ಸವಣೂರ ಪಟ್ಟಣಕ್ಕೆ 15 ದಿನಕ್ಕೊಮ್ಮೆ ಕುಡಿಯುವ ನೀರು!

Savanur Taluk Motitalab Lake
  • ಆನಂದ ಮತ್ತಿಗಟ್ಟಿ ಸವಣೂರ

ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೊಲ, ಗದ್ದೆಗಳೆಲ್ಲ ಕಾದ ಕಬ್ಬಿಣದಂತಾಗಿದ್ದು, ಮೇ ತಿಂಗಳಲ್ಲಿ ನಿರೀಕ್ಷಿಸಿದ್ದ ಮಳೆಯಾಗದೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಪರಿಣಾಮ ಪಟ್ಟಣದಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.

ಪಟ್ಟಣದ 27 ವಾರ್ಡ್ ವ್ಯಾಪ್ತಿಯಲ್ಲಿ ಅಂದಾಜು 47 ಸಾವಿರ ಜನ ವಾಸಿಸುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸದ್ಯ ಪಟ್ಟಣದಲ್ಲಿ 15 ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಮೇನಲ್ಲಿ ಬತ್ತುವ ವರದಾ ನದಿ:

ಸವಣೂರಿಗೆ 2012ರಲ್ಲಿ ಅಂದಿನ ನೀರಾವರಿ ಸಚಿವ, ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಅವರು ಸುಮಾರು 13 ಕೋಟಿ ರೂ. ಅನುದಾನದಲ್ಲಿ ನದಿ ನೀರು ಹರಿಸಿ ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಿದ್ದರು. ಆದರೆ, ಪ್ರತಿ ವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವರದಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗುವುದರಿಂದ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಿದ್ದ ಪುರಸಭೆ ಅಧಿಕಾರಿಗಳ ಬೇಜಾವ್ದಾರಿಯಿಂದಾಗಿ ನೀರಿನ ತೊಂದರೆ ಮುಂದುವರಿದಿದೆ.

ಪಟ್ಟಣದಲ್ಲಿ ಅಧಿಕೃತ ನಳದ ಸಂಪರ್ಕ 4858 ಇದೆ. ಸಾವಿರಾರು ಅನಧಿಕೃತ ನಳದ ಸಂಪರ್ಕ ಇದೆ. ಪ್ರತಿ ತಿಂಗಳು ಪ್ರತಿ ನಳಕ್ಕೆ 120 ರೂ. ನೀರಿನ ಕರ ಪಡೆಯುವ ಪುರಸಭೆ, ಸೂಕ್ತ ಸೌಲಭ್ಯ ಮಾತ್ರ ನೀಡದಿರುವುದು ವಿಪರ್ಯಾಸ.

ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣಕ್ಕೆ ನಿತ್ಯ 58 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ. ಆದರೆ, ವರದಾ ನದಿ ನೀರು ಸರಬರಾಜು ಸ್ಥಗಿತದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳನ್ನು ಅವಲಂಬಿಸಬೇಕಾಗಿದೆ. ಪಟ್ಟಣದಲ್ಲಿ ಸುಮಾರು 120 ಕೊಳವೆ ಬಾವಿಗಳಿವೆ. ಇವುಗಳಲ್ಲಿ ಕೇವಲ 26 ಬೋರ್​ವೆಲ್​ನಿಂದ ನೀರು ಸರಬರಾಜು ಮಾಡಲಾಗುತ್ತದೆ. ಹೀಗಾಗಿ ನೀರು ಪೂರೈಕೆಯಲ್ಲಿ ಆಗಾಗ ವ್ಯತ್ಯಯವಾಗುತ್ತಿದೆ.

26 ಬೋರ್​ವೆಲ್​ಗಳಿಂದ ಕೇವಲ 16 ಲಕ್ಷ ಲೀಟರ್ ನೀರು ದೊರೆಯುತ್ತಿದೆ. ಉಳಿದ 90ಕ್ಕೂ ಹೆಚ್ಚು ಬೋರ್​ವೆಲ್​ಗಳ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಗಲ್ಲಿಗಳಲ್ಲಿ ಓಪನ್ ಟ್ಯಾಪ್​ಗೆ ಸಿಮೀತಗೊಳಿಸಲಾಗಿದೆ. ಮಳೆ ಬಂದು ನದಿಯಲ್ಲಿ ನೀರು ಹರಿದಲ್ಲಿ ಮಾತ್ರ ಪಟ್ಟಣದ ಜನತೆಗೆ ನೀರಿನ ಭಾಗ್ಯ ದೊರೆಯಲಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆ ಮಾಡಿ ಅಗತ್ಯಕ್ಕೆ ತಕ್ಕಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಂಡು ಮುಂದಿನ ವರ್ಷ ಈ ಸಮಸ್ಯೆ ಉದ್ಭವಿಸದಂತೆ ಸಮರ್ಪಕ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವುದು ಜನಸಾಮಾನ್ಯರ ಆಗ್ರಹವಾಗಿದೆ.

ಪ್ರತಿ ಬೇಸಿಗೆಯಲ್ಲಿ ಮೂರು ತಿಂಗಳು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಪಟ್ಟಣದ ಮೋತಿತಲಾಬ್(ದೊಡ್ಡಕೆರೆ)ನಲ್ಲಿ ಸುಮಾರು 90 ಎಕರೆ ಕುಡಿಯುವ ನೀರಿನ ಯೋಜನೆಗಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಅಮೃತ 2.0 ಯೋಜನೆಯಡಿ 48 ಕೋಟಿ ರೂ. ಬಿಡುಗಡೆಗೊಂಡು ಕಾಮಗಾರಿ ಆರಂಭಿಕ ಹಂತದಲ್ಲಿದೆ. ಮುಂದಿನ ಬೇಸಿಗೆ ಸೇರಿದಂತೆ ವರ್ಷದ 12 ತಿಂಗಳೂ ನಿತ್ಯ ನೀರು ಸರಬರಾಜಿಗೆ ಸವಣೂರ ಪುರಸಭೆ ಸಜ್ಜಾಗಲಿದೆ.

| ನಾಗರಾಜ ಮಿರ್ಜಿ, ಪುರಸಭೆ ಮುಖ್ಯ ಇಂಜನೀಯರ್

Share This Article

ಪ್ರತಿದಿನ ಹಣೆಗೆ ವಿಭೂತಿ ಹಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? significance of vibhuti

significance of vibhuti:  ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡುತ್ತೇವೆ. ಮಹಿಳೆಯರು  ತಿಲಕವನ್ನು…

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…