ಸಿನಿಮಾ

ವಿಜಯನಗರ ಜಿಲ್ಲೆಗೆ ಸಿಗುವುದೇ ಮಂತ್ರಿ ಪಟ್ಟ ?: ಎರಡು ಬಾರಿ ಗೆದ್ದ ಗವಿಯಪ್ಪ ಪ್ರಬಲ ಆಕಾಂಕ್ಷಿ

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅತ್ತ ದೆಹಲಿಯಲ್ಲಿ ಸಿಎಂ ಆಯ್ಕೆ ಕಸರತ್ತು ನಡೆದಿದ್ದರೆ, ಇತ್ತ ಹೊಸ ಸರ್ಕಾರದಲ್ಲಿ ಜಿಲ್ಲೆಯ ಯಾವ ಶಾಸಕರಿಗೆ ಸಚಿವ ಸ್ಥಾನ ದೊರೆಯಬಹುದೆಂಬ ಲೆಕ್ಕಾಚಾರ ಶುರುವಾಗಿದೆ.

ಜಿಲ್ಲೆಯ ಇಬ್ಬರು ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ

ವಿಜಯನಗರ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ಪೈಕಿ ವಿಜಯನಗರದಲ್ಲಿ ಕಾಂಗ್ರೆಸ್‌ನಿಂದ ಎಚ್.ಆರ್.ಗವಿಯಪ್ಪ ಮತ್ತು ಕೂಡ್ಲಿಗಿಯಲ್ಲಿ ಡಾ.ಎನ್.ಟಿ.ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಉಳಿದ ಮೂರು ಕ್ಷೇತ್ರಗಳ ಪೈಕಿ ಹೂವಿನಹಡಗಲಿಯಲ್ಲಿ ಬಿಜೆಪಿಯಿಂದ ಕೃಷ್ಣ ನಾಯ್ಕ, ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್‌ನ ಕೆ. ನೇಮಿರಾಜ ನಾಯ್ಕ ಹಾಗೂ ಹರಪನಹಳ್ಳಿಯಲ್ಲಿ ಪಕ್ಷೇತರರಾಗಿ ಎಂ.ಪಿ. ಲತಾ ಗೆಲುವು ದಾಖಲಿಸಿದ್ದಾರೆ. ಆದರೆ, ಜಿಲ್ಲೆಯ ಇಬ್ಬರು ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದು ಈಗ ಚರ್ಚಿತ ವಿಷಯ.

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್​ ಬಿಗಿಪಟ್ಟು: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಡಿಕೆಶಿ ಅಸಮಾಧಾನ


ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?: ಹೊಸಪೇಟೆ ಕ್ಷೇತ್ರದಿಂದ 2004ರಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಎಚ್.ಆರ್.ಗವಿಯಪ್ಪ ಬಳಿಕ ಕಾಂಗ್ರೆಸ್ ಸೇರಿದ್ದರು. ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯನಗರ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್‌ನಿಂದ ಮತ್ತು 2018ರಲ್ಲಿ ಬಿಜೆಪಿಯಿಂದ ಎರಡು ಬಾರಿ ಸೋಲು ಕಂಡಿದ್ದು, 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.


ಎರಡು ಬಾರಿ ಶಾಸಕರಾಗಿರುವ ಎಚ್.ಆರ್. ಗವಿಯಪ್ಪ ಅವರು ಕೊಪ್ಪಳ ಭಾಗದ ಹಿರಿಯ ರಾಜಕಾರಣಿ ಎಚ್.ಜಿ.ರಾಮುಲು ಕುಟುಂಬದವರು. ಈಡಿಗ ಸಮುದಾಯದ ಪ್ರಬಲ ನಾಯಕರಾದ ಎಚ್.ಜಿ.ರಾಮುಲು ಕೃಪಾಶೀರ್ವಾದದಿಂದ ಗವಿಯಪ್ಪ ರಾಜಕೀಯದಲ್ಲಿ ಬೆಳೆದಿದ್ದಾರೆ. ಗವಿಯಪ್ಪ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಸುರ್ಜೇವಾಲಾ ಸೇರಿದಂತೆ ಪಕ್ಷದ ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಸಂಪರ್ಕ ಹೊಂದಿದ್ದಾರೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಜತೆಗೂ ಉತ್ತಮ ಒಡನಾಟವಿದೆ. ಅದರಂತೆ ಕೂಡ್ಲಿಗಿ ಕ್ಷೇತ್ರದಿಂದ ಮೊದಲ ಪ್ರಯತ್ನದಲ್ಲೇ ಡಾ.ಎನ್.ಟಿ.ಶ್ರೀನಿವಾಸ್ ವಿಜಯ ಪತಾಕೆ ಹಾರಿಸಿದ್ದಾರೆ. ಇವರ ತಂದೆ ಎನ್.ಟಿ.ಬೊಮ್ಮಣ್ಣ ಅವರು 1985, 1989ರಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.

ವಾಲ್ಮೀಕಿ ನಾಯಕ ಸಮಾಜಕ್ಕೆ ಸೇರಿರುವ ಡಾ.ಎನ್.ಟಿ.ಶ್ರೀನಿವಾಸ್ ಅವರಿಗೂ ಕಾಂಗ್ರೆಸ್ ನಾಯಕರ ಜತೆಗೂ ನಿಕಟ ನಂಟಿದೆ. ಆದರೆ, ನೂತನ ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ನೀಡುವತ್ತ ಹೈಕಮಾಂಡ್ ಗಮನ ಹರಿಸಿದರೆ, ವಿವಿಧ ಕಾರಣಗಳಿಂದಾಗಿ ಗವಿಯಪ್ಪಗೆ ಪ್ರಥಮ ಆದ್ಯತೆ ಸಿಗಲಿದೆ ಎನ್ನಲಾಗುತ್ತಿದೆ.

ಜಾತಿ, ಪ್ರಾದೇಶಿಕ ಲೆಕ್ಕಾಚಾರ

ಕಾಂಗ್ರೆಸ್ ಹೈಕಮಾಂಡ್ ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರದೊಂದಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುತ್ತದೆ. ಒಂದು ವೇಳೆ ಎಂ.ಪಿ.ಲತಾ ಕೂಡ ಕಾಂಗ್ರೆಸ್ ಸೇರ್ಪಡೆಯಾದರೆ, ಕೈ ಬಲ ಜಿಲ್ಲೆಯಲ್ಲಿ ಮೂರಕ್ಕೇರಲಿದೆ. ಐವರು ಶಾಸಕರಲ್ಲಿ ಮೂವರು ಕಾಂಗ್ರೆಸ್‌ನವರೇ ಆಗಲಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಹಾಗೂ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಸಚಿವಗಿರಿ ನೀಡುವ ಸಾಧ್ಯತೆ ಇದೆ. ಅಲ್ಲದೆ, ಈ ಬಾರಿ ಸರಳ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ರಚಿಸಲಿದೆ.3, 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದವರು ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಇಬ್ಬರೂ ಶಾಸಕರಿಗೆ ಈ ಬಾರಿ ಮಂತ್ರಿಗಿರಿ ದೊರೆಯುವುದು ಸುಲಭವಲ್ಲ ಎಂಬ ಮಾತು ಸಹ ಕೇಳಿ ಬರುತ್ತಿದೆ.

ಈ ಹಿಂದೆ ಸಚಿವರು ಆದವರು

ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಹೊಸಪೇಟೆಯ ನಾಗನಗೌಡರು, ಟಿ.ಭಗೀರಥಿ ಮರುಳಸಿದ್ಧನಗೌಡ, ಪಿ.ಟಿ.ಪರಮೇಶ್ವರ ನಾಯ್ಕ ಕಾಂಗ್ರೆಸ್ ಸರ್ಕಾರದ ವಿವಿಧ ಅವಧಿಯಲ್ಲಿ ಸಚಿವರಾಗಿದ್ದರು.

ನಾನು ಕೂಡ ಎರಡು ಬಾರಿ ಶಾಸಕನಾಗಿರುವೆ. ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್ ಬಳಿ ಕೇಳುವುದರಲ್ಲಿ ತಪ್ಪೇನಿಲ್ಲ. ಹೊಸ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಿದರೆ ಖಂಡಿತ ಜನಪರ ಕೆಲಸ ಮಾಡುವೆ.
ಎಚ್.ಆರ್.ಗವಿಯಪ್ಪ,ವಿಜಯನಗರ ಕ್ಷೇತ್ರದ ಶಾಸಕ

Latest Posts

ಲೈಫ್‌ಸ್ಟೈಲ್