ಬೆಂಗಳೂರು: ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಧ್ವಂಸಗೊಳಿಸಿದ್ದಕ್ಕೆ ಅವರ ಅಭಿಮಾನಿಗಳು ಸಿಡಿದೆದ್ದಿದ್ದು, ಮೈಸೂರಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡುವ ಜತೆಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣು ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವುದರಿಂದ ಅಭಿಮಾನಿಗಳು ಈ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನ ಜಗನ್ಮೋಹನ ಅರಮನೆ ಮುಂಭಾಗ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಕಿಡಿಗೇಡಿಗಳ ಕೃತ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪದೇಪದೆ ವಿಷ್ಣುವರ್ಧನ್ ವಿಚಾರದಲ್ಲಿ ನೋವುಂಟು ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಷ್ಣು ಪುತ್ಥಳಿಗಳಿಗೆ ಭದ್ರತೆ ಒದಗಿಸಬೇಕು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣು ಅವರಿಗೆ ಅಪಮಾನ ಆಗಬಾರದು ಎಂದು ಆಗ್ರಹಿಸಿದರು. ಜತೆಗೆ ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು.
ಸೂಕ್ತಕ್ರಮಕ್ಕೆ ಅನಿರುದ್ಧ್ ಆಗ್ರಹ
ವಿಷ್ಣು ಪುತ್ಥಳಿ ಧ್ವಂಸ ಪ್ರಕರಣ ಸಂಬಂಧ ಅವರ ಅಳಿಯ ಅನಿರುದ್ಧ್ ಕೂಡ ಪ್ರತಿಕ್ರಿಯಿಸಿದ್ದು, ಇಂಥ ಘಟನೆಗಳು ಮರುಕಳಿಸಬಾರದು. ಹೀಗಾಗಿ ಈಗ ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ವಿಷ್ಣುವರ್ಧನ್ ಅವರು ತೋರುತ್ತಿದ್ದ ಪ್ರೀತಿಯ ಕಾರಣಕ್ಕೆ ಅವರು ಇನ್ನೂ ಕೋಟ್ಯಂತರ ಅಭಿಮಾನಿಗಳ ಮನಸು-ಹೃದಯದಲ್ಲಿ ನೆಲೆಸಿದ್ದಾರೆ. ಅದೇರೀತಿ ಅಭಿಮಾನಿಗಳು ಕೂಡ ಪ್ರೀತಿಯಿಂದ ನಡೆದುಕೊಳ್ಳಬೇಕು, ದ್ವೇಷ ಬೇಡ ಎಂಬುದಾಗಿ ಕೋರಿಕೊಂಡರು. ಇನ್ನು ಬೇರೆ ಕಡೆಯಲ್ಲಿ ಪುತ್ಥಳಿ ಸ್ಥಾಪನೆ ಬಗ್ಗೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಅದರಂತೆ ಒಂದೊಳ್ಳೆಯ ಜಾಗದಲ್ಲಿ ಅದ್ದೂರಿಯಾಗಿಯೇ ಪುತ್ಥಳಿ ನಿರ್ಮಾಣವಾಗಲಿದೆ. ಆ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿವೆ ಎಂದು ಅನಿರುದ್ಧ್ ಹೇಳಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಕುರಿತು ನಟ ಅನಿರುದ್ಧ್ ಪ್ರತಿಕ್ರಿಯೆ. ವಿವರಗಳಿಗೆ https://t.co/YaFZZbZDD9 ನೋಡಿ#Vishnuvardhan pic.twitter.com/GxnjOzUbVL
— Vijayavani (@VVani4U) December 26, 2020
ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ; ಸಚಿವ ಸೋಮಣ್ಣ ಸೂಚನೆ
ಯಾವುದೇ ವ್ಯಕ್ತಿಗೆ ಅಪಮಾನ ಆಗಬಾರದು. ವಿಷ್ಣು ಪುತ್ಥಳಿಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಸಚಿವ ವಿ.ಸೋಮಣ್ಣ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಮಾಗಡಿ ರೋಡ್ ಸರ್ಕಲ್ಗೆ ಪೂಜ್ಯ ಬಾಲಗಂಗಾಧರಸ್ವಾಮಿ ಸರ್ಕಲ್ ಎಂದು ನಾಮಕರಣ ಮಾಡಿ, ಒಂದೊಳ್ಳೆಯ ಯೋಜನೆ ಪ್ರಕಾರ ಕೆಲಸ ಮಾಡಲಾಗುತ್ತಿದೆ. ಆದರೆ 2 ತಿಂಗಳ ಹಿಂದೆ ಯಾರೋ ರಾತ್ರೋರಾತ್ರಿ ವಿಷ್ಣುವರ್ಧನ್ ಅವರ ಪುತ್ಥಳಿ ನಿರ್ಮಾಣ ಮಾಡಿ, ನನ್ನನ್ನು ಕಾರ್ಯಕ್ರಮಕ್ಕೆ ಕರೆದಿದ್ದರು. ಆಗ ನಾನು, ಈ ಥರ ಮಾಡಬಾರದು, ತಪ್ಪಾಗುತ್ತೆ ಎಂದು ತಿಳಿಹೇಳಿದ್ದೆ.
ನಂತರ ಬೇರೆ ಬೇರೆ ಒತ್ತಡಗಳು ನನ್ನ ಮೇಲೆ ಬಂದಿದ್ದರಿಂದ ಬೇರೆ ಕಡೆ ಯಾವುದಾದ್ರೂ ಜಾಗ ಬೇಕಾ? ಎಂದು ಐದಾರು ದಿನಗಳ ಹಿಂದೆ ಕೇಳಿದ್ದೆ. ನೀವು ಹೇಳಿದ ಜಾಗದಲ್ಲಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದೆ. ವಿಷ್ಣುವರ್ಧನ್ ಸಂಘದವರು ಎಲ್ಲಿ ತೋರಿಸ್ತಾರೋ ಅಲ್ಲಿ ಹೊಸದಾಗಿ ಪುತ್ಥಳಿ ನಿರ್ಮಾಣ ಮಾಡಲಾಗುವುದು, ಅದಕ್ಕೆ ಸರ್ಕಾರದ ಅನುದಾನವನ್ನೂ ಕೊಡಿಸುವುದಾಗಿ ಸೋಮಣ್ಣ ಹೇಳಿದರು.
ಸಾಹಸಸಿಂಹ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳು: ಮಾಗಡಿ ರಸ್ತೆಯಲ್ಲಿ ಕೃತ್ಯ
ಮಹಿಳಾ ಸಚಿವೆಯ ಆನ್ಲೈನ್ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!