More

    ಸಂದರ್ಶನ: ಮಸ್ಕಿಯಲ್ಲಿ ಅಭಿವೃದ್ಧಿಗೆ ಮತ, ಅನುಕಂಪಕ್ಕಲ್ಲ: ಬಿವೈ ವಿಜಯೇಂದ್ರ

    (ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಗಳ ಪೈಕಿ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಹೊಣೆಗಾರಿಕೆ ಆ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಗಲಿಗೆ ಬಿದ್ದಿದೆ. ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಹೇಳುತ್ತ ಚುನಾವಣೆ ಉಸ್ತುವಾರಿ ಹೊತ್ತುಕೊಂಡು ಹದಿನೈದು ದಿವಸಗಳಿಂದ ಮಸ್ಕಿಂಯಲ್ಲೇ ಮೊಕ್ಕಾಂ ಹೂಡಿರುವ ವಿಜಯೇಂದ್ರ ಅವರೊಂದಿಗೆ ವಿಜಯವಾಣಿಯ ಗಂಗಾವತಿ ಬ್ಯೂರೋ ಮುಖ್ಯಸ್ಥ ಚಂದ್ರಶೇಖರ್ ಶೃಂಗೇರಿ ನಡೆಸಿದ ಮಾತುಕತೆ ಇಲ್ಲಿದೆ)

    ಶಿರಾ, ಕೆ.ಆರ್.ಪೇಟೆ ನಂತರ ಮಸ್ಕಿ ಉಪಚುನಾವಣೆ ಉಸ್ತುವಾರಿ ಹೊತ್ತಿದ್ದೀರಿ. ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದಿರಿ?

    -ಮತದಾರರಿಗೆ ಭಾರತೀಯ ಜನತಾ ಪಕ್ಷದ ಬಗ್ಗೆ ವಿಶ್ವಾಸವಿದೆ. ಅಭಿವೃದ್ಧಿಪರ ಚಿಂತನೆ ಬಗ್ಗೆಯೂ ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕಳೆದ 50-60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂಬುದನ್ನು ಮತದಾರನ ಮುಂದಿಟ್ಟಿದ್ದೇನೆ. ಈಗ ಬಿಜೆಪಿ ಸರ್ಕಾರವಿದೆ. ಅಲ್ಲದೆ ಪ್ರತಾಪಗೌಡರು ರಾಜೀನಾಮೆ ನೀಡಿರುವುದೇ ಕ್ಷೇತ್ರದ ಅಭಿವೃದ್ಧಿಗಾಗಿ. ಅವರ ರಾಜೀನಾಮೆ ನಂತರದ ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಿದೆ. ಇದೆಲ್ಲವನ್ನೂ ಇಲ್ಲಿನ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದೇವೆ.

    ಬಿಜೆಪಿ ಅಭ್ಯರ್ಥಿ ಬಗ್ಗೆ ಸ್ಥಳೀಯವಾಗಿ ಒಂದಿಷ್ಟು ಅಸಮಾಧಾನಗಳಿದ್ದವು ಎಂದು ಹೇಳಲಾಗುತ್ತಿತ್ತು. ಅದನ್ನು ಹೇಗೆ ಬಗೆಹರಿಸಿದಿರಿ.

    -ನಮ್ಮ ಅಭ್ಯರ್ಥಿ ಬಗ್ಗೆ ಮತದಾರನಲ್ಲಿ ಯಾವುದೇ ಅಸಮಾಧಾನ ಇರಲಿಲ್ಲ. ಮೂರು ಬಾರಿ ಪ್ರತಾಪಗೌಡರು ಶಾಸಕರಾಗಿದ್ದರಿಂದ ಕ್ಷೇತ್ರದಲ್ಲಿ ಸಣ್ಣ ಪ್ರಮಾಣದಲ್ಲಿ ಅಡಳಿತ ವಿರೋಧಿ ಅಲೆ ಇದ್ದಿದ್ದು ಹೌದು. ಆದರೆ, ರಾಜೀನಾಮೆ ನೀಡಿದ ನಂತರವೂ ಪ್ರತಾಪಗೌಡರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮತದಾರರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್​ನವರು ಆಡಳಿತ ವಿರೋಧಿ ಅಲೆ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಮತದಾರರಲ್ಲ. ಸಣ್ಣ ಪುಟ್ಟ ಕೊರತೆಗಳಿದ್ದರೂ ಅದೆಲ್ಲವನ್ನೂ ಬಗೆಹರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವವಾಗಿ ಗೆಲವು ಸಾಧಿಸಲಿದೆ. ಈ ಭಾಗದ ಸಂಸದರು, ಶಾಸಕರು, ಮಂತ್ರಿಗಳು ಶಕ್ತಿ ಮೀರಿ ಪ್ರಚಾರ ಮಾಡಿರುವುದರಿಂದ ಮಸ್ಕಿ ಬಿಜೆಪಿ ವಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    ‘5 ಎ ನೀರಾವರಿ ಯೋಜನೆ’ಗೆ ಸಂಬಂಧಿಸಿದ ಅಂಶ ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೇ?

    -5 ಎ ನೀರಾವರಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳೇ ಬಹಿರಂಗ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಮುಗಿದ ಮೇಲೆ ಹೋರಾಟಗಾರರು ಮತ್ತು ಚುನಾಯಿತ ಪ್ರತಿನಿಧಿಗಳು ಬೆಂಗಳೂರಿಗೆ ಬನ್ನಿ. ಅವಶ್ಯಕತೆ ಇದ್ದರೆ ವಿರೋಧ ಪಕ್ಷದವರನ್ನೂ ಆಹ್ವಾನಿಸುತ್ತೇವೆ. ತಜ್ಞರನ್ನು ಕೂರಿಸಿಕೊಂಡು 5 ಎ ನೀರಾವರಿ ಯೋಜನೆ ಸಾಧಕ- ಬಾಧಕಗಳ ಬಗ್ಗೆ ರ್ಚಚಿಸುವುದಾಗಿ ಹೇಳಿದ್ದಾರೆ. ಆಗ ಯೋಜನೆ ಬಗ್ಗೆ ಸಹಮತ ವ್ಯಕ್ತವಾದರೆ ಅನುಷ್ಠಾನಗೊಳಿಸುವುದಾಗಿ ಸ್ಪಷ್ಟ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಭರವಸೆ ಮೇಲೆ ಇಲ್ಲಿನ ಮತದಾರರರು ವಿಶ್ವಾಸ ಇರಿಸಿದ್ದಾರೆ.

    ಚುನಾವಣೆ ಉಸ್ತುವಾರಿ ತೆಗೆದುಕೊಂಡ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ತಾವೂ ಸಕ್ಸಸ್ ಆಗಿದ್ದೀರಿ. ಇದರ ಗುಟ್ಟೇನು?

    -ನನ್ನ ಹಾಗೂ ಪಕ್ಷದ ಈ ಯಶಸ್ಸಿಗೆೆ ಕಾಂಗ್ರೆಸ್ ಪಕ್ಷದ ವೈಫಲ್ಯವೇ ಮುಖ್ಯ ಕಾರಣ. ಕೆ.ಆರ್.ಪೇಟೆ ಮತ್ತು ಶಿರಾದಲ್ಲಿ ಯಾವತ್ತೂ ಬಿಜೆಪಿ ಗೆದ್ದಿರಲಿಲ್ಲ. ಅದೂವರೆಗೂ ಅಲ್ಲಿ ಗೆದ್ದ ಪಕ್ಷಗಳು ಕೇವಲ ಜಾತಿ ಅಂಶವನ್ನೇ ಪ್ರಧಾನವಾಗಿ ಇಟ್ಟುಕೊಂಡಿದ್ದವು. ಬಿಜೆಪಿ ಅಭಿವೃದ್ದಿಯನ್ನೇ ಮುಖ್ಯ ಅಂಶವನ್ನಾಗಿಟ್ಟುಕೊಂಡಿತ್ತು. ಜಾತಿ ಆಧಾರದ ಮೇಲೆ ಮತ ಚಲಾಯಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇ ಸಕ್ಸಸ್​ಗೆ ಕಾರಣ.

    ಮಸ್ಕಿಯಲ್ಲಿ ಬಿಜೆಪಿಗಿಂತ ಬಿ.ವೈ.ವಿಜಯೇಂದ್ರ ವರ್ಸಸ್ ಕಾಂಗ್ರೆಸ್ ಎಂದು ಹೇಳಲಾಗುತ್ತಿದೆಯಲ್ಲ?

    -ವಿರೋಧ ಪಕ್ಷದವರು ನನ್ನನ್ನು ಟಾರ್ಗೆಟ್ ಮಾಡಿ ಆಟ್ಯಾಕ್ ಮಾಡುತ್ತಿದ್ದಾರೆ. ಶಿರಾ ಮತ್ತು ಕೆ.ಆರ್.ಪೇಟೆ ಸೋಲು ಅವರ ನಿದ್ದೆ ಕೆಡಿಸಿದ್ದವು. ಅವರು ಸೋಲಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ ಅವರು ಪ್ರತಿನಿತ್ಯವೂ ನನ್ನ ಹೆಸರನ್ನು ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ. ಅದು ನಮಗೆ ಲಾಭವೇ ಆಗಿದೆ. ಕಾಂಗ್ರೆಸ್​ನ ಈ ಸವಾಲನ್ನು ಬಹಳ ಗಂಭಿರವಾಗಿ ಪರಿಗಣಿಸಿದ ಯುವಕರು ಹೆಚ್ಚಿನ ಉತ್ಸಾಹದಲ್ಲಿ ಕೆಲಸ ಮಾಡಲು ಸಹಕಾರಿಯಾಯಿತು.

    ಕಾಂಗ್ರೆಸ್ ಅಭ್ಯರ್ಥಿಗೆ ‘ಅನುಕಂಪ’ ಸಹಾಯವಾಗಬಹುದೇ?

    -‘ಅನುಕಂಪ’ದಿಂದ ಕ್ಷೇತ್ರ ಅಭಿವೃದ್ಧಿಯಾಗುವುದಿಲ್ಲ ಎಂಬುದು ಮತದಾರರಿಗೆ ಮನವರಿಕೆಯಾಗಿದೆ. ಇರುವುದೇ ಇನ್ನೆರಡು ವರ್ಷ. ಈಗ ಬಿಜೆಪಿ ಸರ್ಕಾರ ಇದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ಕೂರುವವರನ್ನು ಏಕೆ ಗೆಲ್ಲಿಸಬೇಕು ಎಂದು ಮತದಾರರನೇ ಪ್ರಶ್ನಿಸುತ್ತಿದ್ದಾನೆ. ಅಭಿವೃದ್ಧಿಗಾಗಿ ಮತ ಕೊಡುತ್ತಾರೆಯೇ ಹೊರತು ‘ಅನುಕಂಪ’ಕ್ಕಲ್ಲ. ಇಲ್ಲಿನ ಪ್ರಬುದ್ಧ ಮತದಾರ ವೋಟ್ ಅನ್ನು ನಷ್ಟ ಮಾಡಿಕೊಳ್ಳಲು ಬಯಸುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts