More

    Web Exclusive | ಗ್ರಾಪಂ ಚುನಾವಣೆ ಸೋತವರಿಗೆ ಸಾಲ ತೀರಿಸೋ ಚಿಂತೆ; ಗೆದ್ದವರಿಗೆ ಹಣ ವಾಪಸ್ ತೆಗೆಯೋ ಲೆಕ್ಕಾಚಾರ

    | ಗಂಗಾಧರ್ ಬೈರಾಪಟ್ಟಣ ರಾಮನಗರ

    ‘ಗೆದ್ದವನು ಸೋತ, ಸೋತವನು ಸತ್ತ..’ ಎನ್ನುವ ಮಾತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಸಾಬೀತಾಗಿದೆ. ಪಕ್ಷಗಳಿಗೆ ಚುನಾವಣೆ ಹೇಗೆ ಪ್ರತಿಷ್ಠೆಯ ಕಣವೋ ಅದಕ್ಕಿಂತ ಮಿಗಿಲು ಸ್ಥಳೀಯರ ನಡುವಿನ ಜಟಾಪಟಿ. ಈ ಹಿನ್ನೆಲೆಯಲ್ಲಿ ಚುನಾವಣೆ ವೆಚ್ಚದಾಯಕವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಪ್ರತಿ ವಾರ್ಡ್​ನಲ್ಲಿ ಗೆಲುವು ಸಾಧಿಸಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಗೆದ್ದ ಅಭ್ಯರ್ಥಿ ಗೆಲುವಿನ ನಗೆ ಬೀರಿದರೂ, ಒಳಗೊಳಗೇ ಹಾಕಿದ ಬಂಡವಾಳ ಹೇಗೆ ವಾಪಸ್ ತೆಗೆಯಬೇಕು ಎನ್ನುವ ಲೆಕ್ಕಾಚಾರ ಹಾಕುವಂತೆ ಆಗಿದ್ದರೆ, ಮಾಡಿದ ಸಾಲ ತೀರಿಸಲು ಹೇಗೆಲ್ಲ ಹೆಣಗಾಡಬೇಕು ಎನ್ನುವ ಆತಂಕ ಸೋತ ಅಭ್ಯರ್ಥಿಗಳದ್ದಾಗಿದೆ.

    ಕೆಲವರ ಪ್ರಾಮಾಣಿಕ ಪ್ರಯತ್ನ

    ಕೆಲವರು ಚುನಾವಣೆಗಾಗಿ ಸಾಲ ಮಾಡಿಕೊಂಡು ಇದನ್ನು ತೀರಿಸಲು ಊರು ಬಿಡುವ ಹಂತಕ್ಕೆ ತಲುಪಿದ್ದರೆ, ಕೆಲವು ಕಡೆಗಳಲ್ಲಿ ಹಣವನ್ನೇ ನೀಡದೆ ಚುನಾವಣೆ ಎದುರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯಲ್ಲಿ ಹಲವು ಮಂದಿ ವಿವಿಧ ವಾರ್ಡ್​ಗಳಲ್ಲಿ ಪ್ರ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದು ಕೆಲವೇ ಮತಗಳನ್ನು ಪಡೆದು ಸೋಲು ಕಂಡಿದ್ದರೂ, ಮುಂಬರುವ ದಿನಗಳಲ್ಲಿ ಇಂತಹವರ ಸಂಖ್ಯೆ ಹೆಚ್ಚುವ ಸಾಧ್ಯತೆ ಬಗ್ಗೆ ಭರವಸೆ ಮೂಡಿಸಿದ್ದಾರೆ.

    ನೀತಿಸಂಹಿತೆ ಬರೀ ಕಾಗದಕ್ಕೆ

    ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ಆಗುವ ನೀತಿಸಂಹಿತೆ ನಿಯಮಗಳು ಗ್ರಾಪಂ ಚುನಾವಣೆಗೆ ಏಕೆ ಇಲ್ಲ ಎನ್ನುವ ದೊಡ್ಡ ಪ್ರಶ್ನೆ ಮೂಡಿದೆ. ಜಿಲ್ಲೆಯಲ್ಲಿ ರಾಜಾರೋಷವಾಗಿಯೇ ಮತದಾರರಿಗೆ ಹಣ ಮತ್ತು ಇತರ ಸಾಮಗ್ರಿಗಳನ್ನು ಹಂಚಿಕೆ ಮಾಡಿದ್ದರೂ ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಮುಂಬರುವ ಚುನಾವಣೆಗಳಲ್ಲಿ ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತು ನೀಡಬೇಕಿದೆ. ಇಲ್ಲವಾದರೆ ಚುನಾವಣೆಗಳು ಕೇವಲ ಹಣವಂತರ ಪಾಲಾಗುವುದು ನಿಶ್ಚಿತ.

    ಜಮೀನು ಅಡವಿಟ್ಟರು

    ಗ್ರಾಮ ಪಂಚಾಯಿತಿ ಚುನಾವಣೆ ಸ್ಥಳೀಯ ಮುಖಂಡರ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಕಾರಣ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದು ಕೆಲವರು ಜಮೀನು ಮತ್ತು ನಿವೇಶನ ಅಡವಿಟ್ಟು ಚುನಾವಣೆ ಮಾಡಿದ್ದಾರೆ. ಪ್ರತಿ ವಾರ್ಡ್​ನಲ್ಲಿ ಕನಿಷ್ಠವೆಂದರೂ 10-15 ಲಕ್ಷ ರೂ.ವರೆಗೆ ಅಭ್ಯರ್ಥಿಗಳ ಸಿಂಡಿಕೇಟ್ ಖರ್ಚು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ಮತಕ್ಕೆ ಕೆಲವು ಕಡೆಗಳಲ್ಲಿ 200 ರೂ.ನಿಂದ ಆರಂಭಗೊಂಡು, 5 ಸಾವಿರ ರೂ.ವರೆಗೂ ನೀಡಲಾಗಿದ್ದು, ಕೆಲವು ಕಡೆಗಳಲ್ಲಿ ಕುಕ್ಕರ್, ದೀಪ, ಬ್ಯಾಟರಿ ಸೇರಿ ಸಣ್ಣಪುಟ್ಟ ವಸ್ತುಗಳ ಚಿಹ್ನೆಗಳನ್ನು ಪಡೆದ ಅಭ್ಯರ್ಥಿಗಳು ಅವುಗಳನ್ನೇ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದೂ ಉಂಟು. ಇದರಿಂದಾಗಿ ಸ್ಪರ್ಧಿ ಅನಿವಾರ್ಯವಾಗಿ ಹೆಚ್ಚು ಖರ್ಚು ಮಾಡಲು ನಿವೇಶನ, ಜಮೀನುಗಳನ್ನು ಅಡವಿಟ್ಟಿದ್ದಾರೆ. ರಾಮನಗರ ತಾಲೂಕಿನ ವಾರ್ಡ್ ಒಂದರಲ್ಲಿ ಸ್ಪರ್ಧಿಯೊಬ್ಬರು ಸುಮಾರು 60 ಲಕ್ಷ ರೂ. ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ.

    ನರೇಗಾ ಆಕರ್ಷಣೆ

    ಗ್ರಾಮ ಪಂಚಾಯಿತಿ ಚುನಾವಣೆ ಇಷ್ಟೊಂದು ವೆಚ್ಚದಾಯಕವಾಗಿರುವುದರ ಹಿಂದೆ ಒಂದೆಡೆ ಪ್ರತಿಷ್ಠೆ ಆದರೆ ಮತ್ತೊಂದೆಡೆ ಗ್ರಾಪಂನಲ್ಲಿ ನರೇಗಾ ಸೇರಿದಂತೆ ಇತರ ಮೂಲಗಳಿಂದ ದೊರೆಯುವ ಅನುದಾನಗಳು ಕಾರಣವಾಗಿವೆ. ನರೇಗಾದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಮಿತಿಯೇ ಇಲ್ಲದಿರುವುದು ಗ್ರಾಪಂಗಳಿಗೆ ಹೆಚ್ಚಿನ ಹಣದ ಹೊಳೆ ಹರಿಸುತ್ತದೆ. ಇದರ ಜತೆಗೆ ವರ್ಗ 1 (ಸ್ಥಳೀಯ ಕರ ಸಂಗ್ರಹ) ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ದೊರೆಯುವ ಅನುದಾನಗಳು ಗ್ರಾಪಂ ಮೇಲೆ ಕಣ್ಣಿಡುವಂತೆ ಮಾಡಿದೆ.

    ಗ್ರಾಪಂ ಚುನಾವಣೆಗಳು ಪಕ್ಷಾತೀತವಾಗಿ ನಡೆಯಬೇಕು ಎನ್ನುವ ನಿಯಮವಿದ್ದರೂ ಪಕ್ಷಗಳ ನೇರ ಪಾಲುದಾರಿಕೆ ಇದೆ. ಅಲ್ಲದೆ, ಭ್ರಷ್ಟಾಚಾರ ರಹಿತ ಚುನಾವಣೆಗಳು ಇಲ್ಲಿ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಗಂಭೀರವಾಗಿ ಚಿಂತನೆ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಣವಂತರಿಂದ ರಕ್ಷಣೆ ಮಾಡಬೇಕಿದೆ.

    | ಸಿ.ಪುಟ್ಟಸ್ವಾಮಿ ರೈತ ಸಂಘದ ಮುಖಂಡ

    ಎಲ್ಲೋ ಏನೋ ಎಡವಟ್ಟಾಗಿದೆ, ಅಪಾಯ ಎದುರಾಗಿದೆ… ಸಿಎಂ ಕುರ್ಚಿ ಮೇಲೆ ಅನುಮಾನ ಮೂಡಿದೆ

    ಇವತ್ತೆಷ್ಟು ಮಕ್ಕಳು ಹುಟ್ಟುತ್ತವೆ ಗೊತ್ತಾ? ಅಬ್ಬಾ.. ಭಾರತದಲ್ಲೇ ಹೈಯೆಸ್ಟು!

    ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ನಮ್ಮ ಪಕ್ಷದ ಬೆಂಬಲಿತರು ಎಂದು ಹೇಳಿದ್ರೆ ಬೀಳುತ್ತೆ ಕೇಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts