More

    ಅಂಧಶ್ರದ್ಧೆ ಹೋಗಲಾಡಿಸಿ, ಜನರಲ್ಲಿ ಅರಿವು ಮೂಡಿಸಿ

    ಇತ್ತೀಚೆಗೆ ನಾವೆಲ್ಲರೂ ಸೃಷ್ಟಿಯ ವಿಶೇಷಗಳಲ್ಲೊಂದಾದ ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದೆವು. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದು ಸೂರ್ಯನನ್ನು ಮರೆಮಾಡುವ ಪ್ರಕ್ರಿಯೆ. ಇದು ನಮ್ಮಂಥಾ ಪಾಮರರಿಗಿರುವ ಸಾಧಾರಣ ಜ್ಞಾನ. ಶಾಲೆಯಲ್ಲಿ ಅಂಧಶ್ರದ್ಧೆ ಹೋಗಲಾಡಿಸಿ, ಜನರಲ್ಲಿ ಅರಿವು ಮೂಡಿಸಿಇಷ್ಟನ್ನು ನಾವೆಲ್ಲಾ ಓದಿದ್ದೇವೆ. ಆದರೆ ಇದು ಕೇವಲ ನೆರಳು ಬೆಳಕಿನ ಆಟವಷ್ಟೇ ಅಲ್ಲ. ಅದಕ್ಕೂ ಮೀರಿದ ಸಂಕೀರ್ಣ ಭೌತಿಕ ಪರಿಣಾಮಗಳು ಭೂಮಿಯ ಮೇಲೆ ಆಗುತ್ತದೆ. ಆದರೆ ಇವುಗಳ ಬಗೆಗೆ ನಮ್ಮಂಥಾ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಇಲ್ಲ. ಸರಿಯಾಗಿ ಹೇಳಬೇಕೆಂದರೆ ಮಾಹಿತಿಯೇ ಇಲ್ಲ. ಇರುವುದೆಲ್ಲ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಓದಿಕೊಂಡಿರುವ ಅರೆ ಜ್ಞಾನ ಅಥವಾ ವಿಜ್ಞಾನ, ಪರಂಪರಾಗತವಾಗಿ ಬಂದಿರುವ ಆಚರಣೆಗಳು ಮತ್ತು ಮೂಢನಂಬಿಕೆಗಳ ನಡುವಿನ ಗೊಂದಲ. ಸೂರ್ಯಗ್ರಹಣದ ಸಮಯದಲ್ಲಿ ನೀರಿನ ರಾಸಾಯನಿಕ ಬಂಧವಾದ ಎಚ್2ಒನ ಬಾಂಡೇಜ್ ಸಡಿಲಗೊಂಡಿರುತ್ತದೆ. ಆದ್ದರಿಂದ ಆ ಸಮಯದಲ್ಲಿ ನೀರುಕುಡಿಯಬಾರದು ಎಂಬ ಕಪೋಲಕಲ್ಪಿತ ಮಾಹಿತಿ ಓದಿದ ನೆನಪು. ಎಚ್. ನರಸಿಂಹಯ್ಯನವರಂಥ ಮೇಧಾವಿ ಸಮಾಜಮುಖಿ ವಿಜ್ಞಾನಿಗಳು ಗ್ರಹಣದ ಸಮಯದಲ್ಲಿ ಬಹಿರಂಗವಾಗಿ ಊಟ ಮಾಡಿ ನೀರು ಕುಡಿಯುತ್ತಿದ್ದುದನ್ನು ನೋಡಿದ ನೆನಪು. ಇಂಥ ವೈರುಧ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಪ್ರಶ್ನಿಸದೇ, ಅರಿಯದೇ, ಏನನ್ನೂ ಒಪ್ಪದ, ನನ್ನ ಸ್ನೇಹಿತರೊಬ್ಬರು ಬರೆದಿದ್ದರು ದಿನನಿತ್ಯ ಹಕ್ಕಿಗಳಿಗೆ ಕಾಳು ಹಾಕುವಂತೆ ಇವತ್ತೂ ತಾರಸಿಯ ಮೇಲೆ ಕಾಳು ಹಾಕಲು ಹೋದೆ. ಬೆಳಗಿನ ಏಳು ಗಂಟೆಯ ಹೊತ್ತಿಗೆ ಚಿಲಿಪಿಲಿ ಕಲರವದಿಂದ ತುಂಬಿ ಹೋಗುವ ನನ್ನ ತಾರಸಿಯಲ್ಲಿ ಇಂದು ಯಾವ ಹಕ್ಕಿಯೂ ಇಲ್ಲ! ಏನನ್ನೂ ಅರಿತು ಮಾಡುವುದು ಒಳ್ಳೆಯದು ಎಂದು. ಪ್ರಕೃತಿ, ತಾನು ಸಹಜವಾಗಿ ತನ್ನೊಳಗಿನ ಜೀವಿಗಳಿಗೆ ಕೊಡುವ ಸಂದೇಶಗಳನ್ನು ಸ್ವೀಕರಿಸುವ ಹಂತವನ್ನು ನಾವು ಮನುಷ್ಯರು ಎಂದೋ ದಾಟಿಬಿಟ್ಟಿದ್ದೇವೆ. ಒಟ್ಟಿನಲ್ಲಿ ಮಾಹಿತಿಯ, ತಿಳುವಳಿಕೆಯ ಗೊಂದಲ ನಮ್ಮಗಳ ಮನಸ್ಸಿನಲ್ಲಿ ಇರುವುದು ಸುಸ್ಪಷ್ಟ.

    ಇಂಥ ಸಂದರ್ಭಗಳಲ್ಲಿ ಕಿರುತೆರೆಯ ಜವಾಬ್ದಾರಿ ಒಂದು ಶಕ್ತಿಶಾಲಿ ಮಾಧ್ಯಮವಾಗಿ ಅತಿ ಹೆಚ್ಚು. ಇಂಥ ಗೊಂದಲಗಳನ್ನು ದೂರ ಮಾಡಿ ಜನರಿಗೆ ಮಾಹಿತಿಯನ್ನೂ, ಸರಿ ತಪ್ಪುಗಳ ವಿಶ್ಲೇಷಣೆಯನ್ನೂ, ಗ್ರಹಣದ ವೈಜ್ಞಾನಿಕ ಹೊಳಹುಗಳನ್ನೂ – ಅದರಿಂದ ಭೂಮಿಯ ಮೇಲೆ, ಅದರ ಮೇಲಿನ ಜೀವಿಗಳ ಮೇಲೆ ಆಗುವ ಪರಿಣಾಮಗಳನ್ನು ವಿವರಿಸಿ ನಮ್ಮಲ್ಲಿ ಬೇರೂರಿರುವ ಅಂಧಶ್ರದ್ಧೆಗಳನ್ನು ಹೋಗಲಾಡಿಸುವ, ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಆಗುವ ಮಾನಸಿಕ ಕ್ಷೋಭೆಯಿಂದ ಜನರನ್ನು ತಪ್ಪಿಸುವ ಎಂಥ ಅದ್ಭುತ ಅವಕಾಶ ಕಿರುತೆರೆಗೆ ಇತ್ತು!

    ಏಳೂವರೆ ಎಂಟು ಗಂಟೆಯ ಒಳಗೆ ಹಾಲನ್ನೋ ಕಾಫಿಯನ್ನೋ ಕುಡಿದು ನಂತರ ಇನ್ನೇನೂ ಸೇವಿಸದೇ, ಗ್ರಹಣ ಬಿಟ್ಟ ಮೇಲೆ, ಅಂದರೆ ಹನ್ನೊಂದು ಗಂಟೆಯ ನಂತರ ಅಡುಗೆ ಮಾಡಿ ತಿನ್ನಬೇಕು. ಹೀಗೆ ಮಾಡುವವರಲ್ಲಿ ಅಥವಾ ಮಾಡಿಸಲ್ಪಡುವವರಲ್ಲಿ ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಮೊದಲಾದ ಸಮಸ್ಯೆಗಳಿರುವ ವಯೋವೃದ್ಧರಿರುತ್ತಾರೆ, ಪುಟ್ಟಪುಟ್ಟ ಮಕ್ಕಳಿರುತ್ತಾರೆ. ಮನೆಯಲ್ಲಿ ತಿಂಡಿ ತಿಂದು, ಶಾಲೆಗೋ, ಆಫೀಸಿಗೋ ಬುತ್ತಿ ಕಟ್ಟಿಕೊಂಡು ಹೋಗಬೇಕಾಗಿರುವ ಜನರಿರುತ್ತಾರೆ. ಏನು ತಿನ್ನಬಹುದು? ಎಷ್ಟು ಹೊತ್ತಿಗೆ ತಿನ್ನಬಹುದು? ತಿನ್ನದೇ ಇರಬೇಕೇ ಅಥವಾ ತಿನ್ನಬಹುದೇ? ತಿನ್ನಬಾರದೆಂದು ಹೇಳಿರುವ ಔಚಿತ್ಯವೇನು? ಈ ಪ್ರಶ್ನೆಗಳ ಉತ್ತರಗಳಿಗೆ ಇರುವ ವೈಜ್ಞಾನಿಕ ನೆಲೆಗಟ್ಟೇನು ಎಂಬುದರ ಬಗ್ಗೆಯೆಲ್ಲಾ ಒಬ್ಬ ವೈದ್ಯರೋ, ವಿಜ್ಞಾನಿಯೋ ತೆರೆಯ ಮೇಲೆ ಬಂದು ವಿಶದವಾಗಿ ಹೇಳಿದ್ದಿದ್ದರೆ ಎಷ್ಟು ಜನರಿಗೆ ಅನುಕೂಲವಾಗಿರುತ್ತಿತ್ತು! ಎಷ್ಟು ಜನರ ಗೊಂದಲ ದೂರವಾಗಿರುತ್ತಿತ್ತು! ಮಕ್ಕಳನ್ನು ಕಂಠಮಟ್ಟ ಮರಳಿನಲ್ಲಿ, ತಿಪ್ಪೆಯಲ್ಲಿ ಹೂತಿಡುವುದರಿಂದ ಹಿಡಿದು ಬೆಳಿಗ್ಗೆ ಬೇಗ ಎದ್ದು ಮಧ್ಯಾಹ್ನದವರೆಗೂ ಮನೆಯವರೆಲ್ಲಾ ಹಸಿದುಕೊಂಡಿರುವುದರವರೆಗೂ, ಸಾಲ ಮಾಡಿಯಾದರೂ ಮಂತ್ರ-ತಂತ್ರ ಮಾಡಿಸುವುದರಿಂದ ಹಿಡಿದು, ತನ್ನ ರಾಶಿಗೆ ಗ್ರಹಣದಿಂದ ವೃಥಾ ಅಪವಾದ ಬರುತ್ತದೆಂದು ಹೆದರಿ ಕೆಲಸ ಕಾರ್ಯ ಬಿಟ್ಟು, ಸೂರ್ಯನ ಬೆಳಕನ್ನೇ ನೋಡದೇ ಮನೆಯೊಳಗೇ ಕೂರುವವರೆಗೂ ಕಂದಾಚಾರಗಳಲ್ಲಿ, ಮೌಢ್ಯಗಳಲ್ಲಿ, ಸುಳ್ಳು/ತಪ್ಪು ಮಾಹಿತಿಗಳಲ್ಲಿ ಮುಳುಗೇಳುತ್ತಿರುವ ಸಮಾಜಕ್ಕೆ ದಿಕ್ಕು ತೋರಿಸಬೇಕಾದ ಕರ್ತವ್ಯ ವಾಹಿನಿಗಳಿಗಿತ್ತು. ಆದರೆ ಮುಕ್ಕಾಲು ಪಾಲು ವಾಹಿನಿಗಳು ಜ್ಯೋತಿಷಿಗಳೊಡನೆ ಕೂತು ಗ್ರಹಣ ಯಾವ ಯಾವ ರಾಶಿಗಳವರಿಗೆ ಏನೇನು ಕಂಟಕಗಳನ್ನು ತಂದೊಡ್ಡಲಿದೆ? ಎಷ್ಟ್ಟೆಷ್ಟು ಹಾನಿ ಮಾಡಲಿದೆ? ಅವುಗಳಿಂದ ಬಚಾವಾಗಲು ಯಾವ ಯಾವ ಹೋಮಗಳನ್ನು ಮಾಡಿಸಬೇಕು? ಯಾವ ಯಾವ ದೇವಿ ದೇವತೆಯರ ಸ್ತೋತ್ರ ಮಾಡಬೇಕು? ಇತ್ಯಾದಿಗಳಿಂದ ತುಂಬಿಸಿಬಿಟ್ಟರು!

    ಗ್ರಹಣದ ಆಚರಣೆಗೆ ಸಂಬಂಧ ಪಟ್ಟ ಮಾಹಿತಿಗಳು, ಅದರ ಸೌಂದರ್ಯ ವಿವರಿಸಿದ ಮಾತುಗಳು ಎಲ್ಲಾ ಸರಿಯೇ. ಆದರೆ ಅದರ ಗಾಂಭೀರ್ಯವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಂತು ಹೇಳುವ ಕಾರ್ಯಕ್ರಮಗಳೂ ಮೇಲಿನವುಗಳಷ್ಟೇ ಇರಬೇಕಿತ್ತಲ್ಲವೇ? ಅಂಥ ಕಾರ್ಯಕ್ರಮಗಳು ಕೆಲವೇ ಜವಾಬ್ದಾರಿಯುತ ವಾಹಿನಿಗಳಲ್ಲಿ ಕಂಡುಬಂದವೇನೋ, ನಾನರಿಯೆ!

    ಒಟ್ಟಿನಲ್ಲಿ ಹೇಳಬೇಕೆಂದರೆ ಸೂರ್ಯ ಗ್ರಹಣ ಎಂಬ ಒಂದು ಸಹಜ ಪ್ರಾಕೃತಿಕ ಪ್ರಕ್ರಿಯೆಯನ್ನು ಅಂತೆಯೇ ಜನರಿಗೆ ತಿಳಿಹೇಳಿ ತನ್ನ ವೀಕ್ಷಕರ ಮನಸ್ಸಿನಲ್ಲಿ ಸ್ಪಷ್ಟತೆ ಮೂಡಿಸಬಹುದಾಗಿದ್ದ ಸುವರ್ಣಾವಕಾಶವನ್ನು ನಮ್ಮ ವಾಹಿನಿಗಳು ಕಳೆದುಕೊಂಡವು. ಮಾತ್ರವಲ್ಲ, ಸೂರ್ಯಗ್ರಹಣ ಎನ್ನುವುದು ಒಂದು ಸುಂದರ ರೂಪಿನಲ್ಲಿ ಬರುವ ಕರಾಳವಾದ, ದುಷ್ಟಕರವಾದ ಏನೋ ಒಂದು ನಿಗೂಢ. ಅದು ನಮ್ಮನ್ನು ಆದಷ್ಟೂ ತಾಗದಂತೆ ಹೇಗೆ ಸುರಕ್ಷಿತವಾಗಿರಬೇಕು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟವು. ನಿಜವಾಗಿಯೂ ಹೇಳಬೇಕೆಂದರೆ ವೃಥಾಪವಾದ ಬಂದಿದ್ದು ಸೂರ್ಯಚಂದ್ರರಿಗೆ! ಮಾಡಿಸಿದರೆ ಸೂರ್ಯಚಂದ್ರರು ಹೋಮ ಹವನ ಮಾಡಿಸಬೇಕೇನೋ!

    ಇವೆಲ್ಲದರ ಮಧ್ಯೆ ಒಂದು ವಿಷಯ ಮರೆಯುವಂತಿಲ್ಲ. ಒಂದು ದಿನಕ್ಕೆ ವಾಹಿನಿಗಳನ್ನು ಮಾತ್ರ ದೂರಿ ಮುಗಿಸಿಬಿಡುವಂತಿಲ್ಲ. ದಿನಾ ದಿನಾ ಜನರಿಗೆ ಭೈರಾಗಿಗಳು, ಮಂತ್ರವಾದಿಗಳು, ಗ್ರಹದೋಷ, ಪರಿಹಾರ ಇತ್ಯಾದಿಗಳನ್ನೇ ಹೇಳಿಕೊಡುತ್ತಾ ಬದುಕಿಗೆ ಸರಿಯಾದ ದೃಷ್ಟಿಕೋನವನ್ನೇ ಕಟ್ಟಿಕೊಡದೇ, ಜನರನ್ನು ಮೌಢ್ಯದಲ್ಲೇ ಇರುವಂತೆ ಧಾರಾವಾಹಿ ಜಗತ್ತು ನೋಡಿಕೊಂಡಿದೆ. ಧಾರಾವಾಹಿಗಳಿಗೆ ಇರುವ ಅಪಾರ ಜನಪ್ರಿಯತೆ ವಾಹಿನಿಗಳಿಗೆ ಕೊಟ್ಟಿರುವ ಸಂದೇಶವನ್ನು ಅವು ಈ ಹೊತ್ತು ತಮ್ಮ ಅನುಕೂಲಕ್ಕೆ ಬಳಸಿಕೊಂಡಿವೆ. ಇವೆರಡೂ ಒಂದರೊಡನೊಂದು ಬೆಸೆದುಕೊಂಡು ಸಮಾಜಮುಖಿಯಾಗದ ಹೊರತು ಈ ವಾಹಿನಿಗಳ ತ್ರಿವಿಕ್ರಮ ಶಕ್ತಿ ನಮ್ಮ ಸಮಾಜಕ್ಕೆ ಅನುಕೂಲಕರವಾಗುವ ಬದಲು ಕಂಟಕಪ್ರಾಯವಾಗಬಹುದು.

    (ಲೇಖಕರು ಸಿನಿಮಾ, ಕಿರುತೆರೆ, ರಂಗಭೂಮಿ ಕಲಾವಿದೆ)

    (ಪ್ರತಿಕ್ರಿಯಿಸಿ: [email protected])

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts