More

    ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಎಫ್‌ಐಆರ್

    ಶಿವಮೊಗ್ಗ: ಕೊಳವೆ ಬಾವಿ ಕೊರೆಯಲು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಲಾರಿಗಳನ್ನು ಜಪ್ತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಸಿದ್ದಾರೆ.

    ರೈತರು ಬರಗಾಲದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲೂ ಕೊಳವೆ ಬಾವಿ ಕೊರೆಯಲು ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ದೂರುಗಳು ಬರುತ್ತಿವೆ ಎಂದು ಮಂಗಳವಾರ ಖಾಸಗಿ ಬೋರ್‌ಬೆಲ್ ಏಜೆನ್ಸಿಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
    ಕೊಳವೆ ಬಾವಿ ಕೊರೆಯಲು ಎಸ್‌ಆರ್ ದರ ಎಷ್ಟು ನಿಗದಿಯಾಗಿದೆ ಎಂಬ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ವರದಿ ತರಿಸಿಕೊಳ್ಳಲಾಗಿದೆ. ಆದರೆ ಎಸ್‌ಆರ್ ದರಕ್ಕಿಂತ ಶೇ.50ರಷ್ಟು ಹೆಚ್ಚು ಹಣ ಪಡೆಯುತ್ತಿರುವುದಾಗಿ ದೂರುಗಳು ಸಲ್ಲಿಕೆಯಾಗಿವೆ. ಹಾಲಿ ದರಕ್ಕಿಂತ ಶೇ.5 ಹೆಚ್ಚು ಪಡೆದರೆ ಅಭ್ಯಂತರವಿಲ್ಲ. ಅದಕ್ಕಿಂತ ಹೆಚ್ಚು ಹಣ ಪಡೆದರೆ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಎಲ್ಲ ಬೋರ್‌ವೆಲ್ ಸಂಸ್ಥೆಗಳು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಎಲ್ಲಿ ಕೊಳವೆ ಬಾವಿ ನಿರ್ಮಿಸಲಾಗಿದೆ. ಅದರ ಮಾಲೀಕರು ಯಾರು? ಎಷ್ಟು ನೀರು ಬಂದಿದೆ ಎಂಬ ವಿವರಗಳನ್ನೂ ವಾರಕ್ಕೊಮ್ಮೆ ವರದಿ ರೀತಿಯಲ್ಲಿ ಅಂತರ್ಜಲ ಕಚೇರಿಗೆ ಸಲ್ಲಿಸಬೇಕು. ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮುಂತಾದವರಿದ್ದರು.
    ಮೊದಲು ಸರ್ಕಾರಿ ಬೋರ್ ಮುಗಿಸಿ:ಜಿಲ್ಲೆಯಲ್ಲಿ ಕುಡಿಯುವ ನೀರು ಉದ್ದೇಶಕ್ಕಾಗಿ 1,208 ಕೊಳವೆ ಬಾವಿ ನಿರ್ಮಿಸಬೇಕಿತ್ತು. ಇದುವರೆಗೆ 1,077 ಪೂರ್ಣವಾಗಿವೆ. ಹೊಸನಗರ ಹಾಗೂ ಸೊರಬ ತಾಲೂಕಿನಲ್ಲಿ ಹೆಚ್ಚು ಬಾಕಿಯಿದೆ ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಇಂಜಿನಿಯರ್ ರಾಜೇಂದ್ರ ಪ್ರಸಾದ್ ತಿಳಿಸಿದರು.
    ಇದನ್ನು ಆಲಿಸಿದ ಜಿಲ್ಲಾಧಿಕಾರಿ, ಸರ್ಕಾರದಿಂದ ಕಾರ್ಯಾದೇಶ ನೀಡಲಾಗಿರುವ ಎಲ್ಲ ಕೊಳವೆ ಬಾವಿಗಳನ್ನು ಇನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಬೇಕು. ಇದನ್ನು ಉಲ್ಲಂಘಿಸಿದರೆ ಅಂತಹ ಬೋರ್‌ವೆಲ್ ಏಜೆನ್ಸಿಗಳ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.
    ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಒಪ್ಪಂದ ಮಾಡಿಕೊಂಡಿದ್ದರೂ ಕೆಲ ಏಜೆನ್ಸಿಗಳು ಇನ್ನೂ ಕೊಳವೆ ಬಾವಿ ಕೊರೆದಿಲ್ಲ. ಇದರಿಂದ ಜನರಿಗೆ ನೀರು ಕೊಡಲು ತೊಂದರೆಯುಂಟಾಗಿದೆ. ಒಪ್ಪಂದ ಬಿಟ್ಟು ಖಾಸಗಿಯವರು ಬೋರ್ ಕೊರೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts