

ಬೆಂಗಳೂರು: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’ ಚಿತ್ರದ ಟ್ರೇಲರ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡಿಗರು, ಕನ್ನಡದ ಸಾಧಕನ ಕುರಿತು ಮಾಡಿರುವ ಕನ್ನಡದ ಪ್ರಪ್ರಥಮ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ ಚಿತ್ರಕ್ಕೆ ಸಲ್ಲುತ್ತದೆ. ನ. 19ರಂದು ಬಿಡುಗಡೆಯಾದ ಚಿತ್ರದ ಟ್ರೇಲರ್ಅನ್ನು ಕೇವಲ ನಾಲ್ಕು ದಿನಗಳಲ್ಲಿ 1.18 ಕೋಟಿ ಮಂದಿ ವೀಕ್ಷಿಸಿ, ಮೆಚ್ಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಮತ್ತು ‘ಹಾಗೆ ಆದ ಆಲಿಂಗನ...’ ಹಾಡು ಕೂಡ ತಲಾ 2 ಕೋಟಿ ಬಾರಿ ವೀಕ್ಷಣೆಯಾಗಿದ್ದವು.
ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿರುವ ‘ವಿಜಯಾನಂದ’ ಚಿತ್ರದ ಕನ್ನಡ ಟ್ರೇಲರ್ಗೆ 38 ಲಕ್ಷ ವ್ಯೂವ್ಸ್, ತೆಲುಗು ಅವತರಣಿಕೆಗೆ 29 ಲಕ್ಷ, ತಮಿಳು ವರ್ಷನ್ಗೆ 20 ಲಕ್ಷ, ಹಿಂದಿ ಟ್ರೇಲರ್ಗೆ 19 ಲಕ್ಷ ವ್ಯೂವ್ಸ್ ಹಾಗೂ ಮಲಯಾಳಂ ಭಾಷೆಯಲ್ಲಿ 12 ಲಕ್ಷ ಮಂದಿ ಟ್ರೇಲರ್ ನೋಡಿದ್ದಾರೆ. ಆ ಮೂಲಕ ಐದೂ ಭಾಷೆಗಳಿಂದ ಟ್ರೇಲರ್ಅನ್ನು 1.18 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಆರ್ಎಲ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ ‘ವಿಜಯಾನಂದ’ ಚಿತ್ರಕ್ಕೆ , ‘ಟ್ರಂಕ್’ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ಡಿ. 9ರಂದು ವಿಶ್ವಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.