More

    ರಸ್ತೆ ಬದಿ ತ್ಯಾಜ್ಯ ರಾಶಿ, ಸ್ಮಾರ್ಟ್ ಸಿಟಿ ಮಂಗಳೂರಿಗೆ ಕಪ್ಪು ಚುಕ್ಕೆ

    ಮಂಗಳೂರು: ಮೇರಿಹಿಲ್ ಹೆಲಿಪ್ಯಾಡ್‌ನಿಂದ ಲ್ಯಾಂಡ್‌ಲಿಂಕ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ತ್ಯಾಜ್ಯರಾಶಿ ಬಿದ್ದಿದೆ. ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರು ನಗರಕ್ಕೆ ಅಲ್ಲಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುವುದು ಕಪ್ಪು ಚುಕ್ಕೆಯಾಗಿದೆ.

    ಮೇರಿಹಿಲ್ ಹಸಿರಿನಿಂದ ಕಂಗೊಳಿಸುತ್ತಿದ್ದು, ಹೆಲಿಪ್ಯಾಡ್‌ನಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆ ವಾಕಿಂಗ್, ಜಾಗಿಂಗ್, ವ್ಯಾಯಾಮಕ್ಕೆ ನೂರಾರು ಮಂದಿ ಬರುತ್ತಾರೆ. ಇದರ ನಡುವೆ ಕೆಲವು ಕಿಡಿಗೇಡಿಗಳು ರಸ್ತೆಯ ಬದಿಯಲ್ಲಿ ಮನೆಯ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಈ ಕಸವನ್ನು ಆ್ಯಂಟನಿ ವೇಸ್ಟ್ ಸಂಸ್ಥೆಯವರು ಮುಟ್ಟುವುದಿಲ್ಲ. ಸುಮಾರು ಒಂದು ಲೋಡ್ ಆಗುವಷ್ಟು ತ್ಯಾಜ್ಯ ರಾಶಿ ಬಿದ್ದಿದೆ.

    ಇಲ್ಲಿನ ಮುಖ್ಯ ರಸ್ತೆಯುದ್ದಕ್ಕೂ ತ್ಯಾಜ್ಯ ಎಸೆಯಲಾಗುತ್ತಿತ್ತು. ಪ್ರಸ್ತುತ ಅಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಮತ್ತು ನಿರ್ಜನ ಪ್ರದೇಶವಾದ ಕಾರಣ ಲ್ಯಾಂಡ್ ಲಿಂಕ್ಸ್‌ಗೆ ಹೋಗುವ ರಸ್ತೆಯನ್ನು ಆಯ್ದುಕೊಂಡಿದ್ದಾರೆ. ರಾತ್ರಿ ಹಾಗೂ ಬೆಳಗ್ಗಿನ ಜಾವ ಇಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಬೀದಿ ನಾಯಿಗಳು ಕಸವನ್ನು ಕಚ್ಚಿಕೊಂಡು ಹೋಗಿ ರಸ್ತೆಗೆ ಹಾಕುತ್ತಿವೆ. ಇದರಿಂದ ಸಂಚಾರಕ್ಕೆ ಪ್ರಯಾಸವಾಗಿದೆ.

    ಇಲ್ಲಿನ ರಸ್ತೆ ಬದಿಯಲ್ಲಿ ಚೆಲ್ಲಿದ್ದ ಪ್ಲಾಸ್ಟಿಕ್, ಬಾಟಲಿ, ಮನೆ ತ್ಯಾಜ್ಯಗಳನ್ನು ಕೆಲವು ಸಮಯದ ಹಿಂದೆ ಪೃಥ್ವಿ ಸ್ವಯಂ ಸೇವಕರು ಹಾಗೂ ಜೋಗರ್ಸ್ ಪಾರ್ಕ್ ಸದಸ್ಯರು ಶ್ರಮದಾನದ ಮೂಲಕ ಸುಮಾರು ಎರಡು ಲೋಡ್ ತ್ಯಾಜ್ಯ ಹೆಕ್ಕಿ ಪರಿಸರ ಶುಚಿಗೊಳಿಸಿದ್ದರು. ಅದರ ಬಳಿಕ ಮತ್ತೆ ರಸ್ತೆ ಬದಿಯಲ್ಲಿ ತ್ಯಾಜ್ಯ ಬೀಳಲಾರಂಭಿಸಿತ್ತು. ಕಟ್ಟಡ ತ್ಯಾಜ್ಯಗಳನ್ನು ಈ ಪರಿಸರದಲ್ಲಿ ತಂದು ಹಾಕುತ್ತಿದ್ದು, ಇದಕ್ಕೂ ಕಡಿವಾಣ ಬಿದ್ದಿಲ್ಲ.

    ಮನಪಾ ನಿಗಾ ಅಗತ್ಯ: ಹೆಲಿಪ್ಯಾಡ್‌ನಲ್ಲಿ ರಾತ್ರಿ ವೇಳೆ ಮದ್ಯ ಸೇವನೆ ಮಾಡಿ ಅಲ್ಲಿಯೇ ಬಾಟಲಿ ಹಾಗೂ ಆಹಾರದ ಪೊಟ್ಟಣಗಳನ್ನು ಎಸೆದು ಹೋಗುತ್ತಿರುವುದರಿಂದ ಅಲ್ಲಿಯೂ ತ್ಯಾಜ್ಯ ರಾಶಿ ಬೀಳುತ್ತಿದೆ. ಈ ಪರಿಸರ ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಂಪಿಂಗ್ ಯಾರ್ಡ್ ಅಗುವ ಮುನ್ನ ಮಹಾ ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಹಾಕುವವರ ಬಗ್ಗೆ ನಿಗಾ ಇಡುವುದಾಗಿ ಪಾಲಿಕೆ ಘೋಷಣೆ ಮಾಡಿದೆ. ಅದರ ಅನುಷ್ಠಾನ ಶೀಘ್ರ ಆಗಬೇಕು. ಗಂಭೀರ ಸಮಸ್ಯೆ ಇರುವಲ್ಲಿ ಮೊದಲ ಆದ್ಯತೆಯಾಗಿ ಕ್ಯಾಮರಾ ಅಳವಡಿಸಿ ನಿಗಾ ಇಟ್ಟು ಕಸ ಎಸೆಯುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಪ್ರತಿ ದಿನ ಈ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದು, ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಬಿದ್ದು ಗಬ್ಬು ನಾರುತ್ತಿದೆ. ಇಲ್ಲಿ ಕಸ ತಂದು ಹಾಕುವವರು ತಮ್ಮ ಕೃತ್ಯದ ಬಗ್ಗೆ ಸ್ವಯಂ ವಿಮರ್ಶೆ ಮಾಡಿಕೊಳ್ಳುವುದು ಅವಶ್ಯ. ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆ ಇರುವಾಗ ರಸ್ತೆ ಬದಿ ತಂದು ಹಾಕುವ ಔಚಿತ್ಯ ಏನಿದೆ?

    ನವೀನ್ ಶೆಟ್ಟಿ, ಲ್ಯಾಂಡ್ ಲಿಂಕ್ಸ್ ನಿವಾಸಿ

    ಸಾರ್ವಜನಿಕರು ರಸ್ತೆ ಬದಿ ತ್ಯಾಜ್ಯ ಬಿಸಾಡುವುದನ್ನು ನಿಲ್ಲಿಸಬೇಕು. ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಲ್ಲಿ ರಾಶಿ ಬಿದ್ದ ತ್ಯಾಜ್ಯವನ್ನು ತೆರವು ಮಾಡಲಾಗುವುದು.

    ರಂಜಿನಿ ಎಲ್.ಕೋಟ್ಯಾನ್, ಮನಪಾ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts