More

    ಎರಡು ಪಾಳಿಯಲ್ಲಿ ನಡೆಯಲಿವೆ ತರಗತಿ: ಶಾಲೆ-ಕಾಲೇಜು ಆರಂಭಕ್ಕೆ ಮಾರ್ಗಸೂಚಿ

    ಬೆಂಗಳೂರು: ದೇಶಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡು ಮೂರು ತಿಂಗಳಾಗಿದ್ದು, ನೂತನ ಶೈಕ್ಷಣಿಕ ವರ್ಷಾರಂಭ ಹೇಗಿರಲಿದೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಈ ನಡುವೆ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಸಿದ್ಧತೆ ನಡೆಸುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, ಕೋವಿಡ್​-19 ಭೀತಿ ಇರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ತರಗತಿ ನಡೆಸುವ ಬಗ್ಗೆ ಶುಕ್ರವಾರ ಮಾರ್ಗಸೂಚಿ ಹೊರಡಿಸಿದೆ.
    ಹೊಸ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಕುರಿತು ಇತ್ತೀಚೆಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಅಲ್ಲಿ ಪ್ರಸ್ತಾಪವಾದ ಕೆಲ ಅಂಶಗಳನ್ನೊಳಗೊಂಡಂತೆ ಮಂಡಳಿಯು ಮಾರ್ಗಸೂಚಿ ರೂಪಿಸಿದೆ. ಅವುಗಳ ಮಾಹಿತಿ ಇಲ್ಲಿದೆ.

    ಇದನ್ನೂ ಓದಿ ಸೇಡಂ ತಾಲೂಕಿನಲ್ಲಿ 680 ಜನ ಕ್ವಾರಂಟೈನ್

    ಒಂದು ಡೆಸ್ಕ್​ಗೆ ಮೂವರು: ಶಾಲಾ ಕೊಠಡಿಯಲ್ಲಿ ಒಂದು ಡೆಸ್ಕ್​ಗೆ ಮೂವರು ವಿದ್ಯಾರ್ಥಿಗಳು ಮಾತ್ರ ಕೂರುವಂತೆ ಆಸನದ ವ್ಯವಸ್ಥೆ ಮಾಡಬೇಕು. ಕೊಠಡಿಗಳ ಕೊರತೆ ಕಂಡುಬಂದಲ್ಲಿ ಶಾಲೆಯ ಗ್ರಂಥಾಲಯ, ಕ್ರೀಡಾ, ಗಣಕಯಂತ್ರ ಕೊಠಡಿಗಳನ್ನು ಬಳಸಿಕೊಳ್ಳಬೇಕು. ಜನವಸತಿ ಪ್ರದೇಶಗಳಲ್ಲಿ ಲಭ್ಯವಿರುವ ಸಮುದಾಯ ಭವನ, ಸರ್ಕಾರಿ ಕಟ್ಟಡಗಳು ಮತ್ತು ಮಧ್ಯಾಹ್ನದ ನಂತರ ಲಭ್ಯವಿರುವ ಅಂಗನವಾಡಿಯನ್ನೂ ಬಳಸಿಕೊಳ್ಳಬಹದು. ಇಲ್ಲಿ ತಿಳಿಸಿದ ಎಲ್ಲ ರೀತಿಯ ಪ್ರಯತ್ನಗಳ ನಂತರವೂ ಕೊಠಡಿಗಳ ಕೊರತೆ ಉಂಟಾದಲ್ಲಿ ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಬೇಕಿದೆ. ಮಾದರಿ ವೇಳಾಪಟ್ಟಿ ಹೀಗಿದೆ.
    ಮೊದಲನೇ ಪಾಳಿ
    ಬೆಳಗ್ಗೆ 7.50 ರಿಂದ 8 (ಪ್ರಾರ್ಥನೆ)
    ಬೆಳಗ್ಗೆ 8 ರಿಂದ 8.40 (ಮೊದಲನೇ ಅವಧಿ)
    ಬೆಳಗ್ಗೆ 8.40 ರಿಂದ 9.20 (ಎರಡನೇ ಅವಧಿ)
    ಬೆಳಗ್ಗೆ 9.20 ರಿಂದ 9.40 (ವಿರಾಮ)
    ಬೆಳಗ್ಗೆ 9.40 ರಿಂದ 10.20 (ಮೂರನೇ ಅವಧಿ)
    ಬೆಳಗ್ಗೆ 10.20 ರಿಂದ 11 (ನಾಲ್ಕನೇ ಅವಧಿ)
    ಬೆಳಗ್ಗೆ 11 ರಿಂದ 11.40 (ಐದನೇ ಅವಧಿ)
    ಬೆಳಗ್ಗೆ 11.40 ರಿಂದ 12.20 (ಆರನೇ ಅವಧಿ)

    ಎರಡನೇ ಪಾಳಿ
    ಮಧ್ಯಾಹ್ನ 12.10ರಿಂದ 12.30 (ಪ್ರಾರ್ಥನೆ)
    ಮಧ್ಯಾಹ್ನ 12.30 ರಿಂದ 1.10 (ಮೊದಲನೇ ಅವಧಿ)
    ಮಧ್ಯಾಹ್ನ 1.10 ರಿಂದ 1.50 (ಎರಡನೇ ಅವಧಿ)
    ಮಧ್ಯಾಹ್ನ 1.50 ರಿಂದ 2.20 (ಊಟದ ವಿರಾಮ)
    ಮಧ್ಯಾಹ್ನ 2.20 ರಿಂದ 3 (ಮೂರನೇ ಅವಧಿ)
    ಮಧ್ಯಾಹ್ನ 3 ರಿಂದ 3.40 (ನಾಲ್ಕನೇ ಅವಧಿ)
    ಮಧ್ಯಾಹ್ನ 3.40 ರಿಂದ ಸಂಜೆ 4.20 (ಐದನೇ ಅವಧಿ)
    ಸಂಜೆ 4.20 ರಿಂದ 5 (ಆರನೇ ಅವಧಿ)

    ಪ್ರಸ್ತುತ ಒಂದು ವಾರಕ್ಕೆ ಒಟ್ಟು 45 ತರಗತಿ ನಡೆಸಲಾಗುತ್ತಿತ್ತು. ಈಗ ದೈಹಿಕ ಶಿಕ್ಷಣದಲ್ಲಿ 3 ತರಗತಿ, ಚಿತ್ರಕಲೆ/ಸಂಗೀತ/ವೃತ್ತಿ ಶಿಕ್ಷಣ ವಿಷಯದಲ್ಲಿ 3, ಸಹ ಪಠ್ಯಕ್ರಮ ಚಟುವಟಿಕೆಗಳ ವಿಷಯದಲ್ಲಿ 2 ಮತ್ತು ಗ್ರಂಥಾಲಯ/ ಕಂಪ್ಯೂಟರ್ ಶಿಕ್ಷಣ ವಿಷಯದಲ್ಲಿ 1 ತರಗತಿ ಕಡಿತಗೊಳಿಸಿ 36 ತರಗತಿ ನಡೆಸುವಂತೆ ಕ್ರಮ ಕೈಗೊಳ್ಳಬಹುದು.

    ಇದನ್ನೂ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಸೋಮವಾರ ಪ್ರಕಟ

    ಗ್ರಾಮೀಣ ಭಾಗದಲ್ಲಿ ಈ ನೂತನ ವೇಳಾಪಟ್ಟಿ ಅಳವಡಿಸಿಕೊಂಡರೆ ಪಕ್ಕದ ಹಳ್ಳಿಗಳಿಂದ ಬರುವ ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್ಥೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಪರಿಸ್ಥಿತಿಗೆ ಅನುಗುಣವಾಗಿ ಈ ವೇಳಾಪಟ್ಟಿ ನಿಗಧಿ ಮಾಡಲು ಆಯಾ ಜಿಲ್ಲಾಡಳಿತ ಅಥವಾ ಜಿಪಂಗೆ ಬಿಡಬಹುದು. ಇನ್ನು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ತರಗತಿ ನಡೆಸುವ, ಸಾರಿಗೆ, ಮಕ್ಕಳ ಸುರಕ್ಷತೆಯ ಹೊಣೆಯನ್ನು ಆಯಾ ಆಡಳಿತ ಮಂಡಳಿಗೆ ಬಿಡಬೇಕು.

    ಶಿಕ್ಷಕರು, ಕೊಠಡಿಗಳ ಲಭ್ಯತೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವೇಳಾಪಟ್ಟಿ ತಯಾರಿಸಲು ಮತ್ತು ಮೊದಲ ಪಾಳಿ ಶಿಕ್ಷಕರು ಬೆಳಗ್ಗೆ 8ರಿಂದ ಮಧ್ಯಾಹ್ನ3ರ ವರೆಗೆ, ಎರಡನೇ ಪಾಳಿ ಶಿಕ್ಷಕರು ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ ಶಾಲೆಯಲ್ಲಿ ಹಾಜರಿರುವಂತೆ ಶಿಕ್ಷಕರ ಲಭ್ಯತೆ ಅನುಸಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ಕೈಗೊಳ್ಳಬೇಕು. ಒಬ್ಬರೇ ಶಿಕ್ಷರು ಎರಡೂ ಪಾಳಿಯಲ್ಲಿ ಇರುವ ಅಗತ್ಯವಿಲ್ಲ. ಶಿಕ್ಷಕರ ಕೊರತೆ ಉಂಟಾದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

    ಒಂದು ವೇಳೆ ಶಾಲೆಯಲ್ಲಿ ಈ ಪಾಳಿ ಪದ್ಧತಿ ಅಳವಡಿಸಿಕೊಂಡಲ್ಲಿ ಕ್ಷೀರ ಭಾಗ್ಯ ಯೋಜನೆಯ ಹಾಲನ್ನು ಬೆಳಗಿನ ಪಾಳಿಯಲ್ಲಿ ಮಕ್ಕಳು ತರಗತಿಗೆ ಬರುವಾಗ ನೀಡಬೇಕು. ಮಧ್ಯಾಹ್ನದ ಪಾಳಿಯಲ್ಲಿ ಮನೆಗೆ ಹೋಗುವಾಗ ನೀಡಬಹುದು. ಇಲ್ಲವೇ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಅವರಿಗೆ ಹಾಲಿನ ಪುಡಿ ಕೊಡಬಹುದು.

    ಇದನ್ನೂ ಓದಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಎರಡು ಬಾಲ್ಯವಿವಾಹ ತಡೆದ ಅಧಿಕಾರಿಗಳು

    ಮಾಸ್ಕ್​ ಧರಿಸಬೇಕು: ಪ್ರತಿ ನಿತ್ಯ ಪ್ರಾರ್ಥನೆ ವೇಳೆಯೂ ಮಕ್ಕಳು ಮಾಸ್ಕ್ ಧರಿಸುವಂತೆ ಆಯಾ ಶಾಲೆ ಮುಖ್ಯಶಿಕ್ಷಕರು ಕ್ರಮವಹಿಸಬೇಕು. ಸಾರಿಗೆ ವ್ಯವಸ್ಥೆ ಒದಗಿಸುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಯು ಸ್ಕೂಲ್​ ವ್ಯಾನ್​ನಲ್ಲಿ ವ್ಯಕ್ತಿಗತ ಅಂತರ ಪಾಲನೆ ಮಾಡಿಯೇ ವಿದ್ಯಾರ್ಥಿಗಳನ್ನು ಕರೆತರಬೇಕು. ಇನ್ನು ಎಲ್ಲ ಶಾಲಾ ಆವರಣದಲ್ಲೂ ಸ್ವಚ್ಛತೆ ಕಾಪಾಡಬೇಕು. ಊಟಕ್ಕೆ ಮುನ್ನ ಮತ್ತು ನಂತರ ಹಾಗೂ ಶೌಚಗೃಹ ಬಳಸಿದ ಬಳಿಕ ಸಾಬೂನಿಂದ ಕೈಗಳನ್ನು ಶುಚಿಗೊಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ಮಂಡಳಿ ವಿವರಿಸಿದೆ.

    ನೂತನ ಶೈಕ್ಷಣಿಕ ವರ್ಷಾರಂಭ, ಪಠ್ಯಕ್ರಮ, ತರಗತಿ ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಶಿಫಾರಸುಗಳನ್ನು ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ 34 ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಮೇ 30ರಂದು ವರದಿ ಸಲ್ಲಿಸಲಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್​. ಆರ್​. ಉಮಾಶಂಕರ್​ ಇತ್ತೀಚೆಗೆ ತಿಳಿಸಿದ್ದರು. ಇನ್ನು ರಾಜ್ಯದಲ್ಲಿ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ಸಿದ್ಧತೆಗಳೂ ಆರಂಭವಾಗಿವೆ.

    ಇದನ್ನೂ ಓದಿ ಮಾನವೀಯತೆ ಮೆರೆದ ಎಸ್‌ಪಿ ನಿಂಬರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts