More

    ನಮ್ಮ ವೀಕ್ನೆಸ್​ ಏನು ಎಂಬುದನ್ನು ಅರ್ಥಮಾಡಿಕೊಂಡರೆ ಯಶಸ್ಸು ಗ್ಯಾರೆಂಟಿ ಎನ್ನುತ್ತಾರೆ ಈ ವಾರದ ಸಂಡೇಗೆಸ್ಟ್​

    ಕಲಿಕಾ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದುದು. ಒಬ್ಬರಿಗೆ ಒಂದು ಪುಸ್ತಕವನ್ನು ಒಂದೆರಡು ದಿನಗಳಲ್ಲಿ ಓದಿ ಮುಗಿಸಿಬಡಲು ಸಾಧ್ಯವಾದರೆ ಮತ್ತೆ ಕೆಲವರಿಗೆ ಅದೇ ಪುಸ್ತಕವನ್ನು ಓದಿ, ಅರ್ಥೈಸಿಕೊಳ್ಳಲು ದಿನ, ವಾರಗಟ್ಟಲೆ ಆಗಬಹುದು. ಆದ್ದರಿಂದ ಓದಿದ್ದನ್ನು ಮರುಮನನ ಮಾಡುವ ಅಭ್ಯಾಸ ಕ್ರಮ ರೂಢಿಸಿಕೊಂಡರೆ ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅದೇ ಸುಲಭದ ಹಾದಿ ಎನ್ನುವ ಮನು ಅಶೋಕ್​ ಭಟ್​ ಇಂದಿನ ನಮ್ಮ ವಿಜಯವಾಣಿ ವಿದ್ಯಾರ್ಥಿಮಿತ್ರದ ಸಂಡೇ ಗೆಸ್ಟ್​.

    ಮನು ಭಟ್​ 2019ರ ಭಾರತೀಯ ಅರಣ್ಯ ಸೇವೆ (ಐಎಫ್​ಎಸ್​) ಪರೀಕ್ಷೆಯ 26 ನೇ ರಾಂಕ್​ ವಿಜೇತರು. 4ನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಮೆಕಾನಿಕಲ್​ ಸರ್ವೀಸಸ್​ (ಐಇಎಸ್​&2018) ಕಾರ್ಯನಿರ್ವಹಿಸುತ್ತಿರುವ ಮನು ಭಟ್​ ಮೂಲತಃ ಶಿರಸಿಯವರು.10ನೇ ತರಗತಿವರೆಗೆ ಬೆಳಗಾವಿಯ ಕೇಂದ್ರೀಯ ವಿದ್ಯಾಲಯದಲ್ಲಿ ,11 ಮತ್ತು 12 ನೇ ತರಗತಿಯನ್ನು ಹೈದರಾಬಾದ್​ನ ನಾರಾಯಣ ಕಾಲೇಜಿನಲ್ಲಿ ಹಾಗೂ. ಏರೋಸ್ಪೇಸ್​ ಇಂಜಿನಿಯರಿಂಗ್​ ಶಿಕ್ಷಣವನ್ನು ಖರಗಪುರ ಐಐಟಿಯಲ್ಲಿ ಪೂರೈಸಿದ್ದಾರೆ. ಅದರ ಜತೆ ಜತೆಗೆ ಅಖಿಲ ಭಾರತ ಸೇವೆಯ (ಐಎಎಸ್​) ಹುದ್ದೆಗಳಿಗೆ ಅಧ್ಯಯನ ತಯಾರಿ ನಡೆಸಿದ್ದರು. ತಂದೆ ಅಶೋಕ್​ ಭಟ್​ ಎಲ್​ಐಸಿ ಅಭಿವೃದ್ಧಿ ಅಧಿಕಾರಿ. ತಾಯಿ ಸಾವಿತ್ರಿ ನ್ಯೂ ಇಂಡಿಯಾ ಅಶುರೆನ್ಸ್​ ಕಂಪನಿ ಅಧಿಕಾರಿ. ಸಹೋದರಿ ಸಿಎ ಓದುತ್ತಿದ್ದಾರೆ. ತಂದೆ ತಾಯಿಯೇ ತಮ್ಮ ಉನ್ನತ ಸಾಧನೆಗೆ ಸ್ಫೂತಿರ್ ಎನ್ನುತ್ತಾರೆ ಮನು.

    ಅರಣ್ಯ ಸೇವೆಗೆ ಬರಲು ನನಗೆ ಮೂಲ ಪ್ರೇರಣೆ ಎಂದರೆ ಪಶ್ಚಿಮ ಘಟ್ಟಗಳ ಪರಿಸರವೇ. ನಾನು ಮೂಲತಃ ಶಿರಸಿ ಸಮೀಪದ ಸಿಂಗನಹಳ್ಳಿ. ಸಹಜವಾಗಿಯೇ ಪಶ್ಚಿಮ ಘಟ್ಟಗಳೊಂದಿಗೆ ಪ್ರೀತಿ, ಬಾಂಧವ್ಯ ಬೆಳೆದಿದೆ. ಅರಣ್ಯ ಪರಿಸರ, ಕಾಡು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ & ಅಂಥ ಪರಿಸರ ನಿರ್ಮಾಣ ಜಾಗತಿಕ ಮಟ್ಟದಲ್ಲಿ ಇಂದು ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪರಿಸರ, ಹವಾಮಾನ ಸಮತೋಲನ ಸಾಧಿಸಲು, ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅವಕಾಶಗಳೂ ಇವೆ. ಅಷ್ಟೇ ಸವಾಲುಗಳೂ ಇವೆ. ಅಂಥ ಸಮಸ್ಯೆ, ಸವಾಲುಗಳನ್ನು ತಾಂತ್ರಿಕವಾಗಿ ಸಮರ್ಥವಾಗಿ ನಿಭಾಯಿಸಬೇಕೆಂಬ ಗುರಿ ನನ್ನದಾಗಿದೆ.

    ವಿದ್ಯಾರ್ಥಿ ಹಂತದಿಂದ ಅಧಿಕಾರಿ ಮಟ್ಟದವರೆಗೆ: 2015ರಲ್ಲಿ ಪದವಿ ಮುಗಿದ ತಕ್ಷಣ 2015 ಮತ್ತು 16 ಎರಡೂ ಸಲ ಭಾರತೀಯ ಅರಣ್ಯ ಸೇವೆ ಹುದ್ದೆಯ ಪೂರ್ವಭಾವಿ ಪರೀಕ್ಷೆ ಪಾಸಾಗಿದ್ದೆ, ಆದರೆ ಆಗ ಫಾರೆಸ್ಟ್​ ಸರ್ವೀಸಸ್​ ಪರೀಕ್ಷೆ ಐಎಎಸ್​ ಪರೀಕ್ಷೆಗಿಂತ 15 ದಿನ ಮುಂಚಿತವಾಗಿಯೇ ಇರುತ್ತಿತ್ತು. ಎರಡೂ ಸಲ ಪ್ರಿಲಿಮ್ಸ್​ ಪಾಸಾಗಿದ್ದೆ ಆದರೆ ಮುಖ್ಯ ಪರೀಕ್ಷೆ ಬರೆಯಲೇ ಇಲ್ಲ. ಸಿವಿಲ್​ ಸರ್ವೀಸಸ್​ ನನ್ನ ಮುಖ್ಯ ಗುರಿಯಾಗಿತ್ತು. 2018ರಲ್ಲಿ ಇಂಜಿನಿಯರಿಂಗ್​ ಸರ್ವೀಸಸ್​ ಪರೀಕ್ಷೆ ಬರೆದೆ. ಅದರಲ್ಲಿ 16 ನೇ ರಾಂಕ್​ ಬಂತು. ಭಾರತೀಯ ರೈಲ್ವೆಯಲ್ಲಿ ಹುದ್ದೆ ಪಡೆದೆ. ಆ ನಡುವೆ ನಾನು ಜಿಎಟಿಇ (ಗ್ರಾಜುಯೇಟ್​ ಅಪ್ಟಿಟ್ಯೂಡ್​ ಟೆಸ್ಟ್​ ಇನ್​ ಇಂಜಿನಿಯರಿಂಗ್​) ಪರೀಕ್ಷಾಥಿರ್ಗಳಿಗೆ ಪಾಠ ಮಾಡಲು ಖಾಸಗಿ ತರಬೇತಿ ಕೇಂದ್ರಗಳಿಗೆ ಹೋಗುತ್ತಿದ್ದೆ. 2019ರಲ್ಲಿ ಐಎಎಸ್​ ಪರೀಕ್ಷೆ ಪಾಸಾದೆ. ಈಗ ಸಿವಿಲ್​ ಸರ್ವೀಸಸ್​ ಸಂದರ್ಶನ ಮುಗಿದಿದೆ. ಫಲಿತಾಂಶಕ್ಕೆ ಕಾಯುತ್ತಿದ್ದೇನೆ.

    ಹವ್ಯಾಸಗಳು ಯಶಸ್ಸಿಗೆ ಪೂರಕ: ನಾನು ಅಂತರ್ಜಾಲವನ್ನು ತುಂಬ ಉಪಯೋಗಿಸುತ್ತೇನೆ. ಸಾಕಷ್ಟು ಮಾಹಿತಿ ಸಿಗುತ್ತದೆ. ಹಾಗೆಂದ ಮಾತ್ರಕ್ಕೆ ಸಿಕ್ಕ ಮಾಹಿತಿ ಎಲ್ಲವೂ ವಿಶ್ವಾಸರ್ಪೂಣವೇ ಎಂದು ನಂಬುವಂತಿಲ್ಲ. ಸಾಕಷ್ಟು ಮಾಹಿತಿ ಇದ್ದಾಗ ಸಂಪನ್ಮೂಲದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು. ಅಧ್ಯಯನ ಸಾಮಗ್ರಿಗಳನ್ನು ಗುಡ್ಡೆ ಹಾಕಿ ಕುಳಿತುಕೊಳ್ಳುವ ಬದಲು ವಿಶ್ವಾಸಾರ್ಹವಾದ ಒಂದೆರಡು ಪುಸ್ತಕಗಳನ್ನು ಉತ್ತಮ ಅಧ್ಯಯನ ಸಂಪನ್ಮೂಲವಾಗಿ ಹೊಂದಿರಬೇಕು.
    ಎರಡು ವರ್ಷ ಓಟವನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೆ. 1 ವರ್ಷ ಜಿಮ್​ಗೆ ಹೋಗಿದ್ದೇನೆ. ಈಗ ಬ್ಯಾಡ್ಮಿಂಟನ್​ ಆಡುತ್ತೇನೆ, ದೈಹಿಕ ವ್ಯಾಯಾಮ ಯಶಸ್ಸಿಗೆ ಪೂರಕ. ಏಕೆಂದರೆ ಮನಸ್ಸನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಉತ್ತಮ ದೈಹಿಕ ಚಟುವಟಿಕೆಗಳು ಮುಖ್ಯ.

    ನಮ್ಮ ವೀಕ್ನೆಸ್​ ಏನು ಎಂಬುದನ್ನು ಅರ್ಥಮಾಡಿಕೊಂಡರೆ ಯಶಸ್ಸು ಗ್ಯಾರೆಂಟಿ ಎನ್ನುತ್ತಾರೆ ಈ ವಾರದ ಸಂಡೇಗೆಸ್ಟ್​
    ಕುಟುಂಬ ಸದಸ್ಯರೊಂದಿಗೆ ಮನು ಅಶೋಕ್ ಭಟ್

    ಪ್ರಯತ್ನದಿಂದ ಪ್ರಯತ್ನಕ್ಕೆ ಸುಧಾರಣೆಯ ಹೆಜ್ಜೆ: ಬಹಳಷ್ಟು ಜನರಿಗೆ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಹೆಚ್ಚಿನ ಐಡಿಯಾ ಇರುವುದೇ ಇಲ್ಲ. ಪಠ್ಯಕ್ರಮ ವಿಸ್ತೃತವಾಗಿದೆ. ಅಂಕಗಳು ಬಂದ ಮೇಲೆ ಗೊತ್ತಾಗುತ್ತದೆ ಯಾವ ವಿಷಯಗಳಲ್ಲಿ ನಾವು ಶಕ್ತರು ಮತ್ತು ದುರ್ಬಲರು ಎಂಬುದು. ಒಂದರಲ್ಲಿ ಉತ್ತಮ ಅಂಕಗಳು ಬಂದರೆ ಆ ವಿಷಯದ ಬಗ್ಗೆ ನಮಗೆ ಕಾನ್ಫಿಡೆನ್ಸ್​ ಬರುತ್ತದೆ. ಒಂದರಲ್ಲಿ ನಮ್ಮ ವೀಕ್​ನೆಸ್​ ಗೊತ್ತಾಗುತ್ತದೆ. ಆದ್ದರಿಂದ ನಮ್ಮ ಯಾವ ವಿಷಯದ ಬಗ್ಗೆ ಹೆಚ್ಚಿನ ಜ್ಞಾನವಿರುತ್ತದೆಯೋ ಅದನ್ನೇ ಬಲಗೊಳಿಸುತ್ತ ಹೋಗಬೇಕು.ಯಾವುದೋ ಒಂದು ಸ್ಕೋರಿಂಗ್​ ಸಬ್ಜೆಕ್ಟ್​​ ಎಂದು ಸ್ನೇಹಿತರ ಬಳಗದಲ್ಲಿ ಡಿಸೈಡ್​ ಮಾಡಿದರೆ ಅದನ್ನೇ ನಾವೂ ಬೆನ್ನಟ್ಟಿಹೋಗುವಂತಾಗಬಾರದು.

    ಮಾಧ್ಯಮಗಳ ಸಹಾಯ: ಮಾಧ್ಯಮಗಳು ನನ್ನ ಓದಿನಲ್ಲಿ ತುಂಬ ಸಹಾಯವಾದವು. ಅಂತರ್ಜಾಲ (ಯೂ ಟ್ಯೂಬ್​) ಹಾಗೂ ರಾಜ್ಯಸಭಾ ಟಿವಿ ನೋಡುತ್ತಿದ್ದೆ. ಯಾವುದೇ ವಿಷಯದ ಬಗ್ಗೆ ಐತಿಹಾಸಿಕ ಹಿನ್ನೆಲೆ ಸಹಿತ ವಿವರಣೆಯನ್ನು ಗಮನಿಸುತ್ತಿರಬೇಕು.

    ಪರಿಣಾಮಕಾರಿ ಅಧ್ಯಯನ ಹೇಗೆ?: ಓದುವಿಕೆ ಮೂಲತಃ ಒಂದು ವೈಯಕ್ತಿಕ ಭಿನ್ನತೆ. ಆದರೆ ಬಹಳಷ್ಟು ಅಧ್ಯಯನ ಸಾಮಗ್ರಿಯ ಬೆನ್ನಟ್ಟಿದರೆ ಸ್ಪಷ್ಟತೆ ಸಿಗುವುದಿಲ್ಲ. ನಮಗೇನು ಅರ್ಥವಾಗುತ್ತದೆಯೋ ಅದನ್ನು ಮರುಮನನ ಮಾಡುತ್ತಿರಬೇಕು. ಅದೇ ಪರಿಣಾಮಕಾರಿ. ಒಂದೇ ವಿಷಯವನ್ನು ಬೇರೆ ಬೇರೆ ಪುಸ್ತಕದಿಂದ ಓದುವ ಬದಲು ಒಂದೇ ವಿಶಾಲ ವಿವರಣೆಯುಳ್ಳ ಪುಸ್ತಕವನ್ನು ಒಂದೆರಡು ಬಾರಿ ಓದಿ, ರಿವಿಜನ್​ ಮಾಡುವುದು ಎಂಥವರಿಗಾದರೂ ಸುಲಭದ ಹಾದಿ. ಸಿಲೆಬಸ್​ನ್ನು ಭಾಗಗಳನ್ನಾಗಿ ವಿಂಗಡಿಸಿ, ಸಂಪೂರ್ಣ ಅರ್ಥೈಸಿಕೊಂಡು, ಅಧ್ಯಯನ ಸಾಮಗ್ರಿ ಸಂಗ್ರಹಿಸಿ ನಂತರ ಅದನ್ನು ನಮ್ಮಜ್ಞಾನಕ್ಕೆ, ನಮ್ಮ ಅಧ್ಯಯನ ಸಾಮರ್ಥ್ಯಕ್ಕೆ ತಕ್ಕಂತೆ ಭಾಗಗಳಾಗಿ ವಿಂಗಡಿಸಿಕೊಂಡು ಓದುವುದು ಉತ್ತಮ.

    ಗುರಿ: ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ ಹಾಗೂ ಪರಿಹಾರ ಮಾರ್ಗಗಳೂ ಇವೆ. ಸಮಸ್ಯೆಗೆ ವಿವಿಧ ಆಯಾಮಗಳಲ್ಲಿ ಪರಿಹಾರ ಹುಡುಕುವುದೇ ನನ್ನ ಹವ್ಯಾಸ. ಇಂಜಿನಿಯರಿಂಗ್​ ಹಿನ್ನೆಲೆ ಇರುವುದರಿಂದ ನನ್ನಲ್ಲಿರುವ ಸಮಸ್ಯೆ ಪರಿಹರಿಸುವ ಕಲೆ ನನಗೆ ತೃಪ್ತಿ ತಂದಿದೆ. ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಮಜಾ ಅನುಭವಿಸುತ್ತೇನೆ. ಎಷ್ಟೋ ಸಲ ಸಮಸ್ಯೆ ಬಂದಾಗ ತಾಂತ್ರಿಕವಾಗಿ ಅಥವಾ ಮಾನವ ಸಂಪನ್ಮೂಲ ಬಳಸಿ ಪರಿಹಾರ ಕಂಡುಕೊಳ್ಳಲು ನೋಡುತ್ತೇನೆ ಎನ್ನುವ ಮನು ಸಮಸ್ಯೆ& ಸವಾಲುಗಳ ಬಗ್ಗೆ ತಮ್ಮದೇ ಆದ ದೃಷ್ಟಿಕೋನವಿರುವುದಾಗಿ ಹೇಳುತ್ತಾರೆ.

    ವನ್ಯಜಿವಿಗಳು ಎಂದರೆ ನನಗೆ ತುಂಬ ಅಚ್ಚು ಮೆಚ್ಚು. ಅಪಾಯದಂಚಿನಲ್ಲಿರುವ ಪ್ರಾಣಿ/ ಪಗಳ ಸಂತತಿ ಅಭಿವೃದ್ಧಿಪಡಿಸುವ ಮೂಲಕ ಅಳಿದುಹೋಗಬಹುದಾದ ಪಶುಗಳ ಸಂರೆಣೆ, ಪ್ರಾಣಿ ಸಂಗ್ರಹಾಲಯ, ಅಲ್ಲಿರುವ ಜೀವಜಾತಿಗಳ ಅಭಿವೃದ್ಧಿಗೆ, ಅರಣ್ಯ ಸಂರಕ್ಷಣೆಗೆ ಕೆಲಸ ಮಾಡಲು ಅರಣ್ಯ ಸೇವೆಯಂತಹ ಹುದ್ದೆಯಲ್ಲಿ ಸಾಕಷ್ಟು ಅವಕಾಶಗಳಿವೆ ಎನ್ನುತ್ತಾರೆ ಭಟ್​.

    ಶಿವಲೀಲಾ ಎಸ್​.ಪೂಜಾರ್ ಬೆಂಗಳೂರು

    ವೈದ್ಯಶಿಕ್ಷಣ ಪದವೀಧರರ ಗಮನಕ್ಕೆ – ಟಿಎಚ್​ಎಸ್​ಟಿಐನಲ್ಲಿ ವೈದ್ಯಕಿಯ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts