More

    ಇಂಡಿಯಲ್ಲಿ 3 ಜೆಸಿಬಿಗಳಿಂದ ಚರಂಡಿ ದುರಸ್ತಿ

    ಇಂಡಿ: ಪಟ್ಟಣದ ಬಾಗವಾನ ನಗರದ ಮುಖ್ಯರಸ್ತೆಯ ಚರಂಡಿ ನಾಲೆಯೊಂದರಲ್ಲಿ ಗುರುವಾರ 6 ವರ್ಷದ ಮಗು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದೆ.

    ಸುದ್ದಿ ತಿಳಿದ ಕಂದಾಯ ಉಪವಿಭಾಗಾಧಿಕಾರಿ, ಪುರಸಭೆ ಆಡಳಿತ ಅಧಿಕಾರಿ ಅಬೀದ್ ಗದ್ಯಾಳ್ ಶುಕ್ರವಾರ ಬೆಳ್ಳಂ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಪುರಸಭೆ ಮುಖ್ಯಾಧಿಕಾರಿ, ಇಂಜಿನಿಯರ್‌ಗಳನ್ನು ಕರೆಯಿಸಿ ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ ನಡೆಸಿದರು.

    ಬಾಲಕ ಬಿಲಾಲ ಡಾಂಗೆ ಗುರುವಾರ ಸಂಜೆ ಆಳವಾದ ತೆರೆದ ಚರಂಡಿಯಲ್ಲಿ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ದಾರಿಯಲ್ಲಿ ಹೋಗುವ ನಾಗರಿಕರೊಬ್ಬರು ಮಗುವನ್ನು ರಕ್ಷಣೆ ಮಾಡಿದ್ದು, ಸದ್ಯ ಸುರಕ್ಷಿತವಾಗಿದೆ.

    ಮಗುವಿನ ತಂದೆ ಇಸ್ಮಾಯಿಲ್ ಡಾಂಗೆ ಮಾತನಾಡಿ, ಹಲವಾರು ದಿನಗಳ ಹಿಂದೆ ಕಾಮಗಾರಿ ಮಾಡಿದ್ದು, ವೈಜ್ಞಾನಿಕ ರೂಪದಲ್ಲಿ ನಡೆದಿಲ್ಲ. ಚರಂಡಿಯ ನಾಲೆಗಳು 6 ರಿಂದ 8 ಅಡಿ ಆಳವಿದ್ದು, ಅವುಗಳ ಬಗ್ಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿ ಪುರಸಭೆ ನಿರ್ಲಕ್ಷೃ ವಹಿಸಿದೆ. ಚಿಕ್ಕ ಮಕ್ಕಳು, ವಯೋವೃದ್ಧರು, ಅಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಬೈಕ್ ಸವಾರರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಈ ಕೂಡಲೇ ತಾಲೂಕು ಆಡಳಿತ ಅದರ ಬಗ್ಗೆ ಜವಾಬ್ದಾರಿ ವಹಿಸಿ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇನ್ನೂ ನಗರದಲ್ಲಿ ಬೇರೆ ಬೇರೆ ಕಡೆಯೂ ಈ ರೀತಿಯ ಚರಂಡಿಯ ನಾಲೆಯ ಗುಂಡಿಗಳಿದ್ದು ಕೂಡಲೇ ಸರಿಪಡಿಸಲು ಆಗ್ರಹಿಸಿದರು.

    ನಿವಾಸಿ ಖಾದೀರ್ ಡಾಂಗೆ ಮಾತನಾಡಿ, ಪಟ್ಟಣದ ಹಲವು ಭಾಗದಿಂದ ಚರಂಡಿ ಮತ್ತು ಮಳೆಯ ನೀರು ಹರಿದು ಬರುತ್ತಿದೆ. ಆದರೆ ಚರಂಡಿಯಲ್ಲಿ ಸರಳವಾಗಿ ನೀರು ಹರಿಯುವಂತೆ ಮಾಡಿಲ್ಲ. ಕೂಡಲೇ ಪಟ್ಟಣದಲ್ಲಿರುವ ಚರಂಡಿ ಗುಂಡಿಗಳನ್ನು ಸರಿಪಡಿಸಿ ಜೀವ ಹಾನಿಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

    ಇನ್ನುಳಿದ ಚರಂಡಿ ಸರಿಪಡಿಸಲು ಸೂಚನೆ
    ಚರಂಡಿಯ ನಾಲೆಯಲ್ಲಿ ಮಗು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ತಿಳಿಯಲಾಗಿದೆ. ಸ್ಥಳದಲ್ಲಿಯೇ ನಿಂತುಕೊಂಡು 3 ಜೆಸಿಬಿಗಳ ಮೂಲಕ ಚರಂಡಿ ಸ್ವಚ್ಛಗೊಳಿಸಿ ನೀರು ಸರಳವಾಗಿ ಹೋಗುವಂತೆ ಕಾರ್ಯಾಚರಣೆ ಮಾಡಲಾಗಿದೆ. ಅದಲ್ಲದೆ ಪಟ್ಟಣದಲ್ಲಿ ಇಂತಹ ಗುಂಡಿಗಳ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ, ಅವುಗಳನ್ನೂ ಸರಿಪಡಿಸಲು ಪುರಸಭೆಗೆ ಸೂಚಿಸಲಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts