More

    ಶೀಘ್ರದಲ್ಲೇ ಎರಡನೇ ಹಂತದ ಯೋಜನೆಗೆ ಚಾಲನೆ

    ವಿಜಯಪುರ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಎರಡನೇಯ ಹಂತದ ಮನೆಗಳ ನಿರ್ಮಾಣಕ್ಕಾಗಿ ತಿಂಗಳಲ್ಲಿಯೇ ಆದೇಶ ಹೊರಡಿಸಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವುದಾಗಿ ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.
    ನಗರದ ಅಲ್-ಅಮೀನ್ ಹಿಂಭಾಗದಲ್ಲಿರುವ ಮಹಾನಗರ ಪಾಲಿಕೆಯ ಜಮೀನಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಹೌಸಿಂಗ್ ಾರ್ ಆಲ್ 2020 ಯೋಜನೆಯಡಿ ಪ್ರಥಮ ಹಂತವಾಗಿ 1493 ಮನೆಗಳ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಸರ್ವರಿಗೂ ಸೂರು ಒದಗಿಸುವುದೇ ಪ್ರಧಾನಿ ಮೋದಿ ಸರ್ಕಾರದ ಉದ್ದೇಶ. ಆ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 1493 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರ ಎರಡನೇ ಹಂತದಲ್ಲಿ ಇನ್ನಷ್ಟು ಮನೆಗಳನ್ನು ಮಂಜೂರಿಸುವ ಮೂಲಕ 3000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸುವುದಾಗಿ ತಿಳಿಸಿದರು.
    ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮನವಿ ಮಾಡಿಕೊಂಡಂತೆ ರಜಪೂತ ಗಲ್ಲಿ, ಎಪಿಎಂಸಿ ಜಾಗೆಯಲ್ಲಿಯೂ ಆಶ್ರಯ ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಸರ್ಕಾರಿ ಜಾಗ ಸಿಗುವುದು ಅಪರೂಪ, ಈ ಕಾರಣಕ್ಕಾಗಿ ಅಲ್ಲಿ ಜಿ ಪ್ಲಸ್-1 ಮಾದರಿಯ ಮನೆಗಳ ಬದಲು ಜಿ ಪ್ಲಸ್-2 ಮನೆಗಳನ್ನು ನಿರ್ಮಿಸಿದರೆ ಇನ್ನೂ ಹೆಚ್ಚು ಹೆಚ್ಚು ಬಡವರಿಗೆ ಅನುಕೂಲವಾಗಲಿದೆ ಎಂದರು.

    ಕೋಟಿ ನಮಸ್ಕಾರ

    ನಗರದ ಹೃದಯ ಭಾಗದಲ್ಲಿ ಈ ರೀತಿಯ ಜಾಗವನ್ನು ಬಡವರಿಗೆ ಹಂಚಿಕೆ ಮಾಡಲು ದೊಡ್ಡ ಮನಸ್ಸು ಬೇಕು, ಈ ದೊಡ್ಡ ಮನಸ್ಸು ಮಾಡಿದ ಯತ್ನಾಳರಿಗೆ ನಾನು ಕೋಟಿ ಕೋಟಿ ನಮಸ್ಕಾರ ಮಾಡುವುದಾಗಿ ಸಚಿವ ಸೋಮಣ್ಣ ತಿಳಿಸಿದರು.
    ಬೇರೆಯವರಾಗಿದ್ದರೆ ಈ ಅಮೂಲ್ಯ ಹಾಗೂ ಮೌಲ್ಯ ಜಾಗವನ್ನು ಜಿಲ್ಲಾಧಿಕಾರಿಗಳಿಗೆ ಹೆದರಿಸಿಯಾದರೂ ಗುಳುಂ ಮಾಡಿ ಬಿಡುತ್ತಿದ್ದರು, ಆದರೆ ಯತ್ನಾಳ ಈ ಅಮೂಲ್ಯ ಜಾಗವನ್ನು ಬಡವರಿಗೆ ಹಂಚಿಕೆ ಮಾಡಿದ್ದಾರೆ. ಈ ರೀತಿಯ ದೊಡ್ಡತನ ಕೆಲವರಲ್ಲಿ ಮಾತ್ರ ಇರುತ್ತದೆ, ಈ ದೊಡ್ಡತನ ಯತ್ನಾಳ ಅವರಲ್ಲಿ ಧಾರಾಳವಾಗಿದೆ ಎಂದರು.

    ವಂತಿಗೆ ಕಡಿಮೆ ಮಾಡಲು ಮನವಿ

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಲಾನುಭವಿಗಳಿಗೆ ವಿವಿಧ ಯೋಜನೆಗಳ ಮೂಲಕ ವಂತಿಗೆ ಹಣದಲ್ಲಿ ಕಡಿತಗೊಳಿಸುವ ಮೂಲಕ ಮಾದರಿ ಕಾರ್ಯವನ್ನು ವಿಜಯಪುರದಲ್ಲಿ ಮಾಡಲಾಗಿದೆ, ಅದೇ ತೆರನಾಗಿ ಮೇಲ್ವರ್ಗದ ಬಡ ಲಾನುಭವಿಗಳಿಗೂ ವಂತಿಗೆ ಹಣ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
    ಸಾಮಾನ್ಯ ವರ್ಗದ ಬಡ ಲಾನುಭವಿಗಳಿಗೆ ವಂತಿಗೆ ಹಣ ಪಾವತಿಸುವುದು ಕಷ್ಟಕರವಾಗಿದೆ, ಅವರಿಗೂ ಈ ಮೊತ್ತ ದೊಡ್ಡದಾಗಿದೆ, ಈ ಹಿನ್ನೆಲೆಯಲ್ಲಿ ಬಡ ಸಾಮಾನ್ಯ ವರ್ಗದ ಲಾನುಭವಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ವಂತಿಗೆ ಹಣವನ್ನು ಕಡಿತಗೊಳಿಸಬೇಕು ಎಂದರು.
    ನಗರದಲ್ಲಿ ಪಾಲಿಕೆಯ ಜಾಗಗಳು ಬಹಳಷ್ಟಿದ್ದವು, ಈ ಜಾಗ ಹುಡುಕಾಡಿ ತೆಗೆದಾಗ ಅಧಿಕಾರಿಗಳೇ ಗಾಬರಿಯಾಗಿದ್ದರು. ಈ ಹಿಂದೆ ಇದ್ದ ಶಾಸಕರುಗಳು ಈ ಜಾಗ ಹೊಡೆಯುವುದಕ್ಕೆ ಆಸಕ್ತಿ ತೋರಿದ್ದರು. ನಕಲಿ ಹಕ್ಕು ಪತ್ರಗಳನ್ನು ನೀಡಿ ಮೋಸ ಮಾಡುವ ಶಾಸಕರೇ ಆಯ್ಕೆಯಾಗುತ್ತಿದ್ದರು, ನಕಲಿ ಪರಿಚಯ ಪತ್ರ ನೀಡಿ ಇದನ್ನು ಯಾರಿಗೂ ತೋರಿಸಬೇಡಿ ಎಂದು ಜನರಿಗೆ ಟೋಪಿ ಹಾಕಿ ಆರಿಸಿ ಬರುತ್ತಿದ್ದರು. ಮುಗ್ಧ ಜನ ಅದನ್ನೇ ನಂಬುತ್ತಿದ್ದರು. ಇದೀಗ ಆ ಬಣ್ಣ ಬಯಲಾಗಿ ಅರ್ಹರಿಗೆ ಆಶ್ರಯ ಸಿಗುವಂತಾಗಿದೆ ಎಂದರು.
    ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರಾದ ಎಂ.ಸಿ. ಮನಗೂಳಿ, ಡಾ.ದೇವಾನಂದ ಚವಾಣ್, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ, ಸಿಇಒ ಗೋವಿಂದ ರೆಡ್ಡಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ರಾಜೀವಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹಾದೇವ ಪ್ರಸಾದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದರು. ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts