್ನು ನೇಮಿಸಿಕೊಳ್ಳಬೇಕು. ಮಾಸ್ಕ್, ವೆಂಟಿಲೇಟರ್, ಕೇಂದ್ರೀಕೃತ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲು ಅಗತ್ಯವಾದ ಉಪಕರಣಗಳನ್ನು ಖರೀದಿಸಬಹುದು ಎಂದರು.

    ಹೊರ ರಾಜ್ಯ ಹಾಗೂ ಜಿಲ್ಲೆಯ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು. ಯಾವುದೇ ಸಂದರ್ಭದಲ್ಲೂ ಮಾಹಿತಿ ಇಲ್ಲದೇ ಗಡಿಯೊಳಗೆ ಯಾರೂ ನುಸುಳಬಾರದು. ಗಡಿ ಚೆಕ್​ಪೋಸ್ಟ್​ಗಳನ್ನು ಬಿಗಿಗೊಳಿಸಿ ಕಡ್ಡಾಯವಾಗಿ ತಪಾಸಣೆ ಮಾಡಿ. ಸಂಶಯಾತ್ಮಕ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಬೇಕು. ಗಡಿ ಪ್ರದೇಶದಲ್ಲಿ ತುರ್ತು ಆರೋಗ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗಬಾರದು. ಖಾಸಗಿ ಆಸ್ಪತ್ರೆಗಳ ಸೇವೆ ಆರಂಭಿಸಲು ಕ್ರಮವಹಿಸಬೇಕು. ಖಾಸಗಿ ಆಸ್ಪತ್ರೆಗಳು ತೆರೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈಗಾಗಲೇ ರಾಜ್ಯಮಟ್ಟದಲ್ಲಿ ವೈದ್ಯಕೀಯ ಸಂಘಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸ್ಥಳೀಯವಾಗಿ ಆಸ್ಪತ್ರೆಗಳು ತೆರೆಯಬೇಕು. ಆಸ್ಪತ್ರೆ ತೆರೆಯದ ಖಾಸಗಿ ಕ್ಲಿನಿಕ್​ಗಳ ಮೇಲೆ ಕ್ರಮಕೈಗೊಳ್ಳಿ ಎಂದರು.

    ಈಗಾಗಲೇ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಮಾಡಲಾಗಿದೆ. ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ವಲಸೆ ಕಾರ್ವಿುಕರಿಗೆ ವಸತಿ, ಊಟದ ವ್ಯವಸ್ಥೆ ಮಾಡಬೇಕು. ಯಾರೂ ಹಸಿವಿನಿಂದ ಬಳಲಬಾರದು. ಅವಶ್ಯ ಬಿದ್ದರೆ ಅವರಿಗೆ ಸರ್ಕಾರಿ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಿ, ಜಿಲ್ಲಾಡಳಿತದಿಂದ ಆಹಾರ ಪೂರೈಸಬೇಕು ಎಂದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾತನಾಡಿ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಕರೊನಾ ನಿಯಂತ್ರಣಕ್ಕೆ ಐಸೋಲೇಶನ್ ವಾರ್ಡ್, ಫೀವರ್ ಕ್ಲಿನಿಕ್, ಸ್ಕ್ರೀನಿಂಗ್ ವ್ಯವಸ್ಥೆ, ಕರೊನಾ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಂಡಿರುವ ಸಿದ್ಧತೆ, ಆಂಬುಲೆನ್ಸ್, ವೆಂಟಿಲೇಟರ್ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಮನೆ ಮನೆಗೆ ಆರೋಗ್ಯ ತಪಾಸಣೆ ಕುರಿತು ಜಿಪಂ ಸಿಇಒ ರಮೇಶ ದೇಸಾಯಿ ಮಾಹಿತಿ ನೀಡಿದರು.

    ಎಸ್​ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಗಡಿಯಲ್ಲಿ ತಪಸಾಣೆ ಬಿಗಿಗೊಳಿಸಿ: ಸಭೆಯಲ್ಲಿ ಭಾಗವಹಿಸಿದ್ದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ಲಾಕ್​ಡೌನ್ ಮತ್ತು ಗಡಿ ಭಾಗದಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ಕೆಲವು ಹಳ್ಳಿಗಳಿಗೆ ಹೊರ ರಾಜ್ಯದಿಂದ ವ್ಯಕ್ತಿಗಳು ಆಗಮಿಸುತ್ತಿದ್ದಾರೆ. ಇವರಿಗೆ ಯಾವುದೇ ತಪಾಸಣೆ ನಡೆಸಿಲ್ಲ. ಜನರು ಅನಗತ್ಯ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಗಡಿ ಭಾಗದಲ್ಲೇ ಇವರನ್ನು ಕಡ್ಡಾಯವಾಗಿ ತಡೆಯಬೇಕು. ಮದ್ಯ ಮಾರಾಟ ನಿಷೇಧದಿಂದ ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ ಮಾರಾಟ ಹೆಚ್ಚಾಗಿದೆ. ಅಬಕಾರಿ ಇಲಾಖೆ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಉಚಿತ ಹಾಲು ವಿತರಣೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು.

    ಸಿದ್ದರಾಮಯ್ಯ ಟೀಕೆ ಬದಲು ಸಲಹೆ ನೀಡಲಿ

    ಹಾವೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂತಹ ಸಮಯದಲ್ಲಿ ಟೀಕೆ ಮಾಡುವ ಬದಲು ಸಲಹೆ ಕೊಡುವುದು ಸೂಕ್ತ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿದರು.

    ಮಂಗಳವಾರ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಲಾಕ್​ಡೌನ್ ಘೊಷಿಸಿದ್ದಾರೆ. ಆದರೆ ಬಡವರಿಗೆ, ಕೂಲಿ ಕಾರ್ವಿುಕರಿಗೆ ಅನುಕೂಲವಾಗುವ ಪರಿಹಾರ ಯೋಜನೆ ಘೊಷಿಸಿಲ್ಲ ಎನ್ನುವ ಸಿದ್ದರಾಮಯ್ಯನವರ ಆರೋಪಕ್ಕೆ ಈ ರೀತಿ ಹೇಳಿದರು.

    ಸಿದ್ದರಾಮಯ್ಯ ಆರೋಪ ಮಾಡುವ ಮುನ್ನ ಸದ್ಯ ಪರಿಸ್ಥಿತಿ ಏನಿದೆ ಎಂಬುದನ್ನು ಅರಿತುಕೊಳ್ಳಬೇಕು. ಈ ಸಮಯದಲ್ಲಿ ಟೀಕೆಗಿಂತ ಸರ್ಕಾರಕ್ಕೆ ಸಲಹೆ ನೀಡಬೇಕು. ನಿಮಗೆ ಯಾವ ಸೌಲಭ್ಯ ಬಂದಿಲ್ಲ ಹೇಳಿ, ಅದನ್ನು ಮುಟ್ಟಿಸುವ ಕೆಲಸ ಸರ್ಕಾರ ಮಾಡುತ್ತದೆ ಎಂದರು.

    ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಯಾರೂ ಮನೆ ಬಿಟ್ಟು ಹೊರಬರಬೇಡಿ. ಮನೆಯಲ್ಲಿಯೇ ಇರಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಒಂದೂ ಕರೊನಾ ಪ್ರಕರಣ ಕಂಡು ಬಂದಿಲ್ಲ. ರಾಜ್ಯದಲ್ಲಿಯೇ ಜಿಲ್ಲೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾಡಳಿತ, ವೈದ್ಯರು, ಸಿಬ್ಬಂದಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಎಲ್ಲೆಲ್ಲಿ ವೈದ್ಯರ ಕೊರತೆ ಇದೆಯೋ ಅಲ್ಲೆಲ್ಲ ಒಪ್ಪಂದದ ಮೇರೆಗೆ ಎಂಬಿಬಿಎಸ್, ಆಯುಷ್, ಆಯುರ್ವೆದ ವೈದ್ಯರ ಸೇವೆ ಪಡೆಯಲು ಸೂಚಿಸಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಏಪ್ರಿಲ್​ನಲ್ಲಿ 2 ಸಾವಿರ ವೈದ್ಯರ ನೇಮಕಾತಿ ಮಾಡುವುದಾಗಿ ಈ ಹಿಂದೆ ಹೇಳಿದ್ದೆ. ಆದರೆ, ಕರೊನಾ ಸೋಂಕು ಶುರುವಾಗಿ ಆ ಕೆಲಸವಾಗಿಲ್ಲ. ಈ ಸಂದರ್ಭದಲ್ಲಿ ಆಸಕ್ತ ವೈದ್ಯರು, ನರ್ಸ್​ಗಳ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಖಾಸಗಿಯಲ್ಲಿ ದುಡಿಯುವ ವೈದ್ಯರು, ನರ್ಸ್​ಗಳಿಗೆ ಸಿಗುವಷ್ಟು ಅಂದರೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆಯೂ ಸರ್ಕಾರ ಆಲೋಚಿಸುತ್ತಿದೆ ಎಂದರು.

    ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ತಪಾಸಣೆ ಆಗಿದೆ. ಈಗ 2ನೇ ಹಂತದ ತಪಾಸಣೆ ಆರಂಭವಾಗಿದೆ. ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಐಸೋಲೇಷನ್ ಬೆಡ್, ವೆಂಟಿಲೇಟರ್, ಐಸಿಯುಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ ಈವರೆಗೆ 258 ಕರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. 65 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಸೂರ್ಯನ ಕಿರಣ ಹೆಚ್ಚು ಬೀಳುವ ಪ್ರದೇಶಗಳಲ್ಲಿ ರೋಗಿಗಳು ಬೇಗ ಗುಣಮುಖರಾಗುತ್ತಿದ್ದಾರೆ ಎಂದರು.

    ಪ್ರಧಾನಿಯವರು ಹೇಳಿದ ಸಪ್ತಸೂತ್ರಗಳನ್ನು ಎಲ್ಲರೂ ಪಾಲಿಸಬೇಕು. ಸೋಂಕು ಸಮುದಾಯ ಮಟ್ಟದಲ್ಲಿ ಹರಡದಂತೆ ನೋಡಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇದರ ಜತೆಗೆ ಕ್ಯಾನ್ಸರ್, ಡಯಾಲಿಸಿಸ್, ಹೆರಿಗೆ ಸೇರಿ ಇನ್ನಿತರ ಗಂಭೀರ ಕಾಯಿಲೆ, ರೋಗಿಗಳಿಗೆ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದಿರಬೇಕು. ಇಂತಹ ಸಂದರ್ಭದಲ್ಲಿ ಅವರು ಆಸ್ಪತ್ರೆ ತೆರೆಯದಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಿ, ಲೈಸನ್ಸ್ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ನಾಗರಾಜ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts