More

    ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಸಂಕಷ್ಟ; ಬಳಕೆದಾರರ ಎದುರು ಹೊಸ ಆಯ್ಕೆಯಾಗಿ ‘ಸಿಗ್ನಲ್’

    ವಾಟ್ಸ್​ಆ್ಯಪ್ ತನ್ನ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ಪರಿಷ್ಕರಿಸಿದ್ದು, ಅದನ್ನು ಫೆಬ್ರವರಿ 8ರ ಒಳಗೆ ಅಂಗೀಕರಿಸುವಂತೆ ಬಳಕೆದಾರರಿಗೆ ಸಂದೇಶ ರವಾನಿಸುತ್ತಿದೆ. ತಪ್ಪಿದರೆ, ವಾಟ್ಸ್​ಆ್ಯಪ್​ ಕೆಲಸ ಮಾಡಲ್ಲ ಎಂಬ ಮುನ್ನೆಚ್ಚರಿಕೆಯನ್ನೂ ನೀಡುತ್ತಿದೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ವಾಟ್ಸ್​ಆ್ಯಪ್​ನಿಂದ ಬೇರೆ ಆ್ಯಪ್​ಗಳಿಗೆ ವಲಸೆ ಪರ್ವ ಶುರುವಾಗಿದೆ. ಈ ವಿದ್ಯಮಾನದ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ ಉಮೇಶಕುಮಾರ್ ಶಿಮ್ಲಡ್ಕ.

    ಪರಿಷ್ಕೃತ ಪ್ರೖೆವೆಸಿ ಪಾಲಿಸಿಯನ್ನು ಪ್ರಕಟಿಸಿರುವ ವಾಟ್ಸ್​ಆ್ಯಪ್​ಗೆ ದೊಡ್ಡ ಪೆಟ್ಟು ಬಿದ್ದಿದೆ. ಪ್ರತಿಸ್ಪರ್ಧಿ ಆ್ಯಪ್​ಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿವೆ. ಹೀಗಾಗಿ, ವಾಟ್ಸ್​ಆ್ಯಪ್​ ತನ್ನ ನೀತಿಯ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿ ಬಂದಿದೆ. ಸ್ನೇಹಿತರು ಮತ್ತು ಕುಟುಂಬವರ್ಗದವರೊಂದಿಗಿನ ಸಂವಹನ, ಚಾಟ್, ಗ್ರೂಪ್​ಗಳ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈಗ ಬಿಜಿನೆಸ್ ಬಳಕೆಯ ವಿಚಾರದಲ್ಲಷ್ಟೇ ನೀತಿ ಬದಲಾಗಿದೆ. ಪರಿಷ್ಕೃತ ನೀತಿ ಅದಕ್ಕೆ ಸಂಬಂಧಿಸಿದ್ದು ಎಂದು ವಾಟ್ಸ್​ಆ್ಯಪ್​ ಸ್ಪಷ್ಟೀಕರಣ ನೀಡಿದೆ. ಅದರ ಪ್ರಮುಖಾಂಶಗಳು ಹೀಗಿವೆ.

    • ಸ್ನೇಹಿತರು, ಕುಟುಂಬದ ಜತೆಗಿನ ಚಾಟ್ ಅಂದರೆ ವೈಯಕ್ತಿಕ ಸಂದೇಶಗಳಾಗಿದ್ದು ಅದನ್ನು ವಾಟ್ಸ್​ಆಪ್ ಆಗಲೀ ಫೇಸ್​ಬುಕ್ ಆಗಲೀ ನೋಡುವುದಿಲ್ಲ. ಕರೆಗಳನ್ನು ಆಲಿಸುವುದಿಲ್ಲ. ಈ ಸಂದೇಶಗಳು ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಆಗಿರುತ್ತವೆ.
    • ಬಳಕೆದಾರರ ಸಂದೇಶ, ಕರೆಗಳ ಡೇಟಾವನ್ನು ಸಂಗ್ರಹಿಸಿಡುವುದು ಎಂದರೆ ಡೇಟಾ ಡಂಪ್ ಮಾಡುವುದು ಎಂದರ್ಥ. ಇದರಿಂದ ಪ್ರೖೆವೆಸಿ ಮತ್ತು ಸೆಕ್ಯುರಿಟಿ ರಿಸ್ಕ್ ಹೆಚ್ಚು.
    • ಬಳಕೆದಾರರು ಫ್ರೆಂಡ್ಸ್ ಜತೆಗೆ ಹಂಚಿಕೊಂಡ ಲೊಕೇಶನ್ ಕೂಡ ವಾಟ್ಸ್​ಆಪ್​ಗೆ ಗೊತ್ತಾಗುವುದಿಲ್ಲ. ಯಾಕೆಂದರೆ ಅದನ್ನು ಎಂಡ್ ಟು ಎಂಡ್ ಎನ್​ಸ್ಕ್ರಿಪ್ಶನ್ ಕಾಪಾಡುತ್ತದೆ.
    • ಬಳಕೆದಾರರ ಸಂಪರ್ಕವನ್ನು ಫೇಸ್​ಬುಕ್ ಅಥವಾ ಬೇರಾವುದೇ ಆಪ್ ಜತೆಗೆ ವಾಟ್ಸ್​ಆಪ್ ಹಂಚಿಕೊಳ್ಳುವುದಿಲ್ಲ.
    • ಜಾಹೀರಾತಿನ ಕಾರಣಕ್ಕೆ ಯಾವುದೆ ಗ್ರೂಪ್​ಗಳ ಡೇಟಾವನ್ನು ಫೇಸ್​ಬುಕ್ ಜತೆಗೆ ಹಂಚಿಕೊಳ್ಳಲಾಗುವುದಿಲ್ಲ. ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಇರುವ ಕಾರಣ ಕಚೇರಿ, ರೆಸಿಡೆಂಟ್ ವೆಲ್​ಫೇರ್ ಅಸೋಸಿಯೇಷನ್ ಅಥವಾ ಯಾವುದೇ ಸ್ಕೂಲ್ ಗ್ರೂಪ್​ನಲ್ಲಿ ಸದಸ್ಯರಾಗಿದ್ದರೂ ಅದರಿಂದ ಬಳಕೆದಾರರ ಮಟ್ಟಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ.

    ಬಿಜಿನೆಸ್ ಮೆಸೇಜ್ ಭಿನ್ನ

    ವಾಟ್ಸ್​ಆಪ್ ಬಿಜಿನೆಸ್ ಆಯ್ಕೆ ಮಾಡಿಕೊಂಡವರ ಬಿಜಿನೆಸ್ ಮೆಸೇಜ್​ಗಳಿಗೆ ಸಂಬಂಧಿಸಿ ಹೊಸ ಸೇವಾ ನಿಯಮ ಮತ್ತು ಗೌಪ್ಯತೆ ನೀತಿ ಅನುಷ್ಠಾನಗೊಂಡಿದ್ದು, ಅಲ್ಲಿ ವಾಟ್ಸ್​ಆಪ್ ಮತ್ತು ಅದರ ಪೇರೆಂಟ್ ಕಂಪನಿ ಫೇಸ್​ಬುಕ್ ನಡುವೆ ಆಂತರಿಕ ಹೊಂದಾಣಿಕೆ ಇರುತ್ತದೆ. ಕೆಲ ದೊಡ್ಡ ಉದ್ಯಮಗಳು ತಮ್ಮ ವಾಟ್ಸ್​ಆಪ್ ಗ್ರೂಪ್​ಗಳ ಸುರಕ್ಷಿತ ಹೋಸ್ಟಿಂಗ್ ಸೇವೆಗಳಿಗೆ ಫೇಸ್​ಬುಕ್ ಅನ್ನು ಬಳಸಬೇಕಾಗಬಹುದು. ಫೇಸ್​ಬುಕ್​ನಲ್ಲಿನ ಜಾಹೀರಾತು ಸೇವೆಗೆ ವಾಟ್ಸ್​ಆಪ್ ಬಳಕೆ ಇತ್ಯಾದಿಗಳಿಗೂ ಇದು ಅನ್ವಯವಾಗುತ್ತದೆ. ಈ ಲೇಬಲ್​ಗಳು ಈಗಾಗಲೇ ಕಾಣಿಸಿಕೊಳ್ಳತೊಡಗಿವೆ. ಇನ್​ಸ್ಟಾಗ್ರಾಂ ಸೇವೆಗಳಲ್ಲೂ ಇದು ಕಾಣಿಸಿದೆ.

    ಯುರೋಪ್ ರಾಷ್ಟ್ರಗಳ ನೀತಿ

    ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಸಂಕಷ್ಟ; ಬಳಕೆದಾರರ ಎದುರು ಹೊಸ ಆಯ್ಕೆಯಾಗಿ ‘ಸಿಗ್ನಲ್’ಯುರೋಪ್ ರಾಷ್ಟ್ರಗಳಲ್ಲಿ ಫೇಸ್​ಬುಕ್ ಜತೆಗೆ ಡೇಟಾ ಶೇರಿಂಗ್ ವಿಚಾರಕ್ಕೆ ಬಂದರೆ, ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವಿದೆ. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿ ವಿಭಿನ್ನ ಸೇವಾ ನಿಯಮ ಮತ್ತು ಗೌಪ್ಯತೆ ನೀತಿ ಇದೆ. ಯುರೋಪ್ ಒಕ್ಕೂಟದ ‘ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್’ ಜಗತ್ತಿನ ಬಿಗಿ ನಿಯಮಗಳ ಪೈಕಿ ಒಂದು. ವಾಟ್ಸ್​ಆಪ್ ನೀತಿ ಪ್ರಕಾರ, ಬಳಕೆದಾರರು ತಮ್ಮ ಮಾಹಿತಿಯನ್ನು ಪಡೆಯುವ, ಪೋರ್ಟ್ ಮಾಡುವ ಮತ್ತು ತೊಂದರೆ ಯಾದರೆ ಪರಿಷ್ಕರಿಸುವ, ರದ್ದುಗೊಳಿಸುವ, ಕೆಲವು ಮಾಹಿತಿ ತಡೆಯುವ ಹಕ್ಕುಗಳನ್ನೂ ಹೊಂದಿದ್ದಾರೆ.

    ಸರ್ಕಾರ ಪರಿಶೀಲಿಸಲಿದೆ: ಮಾಹಿತಿ-ತಂತ್ರಜ್ಞಾನ ಸಚಿವಾಲಯ ಆಂತರಿಕವಾಗಿ ಫೇಸ್​ಬುಕ್ ಮಾಲೀಕತ್ವದ ವಾಟ್ಸ್ ಆಪ್ ನೀತಿಯನ್ನು ಪರಿಶೀಲನೆಗೆ ಒಳಪಡಿಸಿದೆ. ಆದಾಗ್ಯೂ, ಈ ಕುರಿತು ಸ್ಪಷ್ಟೀಕರಣ ನೀಡುವಂತೆ ವಾಟ್ಸ್​ಆಪ್ ಅನ್ನು ಸಚಿವಾಲಯ ಇದುವರೆಗೆ ಕೇಳಿಲ್ಲ ಎಂದು ಮೂಲಗಳು ತಿಳಿಸಿವೆ.

    ಟೆಲಿಗ್ರಾಂಗೆ ಬೇಡಿಕೆ

    ಇದು ಕೂಡ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಆಪ್. ರಷ್ಯನ್ ಸಹೋದರರಾದ ನಿಕೋಲಾಯ್ ಮತ್ತು ಪವೆಲ್ ದುರೋವ್ ಇದರ ಸ್ಥಾಪಕರು. ವಾಟ್ಸ್​ಆಪ್ ಮಾದರಿಯ ಅಂಶಗಳನ್ನು ಇದು ಕೂಡ ಹೊಂದಿದೆ. 2013ರಿಂದಲೇ ಚಾಲ್ತಿಯಲ್ಲಿರುವ ಕಾರಣ ಸಿಗ್ನಲ್​ಗಿಂತ ಹೆಚ್ಚು ಅಂಶಗಳನ್ನು ಹೊಂದಿದೆ. ಗ್ರೂಪ್​ಗಳಲ್ಲಿ 2 ಲಕ್ಷ ಸದಸ್ಯರನ್ನು ಸೇರಿಸಬಹುದು. ವಾಟ್ಸ್ ಆಪ್​ನಲ್ಲಿ 257ರ ಮಿತಿ ಇದೆ. ವಾಟ್ಸ್​ಆಪ್​ನ ಹೊಸ ಸೇವಾ ನಿಯಮ ಮತ್ತು ಗೌಪ್ಯತೆ ನೀತಿ ವಿವಾದವೆಬ್ಬಿಸಿದ ಬೆನ್ನಿಗೆ ಟೆಲಿಗ್ರಾಂ ಬಳಕೆದಾರರ ಸಂಖ್ಯೆ 50 ಕೋಟಿ ಏರಿಕೆಯಾಗಿದೆ. ಕಳೆದ 72 ಗಂಟೆ ಅವಧಿಯಲ್ಲಿ 2.5 ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

    ಹೀಗಿದೆ ಸಿಗ್ನಲ್ ಆಪ್

    ವಾಟ್ಸ್​ಆಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಇದರ ಸಹಸಂಸ್ಥಾಪಕ. ಸಿಗ್ನಲ್​ನಲ್ಲಿ ಬಳಸುತ್ತಿರುವ ಎಂಡ್ ಟು ಎಂಡ್ ಪ್ರೊಟೊಕಾಲ್ ಅನ್ನು ವಾಟ್ಸ್​ಆಪ್ ಬಳಸುತ್ತಿದೆ. ವಾಟ್ಸ್​ಆಪ್​ನಲ್ಲಿರುವ ಅನೇಕ ಅಂಶಗಳು ಇದರಲ್ಲೂ ಇವೆ. ಆದರೆ, ವಿಡಿಯೋ ಕಾಲಿಂಗ್ ಮತ್ತು ಇತರ ಕೆಲವು ಅಂಶಗಳು ಇನ್ನೂ ಬೇಟಾ ಸ್ಥಿತಿಯಲ್ಲಿವೆ. ವಾಟ್ಸ್​ಆಪ್​ನಲ್ಲಿರುವಂತೆ ತೃತೀಯ ಪಕ್ಷದ ಸೇವೆಗಳಲ್ಲಿ ಅಂದರೆ ಗೂಗಲ್ ಡ್ರೖೆವ್ ಅಥವಾ ಐಕ್ಲೌಡ್​ನಲ್ಲಿ ಅಥವಾ ಇತರ ಬಿಜಿನೆಸ್ ಖಾತೆಗಳಿಗೆ ಜೋಡಿಸುವಲ್ಲಿ ಸಿಗ್ನಲ್ ಇನ್ನೂ ಹಿಂದಿದೆ.

    ಭಾರತದ ಸ್ಥಿತಿ: ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗುವ ತನಕ ಭಾರತೀಯರಿಗೆ ಸಂಕಷ್ಟ ತಪ್ಪಿದ್ದಲ್ಲ. ಭಾರತದಲ್ಲಿ ಈ ಸಂಬಂಧ ನಿಯಂತ್ರಣ ಪ್ರಾಧಿಕಾರದ ಕೊರತೆ ಇದೆ.

    ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಸಂಕಷ್ಟ; ಬಳಕೆದಾರರ ಎದುರು ಹೊಸ ಆಯ್ಕೆಯಾಗಿ ‘ಸಿಗ್ನಲ್’

    ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!

    ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts