More

    ಜಾಂಬವಂತನ ಸಂದೇಶ

    ಜಾಂಬವಂತನ ಸಂದೇಶ| ರಾಮಸುಬ್ರಾಯ ಶೇಟ್
    ರಾಮ-ರಾವಣರ ಭೀಕರ ಸಮರ ಸಾಗುತ್ತಿದೆ. ಆಗ ಇಂದ್ರಜಿತು ಸಮ್ಮೋಹನಾಸ್ತ್ರದಿಂದ ಅನೇಕರನ್ನು ಮೂರ್ಛೆಗೊಳಿಸಿದ. ತಕ್ಷಣ ವಯೋವೃದ್ಧ ಜಾಂಬವಂತನು ಆಂಜನೇಯನ ಬಳಿ ತೆರಳಿ ಶೀಘ್ರವಾಗಿ ಔಷಧಪರ್ವತಕ್ಕೆ ಹೋಗಿ ಸಂಜೀವಿನಿ ಗಿಡಮೂಲಿಕೆ ತರುವಂತೆ ಹೇಳುತ್ತಾನೆ. ತಕ್ಷಣ ಕಾರ್ಯಪ್ರವೃತ್ತನಾದ ಹನುಮಂತನು ಔಷಧಪರ್ವತಕ್ಕೆ ಹೋಗಿ ಸಂಜೀವಿನಿ ಸಸ್ಯವನ್ನು ಗುರುತಿಸಲಾರದೆ ಚಡಪಡಿಸುತ್ತಾನೆ. ಪ್ರಾಜ್ಞನಾದ ಹನುಮ ಬರಿಗೈಯಲ್ಲಿ ಹಿಂದಿರುಗದೆ ಪರ್ವತವನ್ನೇ ಹೊತ್ತು ತರುತ್ತಾನೆ. ಜಾಂಬವಂತನು ಸಂಜೀವಿನಿ ಗಿಡಮೂಲಿಕೆಯಿಂದ ಮೂರ್ಛೆಹೋದವರನ್ನು ಉಪಚರಿಸಿ ಪರ್ವತವನ್ನು ಇದ್ದ ಸ್ಥಳದಲ್ಲಿಯೇ ಇಟ್ಟುಬರಲು ತಿಳಿಸಿದಾಗ ಹನುಮಂತನು ಮರುಮಾತನಾಡದೇ ಆಜ್ಞೆ ಪಾಲಿಸುತ್ತಾನೆ. ನಂತರ ಇಂದ್ರಜಿತು ಸೌಮಿತ್ರಿಯನ್ನು ಮೂರ್ಛಿತಗೊಳಿಸುತ್ತಾನೆ. ಶ್ರೀರಾಮನು ನೊಂದು ಅತ್ಯಂತ ದುಃಖದಲ್ಲಿರುವಾಗ ಸುಗ್ರೀವ, ಜಾಂಬವಂತರು ಸಮಾಧಾನಪಡಿಸಿ ಪುನಃ ಔಷಧ ಪರ್ವತವನ್ನು ತರಿಸಿ ಲಕ್ಷ್ಮಣನನ್ನು ಉಪಚರಿಸುತ್ತಾರೆ. ಜಾಂಬವಂತನು ಹನುಮನನ್ನು ಕರೆದು, ‘ಹನುಮಾ, ಇದನ್ನು ಮೊದಲಿದ್ದ ಸ್ಥಾನದಲ್ಲಿಟ್ಟುಬರಬೇಕಲ್ಲಾ, ಇದಕ್ಕೆ ಕಾರಣ ಗೊತ್ತಾಯಿತೇ?’ ಎಂದಾಗ, ‘ಹೌದು ಜಾಂಬವಂತರೇ, ಯಾವ ವಸ್ತುವು ಎಲ್ಲಿರಬೇಕೋ ಅದು ಅಲ್ಲಿಯೇ ಇರಬೇಕು. ಅದೇ ಸುವ್ಯವಸ್ಥೆ. ವ್ಯತಿರಿಕ್ತವಾದರೆ ಇನ್ನೊಬ್ಬರಿಗೆ ಮಾತ್ರವಲ್ಲ, ಲೋಕಕ್ಕೇ ತೊಂದರೆಯಾಗುತ್ತದೆ’ ಎಂದು ಉತ್ತರಿಸಿದನು.

    ಈ ಒಂದು ಸಣ್ಣ ವಿಷಯದಲ್ಲಿ ಎಂತಹ ಸಂದೇಶವಡಗಿದೆ ಎಂದರೆ ವಿಷಯ ಸಣ್ಣದಿದ್ದರೂ ಪರಿಣಾಮ ದೊಡ್ಡ ಪ್ರಮಾದಕ್ಕೂ ಕಾರಣವಾದೀತು. ಔಷಧಪರ್ವತ ಇಲ್ಲೇ ಇರಲಿ ಎಂದು ಆಂಜನೇಯನು ಹೇಳಬಹುದಿತ್ತು. ಆದರೆ, ರಾಮಾಯಣದಲ್ಲಿ ಮಹಾಪ್ರಾಜ್ಞ, ವಿವೇಚನೆಯುಳ್ಳ ನಿಸ್ವಾರ್ಥ ಸೇವಕ, ಹನುಮಂತ ಇತರರ ಸಂಕಷ್ಟಗಳನ್ನೆಲ್ಲಾ ತಾನು ನುಂಗುವ ವಿಷಕಂಠನ ಸ್ವಭಾವದಂತಹವನು. ತನ್ನಂತೆ ಇನ್ನೊಬ್ಬ ಸಸ್ಯವನ್ನು ಹುಡುಕಿಕೊಂಡು ಬಂದರೂ ಅದು ಆತನ ಕೈಗೆ ದೊರಕುವಂತಿರಬೇಕು ಎಂಬುದನ್ನರಿತಿದ್ದ.

    ಒಮ್ಮೆ ನೆಂಟರೊಂದಿಗೆ ಬಂದಿದ್ದ ಮಗುವು ತುಂಬಾ ಕೆಮ್ಮಲು ಪ್ರಾರಂಭಿಸಿತು. ಮನೆಯಲ್ಲಿದ್ದ ಕೆಮ್ಮಿನ ಔಷಧ ಕುಡಿಸಿದ ನಂತರ ಮಗುವಿಗೆ ಕೆಮ್ಮು ನಿಂತಿತು. ಎರಡು ದಿನದ ನಂತರ ರಾತ್ರಿ ಒಂದು ಗಂಟೆಯ ಸಮಯ. ಇವರ ಮನೆಯ ಮಗು ಒಂದೇ ಸಮನೆ ಕೆಮ್ಮುತ್ತಿತ್ತು. ಆಗ ಔಷಧದ ಬಾಟಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಬೆಳಕು ಹರಿದ ನಂತರ ವೈದ್ಯರ ಹತ್ತಿರ ಕರೆದೊಯ್ಯಬೇಕಾದ ಅನಿವಾರ್ಯತೆ.

    ಇದು ಕೇವಲ ಒಂದು ಉದಾಹರಣೆ. ಮರಳಿನ ಸಂಗ್ರಹ ಸಾಗರ ಮತ್ತು ನದಿಯ ತೀರಗಳಲ್ಲಿ ಹೊರತು ಪರ್ವತಗಳ ಮೇಲಲ್ಲ. ನೀರಿನ ಸಂಗ್ರಹ ತಗ್ಗಿನಲ್ಲಿ. ಅದು ಪ್ರಕೃತಿಯ ನಿಯಮ. ಆದರೆ, ನಾವು ಎಲ್ಲವನ್ನೂ ಉಲ್ಲಂಘಿಸುವ ಮಟ್ಟಕ್ಕೆ ಇಳಿಯುತ್ತಿದ್ದೇವೆ. ಎಲ್ಲಿವಾಹನ ನಿಲ್ಲಿಸಬಾರದೋ ಅಲ್ಲಿ ನಿಲ್ಲಿಸುತ್ತೇವೆ. ಎಲೆಯಡಿಕೆ ಅಗಿದು ಎಲ್ಲಿ ಉಗುಳಬಾರದೋ ಅಲ್ಲಿ ಉಗುಳುತ್ತೇವೆ. ಎಸೆಯಬಾರದೆಡೆ ಕಸದ ಪರ್ವತವನ್ನು ಹೆಚ್ಚಿಸುತ್ತೇವೆ. ವ್ಯವಸ್ಥೆಯಲ್ಲಿ ತುಸು ಸ್ಥಾನಪಲ್ಲಟವಾದರೂ ಅಲ್ಲೋಲಕಲೊ್ಲೕಲವಾಗುವ ಸಾಧ್ಯತೆಗಳಿರುತ್ತವೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಪ್ರತಿಯೊಂದು ವಿಷಯಗಳ ಬಗ್ಗೆಯೂ ವಿಶ್ಲೇಷಿಸಿ ಮಾರ್ಗದರ್ಶನ ನೀಡುತ್ತವೆ. ನಾವು ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ವ್ಯವಸ್ಥೆಗೆ ಕೆಡುಕು ಬರದಂತೆ ಶಿಸ್ತನ್ನು ಅಳವಡಿಸಿಕೊಂಡು ಜೀವಿಸಬೇಕು.

    VIDEO: ಏಕದಿನ ವಿಶ್ವಕಪ್​ಗೆ ಶಾರುಖ್​ ಖಾನ್​ ವಿಶೇಷ ಪ್ರಚಾರ; ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts