More

    ಕಡೂರು-ಬೀರೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಒತ್ತು

    ಕಡೂರು: ಅವ್ಯವಸ್ಥೆಯಿಂದ ಕೂಡಿರುವ ಕಡೂರು-ಬೀರೂರು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಎರಡೂ ಪಟ್ಟಣಗಳ ರೈಲ್ವೆ ನಿಲ್ದಾಣಗಳಿಗೆ ಪ್ರಯಾಣಿಕರಿಗೆ ಸಹಕಾರಿಯಾಗಲು ಎರಡು ಲಿಫ್ಟ್ ಮಂಜೂರಾತಿ ದೊರಕಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

    ತಾಪಂನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಾಸನ, ಬೇಲೂರು, ಚಿಕ್ಕಮಗಳೂರು ರೈಲ್ವೆ ಕಾಮಗಾರಿಗಾಗಿ 161 ಕೋಟಿ ರೂ. ಮಂಜೂರಾಗಿದೆ. ಕಡೂರು-ಬೀರೂರು ರೈಲ್ವೆ ನಿಲ್ದಾಣಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ. ಎರಡೂ ರೈಲ್ವೆ ನಿಲ್ದಾಣಗಳಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಲಿಫ್ಟ್, ಸ್ಟೀಲ್ ಚೇರ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
    ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಪಟ್ಟಣ ರೈಲ್ವೆ ನಿಲ್ದಾಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ವೃದ್ಧರು, ಮಹಿಳೆಯರು ನಿಲ್ದಾಣ ಪ್ರವೇಶಿಸಲು ಹರಸಾಹಸ ಪಡುವಂತಾಗಿದೆ. ಹೀಗಾಗಿ ನಿಲ್ದಾಣವನ್ನು ಮೊದಲಿದ್ದ ಜಾಗದಲ್ಲೇ ನಿರ್ಮಿಸಿಕೊಡಲು ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರಜ್ವಲ್ ರೇವಣ್ಣ ಮಾತನಾಡಿ, ಕೂಡಲೇ ಪ್ರಸ್ತಾವನೆ ಕಳುಹಿಸಿ. ಈ ಕಾರ್ಯಕ್ಕೆ ನನ್ನ ಸಹಮತವೂ ಇದೆ ಎಂದು ತಿಳಿಸಿದರು.
    ಕಡೂರಿಗೆ ಬಿಎಸ್‌ಎನ್‌ಎಲ್ ಟವರ್ ಎರಡು ಮಂಜೂರಾತಿ ದೊರಕಿದೆ. ಇದರಿಂದಾಗಿ ನೆಟ್ವರ್ಕ್ ಸುಲಭವಾಗಿ ದೊರಕಲಿದೆ. ಪಿಎಂಜಿಎಸ್‌ವೈ ಯೋಜನೆಯಡಿ 23 ಕೋಟಿ ವೆಚ್ಚದಲ್ಲಿ 33.50 ಕಿಮೀ ಹಾಗೂ ಸೇತುವೆ ಕಾಮಗಾರಿ ನಡೆಸಲಾಗಿದೆ. ನರೇಗಾ ಯೋಜನೆಯಡಿ 13 ಕೋಟಿ ರೂ. ಬಾಕಿ ಬರಬೇಕಿದೆ. ಕೊಟ್ಟಿಗೆ ನಿರ್ಮಾಣಕ್ಕಾಗಿ 1224 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಭದ್ರಾ ಯೋಜನೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಸೇರಿಸಲು ಪಿಎಂ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
    ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಜಮೀನು ಕಳೆದುಕೊಂಡ ರೈತರಿಗೆ ನ್ಯಾಯದೊರಕಿಸಲು ವಿಶೇಷ ಸಭೆಯನ್ನು ಅಧಿಕಾರಿಗಳು ನಡೆಸಬೇಕು. ಮಾನವೀಯ ದೃಷ್ಟಿಯಿಂದ ರೈತರಿಗೆ ನ್ಯಾಯಕೊಡಬೇಕು ಎಂದು ಹೇಳಿದರು.
    ಪ್ರಜ್ವಲ್ ರೇವಣ್ಣ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ, ಬೆರೆ ಯಾವುದೇ ಯೋಜನೆಗೂ ಕೃಷಿ ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳಬಾರದು. ಬದಲಿಗೆ ರೈತರನ್ನು ವಿಶ್ವಾಸಕ್ಕೆ ಪಡೆದು ವಸ್ತುಸ್ಥಿತಿ ವಿವರಿಸಿ ಜಮೀನು ವಶಕ್ಕೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ಕರೊನಾ ಸಂದರ್ಭದಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ಭೂ ಪರಿಹಾರ ನೀಡಲು ಹಿಂದಿನ ಮೂರು ವರ್ಷಗಳ ವಹಿವಾಟು ಪರಿಗಣಿಸುವ ಸಮಯದಲ್ಲಿ ಕರೊನಾ ಸಮಯವನ್ನು ಬಿಟ್ಟು ಅದರ ಹಿಂದಿನ ವಷರ್ಗಳ ವಹಿವಾಟು ಪರಿಗಣಿಸಬೇಕು. ಇಲ್ಲದಿದ್ದರೆ ರೈತರಿಗೆ ಅನ್ಯಾಯವಾಗುವ ಸಂಭವವಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಒಟ್ಟಾರೆ ರೈತರಿಗೆ ಅನುಕೂಲವಾಗಬೇಕು ಎಂದರು.
    ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಮತಿಘಟ್ಟ ಮತ್ತು ಯಲ್ಲಂಬಳಸೆಯ 82 ಜನರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ತೊಂದರೆಯಾಗಿದೆ. ಈ ಕುರಿತು ಸಭೆ ಏರ್ಪಡಿಸಿದ್ದು, ಅಲ್ಲಿ ಭೂಪರಿಹಾರದ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು.
    ನರೇಗಾ ಕಾಮಗಾರಿಗಾಗಿ 70 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿತ್ತು. ಬರ ಪರಿಸ್ಥಿತಿ ಇರುವ ಕಾರಣ 120 ಕೋಟಿ ರೂ.ಗೆ ಮಂಜೂರಾತಿ ಪಡೆಯಲಾಗಿದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾಹಿತಿ ನೀಡಿದರು.
    ತಾಲೂಕಿನಲ್ಲಿ ಕುಡಿಯುವ ನೀರಿಗೆ ಹೆಚ್ಚು ತೊಂದರೆ ಇರುವ 18 ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಕುಡಿಯುವ ನೀರಿಗಾಗಿ 50 ಲಕ್ಷ ರೂ., ಜಿಪಂನಿಂದ 25 ಲಕ್ಷ ರೂ. ಅನುದಾನ ಬಂದಿದೆ. ಕಳೆದ ಸಾಲಿನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದವರಿಗೆ ಬಿಲ್ ಪಾವತಿಯಾಗಿಲ್ಲ. ಈಗ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಜಲಜೀವನ್ ಯೋಜನೆಯಡಿ ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಸಿಕೊಳ್ಳಬಹುದು. ಮಚ್ಚೇರಿ ಗ್ರಾಮಕ್ಕೆ ಖಾಸಗಿ ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts