More

    ಮನೋಲ್ಲಾಸ|ನಿಜವಾದ ಕಲೆ ಯಾವುದು?

    ವಿಕ್ರಮ ಸಿಂಹ ಎಂಬ ರಾಜ ಕಲೆಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದ. ಅರಮನೆಯಲ್ಲಿ ಕಲಾಕೊಠಡಿ ಇದ್ದು, ಆಸ್ಥಾನದಲ್ಲಿ ಸಾಕಷ್ಟು ಕಲಾವಿದರಿದ್ದರು, ಹೊರಗಡೆಯಿಂದಲೂ ಒಳ್ಳೊಳ್ಳೆಯ ಕಲಾವಿದರು ಬಂದು ಕಲೆ ಪ್ರದರ್ಶಿಸಿ, ಚಿನ್ನದ ನಾಣ್ಯ, ಮುತ್ತುರತ್ನಗಳನ್ನು ರಾಜನಿಂದ ಪಾರಿತೋಷಕ ರೂಪದಲ್ಲಿ ಪಡೆದು ಪ್ರಸನ್ನರಾಗುತ್ತಿದ್ದರು. ರಾಜನು ಕೇವಲ ಕಲಾಪ್ರೇಮಿಯಾಗಿದ್ದು, ಪ್ರಜಾಪ್ರೇಮಿಯಾಗಿರಲಿಲ್ಲ. ಬೊಕ್ಕಸದ ಹಣವನ್ನೆಲ್ಲ ಕಲೆಗೆ ವ್ಯಯಮಾಡುತ್ತಿದ್ದುದರಿಂದ, ಹಣಕಾಸಿನ ಕೊರತೆ ಉಂಟಾಯಿತು, ಮಂತ್ರಿ ತಿಳಿಹೇಳಿದರೂ ರಾಜನಿಗೆ ಮನವರಿಕೆ ಆಗಲಿಲ್ಲ. ಮಂತ್ರಿ ಚಿಂತೆಗಿಡಾದ. ಒಮ್ಮೆ ರಾಜ ಅರಮನೆಯಲ್ಲಿ ಏಕಾಂತದಲ್ಲಿ ಕುಳಿತಿರುವಾಗ, ‘ಪ್ರಭುಗಳೇ, ರಾಜ್ಯದಲ್ಲಿ ಸಾಕಷ್ಟು ಜನ ಪರಿಣಿತ ಕಲಾವಿದರಿದ್ದಾರೆ, ನಾವಿನ್ನೂ ಅವರ ಕಡೆ ಗಮನವನ್ನೇ ಹರಿಸಿಲ್ಲ’ ಎಂದ. ‘ಈಗಲೇ ಅವರನ್ನು ಕರೆತನ್ನಿ. ಸೂಕ್ತವಾಗಿ ಪುರಸ್ಕರಿಸೋಣ’ ಎಂದ ರಾಜ.

    ‘ಯಾವುದೇ ಪಾರಿತೋಷಕ, ಹಣ, ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಬೆಲೆ ಕೊಡುತ್ತಿಲ್ಲ, ಅಪೇಕ್ಷೆಯೂ ಅವರಿಗಿಲ್ಲ. ತಮ್ಮ ಪರಿಶ್ರಮ ಮತ್ತು ಕಾರ್ಯದ ಬಗ್ಗೆ ಅವರಿಗೆ ತೃಪ್ತಿ ಇದೆ’ ಎಂದ ಮಂತ್ರಿ. ‘ಹಾಗಾದರೆ ಈಗಲೇ ಅಂತಹ ಮಹಾನುಭಾವರನ್ನು ಭೇಟಿ ಮಾಡೋಣ’ ಎಂದು ಹಸಿರು ತುಂಬಿದ ಹೊಲಗಳ ಕಡೆಗೆ ಬಂದರು. ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ರೈತರ ಮುಖದಲ್ಲಿ ಮಂಜಿನ ಹನಿಗಳಂತೆ ಬೆವರು ಹನಿಗಳು ತುಂಬಿದ್ದವು. ‘ಪ್ರಭುಗಳೇ ರೈತರು ಪರೋಕ್ಷ ರೀತಿಯ ಕಲೆಗಾರರು. ಬೆಳೆ ಬೆಳೆಯುವ ಕಲೆಯನ್ನು ಎಲ್ಲೂ, ಯಾರ ಮುಂದೆಯೂ ಪ್ರದರ್ಶನಕ್ಕಿಡುವುದಿಲ್ಲ. ಆದರೆ ಇವರು ಬೆಳೆ ತೆಗೆಯುವ ಕಲೆಯನ್ನು ಕೈ ಬಿಟ್ಟರೆ, ನಾವೆಲ್ಲರೂ ಅನ್ನವೇ ಇಲ್ಲದೆ ಸಾಯಬೇಕಾಗುತ್ತದೆ. ಮಳೆ, ಗಾಳಿ, ಚಳಿ, ಬೇಸಿಗೆ ಎಲ್ಲ ಕಾಲದಲ್ಲೂ ಮೈಯೊಡ್ಡಿ ಕಷ್ಟನಷ್ಟಗಳನ್ನು ಸಹಿಸಿ, ದುಡಿಯುತ್ತಲೇ ಇರುತ್ತಾರೆ’ ಎಂದ.

    ರಾಜನಿಗೆ ಅಯ್ಯೋ ಎನಿಸಿ, ಇವರಿಗೇನಾದರೂ ಪುರಸ್ಕಾರವನ್ನು ನೀಡಲೇಬೇಕೆಂದ. ‘ಪ್ರಭು ಅದರ ಫಲಾಪೇಕ್ಷೆ ಕಿಂಚಿತ್ತೂ ಅವರಿಗಿಲ್ಲ. ಕೆರೆ-ಕಟ್ಟೆ ಹಾಗೂ ಜಲಾಶಯಗಳ ಕೊರತೆಯಿಂದ ಅವರು ಕಂಗೆಟ್ಟಿದ್ದಾರೆ’ ಎಂದ ಮಂತ್ರಿ. ‘ಭೂ ತಾಯಿಯ ಸೇವೆ ಮಾಡುತ್ತಿರುವ ಇವರಿಗೆ ಈಗಲೇ ಈ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರೈಸಿ ಮಂತ್ರಿಗಳೇ’ ಎಂದ ರಾಜ. ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ರೈತರ ಸಭೆ ಕರೆದು ‘ಮುಂದಿನ ವರ್ಷದಿಂದ ಯಾರು ಹೆಚ್ಚಿನ ಬೆಳೆ ಬೆಳೆಯುವರೋ, ಅವರಿಗೂ ಇತರ ಕಲೆಗಾರರ ಜೊತೆಯಲ್ಲಿಯೇ ಪ್ರಶಸ್ತಿ ನೀಡಲಾಗುವುದು’ ಎಂದು ರಾಜ ಘೊಷಿಸಿದ. ಮಂತ್ರಿಯ ಬುದ್ಧಿವಂತಿಕೆಯನ್ನು ಪ್ರಜೆಗಳು ಕೊಂಡಾಡಿದರು. ಎಲ್ಲಿಯೋ ಬೆಳೆದ ಅಕ್ಕಿ, ದವಸಧಾನ್ಯ, ಹಣ್ಣುಗಳು, ಇನ್ನೆಲ್ಲಿಯದ್ದೋ ದೇವರಿಗೆ ನೈವೇದ್ಯ, ಪ್ರಸಾದವಾಗುತ್ತದೆ, ಹಸಿವನ್ನು ನೀಗಿಸುತ್ತದೆ. ಇನ್ನೆಲ್ಲಿಯೋ ಬೆಳೆದ ಹತ್ತಿ, ಎಲ್ಲೋ ತಯಾರಾಗಿ ದೇವರಿಗೆ ವಸ್ತ್ರವಾಗುತ್ತದೆ. ಮೂಲ ಕರ್ತೃ ಮಾತ್ರ ಕಾಣಸಿಗುವುದಿಲ್ಲ, ಕಲೆ ಎಂದರೆ ವಸ್ತುವಿನ ಹೊರಗಿನ ಸ್ವರೂಪವನ್ನು ತೋರಿಸುವುದಲ್ಲ; ಒಳಗಿನ ಮಹತ್ವವನ್ನು ಮನಗಾಣಿಸುವುದು. ಭಾವನೆಗಳು ಮತ್ತು ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿಪೂರ್ವಕವಾಗಿ ಜೋಡಿಸುವ ಅಂಶ ವ್ಯಕ್ತಿ-ವ್ಯಕ್ತಿ ನಡುವಿನ ಸಂವಹನ ಮಾಡಲು ಬಳಸುವ ಪರೋಕ್ಷ ಮಾಧ್ಯಮವೇ ಕಲೆ.

    | ವಿದ್ಯಾ ಉಪೇಂದ್ರ ಜೋಶಿ

    (ಲೇಖಕಿ ಹವ್ಯಾಸಿ ಬರಹಗಾರ್ತಿ, ಸಂಗೀತಗಾರ್ತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts