More

    ಹೆಚ್ಚುತ್ತಿರುವ ಹ್ಯಾಕರ್​​ಗಳ ಹಾವಳಿ: ಸಂಯೋಜಿತ ಕ್ರಮ ಅಗತ್ಯ

    ಭಾರತದ ಕೆಲವು ವಿದ್ಯುತ್ ಸ್ಥಾವರಗಳ ಮಾಹಿತಿಯನ್ನು ಚೀನೀ ಹ್ಯಾಕರ್​ಗಳು ಹ್ಯಾಕ್ ಮಾಡಿದ್ದಾರೆ ಎಂಬ ಮಾಹಿತಿ ಕೆಲ ದಿನಗಳ ಹಿಂದೆ ಬಹಿರಂಗವಾಗಿತ್ತು. ಇದರಿಂದ ಅನಾಹುತವೇನು ಸಂಭವಿಸಲಿಲ್ಲವಾದರೂ ಆತಂಕವಂತೂ ಉಂಟಾಗಿತ್ತು.

    ಈ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಸರ್ಕಾರಗಳಿಂದ ಸ್ಪಷ್ಟನೆಗಳು ಬಂತಾದರೂ ವಿಷಯ ಗೊಂದಲಮಯವಾಗಿಯೇ ಉಳಿದಿತ್ತು. ಇದೀಗ ಅಮೆರಿಕದ ಸ್ಟಾರ್ಟಪ್ ಕಂಪನಿಯೊಂದು ಸಂಗ್ರಹಿಸಿದ ಅಪಾರ ಪ್ರಮಾಣದ ದತ್ತಾಂಶಗಳಿಗೆ ಅಂತಾರಾಷ್ಟ್ರೀಯ ಹ್ಯಾಕರ್​ಗಳ ಗುಂಪು ಕನ್ನಹಾಕಿರುವ ಸಂಗತಿ ಬೆಳಕಿಗೆ ಬಂದಿದ್ದು, ದತ್ತಾಂಶಗಳ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಕಳವಳಗಳು ಉಂಟಾಗಿವೆ.

    ಸಿಲಿಕಾನ್ ವ್ಯಾಲಿಯ ಸ್ಟಾರ್ಟಪ್ ಕಂಪನಿ ವೆರ್ಕಡಾ ಇನ್​ಕಾರ್ಪೆರೇಷನ್​ನ ಭದ್ರತಾ ಕ್ಯಾಮರಾಗಳು ಸಂಗ್ರಹಿಸಿರುವ ದತ್ತಾಂಶಗಳಿಗೆ ಹ್ಯಾಕರ್​ಗಳು ದಾಳಿ ಮಾಡಿದ್ದು, ಆಸ್ಪತ್ರೆಗಳು, ಜೈಲುಗಳು, ಕಂಪನಿಗಳು, ಪೊಲೀಸ್ ಇಲಾಖೆಗಳು ಮತ್ತು ಶಾಲೆಗಳ ಸುಮಾರು 1,50,000 ನಿಗಾ ಕ್ಯಾಮರಾಗಳಿಂದ ಮಾಹಿತಿಗಳನ್ನು ಎಗರಿಸಿದ್ದಾರೆ ಎಂದು ಗೊತ್ತಾಗಿದೆ. ಜಾಗತಿಕ ಕಾರು ತಯಾರಿಕಾ ಕಂಪನಿ ಟೆಸ್ಲಾ ಕೂಡ ಹ್ಯಾಕ್ ಆಗಿರುವ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿದೆ.

    ವಿಡಿಯೊ ನಿಗಾ ಈಗ ಎಷ್ಟು ವ್ಯಾಪಕ ವಾಗಿದೆ ಹಾಗೂ ಆ ನಿಗಾ ವ್ಯವಸ್ಥೆಯನ್ನು ಎಷ್ಟು ಸುಲಭವಾಗಿ ಭೇದಿಸಬಹುದು ಎಂಬುದನ್ನು ತೋರಿಸುವುದು ಹ್ಯಾಕಿಂಗ್​ನ ಉದ್ದೇಶ ಎಂದು ಈ ಸೈಬರ್ ಚೋರರು ಹೇಳಿಕೊಂಡಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಗೆ ಏಟು ನೀಡುವುದು ಹಾಗೂ ಅರಾಜಕತೆ ಸೃಷ್ಟಿ ಮಾತ್ರವಲ್ಲದೆ ತಮಾಷೆಯೂ ಹ್ಯಾಕಿಂಗ್​ಗೆ ಕಾರಣ ಎಂದು ಇವರು ಹೇಳಿರುವುದು ಆತಂಕ ಮೂಡಿಸುವಂಥದು. ಈಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಅಪಾರವಾಗಿ ಹೆಚ್ಚುತ್ತಿದ್ದು, ಜಾಗತಿಕ ದೇಶಗಳ ಚಿಂತೆಗೆ ಕಾರಣವಾಗಿದೆ. ಜನರ ವೈಯಕ್ತಿಕ ಖಾತೆಗಳಿಗೆ ಮಾತ್ರವಲ್ಲದೆ, ಬೇರೆ ಬೇರೆ ದೇಶಗಳ ಸೇನಾ ಮತ್ತು ಆಡಳಿತ ರಹಸ್ಯಗಳಿಗೂ ಸೈಬರ್ ಕಳ್ಳರು ದಾಳಿ ಇಡುತ್ತಿರುವುದು ಗಂಭೀರ ಅಪಾಯವೇ ಸರಿ.

    ಈ ಪರಿಸ್ಥಿತಿ ಹೀಗೇ ಮುಂದುವರಿದರೆ ದೊಡ್ಡ ಗಂಡಾಂತರವನ್ನೇ ಸೃಷ್ಟಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೇಗೆ ಸಾಮೂಹಿಕ ಯತ್ನ ಅಗತ್ಯವೋ ಸೈಬರ್ ಭಯೋತ್ಪಾದನೆ ವಿಷಯದಲ್ಲಿ ಸಹ ಜಾಗತಿಕ ದೇಶಗಳು ಒಟ್ಟಾಗಿ ಶ್ರಮಿಸಬೇಕಿದೆ.

    ಏಕೆಂದರೆ, ಸೈಬರ್ ಚೋರರು ಎಲ್ಲಿಂದ ಕಾರ್ಯಾಚರಿಸುತ್ತಾರೆಂದು ಸುಲಭದಲ್ಲಿ ಹುಡುಕಲಾಗದು. ಹೀಗಾಗಿ ಈ ಕಾರ್ಯದಲ್ಲಿ ದೇಶ-ದೇಶಗಳ ನಡುವೆ ಸಮನ್ವಯ ಮತ್ತು ಮಾಹಿತಿ ವಿನಿಮಯ ಅಗತ್ಯವಾಗುತ್ತದೆ. ಇಂದು ಈ ದೇಶದಲ್ಲಿ ಆಗಿದ್ದು ನಾಳೆ ಮತ್ತೊಂದು ದೇಶದಲ್ಲಿ ಆಗುತ್ತದೆ. ಇದರಿಂದ ಒಂದು ಬಗೆಯ ಅರಾಜಕತೆಯೇ ಸೃಷ್ಟಿಯಾಗಿಬಿಡುತ್ತದೆ. ಹೀಗಾಗಿ ಆಯಾ ದೇಶಗಳು ತಮ್ಮಲ್ಲಿನ ಸೈಬರ್ ನಿಗಾ ವ್ಯವಸ್ಥೆಯನ್ನು ಬಲಪಡಿಸುವ ಜತೆಗೆ, ಒಗ್ಗಟ್ಟಿನ ಯತ್ನಕ್ಕೆ ಮುಂದಾಗುವುದು ಅನಿವಾರ್ಯ.

    ಈ ನಡುವೆ, ಭಾರತ ಸರ್ಕಾರ ಸೈಬರ್ ಭದ್ರತೆ ಹೆಚ್ಚಿಸಲು ರಾಷ್ಟ್ರೀಯ ಕಾರ್ಯತಂತ್ರ ರೂಪಿಸಲು ಚಿಂತನೆ ನಡೆಸಿರುವುದು ಸಕಾಲಿಕವಾಗಿದೆ. ಗೃಹ, ಮಾಹಿತಿ ತಂತ್ರಜ್ಞಾನ, ರಕ್ಷಣೆ ಮುಂತಾದ ಇಲಾಖೆಗಳ ನಡುವೆ ಮತ್ತು ಮಾಹಿತಿ ಮೂಲಸೌಕರ್ಯ ರಕ್ಷಣಾ ಕೇಂದ್ರ ನಡುವೆ ಸಮನ್ವಯ ಸಾಧಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದರಿಂದ ಸೈಬರ್ ದಾಳಿ ಸಂದರ್ಭದಲ್ಲಿ ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts