More

  ಶುದ್ಧ ಕುಡಿವ ನೀರಿಗಿದೆ ತೊಂದರೆ – ಕೂಡ್ಲಿಗಿ ತಾಲೂಕಲ್ಲಿ ಫ್ಲೋರೈಡ್, ಆರ್ಸೆನಿಕ್ ಅಧಿಕ

  ವೀರೇಶ್ ಅಂಗಡಿ ಕೂಡ್ಲಿಗಿ
  ಉತ್ತಮ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳು ತುಂಬಿದ ಪರಿಣಾಮ ನೀರಿನ ಕೊರತೆ ಈ ಬಾರಿ ಎದುರಾಗಿಲ್ಲ ಎಂಬುದು ಎಷ್ಟು ಸತ್ಯವೋ, ಕುಡಿಯುವ ನೀರಿಗೆ ಕೆಲವು ಕಡೆ ಸಮಸ್ಯೆ ಇರುವುದು ಅಷ್ಟೇ ಸತ್ಯ.

  ತಾಲೂಕಿನ ಬಹುತೇಕ ಹಳ್ಳಿಗಳ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ. ಕುಡಿಯಲು ಈ ನೀರು ಯೋಗ್ಯವಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇಂತಹ ಕಲುಷಿತ ನೀರನ್ನೇ ಜನ ಸೇವಿಸಿ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.
  ಜನರಿಗೆ ಕುಡಿಯಲು ಶುದ್ಧ ನೀರು ಸಿಗಲಿ ಎನ್ನುವ ಉದ್ದೇಶದಿಂದ ಒಟ್ಟು 197 ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪೈಕಿ ಕೇವಲ 120 ಘಟಕಗಳು ಕಾರ್ಯ ಮಾಡುತ್ತಿವೆ. ಉಳಿದವು ನಾನಾ ಕಾರಣಗಳಿಂದ ಸ್ಥಗಿತಗೊಂಡು ವಷರ್ಗಳೇ ಕಳೆದಿವೆ. ಅವುಗಳನ್ನು ದುರಸ್ತಿ ಮಾಡುವ ಮನಸ್ಸು ಅಧಿಕಾರಿಗಳಿಗಿಲ್ಲ. ಇದರಿಂದಾಗಿ ಜನರು ಅಶುದ್ಧ ನೀರನ್ನೇ ಸೇವಿಸುತ್ತಿದ್ದಾರೆ.

  ಶುದ್ಧ ಕುಡಿವ ನೀರಿಗಿದೆ ತೊಂದರೆ - ಕೂಡ್ಲಿಗಿ ತಾಲೂಕಲ್ಲಿ ಫ್ಲೋರೈಡ್, ಆರ್ಸೆನಿಕ್ ಅಧಿಕ
  ಉತ್ತಮ ಮಳೆಯಿಂದ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಗ್ರಾಮದ ಬಳಿಯ ಕಿರು ನೀರು ಸಂಗ್ರಹದಿಂದ ತೊಟ್ಟಿಯಲ್ಲಿ ಜಾನುವಾರುಗಳಿಗೆ ಕುಡಿಯಲು ನೀರು ಸಮರ್ಪಕವಾಗಿ ಲಭ್ಯವಿರುವುದು.

  ಸರ್ಕಾರದ ಹೊಸ ಯೋಜನೆಯಾದ ಜಲ ಜೀವನ್ ಮಿಶನ್‌ನಿಂದ ತಾಲೂಕಿನ ಎಲ್ಲ ಹಳ್ಳಿಗಳ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಆರಂಭವಾಗಿ 20 ದಿನಗಳಾಗಿವೆ. ಇಡೀ ತಾಲೂಕಿನ ಪ್ರತಿ ಹಳ್ಳಿಯ ಪ್ರತಿ ಮನೆಗೂ ಕುಡಿಯುವ ನೀರಿಗೆ ನಳ ಹಾಕಲು ಅಂದಾಜು ನಾಲ್ಕು ತಿಂಗಳು ಆಗಬಹುದು ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು. ಈ ಯೋಜನೆ ಅನುಷ್ಠಾನಕ್ಕೆ ಸುಮಾರು 150 ಕೋಟಿ ರೂ. ವ್ಯಯಿಸಲಾಗಿದೆ. ಈ ಯೋಜನೆ ಪ್ರತಿ ಮನೆಗೆ ಮುಟ್ಟ ಬೇಕಿದೆ.

  ಈ ಬಾರಿ ವರುಣನ ಕೃಪೆ ಅಪಾರ
  ಸದಾ ಬರಗಾಲ, ಬಿರು ಬಿಸಿಲನ್ನೇ ಹೊದ್ದು ಮಲಗಿರುವ ತಾಲೂಕಿಗೆ ಯಾವುದೇ ನೀರಾವರಿ ಯೋಜನೆಗಳಿಲ್ಲದಿದ್ದರೂ ಈ ಬಾರಿ ನೀರಿನ ಸಮಸ್ಯೆ ಎದುರಾಗಿಲ್ಲ ಎಂದರೆ ಅಚ್ಚರಿಯಾಗುತ್ತದೆ ಆದರೂ ಇದು ಸತ್ಯ. ವಾಸ್ತವದಲ್ಲಿ ಮಳೆ ಬಿದ್ದರೆ ಮಾತ್ರ ಜಲ. ಇಲ್ಲವಾದಲ್ಲಿ ಹನಿ ನೀರಿಗೂ ತತ್ವಾರ. ಬೇಸಿಗೆ ಬಂದರೆ ಸಾಕು ಜೀವ ಜಲಕ್ಕೆ ಇಲ್ಲಿ ಸಂಕಷ್ಟ ಅಪಾರ. ಇಂತಹ ಬರದ ತಾಲೂಕಲ್ಲಿ ಈ ಬಾರಿ ವರುಣನ ಕೃಪೆ ಅಧಿಕವಾಗಿದ್ದರಿಂದ ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ತುಂಬಿವೆ. ಇದರಿಂದಾಗಿ ಅಂತರ್ಜಲ ಪ್ರಮಾಣ ಹೆಚ್ಚಾಗಿದೆ. ಕೊಳವೆ ಬಾವಿಗಳಿಗೆ ಮರುಜೀವ ಬಂದಿದೆ. ಇದರ ಪರಿಣಾಮವಾಗಿ ತಾಲೂಕಿನ ಒಟ್ಟು 176 ಹಳ್ಳಿಗಳಲ್ಲಿ ನೀರಿನ ಬವಣೆ ನೀಗಿದೆ. ಮಾರ್ಚ್ ಬಂತೆಂದರೆ ಸಾಕು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ನೀರಿನ ತೊಂದರೆ ಎದುರಾಗುತ್ತಿತ್ತು. ಜಾನುವಾರುಗಳಿಗೆ ಮೇವಿನ ತೊಂದರೆ ಕೂಡ ತಲೆದೋರಿ ಗೋಶಾಲೆಗಳು ನಿರ್ಮಾಣವಾಗುತ್ತಿದ್ದವು. ಆದರೆ, ಈ ಬಾರಿ ಜೂನ್‌ನಿಂದ ಜನವರಿವರೆಗೂ ಮಳೆ ಚೆನ್ನಾಗಿ ಸುರಿದಿದೆ. ನೀರು, ಮೇವಿಗೆ ತೊಂದರೆ ಇಲ್ಲವಾಗಿದೆ.

  ಶುದ್ಧ ಕುಡಿವ ನೀರಿಗಿದೆ ತೊಂದರೆ - ಕೂಡ್ಲಿಗಿ ತಾಲೂಕಲ್ಲಿ ಫ್ಲೋರೈಡ್, ಆರ್ಸೆನಿಕ್ ಅಧಿಕ
  ಕೂಡ್ಲಿಗಿ ತಾಲೂಕಿನ ಅರ್ಜುನ ಚಿನ್ನೇನಳ್ಳಿ ಗ್ರಾಮದಲ್ಲಿ ಬಿರು ಬೇಸಿಗೆಯಲ್ಲೂ ಕಿರು ನೀರು ಸಂಗ್ರಹ ತೊಟ್ಟಿಯಲ್ಲಿ ನಿರಂತರ ನೀರು ವ್ಯರ್ಥವಾಗಿ ಹರಿದು ಕಾಲುವೆ ಸೇರುತ್ತಿರುವುದು.

  15 ಕೆರೆಗಳು ಪೂರ್ಣ ಭರ್ತಿ
  ಕೂಡ್ಲಿಗಿ ತಾಲೂಕಿನಲ್ಲಿ ಒಟ್ಟು 55 ಕೆರೆಗಳು ಇದ್ದು ಈ ಪೈಕಿ 15 ಕೆರೆಗಳು ಭರ್ತಿಯಾಗಿವೆ. ಉಳಿದ ಕೆರೆಗಳಲ್ಲಿ ಶೇ 40 ನೀರು ಶೇಖರಣೆ ಯಾಗಿದೆ. ಅದರಲ್ಲೂ ಜಿಲ್ಲೆಯ ಅತಿದೊಡ್ಡ ಕೆರೆಯಾದ ಗಂಡಬೊಮ್ಮನಹಳ್ಳಿ ಕೆರೆ ಈ ಬಾರಿ ಕೋಡಿ ಬಿದ್ದಿದೆ. ಹೊಸಹಳ್ಳಿ ಹೋಬಳಿ ಹಾಗೂ ಗುಡೇಕೋಟೆ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿನ ಕೊಳವೆ ಬಾವಿಗಳಿಗೆ ನೀರಿನ ಲಭ್ಯತೆ ಅಧಿಕವಾಗಿದೆ. ಇದರಿಂದ ಎಲ್ಲ ಕೊಳವೆ ಬಾವಿಗಳಲ್ಲೂ ನೈಸರ್ಗಿಕವಾಗಿ ಅಂತರ್ಜಲ ಮರುಪೂರಣವಾಗಿದೆ. ಇದರಿಂದ ನೀರಿನ ಸಮಸ್ಯೆ ತಲೆದೋರಿಲ್ಲ.

  ವಿದ್ಯುತ್ ಕೈಕೊಟ್ಟರೆ ಮಾತ್ರ ಸಮಸ್ಯೆ
  ಪಟ್ಟಣದ ಇಪ್ಪತ್ತು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ ಜಾಕ್‌ವೆಲ್‌ನಿಂದ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಎರಡು ದಿನಕ್ಕೊಮ್ಮೆ ಪ್ರತಿ ವಾರ್ಡಿಗೂ ಪಪಂ ವತಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಬನ್ನಿಗೋಳ ಜಾಕ್‌ವೆಲ್‌ನಲ್ಲಿ ಪದೇಪದೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ನೀರೆತ್ತುವ ಮೋಟಾರ್ ಪಂಪ್ ಕೈಕೊಡುವುದು ಸಾಮಾನ್ಯವಾಗಿದೆ. ಇದರಿಂದಾಗಿ ನೀರಿನ ವ್ಯತ್ಯಯ ಪ್ರತಿ ತಿಂಗಳಲ್ಲೂ ಉಂಟಾಗುತ್ತದೆ.

  ಶುದ್ಧ ಕುಡಿವ ನೀರಿಗಿದೆ ತೊಂದರೆ - ಕೂಡ್ಲಿಗಿ ತಾಲೂಕಲ್ಲಿ ಫ್ಲೋರೈಡ್, ಆರ್ಸೆನಿಕ್ ಅಧಿಕ
  ಕೂಡ್ಲಿಗಿ ಪಟ್ಟಣದ ಆಂಜನೇಯ ದೇವಸ್ಥಾನದ ಬಳಿಯಿರುವ ಶುದ್ಧ ನೀರಿನ ಘಟಕ ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿರುವುದು.

  1300 ಮನೆಗಳಿಗೆ ನಳ ಸಂಪರ್ಕ
  ಬಹುತೇಕ ವಾರ್ಡ್‌ನಲ್ಲಿ ಪಪಂ ವತಿಯಿಂದ ಪರ್ಯಾಯವಾಗಿ ನೀರಿಗೆ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಇದರಿಂದ ನೀರಿನ ತೊಂದರೆ ಅಷ್ಟಾಗಿ ಕಾಡುತ್ತಿಲ್ಲ. ಇನ್ನೂ 20 ವಾರ್ಡ್‌ನಲ್ಲೂ ಶುದ್ಧ ಕುಡಿಯುವ ನೀರಿಗಾಗಿ ಆರ್ ಪ್ಲಾಂಟ್ ನಿರ್ಮಾಣ ಮಾಡಿದ್ದೇವೆ ಎನ್ನುವುದು ಬಿಟ್ಟರೆ ಅವುಗಳ ನಿರ್ವಹಣೆಗೆ ಪಪಂ ನಿರ್ಲಕ್ಷ್ಯ ತೋರಿದೆ. 18 ಆರ್‌ಒ ಪ್ಲಾಂಟ್‌ಗಳಿದ್ದರೂ ಈ ಪೈಕಿ 3 ಪ್ಲಾಂಟ್ ಕಾರ್ಯ ನಿರ್ವಹಿಸುತ್ತಿಲ್ಲ. 15 ಪ್ಲಾಂಟ್ ಕೆಲಸ ಮಾಡುತ್ತಿವೆ ಎನ್ನುತ್ತಾರೆ ಪಪಂ ಅಧಿಕಾರಿಗಳು. ಆದರೆ ಮಷಿನ್‌ಗಳು ನಿರ್ವಹಣೆ ಇಲ್ಲದೆ ಶುದ್ಧ ನೀರುಬರುತ್ತಿಲ್ಲ. ಅಶುದ್ಧ ನೀರನ್ನು ಜನ ಸೇವಿಸುತ್ತಿರುವುದು ವಾಸ್ತವದ ಸಂಗತಿ. ಪಟ್ಟಣದಲ್ಲಿ ಅಂದಾಜು 6 ಸಾವಿರ ಮನೆಗಳಿವೆ. 1300 ಮನೆಗಳ ನಳಗಳಿಗೆ ಮಾತ್ರ ಪಪಂ ಸಂಪರ್ಕ ಹೊಂದಿದೆ. ಬಹುತೇಕ ಮನೆಗಳ ನಳಗಳು ಪಪಂ ಕಚೇರಿಯ ಲೆಕ್ಕದಲ್ಲಿ ಇಲ್ಲ ಎಂದು ತಿಳಿದು ಬಂದಿದೆ.

  ಆಮೆಗತಿಯಲ್ಲಿ ಯೋಜನೆ ಕಾಮಗಾರಿ
  ತುಂಗಭದ್ರಾ ನದಿಯಿಂದ ಕೂಡ್ಲಿಗಿ ತಾಲೂಕು ಸೇರಿ ದೂರದ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಪಾವಗಡ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ಕಳೆದ ಆರು ವರ್ಷಗಳಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 3,500 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಯೋಜನೆ ಪೂರ್ಣಗೊಂಡರೇ ತಾಲೂಕಿನ ಹಳ್ಳಿಗಳಿಗೆ ನೀರಿನ ಸಮಸ್ಯೆ ದೂರವಾಗುತ್ತದೆ. ಈಗ ಜಲ ಜೀವನ ಮಷಿನ್ ಕಾಮಗಾರಿಯೂ ನಡೆಯುತ್ತಿದೆ. ಆದರೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದರೆ ಮಾತ್ರ ಜಲ ಜೀವನ್ ಮಷಿನ್ ಸಮರ್ಪಕವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ಈ ಎರಡು ಯೋಜನೆಗಳ ಫಲಿಸಿದಲ್ಲಿ ತಾಲೂಕಿನಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

  ಪ್ರತಿ ವಷರ್ ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಗಳ ಕೆಲ ಹಳ್ಳಿಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೊಂದರೆಯಾಗುತ್ತದೆ. ಆದರೆ, ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬಹುತೇಕ ಕೆರೆಗಳು ತುಂಬಿವೆ. ಇದರಿಂದ ನೀರಿನ ತೊಂದರೆ ಎದುರಾಗಿಲ್ಲ.
  ವೈ.ರವಿ ಕುಮಾರ್, ಕೂಡ್ಲಿಗಿ ತಾಪಂ ಇಒ

  ಕೂಡ್ಲಿಗಿ ಪಟ್ಟಣದ 20 ವಾರ್ಡ್ ಗಳಲ್ಲೂ ನೀರಿನ ಸಮಸ್ಯೆ ತಲೆದೋರಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೆಲವಕ್ಕೆ ಅಲ್ಲಲ್ಲಿ ಸಮಸ್ಯೆ ಇದೆ. ಅವುಗಳ ನಿರ್ವಹಣೆಯನ್ನು ಶೀಘ್ರ ಮಾಡಲಾಗುವುದು. ಜನರ ನೀರಿಕ್ಷೆಯಂತೆ ಶುದ್ಧಿ ಕುಡಿಯುವ ನೀರನ್ನು ಒದಗಿಸಲಾಗುವುದು.
  ಫಿರೋಜ್ ಖಾನ್, ಕೂಡ್ಲಿಗಿ ಪಪಂ ಮುಖ್ಯಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts