More

    ಮಾತುಗಳ ನೆನಪು ಮಧುರ; ಇಂದು ವಿಷ್ಣುವರ್ಧನ್​ 11ನೇ ಪುಣ್ಯಸ್ಮರಣೆ

    ಬೆಂಗಳೂರು: ‘ನಾನು ಸ್ವಲ್ಪ ದಿನ ಮಾತನಾಡುವುದಿಲ್ಲ …’- ಹಾಗಂತ ಒಂದು ದಿನ ಘೋಷಿಸಿಬಿಟ್ಟರು ಡಾ. ವಿಷ್ಣುವರ್ಧನ್. ಅಲ್ಲಿಂದ ಅವರು ಆರೇಳು ತಿಂಗಳುಗಳ ಕಾಲ ನಿಜಕ್ಕೂ ಮಾತನಾಡಲಿಲ್ಲ. ಆ ನಂತರ ಮಾತನಾಡಿದರಾದರೂ, ಅವರು ಸಾಕಷ್ಟು ಬದಲಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಅವರು ಭಾಗವಹಿಸುತ್ತಿದ್ದರೂ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಅಷ್ಟರಲ್ಲಾಗಲೇ, ಅವರು ಬನ್ನಂಜೆ ಗೋವಿಂದಾಚಾರ್ಯ ಅವರನ್ನು ತಮ್ಮ ಆಧ್ಯಾತ್ಮ ಗುರುಗಳು ಎಂದು ಸ್ವೀಕರಿಸಿದ್ದರು ಎಂಬ ಸುದ್ದಿ ಇತ್ತು. ಅದಕ್ಕೆ ತಕ್ಕ ಹಾಗೆ, ಅವರ ಮಾತುಗಳಲ್ಲಿ ಆಧ್ಯಾತ್ಮ ಇಣುಕುತ್ತಿತ್ತು. ಮೂಡ್ ಇದ್ದರೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ಅವರ ಮಾತುಗಳಲ್ಲಿ ಕೇಳಬಹುದಾಗಿತ್ತು. ವಿಷ್ಣುವರ್ಧನ್ ಅವರ ಚಿತ್ರಗಳ ಕೆಲವು ಪತ್ರಿಕಾಗೋಷ್ಠಿಗಳಲ್ಲಿ ಅವರಾಡಿದ ಕೆಲವು ನೆನಪಿನಲ್ಲಿ ಉಳಿಯುವ ಮಾತುಗಳು 11ನೇ ಪುಣ್ಯಸ್ಮರಣೆ ನಿಮಿತ್ತ ಇಲ್ಲಿವೆ.

    • ಮನುಷ್ಯನಿಗೆ ಯೋಗ ಎಷ್ಟು ಮುಖ್ಯವೋ, ಯೋಗ್ಯತೆ ಅಷ್ಟೇ ಮುಖ್ಯ. ಯೋಗ ಯಾವಾಗ ಬೇಕಾದರೂ ಬಂದು ಹೋಗಬಹುದು. ಆದರೆ, ಯೋಗ್ಯತೆ ಇದ್ದರೆ, ಅದು ಕೊನೆಯವರೆಗೂ ಮನುಷ್ಯನ ಕೈ ಹಿಡಿಯುತ್ತದೆ.
    • ನಾನು ಯಾವತ್ತೂ ಆಧ್ಯಾತ್ಮದ ಕಡೆ ಹೋಗಬೇಕು ಎಂದು ಪ್ರಜ್ಞಾಪೂರ್ವಕವಾಗಿ ಹೋಗುತ್ತಿಲ್ಲ. ಅದೊಂದು ರೀತಿಯ ಬದಲಾವಣೆ ಎನ್ನಬಹುದು. ಆಧ್ಯಾತ್ಮ ಎನ್ನುವುದಕ್ಕಿಂತ ಹೊಸದೇನನ್ನೋ ಕಲಿಯುವ ಪ್ರಯತ್ನ. ಇದೆಲ್ಲವೂ ತನ್ನಿಂತಾನೇ ಆಗಿದ್ದು. ನಾನು ಪ್ರಯತ್ನಪೂರ್ವಕವಾಗಿ ಆಗಿದ್ದಲ್ಲ.
    • ಇಲ್ಲಿ ಪ್ರಯತ್ನ ಮತ್ತು ಪ್ರಯೋಗ ಮಾಡುವುದಷ್ಟೇ ನಮ್ಮ ಕೆಲಸ. ಮಿಕ್ಕಂತೆ ಫಲಿತಾಂಶ ನಮ್ಮ ಕೈಯಲ್ಲಿ ಇರುವುದಿಲ್ಲ. ಅದು ನಿರ್ಧರಿಸುವುದು ಪ್ರೇಕ್ಷಕ. ಫಲಿತಾಂಶ ಚೆನ್ನಾಗಿ ಬಂದರೆ, ಆಗ ಪ್ರಯತ್ನ ಮತ್ತು ಪ್ರಯೋಗ ಮಾಡುವ ಉತ್ಸಾಹವಿರುತ್ತದೆ.
    • ಕಥೆ ಏನು, ಪಾತ್ರವೇನು ಎಂದು ಯಾಕೆ ಯಾವಾಗಲೂ ಕೇಳುತ್ತೀರಿ? ಯಾವ ಕಥೆ ಅಥವಾ ಪಾತ್ರವಾದರೆ ಅದರಿಂದ ಏನಾಗುತ್ತದೆ? ಜಗತ್ತಿನಲ್ಲಿ ಇರುವುದು ಏಳೇ ಕಥೆಗಳು. ಅದನ್ನಿಟ್ಟುಕೊಂಡೇ ಎಲ್ಲರೂ ಏನಾದರೂ ಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇದಕ್ಕಿಂತ ಬೇರೆ ಪುಣ್ಯ ಇನ್ನೇನಿದೆ?
    • ನನಗೆ ಪ್ರಶಸ್ತಿಗಳ ಬಗ್ಗೆ ಹೆಚ್ಚು ನಂಬಿಕೆ ಇಲ್ಲ, ಜನರ ಪ್ರೀತಿಯೇ ನಿಜವಾದ ಪ್ರಶಸ್ತಿ. ಅದನ್ನು ಸಂಪಾದಿಸುವುದು ಸುಲಭದ ಮಾತಲ್ಲ, ಅದೇ ನನ್ನ ಪಾಲಿನ ಆಸ್ತಿ.
    • ಈ ಚಿತ್ರರಂಗದಲ್ಲಿ ಯಾವುದೂ ಶಾಶ್ವತವಲ್ಲ. ಯಶಸ್ಸು-ಸೋಲು ಎಲ್ಲವೂ ಬದಲಾಗುತ್ತಿರುತ್ತದೆ. ಇಲ್ಲಿ ಜನ ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ನಾವು ಯಾವತ್ತೂ ಒಂದೇ ತರಹ ಇರುವುದಕ್ಕೆ ಆಗುವುದಿಲ್ಲ. ನಾವೇನು ಅಂದುಕೊಂಡಿರುತ್ತೇವೋ, ಅದು ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ನಮ್ಮ ಎಂಟ್ರಿ ಭರ್ಜರಿಯಾಗಿರಬೇಕು, ಎಕ್ಸಿಟ್ ಬಹಳ ಚೆನ್ನಾಗಿರಬೇಕು ಎಂಬುದು ನನ್ನಾಸೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts