More

    ನದಿ ತೀರದಲ್ಲೇ ನೀರಿಗೆ ಬವಣೆ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಬಿಸಿಲಿನ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂಜೆಯ ವೇಳೆ ಅಲ್ಪಸ್ವಲ್ಪ ಮಳೆಯಾಗುತ್ತಿದ್ದರೂ ಭೂಮಿ ತಂಪಾಗಿಲ್ಲ. ಬದಲಾಗಿ ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ನದಿಗಳಲ್ಲಿ ಒಳಹರಿವು ಕ್ಷೀಣಿಸಿ ಜಲಕ್ಷಾಮದ ಆತಂಕ ಎದುರಾಗುತ್ತಿದೆ. ನೇತ್ರಾವತಿ ನದಿ ತೀರದಲ್ಲೇ ಇರುವ ಗ್ರಾಮಗಳ ಜನ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ಎದುರಾಗಿದೆ.

    ನದಿಯಲ್ಲಿಲ್ಲ ನೀರು

    ಬಂಟ್ವಾಳ ತಾಲೂಕಿನ ಹೆಚ್ಚಿನ ಗ್ರಾಮಗಳು ನದಿ ಕಿನಾರೆಯಲ್ಲೇ ಇವೆ. ಬಹುತೇಕ ಗ್ರಾಮಗಳು ನೇತ್ರಾವತಿ ದಡದಲ್ಲಿದ್ದರೆ ಫಲ್ಗುಣಿ ನದಿ ಬಂಟ್ವಾಳ ತಾಲೂಕಿಗೊಳಪಟ್ಟ ಗ್ರಾಮದ ಸರಹದ್ದಿನಲ್ಲೇ ಹರಿಯುತ್ತದೆ. ಒಂದು ತಾಲೂಕಿನಲ್ಲಿ ಎರಡೆರಡು ನದಿಗಳು ಇದ್ದರೂ ಬೇಸಿಗೆಯಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ನೇತ್ರಾವತಿ ನದಿಯನ್ನು ಅವಲಂಬಿಸಿಕೊಂಡು ಹಲವಾರು ನೀರಾವರಿ ಯೋಜನೆಗಳು ಇಲ್ಲಿ ಅನುಷ್ಠಾನಗೊಂಡಿದ್ದರೂ ನದಿ ಬರಿದಾದರೆ ಜನರ ಸಂಕಷ್ಟ ಹೇಳತೀರದು.

    ಎಎಂಆರ್ ಡ್ಯಾಂನಲ್ಲಿ ನೀರು ಖಾಲಿ

    ಮಂಗಳೂರು ಮಹಾನಗರದ ಜನರ ದಿನಬಳಕೆ ಹಾಗೂ ಕೈಗಾರಿಕೆಗಳಿಗೆ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ನೀರೇ ಆಸರೆ. ಮಂಗಳೂರಿಗೆ ನೀರೊದಗಿಸಲು ಶಂಭೂರು-ಸರಪಾಡಿ ಮಧ್ಯೆ ಇರುವ ಎಎಂಆರ್ ವಿದ್ಯುತ್ ಉತ್ಪಾದನಾ ಸಂಸ್ಥೆಯ ಡ್ಯಾಂನಿಂದ ನೀರು ಹರಿಯಬಿಟ್ಟು ತುಂಬೆ ಡ್ಯಾಂ ಅನ್ನು ತುಂಬಿಸಿಕೊಳ್ಳಲಾಗಿದೆ. ಇದರಿಂದ ಸರಪಾಡಿ ಭಾಗದಲ್ಲಿ ನದಿ ಬರಿದಾಗಿ ಸುತ್ತಮುತ್ತಲ ಗ್ರಾಮದ ಜನ ನೀರಿಗಾಗಿ ಪರಿತಪಿಸುವಂತಾಗಿದೆ. ಇಲ್ಲಿನ ನೇತ್ರಾವತಿ ನದಿ ನೀರು ಅವಲಂಬಿಸಿಕೊಂಡು ಸರಪಾಡಿ ಬಹುಗ್ರಾಮ ಕುಡಿಯುವ ಯೋಜನೆ ಅನುಷ್ಠಾನಗೊಳಿಸಿ ಸರಪಾಡಿ, ಮಣಿನಾಲ್ಕೂರು, ಉಳಿ, ಬಡಗಕಡೆಕಾರು, ಕಾವಳಮೂಡೂರು, ಕಾವಳಪಡೂರು, ಇರ್ವತ್ತೂರು, ಪಿಲಾತಬೆಟ್ಟು, ನಾವೂರು ಸರಿ ಒಟ್ಟು ಒಂಭತ್ತು ಗ್ರಾಮ ಪಂಚಾಯತಿಗಳಿಗೆ ನೀರು ಒದಗಿಸಲಾಗುತ್ತಿತ್ತು. ಆದರೆ ವಾರದ ಹಿಂದೆ ಎಎಂಆರ್ ಡ್ಯಾಮ್‌ನಿಂದ ನೀರು ಹೊರಬಿಟ್ಟಿರುವುದರಿಂದ ಈ ಒಂಬತ್ತು ಗ್ರಾಮಗಳ ಜನ ನೀರಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಸರಪಾಡಿ ಬಳಿಯಲ್ಲಿ ನದಿಯೊಳಗಿರುವ ಜಾಕ್‌ವೆಲ್‌ನಲ್ಲಿ ನೀರು ತಳ ಸೇರಿದೆ.

    ಕೈಕೊಟ್ಟ ಬೋರ್‌ವೆಲ್

    ಕಾವಳಪಡೂರು ಗ್ರಾಮದ ಕಾಡಬೆಟ್ಟು ಬಳಿ ಬೋರ್‌ವೆಲ್‌ನಲ್ಲಿ ನೀರು ಕ್ಷೀಣಿಸಿದೆ. ಗ್ರಾಮದಲ್ಲಿರುವ ಬೋರ್‌ವೆಲ್ ಕೆಟ್ಟಿದ್ದು ಬುಗುರುಕುಮೇರ್, ಅಜ್ಜಿಮೇರ್, ಎಡ್ಮೆ ಎಂಬಲ್ಲಿರುವ ಸುಮಾರು 30 ಮನೆಯವರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡಲಾಗುತ್ತಿದೆ.

    ಅಂಗನವಾಡಿಗೆ ರಜೆ

    ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರು ಪೂರೈಕೆಯಾಗದ ಕಾರಣ ಕಾವಳಪಡೂರು ಗ್ರಾಮದ ನೀರ್ಕಾನ ಅಂಗನವಾಡಿಗೆ ರಜೆ ನೀಡಲಾಗಿದೆ. ಅಂಗನವಾಡಿಗೆ ಬರುವ ಮಕ್ಕಳಿಗೆ ಆಹಾರ ಬೇಯಿಸಲು ಹಾಗೂ ಬಳಕೆಗೆ ನೀರಿನ ಸಮಸ್ಯೆ ಎದುರಾದ ಕಾರಣ ಕೆಲವು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ರಜೆ ನೀಡಲಾಗಿದೆ.

    ಪಿಕಪ್ ಮೂಲಕ ಹಂಚಿಕೆ

    ಎಎಂಆರ್ ಡ್ಯಾಂನಿಂದ ನೀರು ಹರಿಯಬಿಟ್ಟಿರುವುದರಿಂದ ಕಾವಳಪಡೂರು ಗ್ರಾಮದಲ್ಲಿ ನೀರು ಸಮಸ್ಯೆ ಎದುರಾಗಿದೆ. ಖಾಸಗಿ ಬೋರ್‌ವೆಲ್‌ನಿಂದ ನೀರು ಪಡೆದು ಪಿಕಪ್ ಮೂಲಕ ಗ್ರಾಮಸ್ಥರಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಕಾವಳಪಡೂರು ಪಂಚಾಯಿತಿ ಸದಸ್ಯ ವೀರೇಂದ್ರ ಅಮೀನ್ ತಿಳಿಸಿದ್ದಾರೆ.

    ಕಳ್ಳಿಗೆಯಲ್ಲಿ ನೀರಿನ ಸಮಸ್ಯೆ

    ಕಳ್ಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಜನ ತೊಂದರೆ ಪಡುತ್ತಿರುವ ದೂರುಗಳು ಕೇಳಿಬಂದಿವೆ. ಪಂಚಾಯಿತಿ ಕಚೇರಿ ಬಳಿ ಹಾಗೂ ಮಾಡಂಗೆ ಎಂಬಲ್ಲಿ ನೀರಿಲ್ಲದೆ ಜನ ತೊಂದರೆಗೀಡಾಗಿದ್ದಾರೆ. ಪಂಚಾಯಿತಿಯ ಕೊಳವೆಬಾವಿ ಕೆಟ್ಟು ಹೋಗಿರುವುದರಿಂದ ಸ್ಥಳೀಯರ ಬೋರ್‌ವೆಲ್ ನೀರನ್ನು ಟ್ಯಾಂಕ್‌ಗೆ ಹಾಯಿಸಿ ಜನರಿಗೆ ನೀಡಲಾಗುತ್ತಿದೆ. ಪಂಚಾಯಿತಿ ಬೋರ್‌ವೆಲ್‌ಗಳೇ ಇಲ್ಲಿ ನೀರಿನ ಆಸರೆಯಾಗಿರುವುದರಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ.

    ಚುನಾವಣೆಗೆ ನೀರು ಸವಾಲು

    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ನಾಯಕರು ಮನೆ ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭ ಜನರ ನೀರಿನ ಸಮಸ್ಯೆ ಜನನಾಯಕರಿಗೆ ಬಿಸಿ ಮುಟ್ಟಿಸಿದೆ. ಜನರ ನೀರಿನ ಸಮಸ್ಯೆ ಮುಂದೆ ಮರ ಕೇಳುವುದು ಮುಜುಗರಕ್ಕೀಡು ಮಾಡುತ್ತಿದೆ.

    ಸರಪಾಡಿ ಬಳಿ ನದಿಯಲ್ಲಿ ನೀರಿತ್ತು. ಆದರೆ ಏಪ್ರಿಲ್ 5ರಂದು ಎಎಂಆರ್ ಡ್ಯಾಮ್‌ನಿಂದ ನೀರು ಹೊರಬಿಟ್ಟಿರುವುದು ಗಮನಕ್ಕೆ ಬಂದಿದೆ. ಇದರಿಂದ ನೇತ್ರಾವತಿ ನದಿ ಸಂಪೂರ್ಣ ಬರಿದಾಗಿದೆ. ನದಿಯಲ್ಲಿರುವ ದೊಡ್ಡ ಹೊಂಡಗಳಲ್ಲಿರುವ ನೀರನ್ನು ಶುದ್ಧೀಕರಣ ಮಾಡಿ ಅದನ್ನು ಪಂಪ್ ಮೂಲಕ ಮೇಲೆತ್ತಿ ಜನರಿಗೆ ವಿತರಿಸಲು ಪ್ರಯತ್ನಿಸಲಾಗುವುದು.
    -ಜಿ.ಕೆ.ನಾಯಕ್
    ಎಇಇ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts