More

    ಆರೋಗ್ಯ, ಆಹಾರ, ಉದ್ಯೋಗ ಮೂಲ ಹಕ್ಕಾಗಲಿ : ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಭಿಪ್ರಾಯ

    ಕೋಲಾರ : ನಿರುದ್ಯೋಗ ಸಮಸ್ಯೆಯಿಂದ ಯುವಜನತೆ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದ್ದು, ಆರೋಗ್ಯ, ಆಹಾರ, ಉದ್ಯೋಗ ಮೂಲ ಹಕ್ಕುಗಳಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದರು.

    ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ಯುವ ಮುನ್ನಡೆ ತಂಡ ಶನಿವಾರ ಆಯೋಜಿಸಿದ್ದ ಯುವಜನ ಹಕ್ಕಿನ ಮೇಳ-2021 ಉದ್ಘಾಟಿಸಿ ಮಾತನಾಡಿ, ಯುವಜನರು ದೇಶ ಕಟ್ಟುವ ಕಾರ್ಯಕ್ಕೆ ಬಳಕೆಯಾಗದೇ ದುಷ್ಟ ಶಕ್ತಿಗಳ ಜತೆ, ಕೋಮುವಾದ, ಮೂಲಭೂತವಾದ, ಅಪರಾಧದ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ದುರಂತ ಎಂದರು.

    ನೈತಿಕತೆ ಕಟ್ಟಿಕೊಂಡಿರುವ ವಿದ್ಯಾರ್ಥಿಯುವಜನರು ಬೇಕು. ಆದರೆ ಇಂದು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ದಿವಾಳಿತನ ಕಾಣುತ್ತಿದ್ದೇವೆ. ಯುವಜನರ ಪ್ರತಿಭೆ ಬೆಳಗಲು ಅವಕಾಶ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಯುವಜನರಿರುವ ಭಾರತ ಒಲಂಪಿಕ್‌ನಲ್ಲಿ ಗಳಿಸುವ ಚಿನ್ನ, ಬೆಳ್ಳಿ ಪದಕಗಳ ಸಂಖ್ಯೆ ಬೆರಳೆಣಿಕೆ. ಯುವಜನರನ್ನು ಕ್ರೀಡೆಗೆ ಸಜ್ಜುಗೊಳಿಸದಿರುವುದು ಸರ್ಕಾರ, ಸಮಾಜಕ್ಕೆ ನಾಚಿಕೆಯ ಸಂಗತಿ ಎಂದರು. ಯುವಜನರಿಗೆ ಉದ್ಯೋಗ ನೀಡುವ ನೀತಿಗಳು ಸಮರ್ಪಕವಾಗಿ ಜಾರಿಯಾಗುವಂತೆ ವಿದ್ಯಾರ್ಥಿ ಸಂಘಟನೆಗಳು ಧ್ವನಿ ಎತ್ತಿ ಜನಾಭಿಪ್ರಾಯ ಮೂಡಿಸಬೇಕು ಎಂದು ಸಲಹೆ ನೀಡಿದರು.

    ಜಿಲ್ಲೆಯಲ್ಲಿ ಶ್ರೀೀಮಂತವಾದ ಜನಪದವಿದೆ. ಜನಪದಲ್ಲಿ ಹಿರಿಯರ ಅನುಭವ, ಸಂದೇಶ ಅಡಗಿದೆ. ಅದನ್ನು ಉಳಿಸಿಕೊಂಡು ಯುವಜನರಲ್ಲಿ ತೊಡಗಿಸುವಲ್ಲಿ ವಿಫಲರಾಗಿದ್ದೇವೆ. ಆರೋಗ್ಯ ವಿಷಯದಲ್ಲೂ ಸೋತಿದ್ದನ್ನು ಕೋವಿಡ್ ವೇಳೆ ಅನುಭವಿಸಿದ್ದೇವೆ. ಇದುವರೆಗೆ ನಾವು ಸಾಧಿಸಿದ್ದನ್ನು ಉಳಿಸಿಕೊಂಡು ಮುಂದುವರಿಯಲು ಸಂವಿಧಾನ ಉಳಿಸಬೇಕು. ಇದಕ್ಕೆ ಸಂವಿಧಾನ ಓದಿ ಅರ್ಥ ಮಾಡಿಕೊಳ್ಳಬೇಕು. ಅಗ ನಮ್ಮ ಮುಂದಿರುವ ಸವಾಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

    ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ ಕೆಂಪರಾಜು ಮಾತನಾಡಿ, ಜಾಗತೀಕರಣ ಯುಗದಲ್ಲಿ ಅಯಾ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕು. ಹಕ್ಕೊತ್ತಾಯಗಳು ನಿರಂತರವಾಗಿ ನಡೆದರೆ ಮಾತ್ರ ಸರ್ಕಾರಗಳು ಪೂರಕವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆದ್ಯತೆ ನೀಡುತ್ತದೆ ಎಂದರು.

    ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್ ಮಂಜುನಾಥ್, ಬೆಂ. ಉತ್ತರ ವಿವಿ ಪ್ರಾಧ್ಯಾಪಕ ಪ್ರೊ.ಗುಂಡಪ್ಪ ಸಂವಿಧಾನದ ಪ್ರತಿಜ್ಞೆ ವಿಧಿ ಬೋಧಿಸಿದರು.  ಯುವ ಮುನ್ನಡೆ ತಂಡದ ಸದಸ್ಯರಾದ ಆರ್.ರಾಮಕ್ಕಾ, ಪವಿತ್ರಾ, ದಿಲೀಪ್, ಸಂಜನಾ, ಸುನಿತಾ ಶಶಿರಾಜ್ ಅನಿತಾರತ್ನಾ ಇದ್ದರು. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts