More

    ಅಂತರಾತ್ಮದಲ್ಲಿ ಶಿವನಿದ್ದಾನೆಂದು ಸಾರಿದ ಬಸವಣ್ಣ: ಕೂಡಲಸಂಗಮ ಬಸವಧರ್ಮ ಪೀಠದ ಡಾ.ಗಂಗಾಮಾತಾಜಿ ಆಶೀರ್ವಚನ

    ಯಲಬುರ್ಗಾ: ಪ್ರತಿಯೊಬ್ಬ ಮನುಷ್ಯನ ಅಂತರಾತ್ಮದಲ್ಲಿ ದೇವನಿದ್ದಾನೆ ಎಂಬುದನ್ನು ಬಸವಣ್ಣ ವಚನಗಳ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ಬಿತ್ತರಿಸಿದ್ದಾರೆ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾಮಾತಾಜಿ ಹೇಳಿದರು.

    ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದಿಂದ ಹಮ್ಮಿಕೊಂಡಿದ್ದ 61ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಸ್ತ್ರೀಯರಿಗೆ ಇಷ್ಟಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕಲ್ಲೊಳಗೆ ಹೊನ್ನು, ಮರದೊಳಗೆ ಅಗ್ನಿ, ಹಾಲೊಳಗೆ ತುಪ್ಪ ಇರುವಂತೆ ಮಾನವನ ಅಂತರಾತ್ಮದಲ್ಲಿ ಶಿವನಿದ್ದಾನೆ. ಅಜ್ಞಾನದ ಕತ್ತಲೆಯಿಂದ ಶಿವತತ್ವ ಅರಿವಿಗೆ ಬರಲ್ಲ. ಸಮರ್ಥ ಗುರು ಸಿಕ್ಕರೆ, ನಮ್ಮ ನಿಜ ಸ್ವರೂಪ ಶಿವಸ್ವರೂಪ ಎಂಬುದನ್ನು ತೋರಿಸಿಕೊಡಬಲ್ಲನು. ಶರಣರು ನಿರಂತರ ಶಿವಭಾವದಲ್ಲಿಯೇ ಇರುತ್ತಾರೆ. ಭವಚಿಂತೆಯಲ್ಲಿ ಮುಳುಗಿರುವ ಮಾನವರಿಗೆ ಗುರು ಬಸವಣ್ಣನವರು ಎಚ್ಚರಿಸುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರೂ ಇಷ್ಟಲಿಂಗ ಧರಿಸಿ, ಲಿಂಗದೇವನಲ್ಲಿ ಬೆರೆತು, ದೈವತ್ವವನ್ನು ಪಡೆದುಕೊಂಡು ಮುಕ್ತಾತ್ಮರಾಗಬೇಕು ಎಂದು ಆಶೀರ್ವಚನ ನೀಡಿದರು.

    ನಿವೃತ್ತ ಪಿಎಸ್‌ಐ ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಬಸವಣ್ಣ ವಚನಗಳ ವಚನಾಂಕಿತವನ್ನು ಲಿಂಗದೇವ ಬದಲಿಗೆ ಕೂಡಲ ಸಂಗಮದೇವ ಬಳಸಲು ಮಾತಾಜಿ ತೆಗೆದುಕೊಂಡ ನಿರ್ಧಾರ ದಿಟ್ಟತನವಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಸಂದೇಶವಾಗಿದೆ ಎಂದರು. ಮರಕಟ್ ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಬಸವದಳದ ಗುಳೆ ಗ್ರಾಮ ಘಟಕ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಗೌರವಾಧ್ಯಕ್ಷ ನಾಗನಗೌಡ ಜಾಲಿಹಾಳ, ಪ್ರಮುಖರಾದ ಹನುಮಗೌಡ ಗೌಡ್ರ, ಅಮರಪ್ಪ ಅಳ್ಳಳ್ಳಿ, ಯಮನೂರಪ್ಪ ಬೇವೂರು, ದೇವಪ್ಪ ಕೋಳೂರು, ಬಸವರಾಜ ಹೂಗಾರ, ಶರಣಪ್ಪ ಹೊಸಳ್ಳಿ, ಬಸವರಾಜ ಚೌಡ್ಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts