More

    ಆಪದ್ಬಾಂಧವರಿಲ್ಲದ ಕಡಲ ತೀರ

    ಕಾರವಾರ: ಕರೊನಾ ಭಯದ ನಡುವೆಯೂ ಜಿಲ್ಲೆಯಯ ಕಡಲ ತೀರಗಳಿಗೆ ಪ್ರವಾಸಿಗರ ಆಗಮಿಸುತ್ತಿದ್ದಾರೆ. ಆದರೆ, ಅವರ ರಕ್ಷಣೆಗೆ ಜೀವ ರಕ್ಷಕರು ಇಲ್ಲದಿರುವುದು ಪ್ರವಾಸಿಗರ ಜೀವಕ್ಕೆ ಎರವಾಗುತ್ತಿದೆ. ಕಳೆದ ಒಂದೇ ವಾರದಲ್ಲಿ ಗೋಕರ್ಣದಲ್ಲಿ ಒಬ್ಬ ಹಾಗೂ ಮುರ್ಡೆಶ್ವರದಲ್ಲಿ ಇಬ್ಬರು ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ.

    ಕರೊನಾ ಹಾಗೂ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಜೂನ್​ನಿಂದ ಕಡಲ ತೀರಗಳು, ದೇವಸ್ಥಾನಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಈಗ ಹಂತ ಹಂತವಾಗಿ ಎಲ್ಲ ನಿರ್ಬಂಧಗಳನ್ನೂ ತೆರವು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಅನ್​ಲಾಕ್ 4 ಪ್ರಕಟಿಸಿದ್ದು, ದೇವಸ್ಥಾನಗಳಲ್ಲಿ ಜನ ಸೇರಲು ಹಾಗೂ ಪ್ರವಾಸಿ ತಾಣಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಅದರಂತೆ ಮೊದಲಿನಷ್ಟು ಇಲ್ಲದಿದ್ದರೂ ಜಿಲ್ಲೆಗೆ ದಿನಕ್ಕೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಅವರಿಗೆ ನೀರಿಗೆ ಇಳಿಯದಂತೆ ಸೂಚನೆ ನೀಡಲು, ಸಂಕಷ್ಟಕ್ಕೆ ಸಿಲುಕಿದರೆ ರಕ್ಷಣೆ ಮಾಡಲು ಜೀವ ರಕ್ಷಕರಿಲ್ಲ.

    2016ರಿಂದ ನೇಮಕ: ಉತ್ತರ ಕನ್ನಡ ಕಡಲ ತೀರ ಅಭಿವೃದ್ಧಿ ಸಮಿತಿ ರಚನೆ ಮಾಡಿದ ನಂತರ 2016ರಿಂದ ಜಿಲ್ಲೆಯ ಕಾರವಾರದಲ್ಲಿ ಮೂವರು, ಮುರ್ಡೆಶ್ವರದಲ್ಲಿ 7, ಗೋಕರ್ಣದ ಮುಖ್ಯ ಕಡಲ ತೀರ, ಓ ತೀರ, ಕುಡ್ಲೆ ತೀರ ಸೇರಿ ಒಟ್ಟು 21 ಲೈಫ್ ಗಾರ್ಡ್​ಗಳನ್ನು ನೇಮಿಸಲಾಗಿದೆ. ಈ ನೇಮಕದ ನಂತರ ಕಡಲ ತೀರಗಳಲ್ಲಿ ಪ್ರವಾಸಿಗರ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಗಾರ್ಡ್​ಗಳು ಮುರ್ಡೆಶ್ವರ, ಗೋಕರ್ಣ ಕಡಲ ತೀರಗಳಲ್ಲಿ 80ಕ್ಕೂ ಅಧಿಕ ಜೀವಗಳನ್ನು ರಕ್ಷಿಸಿದ್ದರು. ಆದರೆ, ಈಗ ಕರೊನಾ ಲಾಕ್​ಡೌನ್ ಕಾರಣದಿಂದ ಕಡಲ ತೀರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇದ್ದುದರಿಂದ ಲೈಫ್ ಗಾರ್ಡ್​ಗಳ ಕಾರ್ಯವನ್ನೂ ಸ್ಥಗಿತ ಮಾಡಲಾಗಿತ್ತು. ಇದುವರೆಗೂ ಅವರನ್ನು ಮರು ನೇಮಕ ಮಾಡಿಲ್ಲ.

    ಅಲ್ಪ ವೇತನ: ಕಡಲ ತೀರ ಅಭಿವೃದ್ಧಿ ಸಮಿತಿಯಲ್ಲಿ ಲೈಫ್ ಗಾರ್ಡ್, ಸೂಪರ್​ವೈಸರ್​ಗಳು, ಸ್ವಚ್ಛತಾ ಸಿಬ್ಬಂದಿ, ವಾರ್​ಶಿಪ್ ಗೈಡ್ , ಸ್ವಚ್ಛತಾ ಟ್ರ್ಯಾಕ್ಟರ್ ಡ್ರೖೆವರ್ ಸೇರಿ ಒಟ್ಟು 38 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಲೈಫ್ ಗಾರ್ಡ್​ಗಳಿಗೆ ಹೊರ ಗುತ್ತಿಗೆ ಕಂಪನಿಗಳಿಂದ ಮಾಸಿಕ 11 ಸಾವಿರ ರೂಪಾಯಿ ವೇತನವನ್ನು ಕೈಗೆ ಸಿಗುವಂತೆ ನೀಡಲಾಗುತ್ತಿತ್ತು. ಕರೊನಾ ಕಾರಣದಿಂದ ಅಭಿವೃದ್ಧಿ ಸಮಿತಿಗೇ ಆದಾಯ ಕೊರತೆಯಾಗಿದೆ. ಇದರಿಂದ ಈ ಸಿಬ್ಬಂದಿಯ ವೇತನ ಕಡಿತ ಮಾಡಲಾಗಿದೆ. ಜೀವನ ನಿರ್ವಹಣೆಗಾಗಿ ಅಲ್ಪ ವೇತನ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಾರ್​ಶಿಪ್ ಮ್ಯೂಸಿಯಂ, ರಾಕ್ ಗಾರ್ಡನ್ ತೆರೆದಿಲ್ಲ: ಜಿಲ್ಲೆಗೆ ಪ್ರವಾಸಕ್ಕೆಂದೇ ಜನ ಬರುತ್ತಿಲ್ಲ. ಆದರೆ, ಬೇರೆ ಧಾರ್ವಿುಕ ಕಾರಣಗಳಿಗಾಗಿ ಬರುವವರು ಅಥವಾ ಬೇರೆಯವರು ಕಡಲ ತೀರಗಳಿಗೆ ಬಂದು ಮೋಜು, ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಈಗ ಹೊರ ರಾಜ್ಯಗಳ ಗಡಿಯೂ ತೆರವಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಎಲ್ಲ ನಿರ್ಬಂಧ ತೆರೆದರೂ ಕಾರವಾರ ವಾರ್​ಶಿಪ್ ಮ್ಯೂಸಿಯಂ ಹಾಗೂ ರಾಕ್ ಗಾರ್ಡನ್​ಗಳನ್ನು ಇದುವರೆಗೂ ಪ್ರವಾಸಿಗರಿಗೆ ಮುಕ್ತ ಮಾಡಿಲ್ಲ.

    ಸೆಪ್ಟೆಂಬರ್ 21ರ ನಂತರ 100ಕ್ಕಿಂತ ಹೆಚ್ಚು ಜನ ಸೇರಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣವಾಗುತ್ತಿರುವ ಬಗ್ಗೆ ವಿಶ್ವಾಸಕ್ಕೆ ಬಂದ ನಂತರ ಪ್ರವಾಸಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗುವುದು. ಡಾ. ಹರೀಶಕುಮಾ ರ ಕೆ.ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts