More

    ಕೇರಳದಲ್ಲಿ ವೆಸ್ಟ್‌ನೈಲ್ ವೈರಸ್, ಮಚ್ಚೂರು ಹಾಡಿಗೆ ವೈದ್ಯರ ತಂಡ

    ಎಚ್.ಡಿ.ಕೋಟೆ: ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುವರ್ಣ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಮತ್ತು ತಂಡದವರು ಕರ್ನಾಟಕ ಮತ್ತು ಕೇರಳ ಗಡಿ ಭಾಗದಲ್ಲಿರುವ ಡಿ.ಬಿ ಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಮಚ್ಚೂರು ಹಾಡಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಟಿಎಚ್‌ಒ ಡಾ.ಟಿ.ರವಿಕುಮಾರ್ ಮಾತನಾಡಿ, ಕೋವಿಡ್, ನಿಫಾ, ಹಕ್ಕಿಜ್ವರ, ಹಂದಿಜ್ವರ ನಂತರ ಈಗ ವೆಸ್ಟ್ ನೈಲ್ ಜ್ವರದ ಭೀತಿ ಕಾಡುತ್ತಿದೆ. ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಾಗಿ ತಲೆದೋರಿದ್ದು, ಮೈಸೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

    ಈಗಾಗಲೇ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಕಟ್ಟೆಚ್ಚರ ವಹಿಸಿದ್ದು, ಗಡಿಯೊಳಗೆ ಬಂದು ಹೋಗುವ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.
    ಅಲ್ಲದೆ, ಮೈಸೂರು ಗಡಿಭಾಗದಲ್ಲಿ ಅಲರ್ಟ್ ಮಾಡಲಾಗಿದೆ. ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ಕೇರಳದಲ್ಲಿ ಕಾಣಿಸಿಕೊಂಡು ರಾಜ್ಯಕ್ಕೆ ಹರಡಿತ್ತು. ಮೊದಲ ಪ್ರಕರಣಗಳು ಕಂಡು ಬಂದಿದ್ದು ಕೇರಳದಲ್ಲಿ. ಕೇರಳ ಗಡಿ ಮೂಲಕ ಮೈಸೂರಿಗೆ ಸೋಂಕ ವ್ಯಾಪಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಹೈ ಅಲರ್ಟ್ ಘೋಷಿಸಲಾಗಿದೆ ಎಂದರು.

    ಕೇರಳದಲ್ಲಿ ಪತ್ತೆ: ನೈಲ್ ಜ್ವರದ ಪ್ರಕರಣಗಳು ಕೇರಳದ ತ್ರಿಶೂರ್, ಮಲಪ್ಪುರಂ ಮತ್ತು ಕೋಜಿಕ್ಕೋಡ್ ಜಿಲ್ಲೆಗಳಲ್ಲಿ ವರದಿಯಾಗಿವೆ. ಸೋಮವಾರ ಒಬ್ಬ ವ್ಯಕ್ತಿ ವೈರಲ್ ಕಾಯಿಲೆಯಿಂದ ಮೃತಪಟ್ಟಿದ್ದು, ಇತ್ತೀಚೆಗೆ ಆರು ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು.

    ಈಗಾಗಲೇ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ಅಂತಹವರನ್ನು ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು. ಜನರಿಗೆ ಕರಪತ್ರ ನೀಡಿ ಜಾಗೃತಿ ಮೂಡಿಸಬೇಕು ಎಂದು ಡಾ. ಟಿ.ರವಿಕುಮಾರ್ ಹೇಳಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಬಸವರಾಜು, ಜಯರಾಂ, ರವಿರಾಜ್, ಕೃಷ್ಣ, ಪ್ರದೀಪ್, ರಾಜು, ಶಿವಕುಮಾರ್ ಮತ್ತಿತರರಿದ್ದರು.

    ಏನಿದು ವೈರಾಣು?: ವೆಸ್ಟ್ ನೈಲ್ ವೈರಸ್ (ಡಬ್ಲುೃಎನ್‌ವಿ) ಸೊಳ್ಳೆಯಿಂದ ಹರಡುವ, ಏಕ-ತಂತು ಆರ್‌ಎನ್‌ಎ ವೈರಸ್ ಆಗಿದೆ. ಇದು ಫ್ಲೇವಿವೈರಸ್ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರವನ್ನು ಉಂಟುಮಾಡುವ ವೈರಸ್‌ಗಳಿಗೆ ಸಂಬಂಧಿಸಿದ್ದಾಗಿದೆ. ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಪ್ರಸರಣಕ್ಕೆ ಪ್ರಮುಖ ಕಾರಣ.

    ರೋಗ ಲಕ್ಷಣಗಳು: ಅಧಿಕ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತೆ ಆಗುವುದು, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು. ಶೇ.80ರಷ್ಟು ಜನರಲ್ಲಿ ಲಕ್ಷಣ ರಹಿತವಾಗಿದ್ದರೆ, ಕೆಲವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗಲಕ್ಷಣಗಳು ಕಂಡುಬರುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts