More

    ಸಂಪಾದಕೀಯ: ಬಡವರ ಅಕ್ಕಿಗೆ ಕನ್ನ ಖಂಡನೀಯ- ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು

    ಜನಸಾಮಾನ್ಯರ ಜೀವನಸ್ತರ ಎತ್ತರಿಸಲು, ಅದರಲ್ಲೂ ಬಡವರ ಕಲ್ಯಾಣದ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಿ, ಅನುಷ್ಠಾನಕ್ಕೆ ತರುತ್ತಲೇ ಇವೆ. ಇವು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿದರೆ ಖಂಡಿತವಾಗಿಯೂ ಹಲವು ಕೊರತೆಗಳು ನೀಗುತ್ತವೆ. ಆದರೆ, ಎಷ್ಟೇ ಒಳ್ಳೆಯ ಯೋಜನೆ ಇದ್ದರೂ ಅದನ್ನು ದುರುಪಯೋಗ ಮಾಡಿಕೊಳ್ಳುವ, ಅವ್ಯವಹಾರ ಎಸಗುವ ಕರಾಳ ಜಾಲಗಳು ಸಕ್ರಿಯವಾಗಿರುವುದು ದುರದೃಷ್ಟಕರ. ಇಂಥ ಭ್ರಷ್ಟ ಮಾನಸಿಕತೆಯ ಜನರು ಯೋಜನೆಯ ಮೂಲೋದ್ದೇಶ ಹಾಳು ಮಾಡುವುದಲ್ಲದೆ, ಬಡವರಿಗೆ ಅನ್ಯಾಯ ಎಸಗುತ್ತಾರೆ. ರಾಜ್ಯದಲ್ಲಿ ಬಡವರ ಹಸಿವು ನೀಗಿಸಲು ಬಳಕೆಯಾಗಬೇಕಾದ ಅನ್ನಭಾಗ್ಯದ ಅಕ್ಕಿ ಕಾಳಸಂತೆ ಪಾಲಾಗುತ್ತಿರುವುದು ಆಗಾಗ ಸುದ್ದಿಯಾಗುತ್ತಲೇ ಇದೆ. ಆದರೆ, ಇದೇ ಅಕ್ಕಿಗೆ ಪಾಲಿಶ್ ಮಾಡಿ ಹೊಳಪು ನೀಡಿ ಆಫ್ರಿಕಾ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿರುವ ಬೃಹತ್ ದಂಧೆ ಬೆಳಕಿಗೆ ಬಂದಿದೆ. ಅಕ್ಕಿ ಗಿರಣಿಗಳೇ ಈ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಆಹಾರ ಇಲಾಖೆಯ ತನಿಖಾ ತಂಡ ಬಯಲಿಗೆಳೆದಿದೆ. ನೈಜೀರಿಯಾ, ಇಥಿಯೋಪಿಯಾ, ಈಜಿಪ್ಟ್, ಕೀನ್ಯಾ ಸೇರಿ ಹಲವು ದೇಶಗಳಿಗೆ ವಾರ್ಷಿಕ ಲಕ್ಷಾಂತರ ಕ್ವಿಂಟಾಲ್ ಅಕ್ಕಿ ರಫ್ತಾಗಿರುವ ಅಂದಾಜಿದೆ.

    ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸರ್ಕಾರ ಪಡಿತರ ಚೀಟಿದಾರರಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುವ ಅಕ್ಕಿ ಗಿರಣಿ ಮಾಲೀಕರು ನಂತರ ಅದನ್ನು ಶುದ್ಧೀಕರಿಸಿ ಗುಣಮಟ್ಟದ ಅಕ್ಕಿಯಾಗಿ ಪರಿವರ್ತಿಸಿ ವಿವಿಧ ಬ್ರಾ್ಯಂಡ್​ಗಳ ಹೆಸರಿನಲ್ಲಿ ಮರು ಪ್ಯಾಕಿಂಗ್ ಮಾಡುತ್ತಾರೆ. ಬಳಿಕ ಇದೇ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ವಿದೇಶಗಳಿಗೂ ರಫ್ತು ಮಾಡುತ್ತಿರುವುದು ದುರ್ದೈವದ ಸಂಗತಿ.

    ಹಸಿವು ಮುಕ್ತ ರಾಜ್ಯದ ಪರಿಕಲ್ಪನೆಯಿಂದ ಜಾರಿಗೊಳಿಸಿರುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಸಾವಿರಾರು ಕುಟುಂಬಗಳು ನೆಚ್ಚಿಕೊಂಡಿವೆ ಎಂಬುದು ಗಮನಾರ್ಹ. ಆದರೆ ಈ ಅಕ್ಕಿಯನ್ನೂ ದಂಧೆಕೋರರು ನುಂಗಿ ಹಾಕುತ್ತಿರುವುದರಿಂದ ಬಡ ಫಲಾನುಭವಿಗಳು ಪಡಿತರ ಕೇಂದ್ರದಿಂದ ಖಾಲಿ ಕೈಯಲ್ಲಿ ಹಿಂದಿರುಗುವ ದಾರುಣ ಸ್ಥಿತಿ. ಅಲ್ಲದೆ, ಅನ್ನಭಾಗ್ಯದ ಅಕ್ಕಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುವ ಸರ್ಕಾರದ ಹಣ ಕೂಡ ದಂಧೆಕೋರರ ಖಜಾನೆ ತುಂಬಿಸುತ್ತಿದೆ. ಇಂಥ ಕಾಳ ದಂಧೆಕೋರರ ಜಾಲಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಿಯಮ ಮೀರಿ ಕಾರ್ಯನಿರ್ವಹಿಸುತ್ತಿರುವ ಅಕ್ಕಿ ಗಿರಣಿ ಮಾಲೀಕರಿಗೂ ಸ್ಪಷ್ಟ ಎಚ್ಚರಿಕೆ ನೀಡಬೇಕು.

    ಕಾಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂಥ ಅಪಸವ್ಯ ತಡೆಯುವ ಜವಾಬ್ದಾರಿ ಜನಸಾಮಾನ್ಯರದ್ದೂ ಆಗಿದೆ. ಎಷ್ಟೋ ಜನ, ಅರ್ಹತೆ ಇಲ್ಲದಿದ್ದರೂ ಫಲಾನುಭವಿಯಾಗಿ ಅಕ್ಕಿ ಪಡೆದುಕೊಂಡು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ನೈತಿಕತೆಗೆ ವಿರುದ್ಧವಾದ ಕೃತ್ಯವಲ್ಲದೆ, ಬಡವರ ಸೌಲಭ್ಯವನ್ನು ಕಿತ್ತುಕೊಳ್ಳುವ ಧಾಷ್ಟ್ಯವೂ ಹೌದು. ಇಂಥ ವಿಷಯದಲ್ಲಿ ಜನಸಾಮಾನ್ಯರೂ ಜಾಗೃತರಾಗಬೇಕು. ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಜನಹಿತಕಾರಿಯಾದ ಯೋಜನೆಗಳು ದಾರಿತಪ್ಪಿ, ಅವ್ಯವಹಾರಗಳ ಆಗರವಾಗಿ ಪರಿವರ್ತಿತವಾಗುತ್ತವೆ. ಅದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಷ್ಟೇ ಅಲ್ಲ ಬಡವರ ಹಿತಕ್ಕೂ ಧಕ್ಕೆಯಾಗುತ್ತದೆ ಎಂಬುದನ್ನು ಮರೆಯಬಾರದು. ಸರ್ಕಾರ ಕೂಡ ಯೋಜನೆ ಜಾರಿಯಲ್ಲಿನ ಇಂಥ ಸವಾಲುಗಳನ್ನು ನಿವಾರಿಸಿಕೊಳ್ಳುವುದು ತುರ್ತು ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts