More

    ಆರ್‌ಸಿಬಿ ತಂಡ ತೊರೆದ ಎಬಿಡಿಗೆ ವಿರಾಟ್ ಕೊಹ್ಲಿ ಏನಂದರು ಗೊತ್ತೇ?

    ಬೆಂಗಳೂರು: ಆಧುನಿಕ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಪ್ರಕಟಿಸಿದ್ದಾರೆ. ಇದರೊಂದಿಗೆ ‘ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಕ್ರಿಕೆಟಿಗನ 17 ವರ್ಷಗಳ ವೃತ್ತಿಜೀವನಕ್ಕೆ ತೆರೆಬಿದ್ದಿದೆ. ಅವರ ಈ ನಿರ್ಧಾರದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಜತೆಗಿನ ಒಪ್ಪಂದವೂ ಕೊನೆಗೊಂಡಿದೆ. 37 ವರ್ಷದ ಎಬಿಡಿ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ‘ಇದೊಂದು ಅದ್ಭುತ ಜರ್ನಿ. ನಾನು ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ’ ಎಂದು ಟ್ವೀಟಿಸಿದ್ದಾರೆ. ಇದರಿಂದ ಆರ್‌ಸಿಬಿ ತಂಡದ ಅಭಿಮಾನಿಗಳು ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರಿ ಬೇಸರಗೊಂಡಿದ್ದಾರೆ.

    ‘ನನ್ನ ಹೃದಯಕ್ಕೆ ನೋವಾಗಿದೆ. ಆದರೆ ನೀವು ನಿಮ್ಮ ಮತ್ತು ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುತ್ತೀರಿ ಎಂಬುದು ಗೊತ್ತಿದೆ. ನಾನು ಭೇಟಿಯಾದ ನಮ್ಮ ಕಾಲದ ಅತ್ಯಂತ ಶ್ರೇಷ್ಠ ಆಟಗಾರ ಮತ್ತು ಸ್ಫೂರ್ತಿದಾಯಕ ವ್ಯಕ್ತಿ ನೀವಾಗಿದ್ದೀರಿ. ನಿಮ್ಮ ಸಾಧನೆ ಮತ್ತು ಆರ್‌ಸಿಬಿಗೆ ನೀವು ನೀಡಿರುವ ಕೊಡುಗೆ ಬಗ್ಗೆ ಹೆಮ್ಮೆ ಪಡಬಹುದು. ಸಹೋದರ ನಮ್ಮ ಸಂಬಂಧ ಕ್ರಿಕೆಟ್ ಆಟವನ್ನು ಮೀರಿದ್ದು ಮತ್ತು ಅದು ಎಂದೆಂದಿಗೂ ಹಾಗೆಯೇ ಇರಲಿದೆ. ಐ ಲವ್ ಯೂ ಎಬಿಡಿ’ ಎಂದು ವಿರಾಟ್ ಕೊಹ್ಲಿ ಟ್ವೀಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಎಬಿಡಿ, ‘ಐ ಲವ್ ಯೂ ಟೂ’ ಎಂದು ಟ್ವೀಟಿಸಿದ್ದಾರೆ. 2011ರಿಂದಲೂ ಎಬಿಡಿ-ಕೊಹ್ಲಿ ಆರ್‌ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ವಿಶೇಷ ಬಾಂಧವ್ಯ ಹೊಂದಿದ್ದರು.

    ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಟಿ20 ಪಂದ್ಯವಾಡಿರುವ ಅವರು, 2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ‘ಅಣ್ಣನೊಂದಿಗೆ ಮನೆಯ ಅಂಗಳದಲ್ಲಿ ಆಡಲು ಆರಂಭಿಸಿದಂದಿನಿಂದಲೂ ನಾನು ಈ ಆಟವನ್ನು ಅತ್ಯಂತ ಸಂತೋಷದಿಂದ ಆಡಿರುವೆ ಮತ್ತು ಸಂಭ್ರಮಿಸಿರುವೆ. ಆದರೆ ಈಗ 37ನೇ ವಯಸ್ಸಿನಲ್ಲಿ ಆ ಜ್ಯೋತಿ ಅಷ್ಟೊಂದು ಪ್ರಕಾಶಮಾನವಾಗಿ ಉರಿಯುತ್ತಿಲ್ಲ’ ಎಂದು ಎಬಿಡಿ ಹೇಳಿದ್ದಾರೆ. ಮೈದಾನದ ಮೂಲೆಮೂಲೆಗೂ ಚೆಂಡು ಬಾರಿಸುವ ಸಾಮರ್ಥ್ಯದಿಂದಾಗಿ ‘360 ಡಿಗ್ರಿ’ ಎಂಬ ಅನ್ವರ್ಥನಾಮವನ್ನು ಪಡೆದುಕೊಂಡ ಎಬಿಡಿ, ಐಪಿಎಲ್‌ನಲ್ಲಿ ಮೊದಲಿಗೆ ಡೆಲ್ಲಿ (2008-10) ತಂಡದ ಸದಸ್ಯರಾಗಿದ್ದರು. ಇದಲ್ಲದೆ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ (ಸಿಪಿಎಲ್), ಆಸ್ಟ್ರೇಲಿಯಾ (ಬಿಬಿಎಲ್), ಪಾಕಿಸ್ತಾನ (ಪಿಎಸ್‌ಎಲ್) ಮತ್ತು ಬಾಂಗ್ಲಾದೇಶದ (ಬಿಪಿಎಲ್) ಟಿ20 ಲೀಗ್‌ಗಳಲ್ಲೂ ಅವರು ಆಡಿದ್ದಾರೆ.

    ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಎಬಿಡಿ ವಿಶೇಷ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts