More

    ವಿಶ್ವಕರ್ಮ ಸಮುದಾಯದ ಆರ್ಥಿಕ ಬಲವರ್ಧನೆಗೆ ನೆರವು; ರುದ್ರಪ್ಪ ಲಮಾಣಿ

    ಹಾವೇರಿ: ವಿಶ್ವಕರ್ಮ ಸಮುದಾಯದ ಆರ್ಥಿಕ ಸಬಲತೆಗೆ ನೆರವು ಒದಗಿಸುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲ ನೆರವು ನೀಡಲಾಗುವುದು ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
    ನಗರದ ಜಿಲ್ಲಾ ಗುರುಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ವಿಶ್ವಕರ್ಮ ಸಮುದಾಯ ಆರ್ಥಿಕವಾಗಿ ಮುಂದುವರೆದ ಸಮುದಾಯವಲ್ಲ, ವಿಶ್ವಕರ್ಮ ಸಮುದಾಯದ ಆರ್ಥಿಕ ಬೆಳವಣಿಗೆಗೆ ವಿಶ್ವಕರ್ಮ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬುದು ಈ ಸಮುದಾಯದ ಭಾವನೆಯಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
    ವಿಶೇಷ ಉಪನ್ಯಾಸ ನೀಡಿದ ಹಿರೇಹಡಗಲಿ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಉಮಾಪತಿ ಅಕ್ಕಸಾಲಿ ಮಾತನಾಡಿ, ವಿಶ್ವಕರ್ಮರು ವಿಶ್ವದ ಸೃಷ್ಟಿಯನ್ನು ಮಾಡಿದವರು, ವಿಶ್ವಕರ್ಮ ಹಾಗೂ ವಿಶ್ವಧರ್ಮ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ವಿಶ್ವವನ್ನು ಸೃಷ್ಟಿಮಾಡಿದ ವಿಶ್ವಕರ್ಮರ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ ಎಂದರು.
    ವಿಶ್ವಕರ್ಮ ಏಕದಂಡಗಿ ಮಠದ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಪುರಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಕಾಳಿಕಾ ದೇವಸ್ಥಾನದವರೆಗೆ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ಜರುಗಿತು.
    ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಮಗದ ನಾಮ ನಿರ್ದೇಶತ ಸದಸ್ಯ ಮಹೇಂದ್ರ ಬಡಿಗೇರ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಗಣೇಶಪ್ಪ ಕಮ್ಮಾರ ಹಾಗೂ ಸಮಾಜದ ಮುಖಂಡರು ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿದ್ದಲಿಂಗೇಶ ರಂಗಪ್ಪನವರ ಸ್ವಾಗತಿಸಿದರು. ಶಿಕ್ಷಕ ಶಂಕರ ಮಾನಪ್ಪ ಬಡಿಗೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts