ಯಾವಳೆ ನೀನು… ಮಹಿಳೆ ಜತೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ. ಆರ್. ಪೇಟೆ ಅನುಚಿತ ವರ್ತನೆ!

Shivaraj KR Pete
Published on

ಬೆಂಗಳೂರು: ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕ ಜನತೆಯ ಮನದಲ್ಲಿ ಮನೆ ಮಾಡಿರುವ ಹಾಸ್ಯ ನಟ ಶಿವರಾಜ್​ ಕೆ.ಆರ್​. ಪೇಟೆ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿರುವುದಾಗಿ ವರದಿಯಾಗಿದೆ.

ಶಾರದಾ ಬಾಯಿ ಎಂಬ ಮಹಿಳೆ ನಗರದ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಶಿವರಾಜ್​ ಕೆ.ಆರ್​. ಪೇಟೆ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ, ಅವಮಾನಿಸಿದ್ದಾರೆ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ. ಹೀಗಾಗಿ ಶಿವರಾಜ್​ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಾರದಾ ಬಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?

ಈ ಘಟನೆ ಮಾರ್ಚ್​ 30ರಂದು ನಡೆದಿದೆ. ಎಂದಿನಂತೆ ಶಾರಾದ ಬಾಯಿ ಅವರು ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಹೋಗುವಾಗ ರಾಜ್​ಕುಮಾರ್​ ರಸ್ತೆಯ 10 ಕ್ರಾಸ್​ನ ಪೆಟ್ರೋಲ್​ ಬಂಕ್​ ಬಳಿ ಅವರ ವಾಹನಕ್ಕೆ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ ಶಾರದಾ ಅವರು ಕೋಪದಿಂದ ತಿರುಗಿ ನೋಡಿದಾಗ ಕಾರಿನಲ್ಲಿದ್ದ ಶಿವರಾಜ್​ ಕೆ.ಆರ್​. ಪೇಟೆ, ಯಾವಳೆ ನೀನು? ಅಲ್ಲಾಡಿಸಿಕೊಂಡು ಹೋಗ್ತಿದ್ದೀಯಾ ಎಂದು ನಿಂದಿಸಿದ್ದಲ್ಲದೆ, ಕಾರಿನಲ್ಲಿದ್ದ ತನ್ನ ಸ್ನೇಹಿತರ ಜತೆ ನಗಾಡಿಕೊಂಡು ಹೋಗಿದ್ದಾರೆ. ಒಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿರುವ ಶಿವರಾಜ್​ ಕೆ.ಆರ್​. ಪೇಟೆ ವಿರುದ್ಧ ಕ್ರಮ ಜರುಗಿಸುವಂತೆ ಶಾರದಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಾರದಾ ಅವರು ನೀಡಿದ ದೂರಿನ ಮೇರೆಗೆ ನಟ ಶಿವರಾಜ್​ ಕೆ.ಆರ್​. ಪೇಟೆ ವಿರುದ್ಧ ಎನ್​ಸಿಆರ್​ ದಾಖಲಿಸಿಕೊಂಡ ಸುಬ್ರಹ್ಮಣ್ಯ ನಗರ ಪೊಲೀಸರು ವಿಚಾರಣೆಗೆ ಬರುವಂತೆ ಶಿವರಾಜ್​ ಅವರಿಗೆ ನೋಟಿಸ್​ ನೀಡಿದ್ದರು. ನಿನ್ನೆ ಬೆಳಗ್ಗೆ ಶಿವರಾಜ್ ಕೆ ಆರ್ ಪೇಟೆ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಮಹಿಳೆಯನ್ನೂ ಠಾಣೆಗೆ ಕರೆಸಿ ಈ ಪ್ರಕರಣವನ್ನು ಬಗೆಹರಿಸಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net