More

    ಮೊಬೈಲ್ ಫೋನ್ ಇಟ್ಟುಕೊಂಡಿದ್ದಕ್ಕೆ ಐನೂರು ರೂ. ದಂಡ!: ಸಂಧ್ಯಾ ಪ್ರಶಾಂತ್

    ಕಾಲೇಜು ಜೀವನವೆಂದರೆ ಯಾರಿಗಿಷ್ಟವಿಲ್ಲ ಹೇಳಿ! ಹಕ್ಕಿಯಂತೆ ಹಾರಾಡುವ ವಯಸ್ಸು. ಹಾಸ್ಟೆಲ್ನಲ್ಲಿದ್ದರಂತೂ ಕೇಳುವುದು ಬೇಡ. ಮನೆಯಿಂದ ಕಾಲೇಜು ದೂರವಿದ್ದುದರಿಂದ ನನ್ನನ್ನು ಹಾಸ್ಟೆಲ್ಗೆ ಸೇರಿಸಿದರು. ಎರಡನೇ ವರ್ಷದ ಪದವಿಯ ಅಂತಿಮ ಪರೀಕ್ಷೆಯ ಸಮಯದಲ್ಲಿ ನನ್ನ ಕೈಗೆ ಒಂದು ಹಳೆಯ ಮಾಡೆಲ್ನ ಇಂಟರ್ನೆಟ್ ಸೌಲಭ್ಯವಿಲ್ಲದ ನೋಕಿಯಾ ಮೊಬೈಲ್ ಬಂತು. ಅದರಲ್ಲಿ ಹಾಡು ಕೇಳುವುದು ಎಂದರೆ ಹಾಡುಗಾರ್ತಿಯಾಗಿದ್ದ ನನಗೆ ಬಹಳ ಅಚ್ಚುಮೆಚ್ಚು. ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಸಲು ಸೀಮಿತ ಸಮಯವಿತ್ತು. ರಾತ್ರಿ ಲಾಕರ್‌ನಲ್ಲಿ ಇಡಬೇಕಾಗಿತ್ತು. ಒಂದು ದಿನ ನಾನು ಮೊಬೈಲ್ ಲಾಕರ್‌ನಲ್ಲಿ ಇಡದೆ ಕವರ್ ಮಾತ್ರ ಇಟ್ಟು ರಾತ್ರಿ ಹಾಯಾಗಿ ಹಾಡು ಕೇಳಿಕೊಂಡು ಕೂತಿದ್ದೆ. ಗ್ರಹಚಾರಕ್ಕೆ ಅದೇ ದಿನ ವಾರ್ಡನ್ ಲಾಕರ್ ಚೆಕ್ಕಿಂಗ್ ಮಾಡಿ ಮೊಬೈಲ್ ವಶಪಡಿಸಿಕೊಂಡರು. ಪುನಃ ಮೊಬೈಲ್ ಬೇಕೆಂದರೆ 500 ರೂಪಾಯಿ ದಂಡ. ಹೇಗೋ ಧೈರ್ಯ ಮಾಡಿ ಅಪ್ಪನಲ್ಲಿ ನಡೆದುದನ್ನು ತಿಳಿಸಿದೆ. ಚೆನ್ನಾಗಿ ಬೈದು 500 ರೂಪಾಯಿ ಕೊಟ್ಟರು.

    ಆದರೆ ಅಮ್ಮ ಸಮಾಧಾನದಿಂದ ‘‘ನಿನಗೆ ಹಾಡುವುದು, ಹಾಡು ಕೇಳುವುದು ಇಷ್ಟ ಅಂತ ಗೊತ್ತಿದೆ. ಅದು ಒಳ್ಳೆಯ ಹವ್ಯಾಸವೇ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ ಪರೀಕ್ಷೆಯ ಸಂಧರ್ಭದಲ್ಲಿ ನಿನ್ನ ಶ್ರದ್ಧೆ ಏಕಾಗ್ರತೆ ಅದರಲ್ಲಿರಬೇಕು. ಫಲಿತಾಂಶ ಬಂದ ಮೇಲೆ ಓದುತ್ತೇನೆಂದರೆ ಅಂಕ ಜಾಸ್ತಿಯಾಗುವುದಿಲ್ಲ. ಮತ್ತೆ ದುಃಖಿಸಿ ಪ್ರಯೋಜನವಿಲ್ಲ. ಅದರ ಬದಲು ಮೊದಲೇ ಯೋಚಿಸಿ ಹೆಜ್ಜೆ ಇಟ್ಟಾಗ ಎಲ್ಲವೂ ಸರಿಹೋಗುತ್ತದೆ. ಎಡವುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಬೇಕು. ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನೇ ಮಾಡಬೇಕು. ಯಾವುದೂ ಅತಿಯಾಗಬಾರದು. ಮನೆಗೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿಸಿದರೆ ಅದು ನಿಷ್ಪ್ರಯೋಜಕ’’ ಎಂದು ತಿದ್ದಿ ಬುದ್ಧಿ ಹೇಳಿದಳು. ಇಷ್ಟೆಲ್ಲ ಹೇಳಿ ಕೊನೆಗೆ ‘‘ಬೇಕೆಂದರೆ ಪರೀಕ್ಷೆ ಮುಗಿದ ಮೇಲೆ ವಾರ್ಡನ್‌ಗೆ ತಿಳಿಯದಂತೆ ಇನ್ನೊಮ್ಮೆ ಹಾಡು ಕೇಳುವೆಯಂತೆ!’’ ಎಂದು ನಗೆ ಚಟಾಕಿ ಹಾರಿಸಿದಳು. ಅಮ್ಮನ ಮಾತಿನಲ್ಲಿ ಅದೆಷ್ಟು ಅರ್ಥ ತುಂಬಿತ್ತೆಂದರೆ ಇಂದಿಗೂ ನನ್ನ ಜೀವನಕ್ಕೆ ಮಾರ್ಗದರ್ಶನವಾಗುತ್ತಿದೆ. ಏನನ್ನೇ ಆದರೂ ಆಲೋಚಿಸಿ ಮಾಡುತ್ತೇನೆ. ಇಂಥ ತಾಯಿಯನ್ನು ಪಡೆದ ನಾನು ಧನ್ಯ. ಲವ್ ಯು ಅಮ್ಮ..

    | ಸಂಧ್ಯಾ ಪ್ರಶಾಂತ್ ಬೆಳ್ಳಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts