More

    ಬೈಕ್‌ನಿಂದ ಬಿದ್ದು ಮಹಿಳೆ ಸಾವು ಪ್ರಕರಣ: ರಸ್ತೆ ಗುಂಡಿ ಮುಚ್ಚಲು ತಾಕೀತು

    ತುಮಕೂರು : ದ್ವಿಚಕ್ರ ವಾಹನ ಸವಾರೊಬ್ಬರನ್ನು ಬಲಿ ತೆಗೆದುಕೊಂಡಿದ್ದರೂ ರಸ್ತೆ ಗುಂಡಿ ಮುಚ್ಚದೇ ನಿರ್ಲಕ್ಷೃವಹಿಸಿದ್ದ ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ ಚಳಿಬಿಡಿಸಿದರು.

    ಕಳೆದ ಭಾನುವಾರ ಬೆಳಗ್ಗೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಮುಂಭಾಗದ ಹಳೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಿದ್ದಿದ್ದ ಗುಂಡಿಯಿಂದ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ವಿನೋಬನಗರದ 4ನೇ ಕ್ರಾಸ್ ನಿವಾಸಿ ತಾಹೇರಾಬಾನು (50) ಭಾನುವಾರ ಮೃತಪಟ್ಟಿದ್ದರು. ಈ ಸಂಬಂಧ ಪತ್ರಕರ್ತರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಮನಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಪಘಾತ ನಡೆದ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಅವರು ಸೋಮವಾರದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ತಾಕೀತು ಮಾಡಿದರು.

    ಅವೈಜ್ಞಾನಿಕ ರಸ್ತೆ ನಿರ್ಮಾಣ, ಮಳೆಗಾಲದಲ್ಲಿ ಆಗಿರುವ ರಸ್ತೆ ಗುಂಡಿಗಳನ್ನು ಮುಚ್ಚದೇ ಇರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರಲ್ಲದೆ, ಪದೇಪದೆ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಪೊಲೀಸರೂ ಸಂಬಂಧಪಟ್ಟ ಇಲಾಖೆ ಗಮನಕ್ಕೆ ಲಿಖಿತವಾಗಿ ಗಮನಕ್ಕೆ ತಂದಿದ್ದರೂ ಯಾಕೆ ನೀವು ಕ್ರಮ ಕೈಗೂಂಡಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಿ, ಅಮಾಯಕ ಜೀವಗಳು ಅಪಘಾತಗಳಿಗೆ ಬಲಿಯಾಗೋದು ಬೇಡ ಎಂದು ತೀಕ್ಷ್ಣವಾಗಿ ಹೇಳಿದರು.
    ಪಾಲಿಕೆ ಇಇ ಆಶಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ನರಸಿಂಹಪ್ಪ ಇದ್ದರು.

    ಡಿಸಿ, ಎಸ್ಪಿ ಓಡಾಡುವ ರಸ್ತೆ: ಅಮಾನಿಕೆರೆಗೆ ಹೊಂದಿಕೊಂಡಿರುವ ಹಳೆಯ ಎನ್‌ಎಚ್-4 ರಸ್ತೆಯಲ್ಲಿ ಪ್ರತಿನಿತ್ಯ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಓಡಾಡಲಿದ್ದು, ಶಿರಾಗೇಟ್‌ವರೆಗೆ ಎರಡು ಕಡೆ ಗುಂಡಿಗಳೇ ತುಂಬಿವೆ. ಅತ್ಯಂತ ಅಪಾಯಕಾರಿ ಗುಂಡಿಗಳಿದ್ದರೂ ಸಂಬಂಧಪಟ್ಟವರು ಗುಂಡಿ ಮುಚ್ಚದೇ ನಿರ್ಲಕ್ಷೃವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮಹಾನಗರ ಪಾಲಿಕೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತ್ಯೇಕ ಅನುದಾನ ಇಲ್ಲ. ಕಳೆದ ವರ್ಷ 14ನೇ ಹಣಕಾಸು ಯೋಜನೆ ಅಡಿ ಉಳಿದ 34 ಲಕ್ಷ ರೂಪಾಯಿ ಅನುದಾನವನ್ನು ಪ್ರಮುಖ ರಸ್ತೆ ಗುಂಡಿಗಳನ್ನು ಮುಚ್ಚಲು ಬಳಸಲಾಗಿತ್ತು. ಹಳೆಯ ಎನ್‌ಎಚ್-4 ರಸ್ತೆಯನ್ನು 2017ರಲ್ಲಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೊಟ್ಟಿದ್ದೇವೆ. ಇನ್ನೂ ಪಾಲಿಕೆಗೆ ಹಸ್ತಾಂತರಿಸಿಲ್ಲ.
    ಆಶಾ ಇಇ, ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts