More

    ಪಶು ಆಸ್ಪತ್ರೆಗಿಲ್ಲ ಮೂಲಸೌಕರ್ಯ

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ತಾಲೂಕಿನ ಬೆಳ್ಮಣ್ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ ಮೂಲಸೌಕರ್ಯಗಳಿಲ್ಲದೆ ಕೊರಗುತ್ತಿದ್ದು, ಸುತ್ತಲಿನ ಐದಾರು ಗ್ರಾಮಗಳ ಹೈನುಗಾರರೂ ಸಮಸ್ಯೆ ಎದುರಿಸುವಂತಾಗಿದೆ.

    ಸಣ್ಣದಾದ ಗೂಡಂಗಡಿಯಂತೆ ತೋರುವ ಈ ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ದನ-ಕರು ಹಾಗೂ ಇನ್ನಿತರ ಸಾಕುಪ್ರಾಣಿಗಳಿವೆ. ಇವುಗಳಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಇಲ್ಲಿಗೆ ಕರೆ ತಂದರೆ ಅಗತ್ಯ ಸೌಕರ್ಯಗಳಿಲ್ಲದೆ ಸೂಕ್ತ ಚಿಕಿತ್ಸೆ ಲಭಿಸದಾಗಿದೆ.

    ಮಾಲೀಕರಿಗೆ ತೊಂದರೆ

    ನಂದಳಿಕೆ, ಬೆಳ್ಮಣ್, ಸೂಡಾ ಗ್ರಾಮಗಳೊಂದಿಗೆ ಇನ್ನಾ, ಮುಂಡ್ಕೂರು, ಮುಲ್ಲಡ್ಕ, ಬೋಳ ಭಾಗದ ಹೈನುಗಾರರು ಹಾಗೂ ಶ್ವಾನ ಸಹಿತ ಇತರ ಸಾಕು ಪ್ರಾಣಿಗಳ ಆರೋಗ್ಯ ಸಮಸ್ಯೆಗೆ ಉತ್ತಮ ಸೇವೆ ಲಭಿಸುತ್ತಿದೆ. ಆದರೆ, ಶುಶ್ರೂಷಾ ಕೇಂದ್ರವಾಗಿರುವ ಬೆಳ್ಮಣ್ ಪಶು ಚಿಕಿತ್ಸಾಲಯದಲ್ಲಿ ಮೂಲಸೌಕರ್ಯಗಳೇ ಇಲ್ಲದ್ದರಿಂದ ಜಾನುವಾರುಗಳನ್ನು ಸಲಹಲು ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದೆ.

    ವೈದ್ಯರ ಉತ್ತಮ ಸೇವೆ

    ಕೊರತೆಗಳ ನಡುವೆಯೂ ಇಲ್ಲಿನ ಪಶುವೈದ್ಯೆಯಾದ ಡಾ. ಗ್ರೀಷ್ಮಾ ರಾವ್ ಸಮರ್ಪಕ ಸೇವೆ ನೀಡುತ್ತಿದ್ದಾರೆ. ಇನ್ನಾ, ಮುಂಡ್ಕೂರು ಪ್ರಾಥಮಿಕ ಪಶು ಕೇಂದ್ರದ ಪ್ರಭಾರ ಅಧಿಕಾರಿಯಾದ ಬಾಬು ಅವರು ಬೋಳ ಕೇಂದ್ರದ ನಿರ್ವಹಣೆಯನ್ನೂ ಮಾಡುವ ಅನಿವಾರ್ಯತೆ ಇದೆ. ಶ್ರುತಿ ಎಂಬ ಇನ್ನೋರ್ವ ಮಹಿಳೆಯಿದ್ದು, ಹೊರಗುತ್ತಿಗೆ ಸಿಬ್ಬಂದಿಯಾಗಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಯೂ ಮಹಿಳೆಯರೇ ಇದ್ದು, ಶೌಚಗೃಹವೂ ಇಲ್ಲವಾಗಿದೆ. ಹೀಗಾಗಿ ಪ್ರಸ್ತುತ ಪಂಚಾಯಿತಿ ಕಚೇರಿಯ ಶೌಚಗೃಹವನ್ನೇ ಬಳಸುವಂತಾಗಿದೆ. ಕನಿಷ್ಠ ಸಿಬ್ಬಂದಿ, ಗರಿಷ್ಠ ಪ್ರಮಾಣದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಪಶು ಚಿಕಿತ್ಸಾಲಯ ಬಳಲುತ್ತಿದೆ. ಪಶು ಚಿಕಿತ್ಸಾಲಯವೇ ಈಗ ಸೂಕ್ತ ಚಿಕಿತ್ಸೆಗೆ ಕಾಯುತ್ತಿದೆ.

    ಕಡತದಲ್ಲೇ ಬಾಕಿ

    ಈಗಾಗಲೇ ಬೆಳ್ಮಣ್ ಪಂಚಾಯಿತಿ ಆಡಳಿತ ಜಂತ್ರದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡಕ್ಕಾಗಿ ಸುಮಾರು 20 ಸೆಂಟ್ಸ್ ಜಾಗ ಕಾಯ್ದಿರಿಸಿದ್ದು, ಕಟ್ಟಡ ನಿರ್ಮಾಣ ಪ್ರಕ್ರಿಯೆ ಕಡತದಲ್ಲಿಯೇ ಉಳಿದಿದೆ. ಕಟ್ಟಡ ನಿರ್ಮಾಣವಾಗಬೇಕಾದರೆ ಜಮೀನು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹೆಸರಲ್ಲಿ ನೋಂದಣಿಯಾಗಬೇಕಿದೆ. ಈ ಕುರಿತಂತೆ ಪಂಚಾಯಿತಿ ಆಡಳಿತ ಹಾಗೂ ಪಶು ವೈದ್ಯರು ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಇದ್ದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಹೈನುಗಾರರು ಒತ್ತಾಯಿಸಿದ್ದಾರೆ.

    ಹಾವು-ಇಲಿಗಳ ಕಾಟ

    ಹಳೆಯದಾದ ಈ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆಯೊಂದಿಗೆ ಹಾವು-ವಿಷಜಂತುಗಳ ಕಾಟವೂ ಇದೆ. ಕಟ್ಟಡದ ಮಹಡಿನ ಅಂಚಿನಲ್ಲಿ ನಿತ್ಯವೂ ಇಲಿ ಮತ್ತು ಹಾವಿನ ಸಂಚಾರವಿರುತ್ತದೆ. ಹಾವಿನ ಭಯದಲ್ಲೇ ವೈದ್ಯಾಧಿಕಾರಿಗಳು ಸೇವೆ ನೀಡುವಂತಾಗಿದೆ. ಇಲಿಗಳು ಹಗಲು ಹೊತ್ತಿನಲ್ಲೇ ಅತ್ತಿಂದಿತ್ತ ಓಡಾಡುತ್ತಲೇ ಇರುತ್ತದೆ. ಜಾನುವಾರುಗಳಿಗೆ ತಂದಿಟ್ಟ ಮದ್ದು, ದ್ರವ ಮಾದರಿಯ ಚಿಕಿತ್ಸಕಗಳನ್ನು ಇಲಿಗಳು ನಾಶ ಮಾಡುತ್ತಿವೆ. ಹಾವು-ಇಲಿ ಬೇಟೆಯ ದೃಶ್ಯಗಳನ್ನು ಪಶು ವೈದ್ಯೆ ವೀಡಿಯೋ ಮಾಡಿ ಇಲಾಖೆಗೆ ಕಳುಹಿಸಿದ್ದರು. ಬಳಿಕ ಚಿಕಿತ್ಸಾಲಯದ ರಿಪೇರಿಗೆಂದು ಇಲಾಖೆ 1.5 ಲಕ್ಷ ರೂ. ಬಿಡುಗಡೆ ಮಾಡಿದ್ದರಿಂದ ಒಂದಿಷ್ಟು ರಿಪೇರಿ ಮಾಡಲಾಗಿದೆ. ಆದರೆ, ಮೂಲಸೌಕರ್ಯ ಕೊರತೆಗೆ ಇನ್ನೂ ಮುಕ್ತಿ ದೊರೆತ್ತಿಲ್ಲ. ಚುಚ್ಚುಮದ್ದು ಹಾಕಿಸಲು ತರುವ ನಾಯಿಗಳ ಮಲ-ಮೂತ್ರ ನಿರ್ವಹಣೆಯೂ ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಪರಿಸರವೂ ಗಬ್ಬೆದ್ದು ವಾಸನೆ ಬರುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಜಂತ್ರದಲ್ಲಿ 20 ಸೆಂಟ್ಸ್ ಜಾಗವನ್ನು ಈಗಾಗಲೇ ಕಾದಿರಿಸಲಾಗಿದೆ. ಉತ್ತಮ ಪಶು ಆಸ್ಪತ್ರೆ ನಿರ್ಮಾಣವಾಗ ಬೇಕು ಎನ್ನುವ ಆಸೆಯಿದೆ. ಈ ಕುರಿತಂತೆ ಇಲಾಖೆಗೆ ಪತ್ರ ಬರೆಯಲಾಗಿದೆ.
    -ಜನಾರ್ದನ ತಂತ್ರಿ
    ಅಧ್ಯಕ್ಷ, ಬೆಳ್ಮಣ್ ಗ್ರಾಪಂ

    ಪಶು ಆಸ್ಪತ್ರೆಯಲ್ಲಿರುವ ವೈದ್ಯರು ಉತ್ತಮ ಸೇವೆ ನೀಡುತ್ತಾರೆ. ಆದರೆ, ಸಮರ್ಪಕ ಕಟ್ಟಡ ಹಾಗೂ ಮೂಲಸೌಕರ್ಯ ಇಲ್ಲದಿರುವುದೇ ಇಲ್ಲಿ ಸಮಸ್ಯೆ. ಸುತ್ತಮುತ್ತಲಿನ ಗ್ರಾಮದ ಹೈನುಗಾರರಿಗೆ ಈ ಪಶು ಚಿಕಿತ್ಸಾಲಯ ಇದ್ದೂ ಇಲ್ಲದಂತಾಗಿದೆ. ಸೌಕರ್ಯ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

    -ವಸಂತ್‌ಕುಮಾರ
    ಹೈನುಗಾರ, ಬೆಳ್ಮಣ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts