More

    ವಿಪರೀತ ಚಳಿ, ರಾಜ್ಯಾದ್ಯಂತ ಹೆಚ್ಚಿದ ಥಂಡಿ; ಇರಲಿ ಆರೋಗ್ಯ ಕಾಳಜಿ

    | ಪಂಕಜ ಕೆ.ಎಂ. ಬೆಂಗಳೂರು

    ರಾಜ್ಯದಲ್ಲಿ ದಿನ ಕಳೆದಂತೆ ಹೆಚ್ಚಾಗುತ್ತಿರುವ ಚಳಿಯ ತೀವ್ರತೆ ಸಂಕ್ರಾಂತಿವರೆಗೂ ಮುಂದುವರಿಯಬಹುದೆಂಬ ಹವಾಮಾನ ಇಲಾಖೆ ವರದಿ ಆರೋಗ್ಯ ಕಾಳಜಿಯ ಸವಾಲನ್ನು ನೆನಪಿಸಿದೆ. ಹೃದಯ ಸಂಬಂಧಿ, ಅಸ್ತಮಾ ರೋಗಿಗಳು, ಸಂಧಿವಾತ ಸಮಸ್ಯೆ ಇರುವವರು, ಬಾಣಂತಿಯರು, ಮಕ್ಕಳು, ವೃದ್ಧರು ಆರೋಗ್ಯ ಕುರಿತು ಹೆಚ್ಚು ಕಾಳಜಿ ವಹಿಸುವಂತೆ ವೈದ್ಯರು ಎಚ್ಚರಿಸಿದ್ದಾರೆ. ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ 10 ಡಿಗ್ರಿಗಿಂತ ಕೆಳಗಿನ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಳಗ್ಗೆ, ಸಂಜೆ ಅತಿಯಾದ ಚಳಿ, ಮಧ್ಯಾಹ್ನ ಬಿಸಿಲಿದ್ದು, ವಾತಾವರಣ ಅತಿಯಾದ ಆರ್ದ್ರತೆ ಹಾಗೂ ಧೂಳುಮಯವಾಗುತ್ತಿದೆ. ಇದರಿಂದಾಗಿ ಶೀತ ಹಾಗೂ ಜ್ವರದ ಜತೆಗೆ ವೈರಾಣು ಸೋಂಕಿನಿಂದಲೂ ಜನರು ಬಳಲುತ್ತಿದ್ದಾರೆ ಎನ್ನುತ್ತಾರೆ ತಜ್ಞರು. ಚಳಿಗಾಲದಲ್ಲಿ ವೈರಾಣು ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಒಬ್ಬರಿಗೆ ಶೀತ ಕಾಣಿಸಿಕೊಂಡರೆ ಮನೆ ಮಂದಿಯನ್ನೆಲ್ಲ ಕಾಡುತ್ತದೆ. ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುವುದು ಇದಕ್ಕೆ ಕಾರಣ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ.

    ಕಾಳಜಿ ಅತ್ಯಗತ್ಯ: ಚಳಿಗಾಲದಲ್ಲಿ ತಲೆ, ಮೈ-ಕೈ ನೋವು ಶೀತ, ಕೆಮ್ಮು, ಗಂಟಲು ಬೇನೆ ಕಾಡುತ್ತದೆ. ಸಂಧಿವಾತ ಸಮಸ್ಯೆ ಇರುವವರನ್ನು ನರಳಿಸುತ್ತದೆ. ಚರ್ಮಸಮಸ್ಯೆ ಬಾಧಿಸುತ್ತವೆ ಎಂಬುದು ಇಎಸ್​ಐನ ಚರ್ಮರೋಗ ತಜ್ಞ ಡಾ. ಗಿರೀಶ್ ಅಭಿಪ್ರಾಯ.

    ಚಳಿಗಾಲದಲ್ಲಿ ಹೃದ್ರಯ ಸಂಬಂಧಿ ಸಮಸ್ಯೆಗಳು ಶೇ. 5 ಹೆಚ್ಚಳವಾಗುತ್ತದೆ. ಹಾಗಾಗಿ ಸ್ವಲ್ಪ ಬಿಸಲು ಬಂದ ಮೇಲೆ ವಾಕ್ ಮಾಡುವುದು ಒಳಿತು. ಹೃದಯ ಸಮಸ್ಯೆ ಇರುವವರು ನಿಯಮಿತವಾಗಿ ಔಷಧ ಸೇವಿಸಬೇಕು.

    | ಡಾ.ಸಿ.ಎನ್.ಮಂಜುನಾಥ್ ಜಯದೇವ ಆಸ್ಪತ್ರೆ ನಿರ್ದೇಶಕ

    ಎಚ್ಚರಿಕೆ ಕ್ರಮಗಳು

    • ಮಕ್ಕಳು, ವೃದ್ಧರು, ಬಾಣಂತಿ ಯರನ್ನು ಬೆಚ್ಚಗೆ ಇರಿಸಬೇಕು
    • ಮನೆಯಲ್ಲೇ ತಯಾರಿಸಿದ ತಾಜಾ ಬಿಸಿ ಆಹಾರ ಸೇವಿಸಬೇಕು
    • ಕರಿದ ಹಾಗೂ ಮಸಾಲೆ ಪದಾರ್ಥ ಮಿತವಾಗಿ ಬಳಸಬೇಕು, ಚಳಿ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು
    • ತ್ವಚೆಯ ಆರೈಕೆಗಾಗಿ ಕೋಲ್ಡ್ ಕ್ರೀಮ್ ಲೋಷನ್​ಗಳನ್ನು ಬಳಸಿ, ಜನದಟ್ಟಣೆ ಸ್ಥಳಗಳಿಂದ ದೂರ ಇರುವುದು ಒಳಿತು.
    • ತಿಳಿ ಬಣ್ಣದ ಉಣ್ಣೆ, ಹತ್ತಿ ಬಟ್ಟೆ ಧರಿಸಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts