More

    ಕೇಳೋರಿಲ್ಲ ಕುಂಬಳಕಾಯಿ

    ಕೊಕಟನೂರ: ಕೋವಿಡ್-19 ಪರಿಣಾಮ ಲಾಕ್‌ಡೌನ್‌ನಿಂದ ಕೃಷ್ಣಾ ನದಿ ತೀರದ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕುಂಬಳಕಾಯಿ ಬೆಳೆದ ಇಬ್ಬರು ರೈತರು ಲಕ್ಷಾಂತರ ರೂ. ಮೌಲ್ಯದ ಬೆಳೆ ಮಾರಾಟವಾಗದಿರುವುದರಿಂದ ಕಂಗಾಲಾಗಿದ್ದಾರೆ.

    ಗ್ರಾಮದ ಮಹಾಂತೇಶ ಚಿಪ್ಪಾಡಿ 12 ಎಕರೆ ಹಾಗೂ ಮಹಾವೀರ ಸವದತ್ತಿ 9 ಎಕರೆ ಜಮೀನಿನಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ಲಾಕ್‌ಡೌನ್ ಪರಿಣಾಮ ಕುಂಬಳಕಾಯಿಯನ್ನು ಮಾರುಕಟ್ಟೆಯಲ್ಲಿ ಯಾರೂ ಖರೀದಿಸುತ್ತಿಲ್ಲ. ಈ ಮೊದಲು ಬೆಂಗಳೂರು, ಮುಂಬೈ, ಕೊಲ್ಲಾಪುರ, ಪುಣೆಗೆ ಮಾರಾಟಕ್ಕೆ ಕಳುಹಿಸಲಾಗುತ್ತಿತ್ತು. ಪ್ರತಿ ಕೆಜಿಗೆ ಸರಾಸರಿ 10 ರಿಂದ 12 ರೂ. ದರದಲ್ಲಿ ಮಾರಲಾಗುತ್ತಿತ್ತು. ಎಕರೆಗೆ 10 ರಿಂದ 15 ಟನ್ ಬೆಳೆದರೆ 1.5 ಲಕ್ಷ ರೂ. ಆದಾಯ ಕೈ ಸೇರುತ್ತಿತ್ತು. ಆದರೆ, ಈಗ ಕುಂಬಳಕಾಯಿಗೆ ಬೇಡಿಕೆ, ಬೆಲೆಯೂ ಇಲ್ಲ. ಹೀಗಾಗಿ, ಜಮೀನಿನಲ್ಲಿಯೇ ಕೊಳೆತು ದುರ್ನಾತ ಬೀರುತ್ತಿವೆ. ಬೀಜ, ಗೊಬ್ಬರ, ನಾಟಿ, ಆಳು ಹಾಗೂ ಔಷಧಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆಯಲಾಗಿದೆ. ಆದರೆ, ಬೆಳೆ ಮಾರಾಟವಾಗದಿರುವುದರಿಂದ ಈ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಗಲು ರಾತ್ರಿ ಶ್ರಮಪಟ್ಟು ಬೆಳೆದ ಬೆಳೆ ನಾಶವಾಗುತ್ತಿರುವುದನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ. ಸರ್ಕಾರ ಬೆಳೆ ಹಾನಿಗೆ ಸೂಕ್ತ ಪರಿಹಾರಧನ ನೀಡಿ ನೆರವಾಗಬೇಕು ಎಂದು ಈ ರೈತರು ಮನವಿ ಮಾಡಿದ್ದಾರೆ.

    ಲಾಕ್‌ಡೌನ್ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ನಮ್ಮ ಕುಂಬಳಕಾಯಿ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು.
    | ಮಹಾವೀರ ಸವದತ್ತಿ ಕುಂಬಳಕಾಯಿ ಬೆಳೆಗಾರ, ಝುಂಜರವಾಡ

    ಮಾರಾಟವಾಗದೇ ಹೊಲದಲ್ಲಿಯೇ ಉಳಿದ ಕುಂಬಳಕಾಯಿ ಬೆಳೆಯ ಸರ್ವೇ ಮಾಡಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
    | ಎಸ್.ಆರ್. ಗುಮಟೆ ಗ್ರಾಮ ಲೆಕ್ಕಾಧಿಕಾರಿ ಝುಂಜರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts