More

    ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ: ಸ್ಫೂರ್ತಿ ರಾವ್

    ಹೆಣ್ಣು ಮಕ್ಕಳು ಹೆಚ್ಚಾಗಿ ತಂದೆಯನ್ನು ಹಚ್ಚಿಕೊಳ್ಳುತ್ತಾರೆ. ಆದರೆ ನಾನು ಸ್ವಲ್ಪ ಉಲ್ಟಾ. ಅಮ್ಮನನ್ನು ಅಚ್ಚಿ ಕೊಂಡಿದ್ದಕ್ಕಿಂತ ಅವಳಿಗೆ ನಾನು ಅಂಟಿ ಕೊಂಡದ್ದೆ ಎಂದು ಹೇಳಬಹುದು. ನನಗಂತೂ ಅಮ್ಮನನ್ನೂ ಬಿಟ್ಟಿರಲು ಸಾಧ್ಯವೇ ಇರಲಿಲ್ಲ, ಅಮ್ಮ ಎಲ್ಲಿಗೆ ಹೋದರೂ ಅವಳ ಬೆನ್ನ ಹಿಂದೆ ಬಾಲದ ತರಹನೇ ಹೋಗುತ್ತಿದ್ದೆ. ಯಾರು ಬೈದರೂ ಅಷ್ಟು ಬೇಜಾರು ಆಗುತ್ತಾ ಇರಲಿಲ್ಲ. ಅದೇ ಅಮ್ಮ ಬೈದರೆ ಕಣ್ಣಲ್ಲಿ ಗಂಗಾ-ಭಾಗೀರಥಿ ಹರಿಯುತ್ತಿತ್ತು. ನಾನು ಬಾಲ್ಯದಿಂದಲೇ ಮುಂಗೋಪಿ. ನನಗೆ ಅಪ್ರಿಯವೆನೆಸಿದ ಮಾತುಗಳನ್ನು ಆಡಿದರೆ ಅಥವಾ ಹೇಳಿದರೆ ಎಲ್ಲಿಲ್ಲದ ಕೋಪ ಬರುತ್ತಿತ್ತು. ಒಂದು ದಿನ, ಅಮ್ಮ ಮತ್ತು ನಾನು ಸಂಬಂಧಿಕರ ಮನೆಯ ಸಮಾರಂಭಕ್ಕೆ ಹೋಗಿದ್ದೆವು. ಅಲ್ಲಿ ನಮ್ಮ ದೂರದ ಸಂಬಂಧಿಕರೊಬ್ಬರು ನನ್ನದಲ್ಲದ ತಪ್ಪಿಗೆ ಬೈಯಲು ಪ್ರಾರಂಭಿಸಿದರು, ಮೊದಲೇ ನನಗೆ ಮುಂಗೋಪ. ಇನ್ನು ಸುಮ್ಮನೇ ನನ್ನದ್ದಲ್ಲದ ತಪ್ಪಿಗೆ ಬೈದರೆ ನಾನು ಬಿಡುತ್ತೇನೆಯೇ!? ನಾನು ಅವರ ಬಳಿ ಮಾತಿಗಿಳಿದೆ. ನಮ್ಮ ಮಾತು ವಿಕೋಪಕ್ಕೆ ಹೋಗುವ ಮೊದಲು ನನ್ನ ಅಮ್ಮ ಬಂದು ನನಗೆ ಬೈದರು.

    ಅವರ ಮೇಲಿದ್ದ ಕೋಪಕ್ಕಿಂತ ಅಮ್ಮನ ಮೇಲೆ ಎಲ್ಲಿಲ್ಲದ ಕೋಪ ಬಂತು. ಅಮ್ಮ್ ನನಗೆ ಜೋರು ಮಾಡಿದ್ದಕ್ಕಿಂತ, ಎಲ್ಲರ ಮುಂದೆ ಬೈದರು ಎಂಬುದು ನನ್ನ ಕೋಪಕ್ಕೆ ಕಾರಣವಾಗಿತ್ತು. ಅಲ್ಲಿಂದ ಸೀದಾ ಓಡಿ ಹೋಗಿ ಬಿಟ್ಟೆ, ಕೋಪ ಇಳಿಯುತ್ತಿದ್ದಂತೆ ದೇಹಕ್ಕೆ ಸುಸ್ತಾಗಲು ಪ್ರಾರಂಭವಾಯಿತು. ಆಚೆ ಈಚೆ ನೋಡಿದೆ, ದೂರದಲ್ಲಿ ಮರವೊಂದು ಕಾಣಿಸಿತು, ಅದರಡಿಯಲ್ಲಿ ಕುಳಿತು ಕೊಂಡು ಬಿಟ್ಟೆ. ಇನ್ನೇನು ಅಳುವುದೊಂದೇ ಬಾಕಿ, ಅಮ್ಮ ಬರುವುದು ಕಾಣಿಸಿತು. ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಿದಷ್ಟು ಖುಷಿಯಾಯಿತು. ಅವಳ ಬಳಿ ಓಡಿ ಹೋದೆ. ‘ಛಾಟರ್’ ಎಂದು ಬೆನ್ನಿಗೆ ಬಿತ್ತು. ಬಾ ಮನೆಗೆ ಅಲ್ಲಿದೆ ನಿನಗೆ ಮಾರಿ ಹಬ್ಬ ಎಂದರು.

    ಹಸಿವಾಗುತ್ತಿತ್ತು, ಹೇಳಲು ಒಂದು ರೀತಿಯ ಭಯ ಮತ್ತು ಸಂಕೋಚ ಬೇರೆ. ಅಡುಗೆ ಕೋಣೆಯಲ್ಲಿದ್ದವಳನ್ನು, ಬಾಗಿಲ ಸಂದಿಯಲ್ಲಿ ಇಣುಕಿ ನೋಡುತ್ತಿದ್ದೆ. ಅಮ್ಮ ನನ್ನತ್ತಲೇ ತಿಂಡಿಯೊಂದಿಗೆ ಬಂದಳು. ಮೊದಲು ತಿನ್ನು, ಆಮೇಲೆ ಮಾತನಾಡೋಣ ಎಂದರು. ನಾನು, ಏನು ಮಾತನಾಡೋದು ಎಂದು ಮನದಲ್ಲೇ ಅಂದುಕೊಂಡೆ. ನಾನು ತಿಂಡಿ ಮುಗಿಸುವವರೆಗೂ ಕಾದಿದ್ದ ಅಮ್ಮ, ನಂತರ ನಿಧಾನವಾಗಿ, ‘‘ಕೋಪದಲ್ಲಿ ಕತ್ತರಿಸಿದ ಮೂಗು ಮತ್ತೆ ಬರುವುದಿಲ್ಲ. ನೆನಪಿರಲಿ, ಕೋಪದಲ್ಲಿ ಆಡುವ ಮಾತುಗಳನ್ನು ಮತ್ತೆ ಮರಳಿ ಹಿಂಪಡೆಯಲು ಸಾಧ್ಯವಿಲ್ಲ, ಆದರೆ ಆ ಸಮಯದಲ್ಲಿ ಆಡಿದ ಮಾತುಗಳನ್ನು ಕೇಳಿಸಿಕೊಂಡ ವ್ಯಕ್ತಿಯ ಮನಸ್ಸಿನ ಮೇಲಾದ ಘಾಸಿ ಅವರಿಗೆ ಮಾತ್ರ ತಿಳಿದಿರುತ್ತದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’’ ಎಂದಳು.

    ‘‘ಬಂಗಾರಿ, ಕೆಲವೊಮ್ಮೆ ನಮ್ಮ ತಪ್ಪು ಇರುವುದಿಲ್ಲ, ಆದರೂ ಕೆಲವೊಮ್ಮೆ ಅಪವಾದ ಮತ್ತು ಆರೋಪಗಳನ್ನು ಕೇಳಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ನಮ್ಮ ಸಹನೆ ಕಳೆದು ಕೊಳ್ಳಬಾರದು. ನಮ್ಮ ತಪ್ಪಿದ್ದರೆ ನಾವು ಕ್ಷಮೆ ಕೇಳಬೇಕು. ಅವರ ತಪ್ಪಿದ್ದರೆ ಅವರನ್ನು ನಾವು ಕ್ಷಮಿಸಿ ಬಿಡಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ ಹಾಗೂ ಕ್ಷಮಿಸುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈಗ ಈ ಮಾತುಗಳು ಅಹಿತಕರವೆನಿಸಬಹುದು. ಆದರೆ ಮುಂದೊಂದು ದಿನ ಈ ಮಾತುಗಳು ನಿನಗೆ ಸರಿ ಎನಿಸುತ್ತದೆ. ಮತ್ತೆ, ನಿನ್ನ ಕೋಪ ನಿಯಂತ್ರಣ ಮಾಡಲು ಒಂದರಿಂದ ನೂರರವರೆಗೆ ಎಣಿಕೆ ಮಾಡು’’ ಎಂದು ಹೇಳಿ ಅಲ್ಲಿಂದ ಹೋದಳು.
    ಅಮ್ಮ ಹೇಳಿದ ಮಾತುಗಳು ನಿಜವೆನಿಸಿತು. ಉದ್ವೇಗಗೊಳ್ಳುವ ಸಮಯದಲ್ಲಿ ಮೌನವಾಗಿರುತ್ತಿದ್ದೆ. ಕೋಪ ಬಂದಾಗ ಅಮ್ಮ ಹೇಳಿದಂತೆ ಸಂಖ್ಯೆಗಳನ್ನು ಎಣಿಕೆ ಮಾಡುತ್ತಿದ್ದೆ. ಕೆಲವರು ಇದ್ದಕ್ಕೆ ನನ್ನನ್ನು ಹೇಡಿಯೆಂದು, ಪರಿಸ್ಥಿತಿಯಿಂದ ಓಡುತ್ತಿದ್ದೇನೆಂದು ಜರಿದರು. ಕೆಲವರು ನನ್ನ ಆಲಸ್ಯವೆಂದರು. ಆದರೆ ಅಮ್ಮ ಹೇಳಿದ ಕಿವಿ ಮಾತುಗಳು ಇಂತಹ ಮಾತುಗಳನ್ನು ನಿರ್ಲಕ್ಷ್ಯ ಮಾಡುವಂತೆ ಪ್ರೇರೇಪಿಸಿತು.

    | ಸ್ಫೂರ್ತಿ ರಾವ್ ಎಸ್. ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts