More

    ವಿರಾಟ್ ಕೊಹ್ಲಿ ಶತಕವಿಲ್ಲದೆ 2 ವರ್ಷ! ಕರೊನಾ ಕಾಲದಲ್ಲಿ ಸೆಂಚುರಿ ಸಿಡಿಸುವುದನ್ನು ಮರೆತ ಸ್ಟಾರ್ ಬ್ಯಾಟರ್

    ಬೆಂಗಳೂರು: ಶತಕಗಳ ಸರದಾರರಾಗಿ ಬೀಗುತ್ತಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಿಂದ ಶತಕ ಸಿಡಿಸುವುದನ್ನೇ ಮರೆತಿದ್ದಾರೆ! ಹೌದು, ವಿರಾಟ್ ಕೊಹ್ಲಿ ಶತಕವನ್ನು ಸಿಡಿಸದೆ ಮಂಗಳವಾರಕ್ಕೆ 2 ವರ್ಷಗಳು ಪೂರ್ಣಗೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಕಳೆದ 56 ಇನಿಂಗ್ಸ್‌ಗಳಿಂದ ಶತಕವನ್ನೇ ಸಿಡಿಸಿಲ್ಲ. ಇದರಿಂದಾಗಿ ಸಚಿನ್ ತೆಂಡುಲ್ಕರ್ ಅವರ 100 ಶತಕಗಳ ದಾಖಲೆ ಮುರಿಯುವ ನೆಚ್ಚಿನ ಅಭ್ಯರ್ಥಿ ಎನಿಸಿರುವ ಕೊಹ್ಲಿ ಅವರ ಹಾದಿ ಕಠಿಣಗೊಂಡಿದೆ.

    ಕೊಹ್ಲಿ ಇದುವರೆಗೆ 70 ಶತಕ ಸಿಡಿಸಿದ್ದು, ಈ ಪೈಕಿ 27 ಟೆಸ್ಟ್ ಮತ್ತು 43 ಏಕದಿನ ಪಂದ್ಯಗಳಲ್ಲಿ ದಾಖಲಾಗಿವೆ. ಆದರೆ ಕಳೆದ 2 ವರ್ಷಗಳಲ್ಲಿ ಕರೊನಾ ಹಾವಳಿಯಿಂದಾಗಿ ಕ್ರಿಕೆಟ್ ಸಾಕಷ್ಟು ತೊಂದರೆ ಎದುರಿಸಿರುವ ನಡುವೆ ಬಯೋ-ಬಬಲ್‌ನಲ್ಲಿ ಕೊಹ್ಲಿಗೆ ಶತಕ ಕೈತಪ್ಪುತ್ತ ಬಂದಿದೆ. ಹಾಗೆಂದು ಕೊಹ್ಲಿಗೆ ರನ್‌ಬರ ಎದುರಾಗಿಲ್ಲ. 20 ಬಾರಿ ಅರ್ಧಶತಕ ಬಾರಿಸಿದ್ದರೂ, ಅದನ್ನು ಮೂರಂಕಿ ಮೊತ್ತವಾಗಿಸುವಲ್ಲಿ ಅವರು ಎಡವಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಿರುವ ಸಚಿನ್ ದಾಖಲೆಯಿಂದ ಕೊಹ್ಲಿ 6 ಶತಕ ದೂರವಿದ್ದಾರೆ. ಆದರೆ ಕಳೆದ 27 ತಿಂಗಳಿನಿಂದ ಏಕದಿನ ಕ್ರಿಕೆಟ್‌ನಲ್ಲಿ ಅವರ ಶತಕಗಳ ಲೆಕ್ಕ 43ರಲ್ಲೇ ಸ್ತಬ್ಧಗೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಕೊನೆಯ ಶತಕ ಕಳೆದ ವರ್ಷದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಗಸ್ಟ್ 14ರಂದು ಪೋರ್ಟ್ ಆಫ್​ ಸ್ಪೇನ್‌ನಲ್ಲಿ ದಾಖಲಾಗಿತ್ತು. ಅದಕ್ಕೆ ಮುನ್ನ 2018ರಲ್ಲಿ 14 ಏಕದಿನ ಪಂದ್ಯಗಳಲ್ಲೇ 6 ಶತಕ ಸಿಡಿಸಿದ್ದ ಕೊಹ್ಲಿ, 2017ರಲ್ಲೂ 6 ಶತಕ ಬಾರಿಸಿದ್ದರು. ಇದರಿಂದಾಗಿ ಅವರು 2020ರಲ್ಲೇ ಸಚಿನ್ ದಾಖಲೆ ಮುರಿಯುವ ನಿರೀಕ್ಷೆ ಇಡಲಾಗಿತ್ತು. ಆದರೆ ಕರೊನಾ ಹಾವಳಿ ಅವರ ಲಯ ತಪ್ಪಿಸಿತು.

    ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ಕೊಹ್ಲಿ, ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಮತ್ತು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಡಿಸೆಂಬರ್ 3ರಿಂದ ಮುಂಬೈನಲ್ಲಿ ನಡೆಯಲಿರುವ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರು ಮರಳಿ ಕಣಕ್ಕಿಳಿಯಲಿದ್ದು, ಈ ಸಲವಾದರೂ ಶತಕಗಳ ಬರ ನೀಗಿಸುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

    ಪಿಂಕ್ ಟೆಸ್ಟ್‌ನಲ್ಲಿ ಕಡೇ ಶತಕ!
    ವಿರಾಟ್ ಕೊಹ್ಲಿ ಅವರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕ ದಾಖಲಾಗಿರುವುದು 2019ರ ಐತಿಹಾಸಿಕ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ. ಬಾಂಗ್ಲಾದೇಶ ವಿರುದ್ಧದ ಕೋಲ್ಕತದಲ್ಲಿ ನಡೆದ ಪಂದ್ಯದ 2ನೇ ದಿನವಾದ ನವೆಂಬರ್ 23ರಂದು ಕೊಹ್ಲಿ (136) ಕೊನೆಯ ಶತಕ ದಾಖಲಿಸಿದ್ದರು. ಕೊನೇ ಶತಕದ ಬಳಿಕ ವಿಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಅಜೇಯ 94 ರನ್ ಗಳಿಸಿರುವುದೇ ಅವರ ಗರಿಷ್ಠ ಗಳಿಕೆಯಾಗಿದೆ.

    ಕೊನೇ ಶತಕದ ಬಳಿಕ ಕೊಹ್ಲಿ ನಿರ್ವಹಣೆ
    ಟೆಸ್ಟ್: 12, ಇನಿಂಗ್ಸ್: 21, ರನ್: 563, ಸರಾಸರಿ: 28.15, ಅರ್ಧಶತಕ: 5, ಗರಿಷ್ಠ: 74
    ಏಕದಿನ: 15, ಇನಿಂಗ್ಸ್: 15, ರನ್: 649, ಸರಾಸರಿ: 43.26, ಅರ್ಧಶತಕ: 8, ಗರಿಷ್ಠ: 89
    ಟಿ20: 23, ಇನಿಂಗ್ಸ್: 7, ರನ್: 777, ಸರಾಸರಿ: 59.76, ಅರ್ಧಶತಕ: 7, ಗರಿಷ್ಠ: 94*

    70: ಅಂತಾರಾಷ್ಟ್ರೀಯ ಕ್ರಿಕೆಟ್‌ನ ಗರಿಷ್ಠ ಶತಕವೀರರ ಪಟ್ಟಿಯಲ್ಲಿ ಕೊಹ್ಲಿ (70) ಸದ್ಯ ಸಚಿನ್ (100) ಮತ್ತು ರಿಕಿ ಪಾಂಟಿಂಗ್ (71) ನಂತರದ ಸ್ಥಾನದಲ್ಲಿದ್ದಾರೆ. ಹಾಲಿ ಕ್ರಿಕೆಟಿಗರ ಪೈಕಿ ಈ ಸಾಧನೆಯಲ್ಲಿ ಕೊಹ್ಲಿ ಸನಿಹದಲ್ಲಿರುವವರೆಂದರೆ ಡೇವಿಡ್ ವಾರ್ನರ್ (43) ಮತ್ತು ರೋಹಿತ್ ಶರ್ಮ (41).

    ಕೈತಪ್ಪುತ್ತಾ ಶತ ಶತಕ?
    ವಿರಾಟ್ ಕೊಹ್ಲಿಗೆ ಈಗ 33 ವರ್ಷ. ಸಚಿನ್ ತೆಂಡುಲ್ಕರ್ ಇಷ್ಟೇ ವಯಸ್ಸಿನಲ್ಲಿ 74 ಶತಕ ಸಿಡಿಸಿದ್ದರು. ಅಂದರೆ ಕೊಹ್ಲಿ ಸದ್ಯ ಸಚಿನ್‌ಗಿಂತ 4 ಶತಕ ಹಿಂದಿದ್ದಾರೆ. ಸಚಿನ್ 100 ಶತಕ ಸಿಡಿಸಿದಾಗ ಅವರಿಗೆ 39 ವರ್ಷ. ಕೊಹ್ಲಿ ಫಿಟ್ನೆಸ್ ಗಮನಿಸಿದರೆ ಅವರಿಗೂ ಅಷ್ಟು ವಯಸ್ಸಿನವರೆಗೆ ಆಡುವ ಸಾಮರ್ಥ್ಯವಿದೆ. ಅಂದರೆ ಕನಿಷ್ಠ ಸಚಿನ್ ಸಾಧನೆ ಸರಿಗಟ್ಟಲು ಕೊಹ್ಲಿ ಬಳಿ ಇನ್ನೂ 6 ವರ್ಷಗಳ ಕಾಲಾವಕಾಶವಿದ್ದು, ವರ್ಷಕ್ಕೆ 5 ಶತಕಗಳ ಅಗತ್ಯವಿದೆ. ಕೊಹ್ಲಿ ಬ್ಯಾಟ್ ಮಾತನಾಡಲಾರಂಭಿಸಿದರೆ ಇದು ಕಷ್ಟವೂ ಅಲ್ಲ. ಸದ್ಯ ಟಿ20 ನಾಯಕತ್ವ ತ್ಯಜಿಸಿ ಬ್ಯಾಟಿಂಗ್‌ನತ್ತ ಗಮನಹರಿಸಿರುವ ಕೊಹ್ಲಿ, ಮುಂದೆ ಇತರ ಪ್ರಕಾರದ ತಂಡಗಳ ನಾಯಕತ್ವಕ್ಕೂ ಗುಡ್‌ಬೈ ಹೇಳುವ ಸಾಧ್ಯತೆ ಇದೆ. ಆಗ ಕೊಹ್ಲಿ ಶತ ಶತಕ ಸಾಧಿಸುವತ್ತ ಹೆಚ್ಚು ಗಮನಹರಿಸಬಹುದು.

    ಹಲಾಲ್ ವಿವಾದದಲ್ಲಿ ಟೀಮ್ ಇಂಡಿಯಾ; ಬಿಸಿಸಿಐ ವಿರುದ್ಧ ಕ್ರಿಕೆಟ್‌ಪ್ರೇಮಿಗಳ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts