More

    ರಫ್ತು ಉತ್ತೇಜಿಸಲು ವಿಟಿಪಿಸಿ ಸಿದ್ಧ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಗರೋತ್ಪನ್ನ, ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಗೋಡಂಬಿ ರಫ್ತಿಗೆ ಇನ್ನಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕಾಗಿದೆ. ಈ ಸಂಬಂಧ ಪೂರಕ ಸಹಕಾರ ನೀಡುವುದಕ್ಕೆ ವಿಶ್ವೇಶ್ವರಯ್ಯ ವಾಣಿಜ್ಯ ಉತ್ತೇಜನಾ ಕೇಂದ್ರ (ವಿಟಿಪಿಸಿ) ಸಿದ್ಧವಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸತೀಶ ಎಸ್.ಆರ್. ಹೇಳಿದ್ದಾರೆ.
    ನಗರದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ‘ವಾಣಿಜ್ಯ ಸಪ್ತಾಹ’ ರಫ್ತುದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

    ಪ್ಲಾಸ್ಟಿಕ್ ಬಿಡಿಭಾಗಗಳು, ಉತ್ಪನ್ನಗಳಿಗೆ ಸಾಕಷ್ಟು ರಫ್ತು ಅವಕಾಶವಿದ್ದು, ಮುಖ್ಯವಾಗಿ ಚೀನಾದಿಂದ ಬೇಡಿಕೆ ಬರಲಿದೆ. ದಕ್ಷಿಣ ಕನ್ನಡದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮೂಲಕ ಇದನ್ನು ಸಾಧಿಸಬಹುದು. ಕಚ್ಚಾ ಪ್ಲಾಸ್ಟಿಕ್ ಒದಗಿಸುವ ನಿಟ್ಟಿನಲ್ಲಿ ಎಂಆರ್‌ಪಿಎಲ್ ಇನ್ನಷ್ಟು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದರು.

    ಜಗತ್ತಿನಲ್ಲಿ ಭಾರತದ ರಫ್ತು ಮೌಲ್ಯ 300 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಇದನ್ನು 400 ಬಿಲಿಯನ್‌ಗೆ ಏರಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಸದ್ಯ ರಾಜ್ಯ ರಫ್ತು ಮೌಲ್ಯದಲ್ಲಿ 6ನೇ ಸ್ಥಾನದಲ್ಲಿದೆ. ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ ಎಂದ ಅವರು, ಸಿದ್ಧ ಉಡುಪುಗಳಲ್ಲಿ ನಮ್ಮ ರಾಜ್ಯಕ್ಕಿದ್ದ ಬೇಡಿಕೆ ಕಡಿಮೆಯಾಗಿದ್ದು, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ವಿಯೆಟ್ನಾಂ ಈ ಪ್ರಯೋಜನ ಪಡೆದುಕೊಂಡಿವೆ. ಆದರೆ ಫಾರ್ಮಸಿಯಂತಹ ಕ್ಷೇತ್ರ ಚಿಗುರಿರುವುದು ಶುಭಸೂಚನೆ ಎಂದರು.

    90ರ ದಶಕದಲ್ಲಿ ಗುಜರಾತ್ ರಫ್ತು ವಿಚಾರದಲ್ಲಿ ತೀರಾ ಹಿಂದುಳಿದಿತ್ತು, ಆದರೆ ಈಗ ಅದು ದೇಶದಲ್ಲೇ ಮುಂಚೂಣಿಯ ರಫ್ತು ರಾಜ್ಯವಾಗಿ ಹೊರಹೊಮ್ಮಿದೆ ಎಂದು ಕಸ್ಟಮ್ಸ್ ಹೆಚ್ಚುವರಿ ಆಯುಕ್ತ ವೈ.ಸಿ.ಎಸ್.ಸ್ವಾಮಿ ಹೇಳಿದರು.

    ರಫ್ತುದಾರರ ಉತ್ತೇಜನಕ್ಕಾಗಿ ಬ್ಯಾಂಕ್ ವತಿಯಿಂದ ವಿದೇಶಿ ವಹಿವಾಟಿಗೆ ಕೇಂದ್ರೀಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮಹಾಪ್ರಬಂಧಕ ಯೋಗೀಶ ಆಚಾರ್ಯ ಮಾಹಿತಿ ನೀಡಿದರು.

    ಎಂಆರ್‌ಪಿಎಲ್ ಜಿಜಿಎಂ ಯೋಗೀಶ್ ಆಚಾರ್ಯ ಶುಭ ಹಾರೈಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಸ್ವಾಗತಿಸಿ, ಸಿಐಐ ಮಂಗಳೂರು ಇದರ ಮಾಜಿ ಅಧ್ಯಕ್ಷ ಪ್ರಕಾಶ್ ಕಲ್ಬಾವಿ ವಂದಿಸಿದರು.

    ದಕ್ಷಿಣ ಕನ್ನಡವು ರಫ್ತು ವಲಯದಲ್ಲಿ ಹಲವು ಅವಕಾಶವುಳ್ಳ ಪ್ರದೇಶವಾಗಿದೆ. ಇಲ್ಲಿ ಉದ್ಯಮಶೀಲರಿಗೆ ಕೊರತೆ ಇಲ್ಲ. ಆದರೆ ಕೆಲವೊಂದು ಮೂಲಸೌಕರ್ಯಗಳಲ್ಲಿ ಸಮಸ್ಯೆ ಇದೆ. ಇನ್ನೆರಡು ವರ್ಷಗಳಲ್ಲಿ ಬೆಂಗಳೂರು ಸಂಪರ್ಕ ಇನ್ನಷ್ಟು ಸುಧಾರಿಸಲಿದೆ.
    – ಡಾ.ಕೆ.ವಿ.ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts