More

    ಪಾಕ್ ವಿರುದ್ಧ 1 ವಿಕೆಟ್ ಜಯ, ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಬರೆದ ವೆಸ್ಟ್ ಇಂಡೀಸ್

    ಕಿಂಗ್‌ಸ್ಟನ್ (ಜಮೈಕಾ): ಅನುಭವಿ ವೇಗಿ ಕೆಮಾರ್ ರೋಚ್ (30*) ಮತ್ತು ಯುವ ವೇಗಿ ಜೇಡನ್ ಸೀಲ್ಸ್ (2*) ಕೊನೇ ವಿಕೆಟ್‌ಗೆ ಸೇರಿಸಿದ 17 ರನ್ ಸಾಹಸದಿಂದ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ 2ನೇ ಆವೃತ್ತಿಯಲ್ಲಿ ಪೂರ್ಣ 12 ಅಂಕ ಕಲೆಹಾಕಿದ ಮೊದಲ ತಂಡವೆನಿಸಿದ ವಿಂಡೀಸ್, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನೂ ಸಾಧಿಸಿತು.

    ಒಟ್ಟಾರೆ 2,430 ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ತಂಡವೊಂದು 1 ವಿಕೆಟ್‌ನಿಂದ ಗೆದ್ದ 15ನೇ ದೃಷ್ಟಾಂತ ಇದಾಗಿದೆ. ವಿಂಡೀಸ್‌ಗೆ ಇದು 3ನೇ 1 ವಿಕೆಟ್ ಗೆಲುವಾಗಿದೆ. ಅಲ್ಲದೆ, ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ 200ಕ್ಕಿಂತ ಕಡಿಮೆ ಮೊತ್ತದ ಗುರಿ ಪಡೆದಾಗ ಒಮ್ಮೆಯೂ ಸೋಲದ ತನ್ನ ಅಮೋಘ ದಾಖಲೆಯನ್ನು ಉಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾಯಿತು. ಇಂಥ 62 ಚೇಸಿಂಗ್‌ಗಳಲ್ಲಿ 56ರಲ್ಲಿ ಗೆದ್ದಿದ್ದು, 6ರಲ್ಲಿ ಡ್ರಾ ಸಾಧಿಸಿದೆ. ವಿಂಡೀಸ್ ಸೋಲು ಕಂಡ ಕನಿಷ್ಠ ಮೊತ್ತದ ಗುರಿ 204 ರನ್.

    ಇದನ್ನೂ ಓದಿ: ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    4ನೇ ದಿನದಾಟದಲ್ಲಿ ಪಾಕಿಸ್ತಾನದ 2ನೇ ಇನಿಂಗ್ಸ್‌ಅನ್ನು ಸೀಲ್ಸ್ (55ಕ್ಕೆ 5) ಮತ್ತು ರೋಚ್ (30ಕ್ಕೆ 3) ಬೌಲಿಂಗ್ ಸಾಹಸದಿಂದ 203 ರನ್‌ಗೆ ನಿಯಂತ್ರಿಸಿದ ವಿಂಡೀಸ್, 168 ರನ್ ಗುರಿ ಪಡೆಯಿತು. ಪ್ರತಿಯಾಗಿ ಅಗ್ರ ಕ್ರಮಾಂಕದ ವೈಲ್ಯದ ನಡುವೆ ಜರ್ಮೈನ್ ಬ್ಲ್ಯಾಕ್‌ವುಡ್ (55) ಅರ್ಧಶತಕದ ಬಲದಿಂದ ವಿಂಡೀಸ್ ಜಯದತ್ತ ಸಾಗಿತು. ಆದರೆ ಬ್ಲ್ಯಾಕ್‌ವುಡ್ ಮತ್ತು ಮಾಜಿ ನಾಯಕ ಜೇಸನ್ ಹೋಲ್ಡರ್ (16) 3 ರನ್ ಅಂತರದಲ್ಲಿ ಔಟಾದ ಬಳಿಕ ವಿಂಡೀಸ್ ಬಾಲಂಗೋಚಿಗಳು ಇನ್ನೂ 54 ರನ್ ಕಲೆಹಾಕಬೇಕಾದ ಅನಿವಾರ‌್ಯತೆ ಎದುರಾಗಿತ್ತು. ಆಗ ರೋಚ್ ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 9ನೇ ವಿಕೆಟ್‌ಗೆ ಜೋಶ್ವ ಡ ಸಿಲ್ವ ಜತೆ 28 ರನ್ ಸೇರಿಸಿದ ರೋಚ್, ಬಳಿಕ 19 ವರ್ಷದ ಸೀಲ್ಸ್ ಬೆಂಬಲದಿಂದ ತಂಡವನ್ನು ಗುರಿ ತಲುಪಿಸಿದರು.

    ಪಾಕಿಸ್ತಾನ: 217 ಮತ್ತು 203, ವೆಸ್ಟ್ ಇಂಡೀಸ್: 253 ಮತ್ತು 9 ವಿಕೆಟ್‌ಗೆ 168 (ಜರ್ಮೈನ್ ಬ್ಲ್ಯಾಕ್‌ವುಡ್ 55, ಚೇಸ್ 22, ಹೋಲ್ಡರ್ 16, ರೋಚ್ 30*, ಸೀಲ್ಸ್ 2*, ಶಹೀನ್ ಷಾ ಅಫ್ರಿದಿ 50ಕ್ಕೆ 4, ಹಸನ್ ಅಲಿ 37ಕ್ಕೆ 3, ಅಶ್ರ್ 29ಕ್ಕೆ 2).ಪಂದ್ಯಶ್ರೇಷ್ಠ: ಜೇಡೆನ್ ಸೀಲ್ಸ್.

    ಕನ್ನಡಿಗ ರಾಹುಲ್ ದ್ರಾವಿಡ್‌ಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಕ್ರಿಕೆಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts