More

    ಎಲ್ಲ ಗ್ರಾಪಂಗಳಲ್ಲಿ ಶೀಘ್ರ ತ್ಯಾಜ್ಯ ಘಟಕ

    ಮಂಗಳೂರು: ದಕ್ಷಿಣ ಕನ್ನಡದ 124 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ಘಟಕ ನಿರ್ಮಾಣಗೊಂಡಿದ್ದು ಕಾರ್ಯನಿರ್ವಹಿಸುತ್ತಿವೆ. 95 ಗ್ರಾಮ ಪಂಚಾಯಿತಿಗಳಲ್ಲಿ ಜಾಗ ಗುರುತಿಸುವ ಕಾರ್ಯ ಅಂತಿಮಗೊಂಡಿಲ್ಲ. ಎಲ್ಲ ಗ್ರಾಪಂಗಳಲ್ಲಿ ಶೀಘ್ರ ಘಟಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಒಂದು ತಿಂಗಳಲ್ಲಿ 12 ಗ್ರಾಪಂಗಳಲ್ಲಿ ಜಾಗ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.

    ದ.ಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ 22ನೇ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
    ಗಂಜಿಮಠದಲ್ಲಿ 2.70 ಕೋಟಿ ರೂ. ವೆಚ್ಚದ ಯಾಂತ್ರೀಕೃತ ಘನ ತ್ಯಾಜ್ಯ ನಿರ್ವಹಣೆ ಘಟಕ, ಗೋಳ್ತಮಜಲು ಹಾಗೂ ಉಜಿರೆ ಯಲ್ಲಿ ಮಾನವ ತ್ಯಾಜ್ಯ ಘಟಕಗಳು ಮಂಜೂರುಗೊಂಡಿರುವುದಾಗಿ ತಿಳಿಸಿದರು.

    ವಿಶೇಷ ಕಾರ್ಯಪಡೆ: ರಸ್ತೆಗಳಲ್ಲಿ ಕಸ, ತ್ಯಾಜ್ಯ ಹಾಕುವುದನ್ನು ತಡೆಯಲು ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ. ಪ್ರತಿ ಮನೆಯಲ್ಲಿ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಬಚ್ಚಲುಗುಂಡಿ ನಿರ್ಮಿಸಲು ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ನಿರ್ದೇಶಿಸಿದರು.

    ನಿಡ್ಲೆ, ಕಲ್ಮಂಜ ಮತ್ತು ಮಚ್ಚಿನ ಗ್ರಾಪಂ ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಸಂಬಂಧಿಸಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ಸಾಮ್ಯತೆ ಕಂಡುಬರದ ಹಿನ್ನೆಲೆಯಲ್ಲಿ ಜಿಪಂ ಉಪಕಾರ್ಯದರ್ಶಿ ಅವರಿಂದ ಸ್ಥಳ ತನಿಖೆಗೆ ಸಿಇಒ ಸೂಚಿಸಿದರು.

    ಮಹಿಳೆ ಸಾವು ಮರುತನಿಖೆ: ಮಂಗಳೂರು ತಾಲೂಕಿನ ಮುಚ್ಚೂರು ನಿವಾಸಿ ಮಹಿಳೆ ಶಸ್ತ್ರಚಿಕಿತ್ಸೆ ಸಂದರ್ಭ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಬಿದ್ದಲ್ಲಿ ಹೊರಗಿನ ಪ್ರತ್ಯೇಕ ವೈದ್ಯಕೀಯ ತಂಡದಿಂದ ಮರುತನಿಖೆ ನಡೆಸುವ ಭರವಸೆ ನೀಡಿದರು.

    ಅನಿತಾ ಎಂಬ ಮಹಿಳೆ ಉಡುಪಿ ತಾಲೂಕಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಸಂದರ್ಭ ಗಂಭೀರ ಸ್ಥಿತಿ ತಲುಪಿ ಮಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲ್ಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಾವಿನ ರೀತಿಯನ್ನು ಶಂಕಿಸಿ ಮನೆಯವರು ನೀಡಿದ ದೂರು ಆಧರಿಸಿ ದ.ಕ ಹಾಗೂ ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆಗಳು ನೀಡಿರುವ ವರದಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಲೋಪ ಉಂಟಾಗಿಲ್ಲ ಎಂದು ಬಂದಿರುವ ವರದಿ ಬಗ್ಗೆ ಸದಸ್ಯ ಜನಾರ್ದನ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

    ಸೇವೆಯಿಂದ ಬುಧವಾರ ನಿವೃತ್ತರಾಗಲಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಅವರನ್ನು ಬೀಳ್ಕೊಡಲಾಯಿತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಲಾಂಛನವನ್ನು ಜಿಪಂ ಅಧ್ಯಕ್ಷೆ ಮೀನಾಕ್ಷಿ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧನಲಕ್ಷ್ಮಿ, ರವೀಂದ್ರ ಕಂಬಳಿ, ಮಮತಾ ಶೆಟ್ಟಿ ಉಪಸ್ಥಿತರಿದ್ದರು.

    ಖಾಸಗಿ ಆಸ್ಪತ್ರೆಯಿಂದ ಹಣ ವಾಪಸ್: 12 ಪ್ರಕರಣಗಳಲ್ಲಿ ಆಯುಷ್ಮಾನ್ ಕಾರ್ಡ್ ಹೊಂದಿದ್ದ ರೋಗಿಗಳಿಂದ ಪಡೆದ ಹಣ ಖಾಸಗಿ ಆಸ್ಪತ್ರೆಗಳು ವಾಪಸ್ ನೀಡುವಂತೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಆದೇಶ ನೀಡಿರುವುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಆಯುಷ್ಮಾನ್ ಕಾರ್ಡ್‌ನಲ್ಲಿ ನಿರ್ದಿಷ್ಟ ಚಿಕಿತ್ಸೆಯ ವೆಚ್ಚವನ್ನು ಪೂರ್ಣ ಭರಿಸುವಂತೆ ನಿಯಮವಿದ್ದರೂ, ಕೆಲ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಬಗ್ಗೆ ದೂರು ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts