More

    ಏರಿದ ಏಣಿಯನ್ನು ಮರೆತುಬಿಟ್ಟರೆ ಹೇಗೆ?!: ಚಕ್ರವರ್ತಿ ಸೂಲಿಬೆಲೆಯವರ ಅಂಕಣ ವಿಶ್ವಗುರು

    ತರುಣ ಪೀಳಿಗೆ ಇಂದಿಗೂ ಗಾಂಧಿಯನ್ನು ನಿಂದಿಸುತ್ತದೆ. ಮಹಾತ್ಮನ ಬದುಕಿನ ಒಂದಂಶವೂ ತಿಳಿದಿರದಿದ್ದವ ಮನಸೋ ಇಚ್ಛೆ ಮಾತನಾಡುತ್ತಾನೆ. ಅವರನ್ನು ನಿಂದಿಸುವ ಮೂಲಕ ತನ್ನೊಂದು ಪರಂಪರೆಯ ಬಲುಮುಖ್ಯ ಕೊಂಡಿಯನ್ನೇ ಕತ್ತರಿಸಿ ಬಿಸಾಡುತ್ತಿದ್ದೇನೆ ಎಂಬ ಸಾಮಾನ್ಯಜ್ಞಾನವೂ ಅವನಿಗಿಲ್ಲ.

    ಏರಿದ ಏಣಿಯನ್ನು ಮರೆತುಬಿಟ್ಟರೆ ಹೇಗೆ?!: ಚಕ್ರವರ್ತಿ ಸೂಲಿಬೆಲೆಯವರ ಅಂಕಣ ವಿಶ್ವಗುರುಮಹಾತ್ಮ ಗಾಂಧೀಜಿ ಅಹ್ಮದಾಬಾದಿನಲ್ಲಿ ಆಶ್ರಮ ಸ್ಥಾಪಿಸಿದ ಆರಂಭದ ದಿನಗಳವು. ಸೇವಾಶ್ರಮ ಎಂದು ಅದನ್ನು ಕರೆದಿದ್ದರು. ಅಸ್ಪೃಶ್ಯತೆಯನ್ನು ಈ ಆಶ್ರಮ ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ತೋರ್ಪಡಿಸಬೇಕಾಗಿರುವುದು ಗಾಂಧೀಜಿಯೇ ಹೇಳಿಕೊಳ್ಳುವಂತೆ ಅದರ ಮೊದಲ ಉದ್ದೇಶವಾಗಿತ್ತು. ಒಟ್ಟು 25 ಮಂದಿ ಪ್ರಾರಂಭದ ಆ ಕಾಲಘಟ್ಟದಲ್ಲಿದ್ದರು. 13 ಜನ ತಮಿಳರು ದಕ್ಷಿಣ ಆಫ್ರಿಕಾದಿಂದ ಅವರೊಟ್ಟಿಗೆ ಬಂದಿದ್ದರು. ಎಲ್ಲರೂ ಒಂದೇ ಅಡುಗೆಮನೆಯಲ್ಲಿದ್ದುಕೊಂಡು ಒಂದೇ ಸಂಸಾರದವರಂತೆ ಇರುವ ಘನಿಷ್ಠವಾದ ಪ್ರಯತ್ನ ಅಲ್ಲಿ ನಡೆದಿತ್ತು. ಆ ಹೊತ್ತಿನಲ್ಲಿಯೇ ‘ಬಡ, ಪ್ರಾಮಾಣಿಕ, ಅಸ್ಪೃಶ್ಯ ಕುಟುಂಬವೊಂದು ಈ ಆಶ್ರಮವನ್ನು ಸೇರಬಯಸುತ್ತಿದೆ. ಸೇರಿಸಿಕೊಳ್ಳುವಿರಾ?’ ಎಂಬ ಪತ್ರ ಗೌರವಾನ್ವಿತ ಮಿತ್ರರಿಂದ ಬಂತು. ಆಗಿನ ದಿನಮಾನಗಳಲ್ಲಿ ಈ ಪತ್ರ ನಿಜಕ್ಕೂ ಗೊಂದಲ ಹುಟ್ಟಿಸುವಂಥದ್ದೇ. ಗಾಂಧೀಜಿಗೆ ಆ ಪರಿವಾರವನ್ನು ಸೇರಿಸಿಕೊಳ್ಳುವಲ್ಲಿ ಯಾವ ಮುಲಾಜೂ ಇರಲಿಲ್ಲವಾದರೂ ತಾವೊಂದು ಪರಿವಾರವಾಗಿ ಆಶ್ರಮವಾಸಿಗಳೆಲ್ಲರನ್ನೂ ಕೇಳುವ ಅಗತ್ಯವಿತ್ತಲ್ಲ; ಹಾಗೆಯೇ ಮಾಡಿದರು. ಅವರು ಬಲುಪ್ರೀತಿಯಿಂದ ಸ್ವಾಗತಿಸಿದರಲ್ಲದೆ ಆಶ್ರಮದ ನಿಯಮಗಳಿಗೆ ಬದ್ಧರಾಗಿ ನಡೆಯುವುದಾದಲ್ಲಿ ಸ್ವೀಕರಿಸುವಲ್ಲಿ ಸಮಸ್ಯೆಯಿಲ್ಲ ಎಂದು ಒಕ್ಕೊರಲಿನ ದನಿ ಹೊರಡಿಸಿದರು.

    ಇದನ್ನೂ ಓದಿ: ಸೇನಾ ಪ್ರದೇಶದ ಫೋಟೋ ಪಾಕಿಸ್ತಾನದ ವಾಟ್ಸ್​ಆ್ಯಪ್ ಗ್ರೂಪ್​ಗೆ ರವಾನಿಸಿದಾತ ಅರೆಸ್ಟ್​

    ಸಂಸ್ಕಾರವಂತರಾಗಿದ್ದ ಆ ಕುಟುಂಬ ಸಂತುಷ್ಟಗೊಂಡು ಆಶ್ರಮವನ್ನು ಸೇರಿಕೊಂಡಿತು. ಅಲ್ಲಿಗೆ ಸಮಸ್ಯೆಗಳು ಮುಗಿಯಲಿಲ್ಲ, ಆರಂಭವಾಗಿತ್ತು ಅಷ್ಟೇ. ಆಶ್ರಮ ನಡೆಸುತ್ತಿದ್ದ ಆ ಮನೆಯ ಒಂದು ಭಾಗದಲ್ಲಿ ಯಜಮಾನನೂ ಇರುತ್ತಿದ್ದುದರಿಂದ ಬಾವಿಯ ನೀರನ್ನು ಸೇದುವಾಗ ಬಕೇಟಿನಿಂದ ನೀರು ತೊಟ್ಟಿಕ್ಕುತ್ತದೆ ಎಂಬ ಕಾರಣಕ್ಕೆ ಕಿರುಕುಳ ಕೊಡಲಾರಂಭಿಸಿದ. ನಿರಂತರವಾಗಿ ಬೈಯ್ಯುವುದು, ಹಂಗಿಸುವುದು ನಡೆದೇ ಇತ್ತು. ದಲಿತ ಕುಟುಂಬದ ಮುಖ್ಯಸ್ಥರಾಗಿದ್ದ ದುದಾಭಾಯಿ ಅವರಿಗಂತೂ ಇದು ನಿತ್ಯದ ರೋದನೆಯಾಯ್ತು. ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮೇಲೆ ನಡೆಯುತ್ತಿದ್ದ ಇಂತಹುದ್ದೇ ದೌರ್ಜನ್ಯವನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಂಡಿದ್ದ ಗಾಂಧೀಜಿ ಇಲ್ಲಿ ಅದೇ ಪ್ರಯೋಗಕ್ಕೆ ಮುಂದಾದರು. ‘ಎಷ್ಟು ನಿಂದಿಸಿದರೂ ಸಹಿಸಿಕೊಳ್ಳಿ, ಆದರೆ ಬಾವಿಯಿಂದ ನೀರು ಸೇದುವುದನ್ನು ಮಾತ್ರ ಬಿಡಲೇಬೇಡಿ’ ಎಂದರು. ನಿಂದನೆಗೆ ಮತ್ತಿಷ್ಟು ನಿಂದನೆಗಳೇ ಪ್ರತಿಕ್ರಿಯೆಯಾದರೆ ಇದು ಮುಗಿಯುವುದಿಲ್ಲ ಮತ್ತು ಇಬ್ಬರ ಘನತೆಯೂ ಕುಂದುತ್ತಲೇ ಹೋಗುತ್ತದೆ. ಅದರ ಬದಲು ನಿಂದಿಸುವವನನ್ನು ಹಾಗೆಯೇ ಬಿಟ್ಟು ನಮ್ಮ ಕೆಲಸ ನಾವು ಮುಂದುವರಿಸಿಕೊಂಡು ಹೋದರೆ ನಿಂದನೆಯ ತುತ್ತೂರಿ ಊದಿದವ ತನ್ನ ಪಾಡಿಗೆ ತಾನು ಶಾಂತನಾಗುತ್ತಾನೆ.

    ಇದನ್ನೂ ಓದಿ: ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನ ಕಸ್ಟಮ್ಸ್ ವಶಕ್ಕೆ!

    ಸಾಮಾಜಿಕ ಜಾಲತಾಣಗಳು ಉತ್ತುಂಗ ಸ್ಥಿತಿಯಲ್ಲಿರುವ ಈ ಹೊತ್ತಿನಲ್ಲಿ ಗಾಂಧೀಜಿಯ ಈ ಮಾರ್ಗ ನಿಜಕ್ಕೂ ಹಿತಕಾರಿ. ನಿಂದಿಸುವವರಿಗೆ ಖಂಡಿತ ಮಾರುಕಟ್ಟೆಯಲ್ಲಿ ಕೊರತೆ ಇಲ್ಲ. ಅವರೆಲ್ಲರಿಗೂ ಪ್ರತಿಕ್ರಿಯಿಸುತ್ತ ಕುಳಿತರೆ ಮಾತ್ರ ನಿಮ್ಮ ಸಮಯ ವ್ಯರ್ಥ. ನಿಂದನೆಗಳು ಬಲುಬೇಗ ಆವಿಯಾಗಿ ಕರಗಿ ಹೋಗಿಬಿಡುತ್ತವೆ. ಪ್ರತಿಕ್ರಿಯಿಸದೇ ತನ್ನ ಕೆಲಸ ಮಾಡಿಕೊಂಡು ಹೋದವ ಮಾತ್ರ ಇನ್ನೂ ಎತ್ತರಕ್ಕೆ ಬೆಳೆಯುತ್ತಾನೆ. ಗಾಂಧೀಜಿ ಈ ಮಂತ್ರವನ್ನು ಆಶ್ರಮದಲ್ಲಿ ಪ್ರಯೋಗಿಸಿದರು. ಹಾಗಂತ ಇದು ಸುಲಭದ ಮಾತಾಗಿರಲಿಲ್ಲ. ಆಶ್ರಮದಲ್ಲಿ ಅಸ್ಪೃಶ್ಯ ಇದ್ದಾನೆ ಎಂಬ ಕಾರಣಕ್ಕೇ ಇತರರು ಕೊಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿಬಿಟ್ಟಿದ್ದರು. ಕಾಲಕ್ರಮದಲ್ಲಿ ಆಶ್ರಮವಾಸಿಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹೇರುವ ಸುದ್ದಿಯೂ ತೀವ್ರವಾಯ್ತು. ಇದಕ್ಕಾದರೂ ಹೆದರಿ ಹಿಂದಡಿಯಿಟ್ಟುಬಿಟ್ಟಿದ್ದರೆ ಇಂದು ಗಾಂಧಿ ಮಹಾತ್ಮರಾಗಿ ನಮ್ಮೆದುರಿಗೆ ಉಳಿಯುತ್ತಿರಲಿಲ್ಲ. ಈ ಮಂದಿಯನ್ನು ಎದುರಿಸಲೆಂದೇ ಅವರು ಅಹ್ಮದಾಬಾದನ್ನು ಬಿಟ್ಟು ತೆರಳುವುದಿಲ್ಲವೆಂಬ ವ್ರತ ತೊಟ್ಟರಲ್ಲದೆ ಅಲ್ಲಿನ ಅಸ್ಪೃಶ್ಯರ ಕೇರಿಗೆ ಹೋಗಿ ಅಲ್ಲಿ ದೇಹಶ್ರಮದಿಂದ ಸಂಪಾದಿಸಿದ ಹಣದಲ್ಲಿಯೇ ಆಶ್ರಮವನ್ನು ನಡೆಸುತ್ತೇವೆಂಬ ಸಂಕಲ್ಪ ಮಾಡಿಕೊಂಡರು. ಈ ಕದನ-ಕಾಳಗಗಳ ನಡುವೆ ಆಶ್ರಮದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿತು. ಮುಂದಿನ ತಿಂಗಳ ವೆಚ್ಚ ಕಠಿಣವೆನಿಸಿತು. ಇನ್ನೇನು ಕಡುಕಷ್ಟ ಆವರಿಸಿಕೊಂಡಿತು ಎನ್ನುವಷ್ಟರೊಳಗೆ ಭಗವಂತನ ಕೃಪೆ ಹರಿದೇಬಿಟ್ಟಿತು. ಅದೊಂದು ದಿನ ಕಾರಿನಲ್ಲಿ ಕುಳಿತ ಸಿರಿವಂತ ಸೇಠ್ ಗಾಂಧೀಜಿಯನ್ನು ನೋಡಬೇಕೆಂದರಲ್ಲದೆ, ‘ಆಶ್ರಮಕ್ಕೆ ಸಹಕಾರ ಕೊಡಲಿಚ್ಛಿಸಿದ್ದೇನೆ, ಸ್ವೀಕರಿಸುವಿರಾ?’ ಎಂದು ಕೇಳಿದರು. ಆ ವ್ಯಕ್ತಿ ಬೇರೇನೂ ಕೇಳದೆ ಆಶ್ರಮವನ್ನೂ ನೋಡದೇ ಹಣ ಕೈಲಿಟ್ಟು ಹೊರಟೇಬಿಟ್ಟರು. ಸ್ವಲ್ಪಮಟ್ಟಿಗೆ ಗಾಂಧೀಜಿ ಗೆದ್ದಂತೆ ಕಂಡಿದ್ದರೂ ಅದಿನ್ನೂ ಪೂರ್ಣವಾಗಿರಲಿಲ್ಲ ಏಕೆಂದರೆ ಸ್ವತಃ ಕಸ್ತೂರಬಾ ಇದನ್ನು ಒಪ್ಪಿಕೊಳ್ಳಲಿಲ್ಲ. ಪ್ರತಿನಿತ್ಯವೂ ಒಂದಲ್ಲ ಒಂದು ತಗಾದೆ ತೆಗೆದು ಕಿರಿಕಿರಿ ಮಾಡುವುದು ನಡೆಯುತ್ತಲೇ ಇತ್ತು. ಗಾಂಧೀಜಿ ದೂದಾಭಾಯಿಗೆ ತಾಳ್ಮೆ ವಹಿಸಿಕೊಳ್ಳುವಂತೆ ಕೇಳಿಕೊಂಡರು. ಆತ ತನ್ನ ಹೆಂಡತಿ, ಮಕ್ಕಳಿಗೂ ಅದನ್ನೇ ಹೇಳಿ ಯಾವುದಕ್ಕೂ ತಕ್ಷಣಕ್ಕೆ ಪ್ರತಿಕ್ರಿಯಿಸದಿರುವ ನಿರ್ಧಾರಕ್ಕೆ ಬದ್ಧನಾದ. ಕ್ರಮೇಣ ಆಶ್ರಮದ ಸ್ಥಿತಿ ಸುಧಾರಿಸಿತಲ್ಲದೆ ಹಿಂದೂಸಮಾಜದ ಅನೇಕರು ದಾನಿಗಳಾಗಿಯೂ ಮುಂದೆ ಬಂದರು. ಇದು ಬಲುದೊಡ್ಡ ಬದಲಾವಣೆ. ಹಿಂದೂಸಮಾಜ ಅಸ್ಪ ೃ್ಯತೆಯ ವಿರುದ್ಧ ಸಹಜವಾಗಿ ಒಟ್ಟಾಗುವುದರ ಲಕ್ಷಣ ಎಂದು ಗಾಂಧೀಜಿ ಭಾವಿಸಿದರು.

    ಇದನ್ನೂ ಓದಿ: ನಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲು

    ಗಾಂಧೀಜಿಯವರ ಹೋರಾಟವೆಲ್ಲವೂ ಇಂಥದ್ದೇ. ಅವರು ಯಾವುದೇ ವಿಚಾರಕ್ಕೂ ಧಾವಂತ ವ್ಯಕ್ತಪಡಿಸುತ್ತಿರಲಿಲ್ಲ. ಎದುರಿಗಿರುವವರು ತಕ್ಷಣಕ್ಕೆ ಬಾಗಬೇಕೆನ್ನುವ ಹಠವನ್ನೂ ಮಾಡುತ್ತಿರಲಿಲ್ಲ. ಆದರೆ ತಾವು ತಮ್ಮ ನಡವಳಿಕೆಗಳನ್ನೇ ಸರಿಪಡಿಸಿಕೊಳ್ಳುತ್ತ ಶತ್ರುಗಳನ್ನೂ ಮಿತ್ರರನ್ನಾಗಿಸಿಕೊಳ್ಳುವ ವಿಶೇಷ ಬಗೆಯ ಪ್ರಯತ್ನ ಮಾಡುತ್ತಿದ್ದರು. ಇದು ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ದೊರೆತ ಪಾಠ. ಫಿನಿಕ್ಸ್​ನಲ್ಲಿ ಆಶ್ರಮ ನಡೆಸುವಾಗ ಅಲ್ಲಿದ್ದ ಒಬ್ಬ ವಿದ್ಯಾರ್ಥಿ ಬಲು ಒರಟನಾಗಿದ್ದು, ಯಾರ ಮಾತೂ ಕೇಳುತ್ತಿರಲಿಲ್ಲ. ಕೊನೆಗೆ ಆತನ ತಪ್ಪಿಗೆ ಅವನನ್ನು ಶಿಕ್ಷಿಸದೆ ಗಾಂಧೀಜಿ ತಾವೇ ಉಪವಾಸ ಕೈಗೊಂಡು ತಮ್ಮನ್ನೇ ದಂಡಿಸಿಕೊಂಡುಬಿಟ್ಟರಂತೆ. ನಾಚಿದ ಆ ಹುಡುಗ ಕ್ಷಮೆ ಕೇಳಲು ಬರಲಿಲ್ಲವಾದರೂ ತನ್ನನ್ನು ತಾನು ತಿದ್ದಿಕೊಂಡನಂತೆ. ಇದರಿಂದ ಗಾಂಧೀಜಿ ಶತ್ರುವನ್ನೂ ಬದಲಾಯಿಸುವ ತಾಳ್ಮೆಯ ಮಾರ್ಗಕ್ಕೆ ಮುನ್ನುಡಿ ಬರೆದರು. ಸ್ವಾತಂತ್ರ್ಯ ಸಂಗ್ರಾಮದುದ್ದಕ್ಕೂ ಅದನ್ನೇ ಬಳಸಿದರು ಕೂಡ.

    ಎಲ್ಲ ಕಾನೂನನ್ನೂ ಪಾಲಿಸುತ್ತಿದ್ದವ ಸಮಾಜಕಂಟಕವಾದ ಕಾನೂನನ್ನು ಧಿಕ್ಕರಿಸುವ ಮೂಲಕ ತೋರುವ ಅಸಹಕಾರ ತುಂಬ ಪ್ರಭಾವಿ ಎನ್ನುವುದನ್ನು ಅವರು ನಂಬಿದರಲ್ಲದೆ ಬ್ರಿಟಿಷರ ವಿರುದ್ಧ ಅಸ್ತ್ರವಾಗಿಯೂ ಅದನ್ನು ಬಳಸಿದರು. ಸ್ವದೇಶಿ ಬಟ್ಟೆಯ ಕುರಿತಂತೆ ಅವರ ಮನೋಭಾವನೆ ಮತ್ತು ದಾಂಡಿಯವರೆಗೂ ಉಪ್ಪಿಗಾಗಿ ಅವರು ನಡೆಸಿದ ಚಳವಳಿ ಇದರದ್ದೇ ಅಂಗವಾದಂಥವು.

    ಇದನ್ನೂ ಓದಿ: ಕುಸುಮಾ ತಲೆ ಮೇಲೆ ‘ಕೈ’ ಇಟ್ರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ !

    ಸ್ವಾತಂತ್ರ್ಯ ಸಂಗ್ರಾಮದ ವೇದಿಕೆಗೆ ಗಾಂಧೀಜಿ ಆಗಮನಕ್ಕೆ ಮುನ್ನ ದಿಗ್ಗಜ ನಾಯಕರನೇಕರಿದ್ದರು. ಅವರಲ್ಲಿ ಬಹುಪಾಲು ಮಂದಿ ತಮ್ಮ-ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿಬಿಟ್ಟಿದ್ದರು. ಆಗಿನ ಕಾಲದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸೂತ್ರಧಾರಿಗಳಾಗಿದ್ದ ಲಾಲ್-ಬಾಲ್-ಪಾಲ್​ರನ್ನು ನಾವು ಒಂದೊಂದು ಕ್ಷೇತ್ರಕ್ಕೆ ಸೀಮಿತವಾಗಿಯೇ ನೋಡಿಬಿಡುತ್ತೇವೆ. ಬಹುತೇಕ ಸ್ವಾತಂತ್ರ್ಯದ ಹೋರಾಟ ದಕ್ಷಿಣದ ಭಾಗವನ್ನು ತಲುಪುವಲ್ಲಿ ಸೋತು ಹೋಗಿತ್ತು. ವಂಗ-ಭಂಗ ಚಳವಳಿ ದೂರದ ದಕ್ಷಿಣದಲ್ಲಿ ಸದ್ದು ಮಾಡಿತ್ತಾದರೂ ಇಡಿಯ ದೇಶ ಒಬ್ಬ ನಾಯಕನನ್ನು ಸಮಗ್ರವಾಗಿ ಒಪ್ಪಿಕೊಂಡಿರಲಿಲ್ಲ. ಗಾಂಧೀಜಿ ಅಂಥದ್ದೊಂದು ನಾಯಕತ್ವವನ್ನು ಕೊಟ್ಟರು. ಅಷ್ಟೇ ಅಲ್ಲ, ಗಾಂಧೀಜಿಗೂ ಮುನ್ನ ಇದ್ದ ಬಹುತೇಕ ನಾಯಕರು ಜನಸಾಮಾನ್ಯರನ್ನು ಪ್ರತಿನಿಧಿಸಿದವರೇ ಅಲ್ಲ. ಒಂದೋ ಮೇಲ್ಮಧ್ಯಮ ವರ್ಗದ ಜನರ ಪ್ರತಿನಿಧಿಗಳಾಗಿದ್ದರು ಅಥವಾ ಸಿರಿವಂತರ ಸಂಘ ಹೊಂದಿದ್ದವರು. ಮಧ್ಯಮ ಮತ್ತು ಬಡವರು ಸಂಗ್ರಾಮದ ಮುಖ್ಯಧಾರೆಯಿಂದ ದೂರವೇ ಉಳಿದಿದ್ದರು. ಆ ಹೊತ್ತಿನಲ್ಲಿಯೇ ಗಾಂಧೀಜಿ ಕಾಂಗ್ರೆಸ್ಸನ್ನು ಮನೆ-ಮನೆ ಮುಟ್ಟಿಸಿದ್ದು. ಗೋಪಾಲಕೃಷ್ಣ ಗೋಖಲೆ ಮಾರ್ಗದರ್ಶನದಂತೆ ಯಾವುದಕ್ಕೂ ಧಾವಂತ ಪಡದೇ ದೇಶವನ್ನು ಸುತ್ತಿ ಸರಳ ವಸ್ತ್ರಧಾರಿಯಾಗಿ ಸಹಜವಾಗಿ ಬದುಕುವ ವ್ಯಕ್ತಿತ್ವವಾಗಿ ಅವರು ಸಮಾಜದೆದುರು ನಿಂತರು. ಹಾಕುವ ಬಟ್ಟೆ, ಆಡುವ ಭಾಷೆ, ನಡೆಯುವ ರೀತಿ ಕೊನೆಗೆ ಹಿಡಿದ ಕೋಲು ಕೂಡ ಸಾಮಾನ್ಯರ ಕೈಗೆಟುಕುವಂಥವೇ ಆಗಿತ್ತು. ಗಾಂಧೀಜಿ ಬಲುಬೇಗ ಮನೆಮಾತಾಗಿಬಿಟ್ಟರು. ಅವರ ಖಾದಿ ಆಂದೋಲನ ಇಡಿಯ ದೇಶವನ್ನು ಬೆಸೆಯಿತು. ಉಪ್ಪಿನ ಸತ್ಯಾಗ್ರಹ ಆರಂಭದಲ್ಲಿ ಮೂದಲಿಕೆಗೆ ಒಳಪಟ್ಟರೂ ದೇಶದ ಏಕತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಯ್ತು.

    ಇದನ್ನೂ ಓದಿ: ಬಿಹಾರ ಚುನಾವಣೆ | ಎಲ್​ಜೆಪಿ ಇಲ್ಲದ ಎನ್​ಡಿಎಯಲ್ಲಿ 50:50 ಸೀಟು ಹಂಚಿಕೆ ?

    ಆದರೇನು? ನಿಂದನೆಯ ತುತ್ತೂರಿಗಳು ಮಾತ್ರ ಎಂದೂ ನಿಲ್ಲಲೇ ಇಲ್ಲ. ಗಾಂಧೀಜಿ ಆದರ್ಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತ ಅನೇಕ ಮಂದಿ ದೂಷಿಸಿದ್ದೇನೋ ನಿಜ, ಆದರೆ ಸ್ವತಃ ಆತ ದೂಷಣೆಗೆ ಅರ್ಹನಾಗಿದ್ದನಾ? ಎಂಬ ಪ್ರಶ್ನೆಗೆ ಮಾತ್ರ ಉತ್ತರಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಗಾಂಧೀಜಿ ಬದುಕು ದುರಂತಮಯವೇ ಸರಿ. ಮೇಲ್ವರ್ಗದ ಮನೆತನದಲ್ಲಿ ಹುಟ್ಟಿದ್ದರೂ ಅವರು ಆ ಜನಗಳಿಗೆ ನಾಯಕರಲ್ಲ. ಬದುಕಿನುದ್ದಕ್ಕೂ ಹರಿಜನರಿಗಾಗಿಯೇ ಶ್ರಮಿಸಿದರು, ಅವರಿಗೂ ನಾಯಕರಾಗಲಿಲ್ಲ. ಗೀತೆ, ಗೋವು, ಕೃಷ್ಣ ಇವೆಲ್ಲವುಗಳ ಮೂಲಕ ಹಿಂದೂವಿನ ಆದರ್ಶಕ್ಕೆ ಪ್ರತಿಮೆಯಾಗಿ ನಿಂತರೂ ಹಿಂದೂಗಳು ಅವರನ್ನು ನಾಯಕರೆಂದು ಸ್ವೀಕರಿಸಲಿಲ್ಲ. ಅತ್ತ ಯಾವ ಮುಸಲ್ಮಾನರಿಗಾಗಿ ಹಿಂದೂಗಳನ್ನೇ ಎದುರುಹಾಕಿಕೊಂಡರೋ ಆ ಮುಸಲ್ಮಾನರೂ ಇವರನ್ನು ಆರಾಧಿಸುವುದಿಲ್ಲ. ಗಾಂಧೀಜಿಯೇ ಮನೆ ಮಾತಾಗಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿಯ ಚಿತ್ರವಷ್ಟೇ ಸಾಕು. ಅವರ ಸಂದೇಶಗಳು ಬೇಡ. ಅತ್ತ ಇದನ್ನು ವಿರೋಧಿಸಿಕೊಂಡೇ ಬಂದ ಕೆಲವು ಪಕ್ಷಗಳಿಗೆ ಗಾಂಧೀಜಿಯವರ ವಿಚಾರಧಾರೆಗಳು ಧಿಕ್ಕರಿಸಲು ಯೋಗ್ಯವಾದುದು. ದುರಂತವೆಂದರೆ ಇದೇ ಅಲ್ಲವೇನು?

    ಇದನ್ನೂ ಓದಿ: ಮಣಿಪಾಲ ವಿದ್ಯಾರ್ಥಿ ಡ್ರಗ್ಸ್ ಪೆಡ್ಲರ್! 14.94 ಲಕ್ಷ ರೂ. ಮೌಲ್ಯದ 498 ಎಂಡಿಎಂಎ ಮಾತ್ರೆ ವಶ

    1946ರಲ್ಲಿ ಸ್ವಾತಂತ್ರ್ಯ ಪೂರ್ವ ಹಿಂದೂ-ಮುಸ್ಲಿಂ ದಂಗೆಗಳು ಗಾಂಧೀಜಿಯವರನ್ನು ಅರ್ಧ ಜೀರ್ಣಗೊಳಿಸಿಬಿಟ್ಟಿದ್ದವು. 125 ವರ್ಷ ಹಾಯಾಗಿ ಬದುಕುತ್ತೇನೆ ಎಂದು ಪದೇಪದೆ ಹೇಳುತ್ತಿದ್ದ ಗಾಂಧೀಜಿ ಆನಂತರ ಬದುಕುವ ಇಚ್ಛೆಯನ್ನೇ ತೊರೆದುಬಿಟ್ಟಿದ್ದರು. ಕಾಂಗ್ರೆಸ್ಸಿನ ಅಧಿಕಾರ ರಾಜಕಾರಣದ ಖಯಾಲಿಗಳಿಂದ ಬೇಸತ್ತು ಪಕ್ಷವನ್ನು ವಿಸರ್ಜಿಸಿ ಅದನ್ನೊಂದು ಸೇವಾಸಂಸ್ಥೆಯಾಗಿ ಪರಿವರ್ತಿಸುವ ಇಚ್ಛೆ ವ್ಯಕ್ತಪಡಿಸಿದ್ದರೂ ಕೂಡ. ಪುಣ್ಯಾತ್ಮ ಹಿಡಿದ ಛಲ ಬಿಡಬೇಕಲ್ಲ. ಸ್ವಯಂಸೇವಾ ಸಂಸ್ಥೆಯಾಗಿ ಪರಿವರ್ತನಗೊಳ್ಳಬೇಕಿರುವ ಈ ಪಕ್ಷದ ನೀತಿ-ನಿಯಮಗಳು ಹೇಗಿರಬೇಕು ಎಂಬುದನ್ನು ಸಿದ್ಧಪಡಿಸಿದ್ದರು. ಆದರೆ ಪಕ್ಷದ ಸಭೆ ನಡೆದು ಗಾಂಧೀಜಿಯ ಈ ನಿರ್ಣಯವನ್ನು ಸ್ಪಷ್ಟವಾಗಿ ಧಿಕ್ಕರಿಸಲಾಯ್ತು. ಹಾಗೆ ನೋಡಿದರೆ ಅದು ನಿಜವಾಗಿಯೂ ಗಾಂಧೀಜಿಯವರ ಕೊಲೆಯೇ. ಅಂದಿನ ಕಾಂಗ್ರೆಸ್ ಸಮಿತಿ ತಾನೇ ಮೊದಲು ಅದನ್ನು ಮಾಡಿ ಮುಗಿಸಿತ್ತು. ಆದರೆ ಮಹಾತ್ಮ ಸುಮ್ಮನಾಗಲಿಲ್ಲ. ಜನ ಸಂಘಟನೆಯ ಮಾತುಗಳನ್ನಾಡಿದರು. ಹಳ್ಳಿಯ ಜನರೆಲ್ಲರನ್ನೂ ಕೂಡಿಸುವ ಬಗ್ಗೆ ಆಲೋಚಿಸಿದರು. ಕೊನೆಗೆ ಇದನ್ನೊಂದು ದೊಡ್ಡ ಆಂದೋಲನವಾಗಿ ರೂಪಿಸುವ ಹೆದರಿಕೆಯನ್ನೂ ಹುಟ್ಟಿಸಿರಲು ಸಾಕು. ಕಾಂಗ್ರೆಸ್ಸಿನ ಬುಡ ಅಲುಗಾಡಲಾರಂಭಿಸಿದ್ದು ಹೀಗೆಯೇ. ಅದಾದ ಕೆಲವೇ ದಿನಗಳಲ್ಲಿ ಗಾಂಧೀಜಿ ಗುಂಡೇಟಿಗೆ ಬಲಿಯಾದ ಸುದ್ದಿ ಬಂತು. ಲಾಭ ಯಾರಿಗಾಯ್ತೋ ದೇವರೇ ಬಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ದೇಶ ಬಡವಾಯ್ತು. ತನ್ನ ಜೀವಿತದ ಪ್ರತಿ ಕ್ಷಣದಲ್ಲೂ ಭಾರತದ ಏಳ್ಗೆಯನ್ನೇ ಚಿಂತಿಸಿದ ಮಹಾತ್ಮ ಅಂಗಾತ ಬಿದ್ದಿದ್ದರು!

    ಇದನ್ನೂ ಓದಿ: ಬಿಹಾರ ಚುನಾವಣೆ | ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ

    ದುರಂತವೆಂದರೆ ತರುಣ ಪೀಳಿಗೆಯ ಬಾಯಲ್ಲಿ ಇಂದಿಗೂ ಅವರು ನಿಂದೆಗೊಳಪಡುತ್ತಾರೆ. ಮಹಾತ್ಮನ ಬದುಕಿನ ಒಂದಂಶವೂ ತಿಳಿದಿರದಿದ್ದವ ಮನಸೋ ಇಚ್ಛೆ ಮಾತನಾಡುತ್ತಾನೆ. ಅವರನ್ನು ನಿಂದಿಸುವ ಮೂಲಕ ತನ್ನೊಂದು ಪರಂಪರೆಯ ಬಲುಮುಖ್ಯ ಕೊಂಡಿಯನ್ನೇ ಕತ್ತರಿಸಿ ಬಿಸಾಡುತ್ತಿದ್ದೇನೆ ಎಂಬ ಸಾಮಾನ್ಯಜ್ಞಾನವೂ ಅವನಿಗಿಲ್ಲ. ದಾದಾಭಾಯಿ ನವರೋಜಿಯವರನ್ನು ಹೀಗೆಯೇ ನಿಂದಿಸಿದ ತರುಣನೊಬ್ಬನಿಗೆ ಉತ್ತರಿಸಿದ ಗಾಂಧೀಜಿ, ‘ಹರೆಯದ ಹುರುಪಿನಲ್ಲಿ ಒಂದು ಹೆಜ್ಜೆ ಮುಂದೆ ಇಡಲು ಸಿದ್ಧರಾದ ಮಾತ್ರಕ್ಕೆ ದಾದಾಭಾಯಿಯ ಪೂಜ್ಯತೆಗೆ ಕುಂದು ಬಂತೇ? ನಾವು ಅವರಿಗಿಂತ ಹೆಚ್ಚು ಬುದ್ಧಿವಂತರಾದಂತಾಯ್ತೇ? ಅಧ್ಯಾಪಕರು ಹೇಳಿಕೊಟ್ಟ ವಿದ್ಯೆಯ ತಳಹದಿಯ ಮೇಲೆ ಇನ್ನಷ್ಟು ಜ್ಞಾನವನ್ನು ನಾನು ಕಟ್ಟಿಕೊಂಡರೆ ಅವರಿಗಿಂತ ಜಾಣನಾಗಿಬಿಟ್ಟೆನೇ?’ ಎನ್ನುತ್ತಾರೆ. ದಾದಾಭಾಯಿ ಹೆಸರನ್ನು ತೆಗೆದು ಗಾಂಧೀಜಿ ಹೆಸರನ್ನೇ ಹಾಕಿಬಿಟ್ಟರೆ ಈ ಮಾತು ಇಂದಿಗೂ ಅನ್ವಯವಾಗುತ್ತದೆ. ಸತ್ಯಾನ್ವೇಷಣೆ ಪ್ರತಿಯೊಬ್ಬರ ಬದುಕಿನಲ್ಲೂ ಆಗಬೇಕಿದೆ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಚೀನಾ ಜತೆಗೆ ಸಮರಕ್ಕೆ ಸಜ್ಜಾಗುತ್ತಿದೆ ಭಾರತೀಯ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts