More

    ಕಿಂಡಿ ಅಣೆಕಟ್ಟೆಗಳ ಮಾಹಿತಿ ಇಲ್ಲ

    ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 300 ಕೋಟಿ ರೂ. ವೆಚ್ಚದಲ್ಲಿ ಸೀತಾನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಕುಡಿಯುವ ನೀರಿನ 2 ಕಿಂಡಿ ಅಣೆಕಟ್ಟಿನ ಕುರಿತು ಸಮರ್ಪಕ ಮಾಹಿತಿ ನೀಡದೆ ಮೀನಾ ಮೇಷ ಎಣಿಸುತ್ತಿದೆ. ವಿಶೇಷ ಗ್ರಾಮಸಭೆಯಾಗಿ ತಿಂಗಳಾದರೂ ಇಲಾಖೆ ಸಮರ್ಪಕ ಮಾಹಿತಿ ನೀಡಲು ವಿಫಲವಾಗಿದೆ ಪಂಚಾಯಿತಿ ಕಳವಳ ವ್ಯಕ್ತಪಡಿಸಿದೆ.

    ಈ ಕುರಿತಂತೆ ಕಳೆದ ತಿಂಗಳು ಕಿಂಡಿ ಅಣೆಕಟ್ಟಿನ ಸಾಧಕ ಬಾಧಕಗಳ ಕುರಿತು ಪಾಂಡೇಶ್ವರ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆ ಆಯೋಜಿಸಿತ್ತು. ಸಭೆಯಲ್ಲಿ ಶೇ.70ರಷ್ಟು ಗ್ರಾಮಸ್ಥರು ಕಾಮಗಾರಿಯಿಂದ ಕೃತಕ ನೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಳ್ಳುವ ಆತಂಕ, ಪ್ರಸ್ತುತ ಕುಡಿಯುವ ನೀರಿನ ಬಾವಿಗೆ ಉಪ್ಪು ನೀರು ನುಗ್ಗುವ ಭೀತಿಯನ್ನು ಪ್ರಸ್ತಾಪಿಸಿದ್ದು ಈ ಕುರಿತು ಸಮರ್ಪಕ ನೀಲಿನಕ್ಷೆ ಒದಗಿಸುವಂತೆ ಸಂಬಂಧಿಸಿದ ಇಲಾಖೆಗೆ ಸ್ಥಳೀಯಾಡಳಿತ ಆಗ್ರಹಿಸಿತ್ತು.
    ಆದರೆ ಈವರೆಗೂ ಈ ಬಗ್ಗೆ ಸಮರ್ಪಕ ದಾಖಲೆ ನೀಡದಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸ್ಥಳೀಯಾಡಳಿತ, ವಿಶ್ವಾಸಕ್ಕೆ ಪಡೆಯದೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹವಣಿಸುತ್ತಿದೆ ಎಂದು ಆರೋಪಿಸಿದೆ.

    ಕಿಂಡಿ ಅಣೆಕಟ್ಟೆ ಸಮರ್ಪಕ ಮಾಹಿತಿ ನೀಡಿ

    ಬೆಣ್ಣೆಕುದ್ರು ಸೀತಾನದಿಗೆ ಅಡ್ಡಲಾಗಿ ನಿರ್ಮಿಸುವ ಕುಡಿಯುವ ನೀರಿನ ಯೋಜನೆ ಬಗ್ಗೆ ಸಣ್ಣ ನೀರಾವರಿ ಇಲಾಖೆ ಈಗಾಗಲೇ ನೀಲಿನಕ್ಷೆ ಸಿದ್ಧಪಡಿಸಿ ಪಾಂಡೇಶ್ವರ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ಮಂಡಿಸಲು ಕಳೆದ ತಿಂಗಳು ಅಣಿಯಾಯಿತು. ಆದರೆ ಇಲಾಖಾಧಿಕಾರಿಗಳ ಸಮರ್ಪಕ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಯೋಜನೆಯ ಕುರಿತು ಸ್ಪಷ್ಟ ಮಾಹಿತಿ ಹಾಗೂ ಅದರ ಸಮರ್ಪಕ ನೀಲಿನಕ್ಷೆ ಒದಗಿಸುವಂತೆ ಆಗ್ರಹಿಸಿದೆ. ಸ್ಥಳೀಯಾಡಳಿತವನ್ನು ನಿರ್ಲಕ್ಷಿಸಿ ಅನುಷ್ಠಾನಗೊಳಿಸ ಕೂಡದು ಎಂಬ ಗ್ರಾಮಸ್ಥರ ಮನವಿ, ಸ್ಥಳೀಯಾಡಳಿತ ಪ್ರತಿನಿಧಿಗಳ ಒತ್ತಾಸೆಯಾಗಿದೆ. ಈ ಯೋಜನೆ ಕೈಬಿಟ್ಟು ವಾರಾಹಿ ಕುಡಿಯುವ ಯೋಜನೆಯಾಗಿ ಪರಿರ್ವತಿಸಿ ಎಂಬ ಆಗ್ರಹ ಗ್ರಾಮಸ್ಥರದ್ದು. ಇದಾಗಿ ತಿಂಗಳು ಕಳೆದರೂ ಇಲಾಖೆ ಸ್ಥಳೀಯಾಡಳಿತಕ್ಕೆ ಸ್ಪಷ್ಟ ಮಾಹಿತಿ ನೀಡಿಲ್ಲ. ಯೋಜನೆ ಏನಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಪಂಚಾಯಿತಿ ಆಗ್ರಹಿಸಿದೆ.

    ಪ್ರಕೃತಿ ವಿರೋಧಿ ಕಾಮಗಾರಿ

    ಇತ್ತೀಚಿನ ದಿನಗಳಲ್ಲಿ ಪ್ರಕೃತಿಗೆ ವಿರುದ್ಧವಾಗಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಇದರ ಭಾಗವಾಗಿ ಪ್ರಕೃತಿ ಮಾತೆಯ ಒಡಲಲ್ಲಿ ನಿರರ್ಗಳವಾಗಿ ಹರಿಯುವ ಬೆಣ್ಣೆಕುದ್ರು ಸೀತಾನದಿಯ ಹೊಳೆಗೆ ಕಿಂಡಿ ಅಣೆಕಟ್ಟಿನ ಮೂಲಕ ಅಡ್ಡಗಟ್ಟಿ ಪ್ರಕೃತಿಗೆ ವಿರುದ್ಧವಾಗಿ ಕಾರ್ಯತಂತ್ರ ಹೆಣೆಯುತ್ತಿರುವುದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    ಕಿಂಡಿ ಅಣೆಕಟ್ಟು ನಿರ್ಮಾಣದ ಸಾಧಕ ಬಾಧಕಗಳ ಕುರಿತು ನಡೆದ ವಿಶೇಷ ಗ್ರಾಮಸಭೆಯ ನಿರ್ಣಯವನ್ನು ಸಣ್ಣ ನೀರಾವರಿ ಇಲಾಖೆಗೆ ಗ್ರಾಮ ಪಂಚಾಯಿತಿಯಿಂದ ಕಳುಹಿಸಲಾಗಿದೆ. ಇಲಾಖೆಯಿಂದ ಈ ಕುರಿತು ಉತ್ತರ ಬಂದ ನಂತರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    -ಸತೀಶ್ ವಡ್ಡರ್ಸೆ, ಪಿ.ಡಿ.ಒ,
    ಪಾಂಡೇಶ್ವರ ಗ್ರಾಮ ಪಂಚಾಯಿತಿ

    ಈ ಯೋಜನೆಯ ಕುರಿತಂತೆ ಪಂಚಾಯಿತಿ ಗ್ರಾಮಸಭೆಯಲ್ಲಿ ಪ್ರಸ್ತಾಪಿತ ವಿಷಯಗಳ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಪತ್ರ ಬರೆದಿದ್ದೇವೆ. 15 ದಿನಗಳ ಒಳಗೆ ಈ ಬಗ್ಗೆ ಸಮರ್ಪಕ ಮಾಹಿತಿ ಒದಗಿಸುತ್ತೇವೆ.
    -ಅರುಣ್ ಆರ್.ಭಂಡಾರಿ
    ಸಹಾಯಕ ಕಾರ್ಯಪಾಲನಾ ಅಭಿಯಂತ, ಸಣ್ಣ ನೀರಾವರಿ ಇಲಾಖೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts