ದಾವಣಗೆರೆ: ವಿನೋಬ ನಗರದ 4ನೇ ಮುಖ್ಯರಸ್ತೆಯಲ್ಲಿನ ಕೆ.ಎಸ್.ವೈನ್‌ಲ್ಯಾಂಡ್ ಬಾರನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಮುಖ್ಯರಸ್ತೆ ಒಂದನೇ ಕ್ರಾಸ್ ಮಹಿಳೆಯರು ಒತ್ತಾಯಿಸಿದ್ದಾರೆ.
ಬಾರ್‌ಗೆ ಎಂಆರ್‌ಪಿ ರೂಲ್ಸ್‌ನಡಿ ಕೇವಲ ಪಾರ್ಸಲ್ ಮಾರಾಟಕ್ಕೆ ಪರವಾನಗಿ ನೀಡಲಾಗಿದ್ದರೂ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಅನುಪಮಾ ರವಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹಳೆಯ ಪಿ.ಬಿ.ರಸ್ತೆಯ ಪಕ್ಕದಲ್ಲೇ ಇರುವ ಬಾರ್‌ನಲ್ಲಿ ಮದ್ಯ ಸೇವಿಸಿದವರು 3 ಮತ್ತು 4ನೇ ಮುಖ್ಯರಸ್ತೆಯ ಅಡ್ಡರಸ್ತೆಗಳ ಮನೆಗಳ ಮುಂದೆ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡುತ್ತಾರೆ. ಮದ್ಯದ ಬಾಟಲಿ ಬಿಸಾಕುತ್ತಾರೆ. ಮೂತ್ರ ವಿಸರ್ಜನೆ ಮಾಡುತ್ತಾರೆ. ಯಾರಾದರೂ ಪ್ರಶ್ನಿಸಿದರೆ ಅವಾಚ್ಯವಾಗಿ ಬೈದು ನಿಂದಿಸುತ್ತಾರೆ. ಇದರಿಂದ ಇಲ್ಲಿನ ನಿವಾಸಿಗಳು ಪ್ರತಿದಿನ ಹಿಂಸೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಬಾರ್ ಸ್ಥಳಾಂತರಕ್ಕೆ ಹಲವು ಬಾರಿ ಅಬಕಾರಿ ಇಲಾಖೆ ಆಯುಕ್ತರು ಹಾಗೂ ಬಡಾವಣೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಬಕಾರಿ ಇಲಾಖೆಯವರು ಬಾರ್ ಪರವಾನಗಿ ನವೀಕರಿಸಿ ಮುಂದುವರೆಯುವಂತೆ ಮಾಡಿದ್ದಾರೆ. ಸಂಬಂಧಿಸಿದವರು ಕೂಡಲೇ ಬಾರ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅನಿತಾ ಬಸವಲಿಂಗಪ್ಪ, ವಿಜಯಲಕ್ಷ್ಮಿ ನಿರಂಜನ್, ಶಂಶದ್ ಸೈಯದ್ ಸೈಫುಲ್ಲಾ, ಭಾಗೀರಥಿ ಪಾಂಡುರಂಗ ಸುದ್ದಿಗೋಷ್ಠಿಯಲ್ಲಿದ್ದರು.