More

    ಕುಂದಾಪುರದಲ್ಲಿಲ್ಲ ನೀರಿನ ಸಮಸ್ಯೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಕುಂದಾಪುರ ಪುರಸಭೆ ಕುಡ್ಸೆಂಪ್ ಯೋಜನೆ ಮೂಲಕ ಅನುಷ್ಠಾನಕ್ಕೆ ತಂದು ಕುಡಿಯುವ ನೀರಿನ ಯೋಜನೆ ರಾಜ್ಯಕ್ಕೆ ಮಾದರಿ. ನೀರಿನ ಮೂಲ, ನೀರಿನ ಸಂಗ್ರಹ, ವಿತರಣೆ ಎಲ್ಲವೂ ಮಾದರಿಯಾಗಿದೆ. ರಾಜ್ಯದ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದ್ದರೆ ಕುಂದಾಪುರದಲ್ಲಿ ಮಾತ್ರ 24*7 ನೀರು ಪೂರೈಕೆಯಿದೆ.

    ಸಮುದ್ರ ಸೇರುವ ವಾರಾಹಿ ನದಿ ನೀರನ್ನೇ ಪುರಸಭೆ ಬಳಸಿಕೊಳ್ಳುತ್ತಿದೆ. ವಾರಾಹಿ ನೀರು ಬತ್ತಿ ಹೋಗುವವರೆಗೂ ಪುರಸಭೆಗೆ ನೀರಿನ ಸಮಸ್ಯೆ ಕಾಡುವುದಿಲ್ಲ. ಜಂಬೂರು ಬಳಿ ವಾರಾಹಿ ನದಿ ತೀರದಲ್ಲಿ ಕುಂದಾಪುರ ಪುರಸಭೆ ಬಾವಿ ತೆಗೆದಿದ್ದು, ಹೊಳೆ ನೀರು ಬಾವಿಯಿಂದ, ಅಲ್ಲೇ ಪಕ್ಕದಲ್ಲಿರುವ ರೇಚಕ ಘಟಕ ತಳಭಾಗದಲ್ಲಿರುವ ಬೃಹತ್ ತೊಟ್ಟಿಗೆ ಹರಿಯುತ್ತದೆ. ಅಲ್ಲಿಂದ ಎರಡು ಮೋಟಾರ್ ಬಳಸಿ, ಜಪ್ತಿ ಶುದ್ದೀಕರಣ ಘಟಕಕ್ಕೆ ನೀರು ಹಾಯಿಸಲಾಗುತ್ತದೆ.

    ಕುಂದಾಪುರ ನೀರಿನ ಸಮಸ್ಯೆ

    2006-07ರಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೂ ಮೊದಲು ಕುಂದಾಪುರದಲ್ಲಿ ನೀರಿನ ಸಮಸ್ಯೆ ಇತ್ತು. ಸಿಂಗಲ್ ಕ್ಯೂರಿಫೈ ಮಾಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಯುಜಿಡಿ ಹಾಗೂ ಜಲಜೀವನ ಮಿಷನ್ ಯೋಜನೆ ಬಗ್ಗೆ ಪುರಸಭೆ ವಿಶೇಷ ಸಭೆಗಳ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಿದರೂ ಎರಡೂ ಯೋಜನೆ ಪುರಸಭೆಗೆ ಭಾರ ಹೆಚ್ಚಿಸಿದ್ದು ಬಿಟ್ಟರೆ ನಗರ ವಾಸಿಗಳಿಗೆ ದಕ್ಕುತ್ತದೋ ಇಲ್ಲವೋ ಎನ್ನುವ ಅನುಮಾನ ಹುಟ್ಟಿಸುತ್ತಿದೆ.

    ಪಂಚಾಯಿತಿಗೂ ನೀರು

    ಕುಂದಾಪುರ ಪುರಸಭೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದು, ನೀರು ಪೂರೈಕೆ ನಗರವಾಸಿಗಳಿಗಷ್ಟೇ ಸೀಮಿತವಾಗದೆ ಗ್ರಾಮ ಪಂಚಾಯಿತಿಗೂ ಹರಿಯುತ್ತಿದೆ. ಆನಗಳ್ಳಿ, ಬಸ್ರೂರು, ಕೋಣಿ, ಕಂದಾವರ, ಹಂಗಳೂರು, ಕೋಟೇಶ್ವರ ಗ್ರಾಪಂಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಕೋಡಿಗೂ ಕುಂದಾಪುರ ಪುರಸಭೆ ನೀರು ಪೂರೈಕೆಗೆ ಮುಂದಾಗಿದೆ. ಕುಂದಾಪುರ ಪುರಸಭೆಯ ಎಲ್ಲ ಮನೆಗೂ ನಲ್ಲಿ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆಗೆ ರಾಷ್ಟ್ರೀಯ ಪುರಸ್ಕಾರ 2011-12ರಲ್ಲಿ ಲಭಿಸಿದೆ.

    ಪುರಸಭೆ ಯಾವುದೇ ಡ್ಯಾಮ್ ಕಟ್ಟದೆ ಹರಿವ ನೀರನ್ನೇ ಬಳಸಿಕೊಂಡು ಅತ್ಯಾಧುನಿಕ ಸೌಲಭ್ಯಗಳ ಮೂಲಕ ಶುದ್ಧೀಕರಿಸಿ ಪೂರೈಕೆ ಮಾಡುತ್ತಿದೆ. ಜಪ್ತಿ ಶುದ್ದೀಕರಣ ಘಟಕಕ್ಕೆ ನೀರು ಹಾಯಿಸಿ, ಅಲ್ಲಿಂದ ಮತ್ತೊಂದು ತೊಟ್ಟಿಯಲ್ಲಿ ನೀರು ಸಂಗ್ರಹಸಿ, ಓವರ್ ಪ್ಲೋ ಮೂಲಕ ಫಿಲ್ಟರ್ ಸೆಕ್ಷನ್‌ಗೆ ವರ್ಗಾಯಿಸಿ, ಅಲ್ಲಿಂದ ಮತ್ತೆರಡು ಟ್ಯಾಂಕಿಗೆ ಹಾಯಿಸಿ, ಪಂಪ್ ಮಾಡುವ ಮೂಲಕ ಓವರ್ ಹೆಡ್ ಟ್ಯಾಂಕಿಗೆ ಪೂರೈಕೆ ಮಾಡಿ, ವಿತರಣೆ ಮಾಡಲಾಗುತ್ತದೆ. ನೀರು ಪೂರೈಕೆ ಘಟಕದಲ್ಲಿ ಎರಡು ಮೋಟಾರ್ ಇದ್ದು, ಅಲ್ಲಿಂದ ಜಪ್ತಿ ಶುದ್ದೀಕರಣ ಘಟಕಕ್ಕೆ ನೀರು ಹರಿಸಲಾಗುತ್ತದೆ. ಶುದ್ಧೀಕರಣ ಘಟಕ ಬಳಿ ವಿಶಾಲ ಟ್ಯಾಂಕ್ ಇದ್ದು ಅಲ್ಲಿ ನೀರಿನ ಸಂಗ್ರಹ ಇರುತ್ತದೆ. ವಿದ್ಯುತ್ ಕೈಕೊಟ್ಟರೆ ನೀರಿನ ಸಮಸ್ಯೆ ಬರಬಹುದು. ಎಲ್ಲ ಹಂತದಲ್ಲೂ ಕಠಿಣ ಪರೀಕ್ಷೆ, ಲ್ಯಾಬ್ ಟೆಸ್ಟಿಂಗ್ ವ್ಯವಸ್ಥೆ ಒಳಗೊಂಡಿದೆ.

    ಪ್ರಮುಖ ಸಂಗತಿ

    ಕುಂದಾಪುರದಲ್ಲಿ ಒಟ್ಟು 3 ಸಾವಿರ ನೀರು ಸಂಪರ್ಕ ನಲ್ಲಿಗಳಿವೆ. ಜಲಜೀವನ ಮಿಷನ್ ಯೋಜನೆಯಲ್ಲಿ ಸಾವಿರಕ್ಕೂ ಮಿಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಕೆಲವು ಕಡೆ ಸಂಪರ್ಕ ನೀಡಲಾಗಿದೆ. ಪ್ರತಿದಿನ 4.5 ಎಂಎಲ್‌ಡಿ ನೀರು ಖರ್ಚಾಗುತ್ತದೆ.

    ಕುಂದಾಪುರ ಪುರಸಭೆಗೆ ಸದ್ಯಕ್ಕಂತೂ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಜಂಬೂರು ನದಿಯಿಂದ ನೇರವಾಗಿ ನೀರು ಶುದ್ಧೀಕರಿಸಿ ಪೂರೈಕೆ ಮಾಡುತ್ತಿದ್ದು, ಐದು ಗ್ರಾಮ ಪಂಚಾಯಿತಿಗೂ ನೀರು ಕೊಡುತ್ತಿದ್ದೇವೆ. ಆಲಸಿರಿ ಯೋಜನೆ ಮೂಲಕ 24*7 ಕುಡಿಯುವ ನೀರು ಪೂರೈಕೆ ಹೀಗೆ ಕುಡಿಯುವ ನೀರು ಪೂರೈಕೆ ಬಳಕೆ ಪುರಸಭೆ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.
    -ಮಂಜುನಾಥ, ಪುರಸಭೆ ಕುಂದಾಪುರ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts