More

    ಜಾನುವಾರುಗಳ ಜೀವ ಹಿಂಡುತ್ತಿದೆ ವೈರಸ್; ಆತಂಕಕ್ಕೀಡಾದ ಅನ್ನದಾತ

    ಕೇಶವಮೂರ್ತಿ ವಿ.ಬಿ. ಹಾವೇರಿ
    ರಾಜ್ಯದಲ್ಲಿ ಜಾನುವಾರುಗಳ ಪ್ರಾಣ ಹಿಂಡುತ್ತಿರುವ ಚರ್ಮಗಂಟು ರೋಗ (ಲಿಂಪಿ ವೈರಸ್) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೈತನ ಜೀವನಾಡಿ ದನ- ಕರುಗಳ ಮೂಕರೋದನ ಮುಗಿಲು ಮುಟ್ಟಿದೆ. ಈವರೆಗೆ ರಾಜ್ಯದಲ್ಲಿ 32,183 ದನಗಳಿಗೆ ವೈರಸ್‌ಕಾಣಿಸಿಕೊಂಡಿದ್ದು, ಒಟ್ಟು 1,298 ರಾಸುಗಳು ಮೃತಪಟ್ಟಿವೆ. ಹಾವೇರಿ ಜಿಲ್ಲೆಯೊಂದರಲ್ಲೇ 8,800 ದನ-ಕರುಗಳು ಈ ರೋಗಕ್ಕೆ ತುತ್ತಾಗಿದ್ದು, 580 ರಾಸುಗಳು ರೋಗದಿಂದ ಬಳಲಿ ಅಸುನೀಗಿವೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ರಾಸುಗಳು ಮೃತಪಟ್ಟ ಜಿಲ್ಲೆ ಎಂಬ ಅಪಕೀರ್ತಿ ಹಾವೇರಿಗೆ ಮೆತ್ತಿಕೊಂಡಿದೆ.
    ಎರಡನೇ ಸ್ಥಾನದಲ್ಲಿರುವ ಬಳ್ಳಾರಿ ಜಿಲ್ಲೆಯಲ್ಲಿ 9,000ಕ್ಕೂ ಅಧಿಕ ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 400 ರಾಸುಗಳು ರೋಗದಿಂದ ಮೃತಪಟ್ಟಿವೆ. ಮೂರನೇ ಸ್ಥಾನದಲ್ಲಿರುವ ಗದಗ ಜಿಲ್ಲೆಯಲ್ಲಿ 4,000 ರಾಸುಗಳಿಗೆ ರೋಗ ಅಂಟಿಕೊಂಡಿದ್ದು, 142 ದನಗಳು ಕೊನೆಯುಸಿರು ಎಳೆದಿವೆ. ನಾಲ್ಕನೇ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ರೋಗ ಕಾಣಿಸಿಕೊಂಡ 3,600 ದನಗಳಲ್ಲಿ 48 ದನಗಳು ಪ್ರಾಣ ಬಿಟ್ಟಿವೆ. ಐದನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ ಇದ್ದು, 1,500 ದನಗಳಿಗೆ ರೋಗ ಅಂಟಿಕೊಂಡಿದ್ದು, 142 ರಾಸುಗಳು ಉಸಿರು ಚೆಲ್ಲಿವೆ.
    ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಚರ್ಮಗಂಟು ರೋಗ ಆವರಿಸಿಕೊಂಡಿದೆ. ಈ ರೋಗಕ್ಕೆ ಈವರೆಗೆ ನಿರ್ದಿಷ್ಟ ಲಸಿಕೆ (ಔಷಧ) ಕಂಡುಹಿಡಿದಿಲ್ಲ. ಸದ್ಯ ಪಶುಪಾಲನೆ ಇಲಾಖೆ ಗೋಟ್ ಫಾಕ್ಸ್ ಹಾಗೂ ಸಿಫಾಕ್ಸ್ ಲಸಿಕೆ ನೀಡುತ್ತಿದೆ. ಇದರಿಂದ ಸಂಪೂರ್ಣ ನಿಯಂತ್ರಣ ಆಗದಿದ್ದರೂ ಭಾಗಶಃ ರೋಗದಿಂದ ಗುಣಪಡಿಸಬಹುದಾಗಿದೆ ಎನ್ನುತ್ತಾರೆ ಪಶು ತಜ್ಞ ವೈದ್ಯರು. ಎಲ್ಲೆಡೆ ಇಲಾಖೆ ವೈದ್ಯರು, ಸಿಬ್ಬಂದಿ ರೋಗ ತಡೆಗಟ್ಟಲು ಪ್ರಯತ್ನಿಸುತ್ತಿದ್ದಾರಾದರೂ ತಹಬದಿಗೆ ಬರುತ್ತಿಲ್ಲ.
    ಪಶುಗಳಿಗೆ ಬಂದಿರುವ ಈ ರೋಗದಿಂದ ಅನ್ನದಾತ ಕಂಗಾಲಾಗಿದ್ದು, ಕೃಷಿ ಚಟುವಟಿಕೆಗೂ ತಡೆಯಾಗಿದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ಜಾನುವಾರುಗಳ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಯುದ್ದೋಪಾದಿಯಾಗಿ ಕಾರ್ಯಾಚರಣೆಗೆ ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
    ವೈದ್ಯರು, ಸಿಬ್ಬಂದಿ ಕೊರತೆ
    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಹಾವೇರಿ ಜಿಲ್ಲೆಯಲ್ಲೇ ಮಂಜೂರಾದ 95 ವೈದ್ಯರ ಪೈಕಿ ಕೇವಲ 35 ಪಶು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 226 ಇರಬೇಕಿದ್ದ ಪ್ಯಾರಾ ಸ್ಟಾಫ್ 74ಕ್ಕೆ ಇಳಿದಿದೆ.
    ರೈತರ ಸಹಕಾರವೂ ಮುಖ್ಯ
    ಈ ರೋಗ ಒಂದರಿಂದ ಮತ್ತೊಂದು ರಾಸುಗಳಿಗೆ ಅಂಟಿಕೊಳ್ಳುತ್ತದೆಯಾದರೂ ಮನುಷ್ಯನಿಗೆ ಇದರಿಂದ ತೊಂದರೆಯಿಲ್ಲ. ಹಾಗಾಗಿ, ರೋಗ ಕಾಣಿಸಿಕೊಂಡ ದನವನ್ನು ಪ್ರತ್ಯೇಕಗೊಳಿಸಬೇಕು. ಪಶು ವೈದ್ಯರನ್ನು ಅಥವಾ ಪಶು ಇಲಾಖೆಯ ಸಹಾಯವಾಣಿ 8277100200 ಅಥವಾ 1962 ಗೆ ಸಂಪರ್ಕಿಸಬೇಕು. ಮೃತಪಟ್ಟ ರಾಸುಗಳನ್ನು ದೊಡ್ಡ ಗುಂಡಿ ತೆಗೆದು ಹೂಳಬೇಕು ಎನ್ನುತ್ತಾರೆ ಪಶು ಲಾಖೆ ತಜ್ಞರು.
    ಕೋಟ್:
    ಹಾವೇರಿ ಜಿಲ್ಲೆಯಲ್ಲಿ 8,800 ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, 580 ಜಾನುವಾರುಗಳು ಮೃತಪಟ್ಟಿವೆ. ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಹಂಚಿಕೆಯಾಗಲಿದೆ.
    ಡಾ.ಸತ್ಯಪ್ಪ ಸಂತಿ, ಉಪನಿರ್ದೇಶಕ, ಪಶುಪಾಲನೆ ಇಲಾಖೆ
    ಕೋಟ್:
    50 ಸಾವಿರ ರೂ. ಕೊಟ್ಟು ಖರೀದಿಸಿದ್ದ ಜವಾರಿ ಎತ್ತು ಚರ್ಮಗಂಟು ರೋಗಕ್ಕೆ ಬಲಿಯಾಗಿದೆ. ಈ ವರ್ಷ ಮಳೆಯಿಂದ ಬೆಳೆಯೂ ನೀರು ಪಾಲಾಯಿತು. ಮನೆಯ ಸದಸ್ಯನಂತೆ ಸಾಕಿದ್ದ ಎತ್ತೂ ಹೋಯಿತು. ಮತ್ತೊಂದು ಎತ್ತು ಹಾಗೂ ಹೋರಿ ಕರವೂ ರೋಗಕ್ಕೆ ತುತ್ತಾಗಿದ್ದು, ದಿಕ್ಕೇ ತೋಚದಂತಾಗಿದೆ.
    ರಮೇಶ ಆಡೂರ, ಸವಣೂರ ತಾಲೂಕು ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts